ಮಂಗಳವಾರ, ಮೇ 11, 2021
26 °C

ಗ್ರಾಮೀಣ ಸಡಕ್: ಗಣಿ ಜಿಲ್ಲೆಯಲ್ಲಿ ಕಬ್ಬಿಣದ ರಸ್ತೆ!

ಪ್ರಜಾವಾಣಿ ವಾರ್ತೆ/ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: `ಗಣಿ ನಾಡು~ ಬಳ್ಳಾರಿ ಜಿಲ್ಲೆಯ ಉಕ್ಕಿನ ಕಾರ್ಖಾನೆಗಳ ಕಬ್ಬಿಣದ ಅಂಶ ಹೊಂದಿರುವ ತ್ಯಾಜ್ಯವನ್ನು ಬಳಸಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿನೂತನ ರಸ್ತೆ ನಿರ್ಮಿಸಲಾಗುತ್ತಿದೆ. ಲಭ್ಯವಿರುವ ಸ್ಥಳೀಯ ಸಂಪನ್ಮೂಲವನ್ನೇ ಬಳಸಿಕೊಂಡು ಇಂತಹದೊಂದು ವಿಶಿಷ್ಟ ರಸ್ತೆಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿದೆ.ತಾಲ್ಲೂಕಿನ ಗುಡದೂರು ಗ್ರಾಮದಿಂದ ಬಸರಕೋಡು ಗ್ರಾಮದವರೆಗಿನ 8 ಕಿ.ಮೀ ರಸ್ತೆ ನಿರ್ಮಿಸಲು ಜಲ್ಲಿ ಜತೆಗೆ ಸ್ವಲ್ಪ ಪ್ರಮಾಣದ ಕಬ್ಬಿಣದ ಅಂಶ ಹೊಂದಿರುವ ಕಲ್ಲು ಬಳಸಲಾಗಿದೆ. ಕಾಮಗಾರಿಯೂ ಭರದಿಂದ ಸಾಗಿದ್ದು  ಕೆಲವೇ ದಿನಗಳಲ್ಲಿ ಈ ನೂತನ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.ತ್ಯಾಜ್ಯವಲ್ಲ, ಪ್ರಯೋಜನಕಾರಿ: ಜಿಲ್ಲೆಯ ಉಕ್ಕಿನ ಕಾರ್ಖಾನೆಗಳು ಹಾಗೂ 100ಕ್ಕೂ ಅಧಿಕ ಮೆದು ಕಬ್ಬಿಣ ಉತ್ಪಾದನಾ ಘಟಕಗಳಲ್ಲಿ ಕಚ್ಚಾ ಅದಿರು ಸಂಸ್ಕರಿಸಿ, ಕಬ್ಬಿಣದ ಅಂಶವನ್ನೆಲ್ಲ ಸಂಗ್ರಹಿಸಿ ಉಕ್ಕು ಉಪ್ತಾದಿಸಿದ ನಂತರ ಉಳಿಯುವ ಅಲ್ಪ ಪ್ರಮಾಣದ ಕಬ್ಬಿಣದ ಅಂಶವುಳ್ಳ ತ್ಯಾಜ್ಯವನ್ನೇ ಇದೀಗ ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ.ಉಕ್ಕಿನ ಕಾರ್ಖಾನೆಗಳಲ್ಲಿ ಬಳಸಿ ಬಿಸಾಡುವ ಈ ತ್ಯಾಜ್ಯವನ್ನು `ಸ್ಲ್ಯಾಗ್~ ಎಂದು ಕರೆಯಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಜಿಲ್ಲೆಯಲ್ಲಿರುವ  ಉಕ್ಕಿನ ಕಾರ್ಖಾನೆಗಳು ಮತ್ತು ಮೆದು ಕಬ್ಬಿಣ ಉತ್ಪಾದನಾ ಘಟಕಗಳಲ್ಲಿ ತ್ಯಾಜ್ಯ ಎಂದೇ ಪರಿಗಣಿಸಿ, ಕೋಟ್ಯಂತರ ಟನ್ ಸ್ಲ್ಯಾಗ್ ಶೇಖರಿಸಿ ಇಡಲಾಗಿದೆ. ಪ್ರಯೋಜನಕ್ಕೇ ಬಾರದಂತಿದ್ದ ಈ ತ್ಯಾಜ್ಯವನ್ನು ಇದೀಗ ಮೊತ್ತಮೊದಲ ಬಾರಿಗೆ ರಸ್ತೆಗಳ ಅಭಿವೃದ್ಧಿಗಾಗಿ ಬಳಸುತ್ತ ಸಮರ್ಪಕ  ಪ್ರಯೋಜನ ಪಡೆಯಲಾಗುತ್ತಿದೆ.