ಸೋಮವಾರ, ಜೂನ್ 14, 2021
21 °C

ಚಕ್ರವ್ಯೂಹ ಭೇದಿಸುವುದು ಗೊತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಈ ಯಡಿಯೂರಪ್ಪ ಚಕ್ರವ್ಯೂಹದಿಂದ ಹೊರಬರದ ಅಭಿಮನ್ಯು ಅಲ್ಲ. ಈತನಿಗೆ ರಾಜಕೀಯ ಷಡ್ಯಂತ್ರ ಭೇದಿಸುವುದೂ ಗೊತ್ತು. ಅದರಿಂದ ಹೊರಬರುವುದೂ ಗೊತ್ತು. ಪುಣ್ಯಕೋಟಿಯ ಈ ನಾಡಿನಲ್ಲಿ ನಂಬಿಕೆ-ವಿಶ್ವಾಸ ದ್ರೋಹಕ್ಕೆ ಅವಕಾಶ ಇಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದರು.ನಗರದಲ್ಲಿ ಭಾನುವಾರ ಬೆಂಬಲಿಗರು ಏರ್ಪಡಿಸಿದ್ದ 70ನೇ ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ತಾವು ಈ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಹೊದ್ದಿದ್ದಂತೆಯೇ ಹೆಗಲ ಮೇಲೆ ಹಸಿರು ಶಾಲನ್ನು ಹೊದ್ದು ಬಂದಿದ್ದ ಅವರು ಭಾಷಣದ ಉದ್ದಕ್ಕೂ ಪ್ರತಿಪಕ್ಷದವರ ವಿರುದ್ಧ ಆವೇಶ ವ್ಯಕ್ತಪಡಿಸಿದರು.`ಎಂತಹ ಸಮಸ್ಯೆ ಎದುರಾದರೂ ಬೆನ್ನು ತೋರಿಸುವ ಪ್ರಶ್ನೆಯೇ ಇಲ್ಲ. ಪಲಾಯನ ಮಾಡದೆ, ಧೈರ್ಯಗೆಡದೆ ಎಲ್ಲ ಸವಾಲುಗಳನ್ನೂ ಎದುರಿಸುತ್ತೇನೆ. ಈ ಸಂಕಟದ ಕಾಲ ನನ್ನ ಪಾಲಿಗೆ ಸಂಘರ್ಷದ ಕಾಲವಾಗಿದೆ~ ಎಂದರು.`ವಿರೋಧಿಗಳು ಎಣಿಸಿದಂತೆ ನಾನು ಬಿಜೆಪಿಯನ್ನು ತೊರೆಯುವುದಿಲ್ಲ. ಬೇರೆ ಪಕ್ಷವನ್ನು ಸೇರುವುದಿಲ್ಲ. ಯಾವುದೇ ಸ್ಥಾನಮಾನ ಅಪೇಕ್ಷಿಸದೆ ಇಲ್ಲಿಯೇ ಇದ್ದುಕೊಂಡು ಪಕ್ಷವನ್ನು ಬೆಳೆಸುತ್ತೇನೆ. ಅಗ್ನಿ ಪರೀಕ್ಷೆ ಎದುರಿಸುತ್ತಿರುವ ನನಗೆ ಈ ಕಾಲದಲ್ಲಿ ರಾಜ್ಯದ ಜನರ ಬೆಂಬಲವಷ್ಟೇ ಬೇಕು~ ಎಂದು ತಿಳಿಸಿದರು.`ಸಮಾವೇಶವನ್ನು ಶಕ್ತಿ ಪ್ರದರ್ಶನ ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಶಕ್ತಿ ಪ್ರದರ್ಶನ ಏಕೆ, ಯಾರ ಮೇಲೆ~ ಎಂದು ಪ್ರಶ್ನಿಸಿದ ಅವರು, `ರಾಜ್ಯದ ಉದ್ದಗಲಕ್ಕೂ ಈ ಯಡಿಯೂರಪ್ಪ ಪ್ರವಾಸ ಮಾಡಬೇಕು. ಪಕ್ಷವನ್ನು ಬಲಪಡಿಸಬೇಕು. ಆ ಮೂಲಕ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಅಪೇಕ್ಷೆಯಿಂದ ಬೆನ್ನುತಟ್ಟಿ ಹುರಿದುಂಬಿಸಲು ಶೆಟ್ಟರ-ಬೊಮ್ಮಾಯಿ ಅವರೆಲ್ಲ ಕೂಡಿಕೊಂಡು ಈ ಸಮಾವೇಶ ಸಂಘಟಿಸಿದ್ದಾರೆ~ ಎಂದು ಹೇಳಿದರು.

