ಶನಿವಾರ, ಜೂನ್ 19, 2021
22 °C

ಚಂದಾ ನೀಡಿದರೂ ತಪ್ಪದ ನೀರಿನ ಬವಣೆ

ಮನ್ಮಥಪ್ಪ ಸ್ವಾಮಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್‌: ತಾಲ್ಲೂಕಿನ ಹಿಪ್ಪಳಗಾಂವ್ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಸಮರ್ಪಕ ರಸ್ತೆ ಗಳಿಲ್ಲ. ಕೊಳವೆಬಾವಿ ಬತ್ತಿ ಹೋಗಿದ್ದು, ನೀರಿಗೆ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಪೂರೈಕೆ ಯೋಜನೆಗೆ ಜನರಿಂದ ಹಣ ಸಂಗ್ರಹಿಸಿ ನೀಡಿದರೂ ಗ್ರಾಮಸ್ಥರ ಬವಣೆ ಮಾತ್ರ ತಪ್ಪಿಲ್ಲ.‘ಗ್ರಾಮಸ್ಥರು ₨1 ಲಕ್ಷ ಹಣ ಭರಿಸಿದರೆ ಸ್ವಜಲಧಾರಾ ಯೋಜನೆಯಡಿ ಕುಡಿಯುವ ನೀರು ಪೂರೈಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಹಣ ಸಂಗ್ರಹಿಸಿ ನೀಡಲಾಯಿತು. ಯೋಜನೆಯಡಿ ನೀರಿನ ಟ್ಯಾಂಕ್‌ ಕಾಮಗಾರಿ ಕೈಗೊಳ್ಳಲಾಯಿತು. ಆದರೆ ಅದು ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಯೋಜನೆಗೆ  ಸರ್ಕಾರದ ₨1.98 ಲಕ್ಷ ಅನುದಾನ ಸಿಕ್ಕಿತ್ತು. ಆದರೆ ಆ ಹಣ ಖರ್ಚಾಯಿತು. ಕುಡಿಯಲು ನೀರು ಮಾತ್ರ ಸಿಕ್ಕಿಲ್ಲ’ ಎಂದು ಹಿಪ್ಪಳಗಾಂವ್ ಗ್ರಾಮದ ಶಶಿಕಾಂತ ಪಾಂಚಾಳ ಆರೋಪಿಸುತ್ತಾರೆ.ಶಾಸಕ ಪ್ರಭು ಚವಾಣ್‌ ತಮ್ಮ ಶಾಸಕರ ಅನುದಾನದಲ್ಲಿ ಕುಡಿ­ಯುವ ನೀರಿಗಾಗಿ ಎರಡು ಕಂತಿನಲ್ಲಿ ₨10 ಲಕ್ಷ ಅನುದಾನ ನೀಡಿದ್ದಾರೆ. ಆ ಹಣವು ಸಮರ್ಪಕವಾಗಿ ಬಳಕೆ­ಯಾಗದೆ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಯೋಜನೆ ಪರಿಣಾಮಕಾರಿಯಾಗಿ ಜಾರಿ­ಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರುತ್ತಾರೆ.ನೀರಿನ ಟ್ಯಾಂಕ್‌ನಿಂದ ಗ್ರಾಮಕ್ಕೆ ನೀರು ಪೂರೈಸಲು ವಿವಿಧೆಡೆ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ ಅದರಲ್ಲಿ ಒಂದೂ ದಿನವೂ ನೀರು ಬಂದಿಲ್ಲ. ಐದಾರು ವರ್ಷಗಳಿಂದ ₨10ಲಕ್ಷಕ್ಕೂ ಹೆಚ್ಚು  ಹಣ ಖರ್ಚು ಮಾಡಲಾಗಿದೆ. ಆದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಇಷ್ಟೊಂದು ಹಣ ಬಳಕೆಯಾದರೂ ಯೋಜನೆ ಪೂರ್ಣಗೊಂಡಿಲ್ಲ. ಕಾಮಗಾರಿಯಲ್ಲಿ ಹಣ ದುರ್ಬಳಕೆಯಾಗಿದೆ. ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು  ವೆಂಕಟರಾವ ಪಾಟೀಲ ಒತ್ತಾಯಿಸುತ್ತಾರೆ.ಸದ್ಯ ಹಳೆ ಪೈಪ್‌ನಿಂದ ನೀರು ಬರುತ್ತಿದೆ. ಎರಡು ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಈ ನೀರು ಸಾಕಾಗುತ್ತಿಲ್ಲ. ವಿದ್ಯುತ್‌ ಕೈಕೊಟ್ಟರೆ ವಾರಗಟ್ಟಲೇ ನೀರಿಗಾಗಿ ಪರದಾಡಬೇಕಾಗುತ್ತದೆ. ಗ್ರಾಮದ ಸಮೀಪದ ಕೊಳವೆ ಬಾವಿಗಳು ಈಗಲೇ ಬತ್ತಿಹೋಗಿವೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಳ್ಳುತ್ತಾರೆ.ಇನ್ನು ಗ್ರಾಮದ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಹಿಪ್ಪಳಗಾಂವ್‌ ಕ್ರಾಸ್‌ನಿಂದ ಡೊಣಗಾಂವ್‌ವರೆಗಿನ 5 ಕಿ.ಮೀ. ರಸ್ತೆ ಹದಗೆಟ್ಟಿದೆ.

ಐದು ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದೆ.  ರಸ್ತೆ ಮೇಲೆ ಹೊಂಡಗಳು ಬಿದ್ದು ಸಂಚಾರ ದುಸ್ತರವಾಗಿದೆ. ರಸ್ತೆ ಹದಗೆಟ್ಟ ಕಾರಣ ವಾಹನಗಳ ಓಡಾಟ ಕಡಿಮೆಯಾಗಿದೆ. ಇದರಿಂದ ವಿದ್ಯಾರ್ಥಿಗಳು, ರೈತರು ತಾಲ್ಲೂಕು ಕೇಂದ್ರಕ್ಕೆ ಹೋಗಲು ತೊಂದರೆಪಡುವಂತಾಗಿದೆ ಎಂದು ಗ್ರಾಮದ ಯುವಕರು ದೂರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ. ‘ಮನವಿಗೆ ಸ್ಪಂದಿಸಿಲ್ಲ’

‘ರಸ್ತೆ, ಕುಡಿಯುವ ನೀರು, ಬಡವರಿಗೆ ವಸತಿ ಕಲ್ಪಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ನಡೆಸಿದ ಹೋರಾಟಕ್ಕೂ ಅಧಿಕಾರಿಗಳು ಸ್ಪಂದಿಸಿಲ್ಲ’.

–ಶಶಿಕಾಂತ ಪಾಂಚಾಳ, ಸ್ಥಳೀಯ‘ಸಮಸ್ಯೆ ಪರಿಹಾರಕ್ಕೆ ಕ್ರಮ’

‘ಹಿಪ್ಪಳಗಾಂವ್‌ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು. ಆದರೆ ಅಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೈಗೊಳ್ಳಲಾದ ಕುಡಿಯುವ ನೀರಿನ ಯೋಜನೆ ಮತ್ತು ಅನುದಾನದ ಬಗ್ಗೆ ಮಾಹಿತಿ ಇಲ್ಲ’.

–ಧನರಾಜ ಟೋಕರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ‘ಜನಜಾಗೃತಿ ಅಗತ್ಯ’

‘ಕುಡಿಯುವ ನೀರು ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಅನುದಾನ ಬರುತ್ತಿದೆ.

ಆದರೆ ಅದರ ಸದ್ಬಳಕೆಯಾಗದ ಕಾರಣ ಸಮಸ್ಯೆ ಸಮಸ್ಯೆ­ಯಾಗಿ­ಯೇ ಉಳಿ­ಯುತ್ತಿದೆ. ಈ ವಿಷಯದಲ್ಲಿ ಜನಜಾಗೃತಿ ಅಗತ್ಯ’.

–ವೆಂಕಟರಾವ ಪಾಟೀಲ, ಗ್ರಾಮಸ್ಥ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.