ಸ್ಲ್ಯಾಗ್‌ನ ಪದರ: ಹಲವು ಹಂತಗಳಲ್ಲಿ ಅಭಿವೃದ್ಧಿ ಹೊಂದುವ ರಸ್ತೆಗೆ ಮೊದಲ ಹಂತದ ಪದರದಲ್ಲಿ ಮುರ‌್ರಂ ಅನ್ನೂ, ಎರಡನೇ ಪದರದಲ್ಲಿ ಜಲ್ಲಿಗೆ ಬದಲು ಸ್ಲ್ಯಾಗ್ ಅನ್ನೂ ಹಾಕಿ ಹದಗೊಳಿಸಿದ ನಂತರ ಮೂರನೇ ಪದರದಲ್ಲಿ ಜಲ್ಲಿ  ಹಾಕಲಾಗಿದೆ. ನಂತರ ರೋಲರ್‌ಗಳಿಂದ ಹದಗೊಳಿಸಿ ಡಾಂಬರು ಹಾಕುವ ಮೂಲಕ ರಸ್ತೆಗೆ ಅಂತಿಮ ರೂಪ ನೀಡಲಾಗುತ್ತದೆ.ಉತ್ತರ ಭಾರತದಲ್ಲಿ ಇಂತಹ ರಸ್ತೆ ನಿರ್ಮಿಸಲಾಗಿದ್ದು, ಸದ್ಯ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಮಾದರಿಯ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಪಿಎಂಜಿಎಸ್‌ವೈನ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಜಲ್ಲಿಗಿಂತ ಶೇ 40ರಷ್ಟು ಕಡಿಮೆ ದರದಲ್ಲಿ ಸ್ಲ್ಯಾಗ್ ದೊರೆಯುತ್ತದೆ. ಅಲ್ಲದೆ, ಅದರಲ್ಲಿ ಕಬ್ಬಿಣದ ಅಂಶವೂ ಇರುವುದರಿಂದ ರಸ್ತೆಯ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಗುಣಮಟ್ಟಕ್ಕೆ ಹೋಲಿಸಿದಾಗ ಈ ರಸ್ತೆ ಸಾಮಾನ್ಯ ರಸ್ತೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಬಳ್ಳಾರಿ ಸುತ್ತಮುತ್ತ ಇರುವ ಉಕ್ಕಿನ ಕಾರ್ಖಾನೆಗಳಲ್ಲಿ ಸ್ಲ್ಯಾಗ್ ಹೇರಳವಾಗಿ ದೊರೆಯುತ್ತಿದ್ದು, ಸದ್ಯ ಶಾತವಾಹನ ಮೆದು ಕಬ್ಬಿಣ ಘಟಕದಿಂದ ಈ ರಸ್ತೆಗಾಗಿ ಸ್ಲ್ಯಾಗ್ ಖರೀದಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಇಟ್ಟಿಗೆ ಮತ್ತು ಸಿಮೆಂಟ್ ತಯಾರಿಕಾ ಘಟಕಗಳಲ್ಲೂ ಸ್ಲ್ಯಾಗ್ ಬಳಸಲಾಗುತ್ತದೆ. ಇದೀಗ ರಸ್ತೆಗೂ ಅದನ್ನು ಪ್ರಾಯೋಗಿಕವಾಗಿ ಬಳಸಲಾಗಿದ್ದು, ಗುಣಮಟ್ಟ ಆಧರಿಸಿ ನಂತರದ ದಿನಗಳಲ್ಲಿ ಜಿಲ್ಲೆಯ ಇತರ ಕಡೆಯೂ ಸ್ಲ್ಯಾಗ್ ಬಳಸಿ ರಸ್ತೆ ನಿರ್ಮಿಸುವ ಇರಾದೆ ಇದೆ ಎಂದು ತಿಳಿಸಿದ್ದಾರೆ.ವಿಶಿಷ್ಟ ರೀತಿಯ ಈ ರಸ್ತೆಯನ್ನು ಕಂಡು ಗುಡದೂರು ಮತ್ತು ಬಸರಕೋಡು ಗ್ರಾಮದ ಜನರೂ, ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರೂ ದಂಗಾಗಿದ್ದು, ಈ ಮಾದರಿಯ ರಸ್ತೆಯನ್ನೇ ಕಂಡಿಲ್ಲ ಎಂದು ಹೇಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.