ಚರ್ವಿತಚರ್ವಣ

7

ಚರ್ವಿತಚರ್ವಣ

Published:
Updated:

ಚಿತ್ರ : ಕಾರ್ತಿಕ್

ಬೆಟ್ಟ ತಪ್ಪಲಿನ ಬಯಲಿನಲ್ಲಿ ನಾಯಕ ಕಟ್ಟಿಕೊಂಡ ಮನೆ. ಮರಮಟ್ಟುಗಳನ್ನು ಬಳಸಿ ಆವರಣವನ್ನು ದಿವಿನಾಗಿ ಸಿಂಗರಿಸಿಕೊಂಡಿದ್ದಾನೆ. ಅಂಥ ಸ್ಥಳಕ್ಕೆ ನಾಯಕಿಯು ಜೋರಾಗಿ ಕಾರನ್ನು ಓಡಿಸಿಕೊಂಡು ಬಂದು, ಮನೆ ಮುಂದಿನ ಸೌಂದರ್ಯವನ್ನೆಲ್ಲಾ ನಾಶಮಾಡುತ್ತಾಳೆ. ‘ಹಾಳು ಮಾಡುವುದು ಸುಲಭ. ಮತ್ತೆ ಎಲ್ಲವನ್ನೂ ಸರಿಮಾಡು; ಕಷ್ಟ ಗೊತ್ತಾಗುತ್ತೆ’ ಎಂದು ನಾಯಕ ಅವಳಿಗೆ ತಾಕೀತು ಮಾಡುತ್ತಾನೆ. ಮುಂದೆ ಇಬ್ಬರಿಗೂ ಪ್ರೇಮವಾಗುತ್ತದೆಂಬುದು ಸತ್ಯಸ್ಯ ಸತ್ಯ!ಶ್ರೀಮಂತಿಕೆಯ ಹಮ್ಮಿನಲ್ಲಿ ಸುಖಿಸುವ ಜಂಭದ ನಾಯಕಿ-ಮಾತೃಪ್ರೇಮಿಯೂ ಹೃದಯವಂತನೂ ಆದ ತುಂಬಿದ ಕೊಡದಂಥ ನಾಯಕ ಎಂದೊಡನೆ ಒಂದು ಡಜನ್ ಹಿಂದಿ, ಅರ್ಧ ಡಜನ್ ಕನ್ನಡ, ಅಷ್ಟೇ ಸಂಖ್ಯೆಯ ತೆಲುಗು-ತಮಿಳು ಚಿತ್ರಗಳು ನೆನಪಿಗೆ ಬಂದಾವು. ‘ಅಂಜದಗಂಡು’ವಿನ ರವಿಚಂದ್ರನ್-ಖುಷ್ಬೂ, ‘ಮಲ್ಲ’ ಚಿತ್ರದ ರವಿಚಂದ್ರನ್-ಪ್ರಿಯಾಂಕ, ‘ಸಂಪತ್ತಿಗೆ ಸವಾಲ್’ನ ರಾಜ್‌ಕುಮಾರ್-ಮಂಜುಳಾ ಪ್ರೇಕ್ಷಕರನ್ನು ಹಿಡಿದಿಟ್ಟ ಮಾದರಿಗಳು ಎದುರಲ್ಲಿವೆ. ಇಂಥ ಚಿತ್ರ ಸಂದರ್ಭದಲ್ಲಿ ಅಂಥದ್ದೇ ತಿರುಳಿನ ‘ಕಾರ್ತಿಕ್’ ನವಿಲಾಗಲು ಹೊರಟ ಕೆಂಭೂತದಂತೆ ಕಾಣುತ್ತದೆ.‘ಯುವ’ ಚಿತ್ರದ ಸಾಹಸದ ದೃಶ್ಯಗಳಲ್ಲಿ ಗಮನ ಸೆಳೆದಿದ್ದ ಕಾರ್ತಿಕ್ ಶೆಟ್ಟಿ ಈ ಚಿತ್ರದ ನಾಯಕ. ಅವರು ತಮ್ಮದೇ ಹೆಸರಿನ ಈ ಚಿತ್ರದ ನಟನೆಯಲ್ಲಿ ಎರಡು ಮೆಟ್ಟಿಲುಗಳನ್ನು ಇಳಿದಿದ್ದಾರೆ. ನಿರ್ದೇಶಕ ಸತೀಶ್ ಬಿ.ಶೆಟ್ಟಿ ಅವರಿಗೆ ಹೊಸತನವಿಲ್ಲದ ಕಥೆಯನ್ನು ಕನಿಷ್ಠ ಲವಲವಿಕೆಯಿಂದ ತೋರಿಸಲೂ ಸಾಧ್ಯವಾಗಿಲ್ಲ. ಹೀಗಾಗಿ ಕಾರ್ತಿಕ್ ಉತ್ಸಾಹ, ಅರ್ಚನಾ ಗುಪ್ತಾ ಸೌಂದರ್ಯ ಎಲ್ಲವೂ ಅರ್ಥಹೀನವಾಗಿ ಕಾಣುತ್ತವೆ.  ಜಾನ್ ವರ್ಕಿ ಸಂಗೀತ ಸಂಯೋಜನೆಗೆ ಸಮಕಾಲೀನ ಗುಣವೇನೋ ಇದೆ. ಆದರೆ, ವಾದ್ಯ-ಕಂಠದ ಹೊಂದಾಣಿಕೆಯಲ್ಲೇ ಎಡವಟ್ಟಿದ್ದಂತೆ ಕಾಣುತ್ತದೆ. ಹಾಡಿನ ಸಾಹಿತ್ಯ ಸ್ಪಷ್ಟವಾಗಿ ಕೇಳುವುದೇ ಇಲ್ಲ. ಚಿತ್ರಸಾಹಿತಿ ಹೃದಯಶಿವ ಸಂಭಾಷಣೆಯನ್ನೂ ಬರೆದಿದ್ದು, ಮಾತುಗಳಲ್ಲಿ ಬಹುಪಾಲು ನಾಯಕನ ಹೊಗಳಿಕೆಗೆ ದುಂದುವೆಚ್ಚವಾಗಿವೆ.ಖಳನಾಯಕರಾಗಿ ರಾಜ್ ಪುರೋಹಿತ್ ಕೂಡ ಗಮನ ಸೆಳೆಯಲು ಆಗಿಲ್ಲ. ಅವಿನಾಶ್, ಸುಧಾ ಬೆಳವಾಡಿ ಅಭಿನಯ ಅಗತ್ಯಕ್ಕೆ ಪೂರಕ.  ಹಳೆಯ ಕಥೆಯನ್ನು ಇನ್ನೂ ಹಳೆಯ ಬಾಟಲಿನಲ್ಲಿ ಹಾಕಿ ಅಲ್ಲಾಡಿಸಿದರೆ ಏನಾಗುತ್ತದೆ? ‘ಕಾರ್ತಿಕ್’ ತರಹದ ಸಿನಿಮಾ ಮೂಡುತ್ತದೆ!


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry