ಶುಕ್ರವಾರ, ಜೂನ್ 18, 2021
20 °C

ಗ್ರಾಹಕರ ಸಮಸ್ಯೆಗೆ ಶೀಘ್ರ ಸ್ಪಂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಸಮಸ್ಯೆ ಪರಿಹಾರಕ್ಕೆ ಬೆಸ್ಕಾಂ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಬೆಸ್ಕಾಂ ಖಾಸಗಿ ಉದ್ಯಮಿಗಳ ಪಾಲಾಗುವುದು ಖಂಡಿತ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಎಚ್ಚರಿಸಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಜಿಲ್ಲಾ ವಿದ್ಯುತ್ ಬೆಸ್ಕಾಂ ಗ್ರಾಹಕರ ಕುಂದು-ಕೊರತೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗ್ರಾಹಕರು ಅಧಿಕಾರಿಗಳ ಬಳಿ ಸಮಸ್ಯೆ ಹಿಡಿದು ಬಂದರೆ ಸಮರ್ಪಕವಾಗಿ ಸ್ಪಂದಿಸಬೇಕು. ನವದೆಹಲಿ, ಮುಂಬೈ ಇತರೆ ರಾಜ್ಯಗಳ ವಿದ್ಯುತ್ ಕಂಪೆನಿಗಳು ಖಾಸಗಿಯವರ ಪಾಲಾದವು. ಇದೇ ಗತಿ ಬೆಸ್ಕಾಂಗೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷದಲ್ಲಿ ರೂ. 9ಸಾವಿರ ಕೋಟಿ ವಹಿವಾಟು ನಡೆಸಲಾಗಿದ್ದು, ರೂ. 8,750 ಕೋಟಿ ಮೊತ್ತದಲ್ಲಿ ವಿದ್ಯುತ್ ಖರೀದಿಗೆ ವ್ಯಯಿಸಲಾಗಿದೆ. ಆದರೂ ಸಹ ಗ್ರಾಹಕರಿಗೆ ವಿದ್ಯುತ್ ಪೂರೈಸಲು ಆಗುತ್ತಿಲ್ಲ. ಹೊಸ ವಿದ್ಯುತ್ ಘಟಕ, ಅಣು ಸ್ಥಾವರಗಳ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿದೆ. ಬೆಸ್ಕಾಂ ಇತರೆ ಕಂಪೆನಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಗ್ರಾಹಕರಿಗೆ ವಿವರಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್ ಮಾತನಾಡಿ, ದಾವಣಗೆರೆ ಉಪ ನಗರ-1ರಲ್ಲಿ ಮನೆ ಒಳಗಿರುವ ವಿದ್ಯುತ್ ಮೀಟರ್‌ಗಳನ್ನು ಬೆಸ್ಕಾಂ ತನ್ನ ಹಣದಲ್ಲಿ ಸ್ಥಳಾಂತರಿಸುವುದಾಗಿ ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದರು. ಆದರೆ, ಅದು ಕಾರ್ಯಗತ ಆಗಿಲ್ಲ. ಈ ಕುರಿತು ಬೆಸ್ಕಾಂ ಅಧಿಕಾರಿಗಳು ಶೀಘ್ರದಲ್ಲಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಚನ್ನಗಿರಿಯ ರೈತ ತಿಪ್ಪಣ್ಣ ಮಾತನಾಡಿ, ಬೆಸ್ಕಾಂ ನಗರ ಹೆಚ್ಚು ಕಾಲ ವಿದ್ಯುತ್ ನೀಡುತ್ತದೆ. ಆದರೆ, ಗ್ರಾಮೀಣ ಪ್ರದೇಶಗಳಿಗೆ ನಿಗದಿತ ವೇಳೆಯೂ ವಿದ್ಯುತ್ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದೆ. ನಗರ, ಹಳ್ಳಿಗಳೆಂದು ಭೇದ ಮಾಡದೇ ವಿದ್ಯುತ್ ಒದಗಿಸಬೇಕು. `ನಿರಂತರ ಜ್ಯೋತಿ~ ಯೋಜನೆಯಿಂದ ರೈತರಿಗೆ ಉಪಯೋಗವಾಗಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಣಿವಣ್ಣನ್, ಬೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಏಕೈಕ ಸಂಸ್ಥೆ. ಬೆಸ್ಕಾಂ ಅಧಿಕಾರಿಗಳು ಮತ್ತು ಗ್ರಾಹಕರು ಒಂದೇ ದೋಣಿಯ ಪಯಣಿಗರು, ಸಹಕರಿಸಿಕೊಂಡು ಹೋಗಬೇಕು ಎಂದರು.

ಸಭೆಯಲ್ಲಿ ಬೆಸ್ಕಾಂ ಎಂಜಿನಿಯರ್‌ಗಳಾದ ಕೋಟೆಪ್ಪ, ಮಹಾಂತಪ್ಪ, ನಂಜಯ್ಯ, ಗ್ಯಾನಪ್ಪ ಮತ್ತಿತರರು ಹಾಜರಿದ್ದರು.  ಸುರೇಶ್, ತೆಲಗಿ ರೇವಣಪ್ಪ, ಹರಿಹರದ ಕೈಗಾರಿಕೋದ್ಯಮಿ ಸತ್ಯನಾರಾಯಣ ಸಮಸ್ಯೆಗಳನ್ನು ಹೇಳಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.