ಬುಧವಾರ, ಮಾರ್ಚ್ 3, 2021
25 °C

ಚರ್ಮ ಮರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರ್ಮ ಮರ್ಮ

ತಂಪು ಬಯಸುವ ಋತು ಇದು. ಮೈ ಮನಸುಗಳೆಲ್ಲವೂ ತಂಪು ಬಯಸುತ್ತವೆ. ಅರ್ಧ ತೋಳಿನ ಅಂಗಿ ತೊಟ್ಟು, ಐಸ್‌ಕ್ರೀಮ್ ಸವಿಯುತ್ತ, ಮನೆ ಮುಂದೆ ಬರುವ ಬರ್ಫ್ ಗೋಲದಿಂದ ತಣ್ಣನೆಯ ನೀರು ಹೀರುತ್ತ ತಣ್ಣಗಾಗುವುದೇ ಖುಷಿ ನೀಡುತ್ತದೆ.

ಮೊಣಕೈಗುಂಟ ಇಳಿಯುವ ಐಸ್ ನೀರನ್ನು ತುದಿ ನಾಲಗೆಯಿಂದ ನೆಕ್ಕುತ್ತಲೇ ತಣ್ಣಗಾಗಿರುವ ಕೈ ಸವಿಯೇ ರುಚಿ ನೀಡುತ್ತದೆ.

ಸಣ್ಣ ಉಡುಗೆ, ತಣ್ಣನೆಯ ನೀರಿನಾಟ, ತಂಪು ಪಾನೀಯ, ಮೈ ಮನಗಳ ತಾಪವನ್ನು ತಂಪುಗೊಳಿಸುವ ಋತುಮಾನ ಬೇಸಿಗೆ.

ತುಂಡುಡುಗೆಯ ತೊಟ್ಟಾಗ ಮೈ ಚರ್ಮದ ನುಣುಪು ಮತ್ತು ಹೊಳಪು ಎರಡನ್ನೂ ಉಳಿಸಿಕೊಳ್ಳುವುದು ಅತ್ಯಗತ್ಯ.

ಉರಿಬಿಸಿಲಿನೊಂದಿಗೆ ಚರ್ಮವೂ ಸುಡದಿರುವಂತೆ ನೋಡಿಕೊಳ್ಳಲು ಬೆಂಗಳೂರಿನ ಕಾಯಾ ಸ್ಕಿನ್ ಕೇರ್ ಕ್ಲಿನಿಕ್‌ನ ಡಾ. ಸಂಗೀತ ಅಮ್ಲಾಡಿ ಕೆಲ ಸಲಹೆಗಳನ್ನು ನೀಡಿದ್ದಾರೆ.

ಪ್ರತಿ ದಿನವೂ ಕನಿಷ್ಠವೆಂದರೂ 3 ಲೀಟರ್‌ಗಳಷ್ಟು ನೀರು ಕುಡಿಯಿರಿ. ಇದು ಚರ್ಮದ ತೇವಾಂಶ ಕಾಪಿಡಲು ಸಹಾಯ ಮಾಡುತ್ತದೆ.

ವಿಟಮಿನ್ ಎ ಮತ್ತು ಸಿ ಹೇರಳವಾಗಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಿ. ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಇವು ಮಹತ್ವದ ಪಾತ್ರವಹಿಸುತ್ತವೆ.

ತಣ್ಣನೆಯ ನೀರಿನ ಸ್ನಾನ ಮಾಡಿರಿ. ತಣ್ಣೀರು ಸ್ನಾನ ಆಗದಿದ್ದರೆ ಉಗುರು ಬಿಸಿ ನೀರಿನ ಸ್ನಾನ ಮಾಡಿ. ಇದು ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ. ಜೊತೆಗೆ ಆಹ್ಲಾದಕರ ಅನುಭವ ನೀಡುತ್ತದೆ.

ಸ್ನಾನವಾದ ಕೂಡಲೇ ಟವಲ್‌ನಿಂದ ಮೈಯನ್ನು ಒರೆಸಿಕೊಳ್ಳಬೇಡಿ. ಟವಲ್‌ನಿಂದ ಹಿತವಾಗಿ ನೀರೊತ್ತಿ.

ಮೈ ತೇವಾಂಶ ಒಣಗುವ ಮುನ್ನವೇ ಮಾಯಿಶ್ಚರೈಸರ್ ಲೇಪಿಸಿದರೆ ಚರ್ಮದಾಳಕ್ಕೆ ಇಳಿಯುವಲ್ಲಿ ಸಹಾಯವಾಗುತ್ತದೆ.

ಹೊರ ಹೋಗುವ ಮುನ್ನ ಸನ್‌ಸ್ಕ್ರೀನ್ ಲೋಷನ್ ಲೇಪನ ಮರೆಯಬೇಡಿ. ಥಂಡಿಗಾಳಿಗೆ ತುಟಿ ಒಡೆಯುವಂತೆ ಬೇಸಿಗೆಯಲ್ಲಿಯೂ ಶುಷ್ಕವಾಗುತ್ತವೆ. ಅದಕ್ಕೆ ಆಗಾಗ ಲಿಪ್ ಗ್ಲೋಸ್, ಲಿಪ್‌ಬಾಮ್ ಅನ್ನು ಲೇಪಿಸುತ್ತಿರಿ. ಆಗಾಗ ನೀರು ಕುಡಿಯುತ್ತಲೇ ಇರಿ.

ಚಂದಕಾಣಿಸುವುದಷ್ಟೇ ಅಲ್ಲ, ಚರ್ಮದ ಸ್ವಾಸ್ಥ್ಯ ಕಾಯ್ದುಕೊಳ್ಳದಿದ್ದರೆ ಸಮಸ್ಯೆಗಳು ತಪ್ಪಿದ್ದಲ್ಲ.

ಬೇಸಿಗೆಯಲ್ಲಿ ಬೆವರಿನ ದುರ್ವಾಸನೆ, ಕೆರೆತ, ಶುಷ್ಕತನ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚರ್ಮ ವಯಸ್ಸಾದವರಂತೆ ಸುಕ್ಕುಗಟ್ಟುವುದೂ ಇದೇ ಕಾಲದಲ್ಲಿ. ಇದನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯುವುದರೊಂದಿಗೆ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು. ಆದಷ್ಟು ಸಲಾಡ್‌ಗಳನ್ನು ತಿನ್ನಬೇಕು.

30 ವರ್ಷದವರಾದರೆ ತಿಂಗಳಿಗೊಮ್ಮೆಯಾದರೂ ಫೇಷಿಯಲ್, ಮಸಾಜ್ ಮುಂತಾದವುಗಳ ಮೊರೆ ಹೋಗಬೇಕು. ನಿಯಮಿತ ವ್ಯಾಯಾಮ, ಕಸರತ್ತು ಜೊತೆಗೆ ಸೂಕ್ತ ಆಹಾರವಿದ್ದಲ್ಲಿ ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯಬಹುದು.

ಸಾಮಾನ್ಯವಾಗಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬಿಸಿಲು ಪ್ರಖರವಾಗಿರುತ್ತದೆ. ಈ ಸಮಯದಲ್ಲಿ ಹೊರಗೆ ಹೊರಟರೆ ಕೊಡೆ ಬಳಸುವುದು ಒಳಿತು. ತಂಪು ಕನ್ನಡಕದ ಬಳಕೆಯಿಂದ ಕಣ್ಣಿನ ರಕ್ಷಣೆಯೂ ಆಗುತ್ತದೆ. ಹ್ಯಾಟುಗಳ ಬಳಕೆಯಿಂದ ಕೂದಲು ಶುಷ್ಕವಾಗುವುದನ್ನು ತಡೆಯಬಹುದಾಗಿದೆ.

ಬೇಸಿಗೆಯಲ್ಲಿ ಸಾಧ್ಯವಾದರೆ ಎರಡು ಸಲ ಸ್ನಾನ ಮಾಡುವುದು ಒಳಿತು. ಇದು ಮನಸಿಗೆ ಉತ್ಸಾಹ ತುಂಬುವುದರೊಂದಿಗೆ ದೇಹ ಶುದ್ಧಿಯನ್ನೂ ಮಾಡುತ್ತದೆ.

ಹತ್ತಿ ಉಡುಪುಗಳು ಆರಾಮದಾಯಕವಾಗಿರುತ್ತವೆ. ಬಿಸಿಲಿನಲ್ಲಿಯೇ ಕೆಲಸ ನಿರ್ವಹಿಸುವುದು ಅತ್ಯಗತ್ಯವಾದಲ್ಲಿ ತೀಕ್ಷ್ಣ ಸನ್‌ಸ್ಕ್ರೀನ್ ಲೋಷನ್ ಬಳಸುವುದು ಒಳಿತು. ಎಸ್‌ಪಿಎಫ್ 15ರಷ್ಟಾದರೂ ಇರಬೇಕು. ಬೇಸಿಗೆ ರಜೆಗೆಂದು ಹೊರಗೆ ಹೋಗುವ ಯೋಜನೆಗಳಿದ್ದರೆ ಎಸ್‌ಪಿಎಫ್ 30ರವರೆಗೂ ಇರುವ ಲೋಷನ್ ಬಳಸಿ ಎಂಬುದು ಡಾ. ಸಂಗೀತಾ ಅವರ ಸಲಹೆಯಾಗಿದೆ.

ಮಿತವಾದ ಊಟ, ಹಿತವಾದ ಸ್ನಾನ ಬೇಸಿಗೆಯನ್ನು ಸಹ್ಯಗೊಳಿಸುತ್ತದೆ. ಅಷ್ಟೇ ಅಲ್ಲ ತಾಜಾತನದ ಅನುಭವ ನೀಡುವಂತೆಯೂ ಮಾಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.