ಕಟಿಂಗ್ ಶಾಪ್ಗೆ ಶೇವಿಂಗ್ ಮಾಡಿಸಲು ಹೋದೆ. ಪುಣ್ಯಕ್ಕೆ ಶಾಪ್ನಲ್ಲಿ ಯಾರು ಇರಲಿಲ್ಲ. ಎಂದಿನಂತೆ ಸೀದಾ ಹೋಗಿ ಚೇರ್ ಮೇಲೆ ಕುಳಿತೆ. ನಾ ಹೇಳುವುದಕ್ಕಿಂತ ಮುಂಚೆಯೇ ಬ್ರಶ್ಗೆ ಕ್ರೀಮ್ ಹಚ್ಚಿ ನೀರಿನಲ್ಲಿ ಅದ್ದಿ ನನ್ನ ಮುಖಕ್ಕೆ ಬಳಿಯತೊಡಗಿದ. ಕಣ್ಣು ಮುಚ್ಚಿ ಕುಳಿತವನಿಗೆ ಅಪ್ಪನ ಚಿತ್ರ ದಡಲ್ಲೆಂದು ಬಂತು. ಪ್ರತಿ ಬಾರಿ ಕಟಿಂಗ್ ಶಾಪ್ಗೆ ಬಂದಾಗಲೆಲ್ಲಾ ಅಪ್ಪ ನೆನಪಾಗುತ್ತಾನೆ.

ಅದಕ್ಕೆ ಕಾರಣವೂ ಇದೆ. ಅಪ್ಪ ಸಾಯುವ ಹಿಂದಿನ ದಿನ ನಾದರಿ ಕಿಟ್ಟಪ್ಪನಲ್ಲಿ ಕಟಿಂಗ್ ಶೇವಿಂಗ್ ಮಾಡಿಸಿಕೊಂಡು ಬಂದಿದ್ದ. ಹದಿನೈದು ದಿನಕ್ಕೊಮ್ಮೆ ಅಪ್ಪ ಶೇವಿಂಗ್ ಮಾಡಿಸದಿದ್ದರೆ ಅಕ್ರಳಾ ವಿಕ್ರಳಾ ಕಾಣುತ್ತಿದ್ದ. ಎಷ್ಟೋ ಸಾರಿ ಅಪ್ಪ ಶೇವಿಂಗ್ ಮಾಡಿಸದಿದ್ದಾಗ ಚಿಕ್ಕಮ್ಮ ಗದರಿದ್ದೂ ಊಂಟು. ಚಿಕ್ಕಮ್ಮನ ಭಯಕ್ಕಾದರೂ ಅಪ್ಪ ತಪ್ಪದೆ ಶೇವಿಂಗ್ ಮಾಡಿಸುತ್ತಿದ್ದ.

ಅಪ್ಪ ಸತ್ತ ದಿನ ಸ್ನಾನ ಮಾಡಿಸಿ ಗೂಟಕ್ಕೆ ಬಡಿದಿದ್ದಾಗ ‘ಈ ಮನುಷ್ಯ ಸತ್ತಿಲ್ಲ ಗೋಡೆಗೆ ತಲೆ ಒರಗಿಸಿ ನಿದ್ದೆ ಮಾಡ್ತಾ ಇದ್ದಾನೇನೋ’ ಅಂತ ಮಣ್ಣಿಗೆ ಬಂದ ಪ್ರತಿ ಒಬ್ಬರು ಹೇಳದೆ ಇರುತ್ತಿರಲಿಲ್ಲ. ಅಪ್ಪನ ಸಾವು ಅಷ್ಟು ಸಹಜವಾಗಿತ್ತು. ಆದರೆ ಬಂದ ಸಂಬಂಧಿಕರಲ್ಲಿ ಅಪ್ಪನ ತಮ್ಮನ ಹೆಂಡತಿ ‘ನಮ್ ಮಾವನ ಮುಖದ ಮೇಲೆ ಚೂರು ಗಾಯಗಳು ಇವೆ, ರಾತ್ರಿ ಜಗಳ ಆಗಿರಬೇಕು ಇದು ಖಂಡಿತಾ ಹೃದಯಾಘಾತದ ಸಾವು ಅಲ್ಲ’ ಅಂತ ಹೇಳಿದಳಂತೆ. ಆಮೇಲೆ ತಲೆಗೊಂದರಂತೆ ಗುಸುಪಿಸು ಮಾತುಗಳು ಶುರುವಾದವು.

ಅದರಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ. ಆದರೆ ನನ್ನ ಕಣ್ಣು ಮಾತ್ರ ಬೇರೆ ಯಾರನ್ನೋ ಹುಡುಕುತ್ತಿತ್ತು. ಆದರೆ ಆ ಮುಖ ಎಲ್ಲೂ ಕಾಣಿಸಲಿಲ್ಲವಾದರೂ ಒಳಗೊಳಗೆ ಆತಂಕ ಹೆಚ್ಚುತ್ತಲೇ ಇತ್ತು. ಅಪ್ಪನ ಮುಖ ದಿಟ್ಟಿಸಿ ನೋಡಿದೆ. ಬಹುಶಃ ಇವತ್ತಿನ ಹಾಗೆ ಯಾವತ್ತು ಇಷ್ಟು ಸ್ಪಷ್ಟವಾಗಿ ಅಪ್ಪನ ಮುಖ ನೋಡಿದ ನೆನಪಿಲ್ಲ. ಅಪ್ಪ ನಿಜಕ್ಕೂ ತುಂಬಾ ಚೆನ್ನಾಗಿ ಕಾಣುತ್ತಿದ್ದ. ನನ್ನ ಕಣ್ಣಿಂದ ಕಣ್ಣೀರು ನನಗರಿವಿಲ್ಲದಂತೆ ಸುರಿಯುತ್ತಿತ್ತು. ಎಲ್ಲರೂ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ಒಳಮನೆಯಿಂದ ಜೋರಾಗಿ ಅಳುವ ಸದ್ದು. ‘ಅರೆ ಇದು ಅಕ್ಕನ ದ್ವನಿಯಲ್ಲವಾ ! ಹಾಗಾದರೆ ಚಿಕ್ಕಮ್ಮ?’ ಅಲ್ಲೆ ಇರುತ್ತಾಳೆ. ಮೂಗಿನ ಮೇಲಿಂದ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಒಳನಡೆದೆ. ನನ್ನ ನೋಡಿದ್ದೆ ತಡ ಅಕ್ಕ ಮತ್ತಷ್ಟೂ ಬಿಕ್ಕಿ ಬಿಕ್ಕಿ ಅಳತೊಡಿದಳು. ಚಿಕ್ಕಮ್ಮ ಸುಮ್ಮನೆ ನಮ್ಮನ್ನೆ ನೋಡುತ್ತಾ ಕುಳಿತಿದ್ದಳು.