 

`ಅಪ್ಪ-ಮಕ್ಕಳು ಸೇರಿದಂತೆ ವಿರೋಧಪಕ್ಷದವರು ನನಗೆ ಕಿರುಕುಳ ಕೊಟ್ಟರು. ಆದರೆ, ಯಾವುದಕ್ಕೂ ಎದೆಗುಂದದೆ ನಾನು ಕೆಲಸ ಮಾಡಿದೆ. ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆ ನನಗೆ ಚೆನ್ನಾಗಿ ಗೊತ್ತಿದ್ದು, ರಾಜಕೀಯದಲ್ಲಿ ಆಕ್ರಮಣಕಾರಿ ಆಟ ಆಡುವುದೂ ಗೊತ್ತಿದೆ ಎಂದು ಗುಡುಗಿದರು.`ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಂಘ ಪರಿವಾರದ ನೇತಾರ ಡಾ. ಹೆಡ್ಗೇವಾರ್ ಅವರ ವಿಚಾರಧಾರೆ ಅಳವಡಿಸಿಕೊಂಡು ಬೆಳೆದು ಬಂದವನು ನಾನು. ಯಾವ ಷಡ್ಯಂತ್ರಕ್ಕೂ ಹೆದರುವುದಿಲ್ಲ. ಯಾವುದೇ ಪ್ರತಿಫಲ ಅಪೇಕ್ಷಿಸದೆ ಪ್ರಾಣ ಇರುವವರೆಗೆ ರಾಜ್ಯದ ಹಿತಕ್ಕಾಗಿ ಹೋರಾಡುತ್ತೇನೆ~ ಎಂದು ಘೋಷಿಸಿದರು.`ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಾಗ ಆಗದ ನೋವು ನಿರಪರಾಧಿಯಾಗಿ ಜೈಲಿಗೆ ಹೋಗುವಾಗ ಆಗಿತ್ತು. ಜೈಲಿನಿಂದ ಹೊರಬಂದ ಮೇಲೆ ಬೆಂಬಲಿಗರಿಗೆ ಸಿಹಿ ತಿನ್ನಿಸುವ ಮೂಲಕ ನಾನೇ ಆತ್ಮಸ್ಥೈರ್ಯ ತುಂಬಿದೆ. ಒಬ್ಬ ನಾಯಕ ಮಾಡಬೇಕಾದ ಕೆಲಸ ಅದು~ ಎಂದು ಹೇಳಿದರು.`ಸುಳ್ಳು ಭರವಸೆ ನೀಡುವುದಿಲ್ಲ. ಕೊಟ್ಟ ಭರವಸೆಯನ್ನು ಈಡೇರಿಸದೆ ಬಿಡುವುದಿಲ್ಲ. ಪಕ್ಷದಲ್ಲಿ ಇದ್ದುಕೊಂಡೇ ಎಲ್ಲವನ್ನೂ ಸಾಧಿಸಿ ತೋರುತ್ತೇನೆ. ಜನರ ಬೆಂಬಲ ಸದಾ ನನ್ನ ಮೇಲೆ ಇರಬೇಕು~ ಎಂದು ಮಾತು ಮುಗಿಸಿದರು.ಸಮಾರಂಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, `ನಾವು ಇವತ್ತು ಅಧಿಕಾರ ಇಲ್ಲದ ಯಡಿಯೂರಪ್ಪ ಅವರನ್ನು ನೋಡುತ್ತಿದ್ದೇವೆ. ಆದರೆ, ಪಲಾಯನ ಮಾಡದೆ ಅವರು ಎಂದಿನ ಧೈರ್ಯದಿಂದ ಮುನ್ನುಗ್ಗಬೇಕು. ಅವರಿಗೆ ಹೋರಾಟದ ಚೈತನ್ಯ ನೀಡುವ ಉದ್ದೇಶದಿಂದಲೇ ಈ ಸಮಾರಂಭ ನಡೆದಿದೆ~ ಎಂದು ಹೇಳಿದರು.`ನೋವು-ದುಃಖ ಅನುಭವಿಸುತ್ತಿರುವ ಯಡಿಯೂರಪ್ಪ ಜತೆ ನಾವೆಲ್ಲ ಇದ್ದೇವೆ. ಅವರ ಹೋರಾಟಕ್ಕೆ ಈ ಸಮಾವೇಶ ದಾರಿ ತೋರಲಿದೆ. ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಶಕ್ತಿ ಇರುವುದು ಯಡಿಯೂರಪ್ಪನವರಿಗೆ ಮಾತ್ರ~ ಎಂದು ಗದ್ಗದಿತರಾಗಿ ಶೋಭಾ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.