ಚಿಕ್ಕಮ್ಮನ ಕಣ್ಣು ತುಂಬಾ ಕೆಂಪಾಗಿತ್ತು. ಹೊರಗಡೆ ಏನೋ ಗಲಾಟೆ ಬಗ್ಗಿ ನೋಡಿದೆ. ‘ಏ ಕಿವಿಮುಚ್ಚಿ... ಯಾರಾದ್ರೂ ಸ್ವಲ್ಪ ನೀರು ತಂಗೊಂಡು ಬನ್ನಿ, ಸ್ವಲ್ಪ ಸರಿಯಮ್ಮ ಗಾಳಿ ಬರಲಿ’ ಎಂಬಂತಹ ಮಾತುಗಳು. ಕೆಳಗಡೆ ಬಿದ್ದವನು ಅದೆ ಅಪ್ಪನ ಮೊದಲ ಹೆಂಡತಿ ಮಗ. ಬೊಳುಹತ್ತಿ ಬೀಳುವಷ್ಟು ನಿತ್ರಾಣನಾಗಿದ್ದನಾ? ಅಪ್ಪನ ಸಾವು ನಿಜಕ್ಕೂ ಅವನಿಗೆ ಅಷ್ಟು ಆಘಾತ ತಂದಿದೆಯಾ? ಬದುಕಿದ್ದಾಗ ಒಂದು ದಿನಾನೂ ಬಂದು ಸರಿಯಾಗಿ ಮಾತನಾಡಿಸದ ಈತ ಒಳ್ಳೆ ನಾಟಕವಾಡುತ್ತಾ ಇದ್ದಾನೆ. ಯಾರೋ ಬಂದು ನನ್ನ ಕರೆದುಕೊಂಡು ಹೋದರು. ನಾ ಬೇಡವೆಂದರೂ ಬಲವಂತವಾಗಿ ಒಗ್ಗರಣೆ ಬಜಿ ತರಿಸಿ ತಿನ್ನಿಸಿದರು. ಜೊತೆಗೆ ಒಂದು ಕಿವಿಮಾತು ‘ನೀ ಹೇಗಾದರೂ ಮಾಡಿ ನಿನ್ನ ಪಾಲಿನ ಹೊಲ ತೆಗೆದುಕೊಳ್ಳಬೇಕು. ನಿಮ್ಮ ಅಣ್ಣ, ದೊಡ್ಡಪ್ಪ ಬಹಳ ಬೆರಕಿ ಇದ್ದಾರೆ’. ‘ಸಾರ್ ಶೇವಿಂಗ್ ಮುಗಿತು ಏನ್ ಹಗಲುಗನಸು ಕಾಣ್ತಾ ಇದ್ದಿರಾ?’ ನಾ ಸುಮ್ಮನೆ ನಕ್ಕು ಕಿಸೆಯಿಂದ ದುಡ್ಡು ಕೊಟ್ಟು ಹೊರಬಂದೆ.

ನಾನಾಗ ಏಳನೇ ತರಗತಿಯಲ್ಲಿದ್ದೆ. ಸಾಯಂಕಾಲ ಶಾಲೆಯ ಆವರಣದಲ್ಲಿ ಉಸುಕಿನ ಮೇಲೆ ಆಟವಾಡುತ್ತಾ ಕುಳಿತ್ತಿದ್ದಾಗ, ಮೈಕಿನಿಂದ ದೊಡ್ಡ ದನಿಯಲ್ಲಿ ‘ಪರಲೋಕದಲ್ಲಿರುವ ನನ್ನ ತಂದೆಯೇ...’ ಎಂಬಂತಹ ಹೊಸ ಶಬ್ದ ಕಿವಿಗೆ ಬಿದ್ದಾಗ ಆಶ್ಚರ್ಯ. ಬೆಳಗ್ಗೆ ಮತ್ತು ಸಾಯಂಕಾಲ ಮೈಕ್ ಆಶಣ್ಣ ಹನುಮನ ದೇವರ ಗುಡಿಯಲ್ಲಿರುವ ಟೇಪರಿಕಾರ್ಡರ್ಗೆ ಭಜನೆ ಪದದ ಕ್ಯಾಸೆಟ್ ಹಾಕಿ ಬಂದರೆ ಮುಗೀತು, ಸತತ ಎರಡು ಗಂಟೆಗಳ ಕಾಲ ತನ್ನ ಪಾಡಿಗೆ ತಾ ಹಾಡುತ್ತಿತ್ತು.

ಆದರೆ ಇದ್ಯಾವುದಿದು ‘ಪರಲೋಕದಲ್ಲಿರುವ ತಂದೆಯೇ’ ಅಂತ ಆ ಧ್ವನಿ ಬಂದ ಕಡೆಗೆ ಹೋದೆ. ಒಂದು ಮನೆಯ ಮುಂಭಾಗದಲ್ಲಿ ಸುತ್ತಲೂ ಗುಂಪು ಗುಂಪಾಗಿ ಹೆಂಗಸರು, ಗಂಡು ಹುಡುಗರು, ಮುದುಕರು, ವಯಸ್ಕರು ಕುಳಿತಿದ್ದರು. ನೀಟಾಗಿ ಇನ್ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಕೈಯಲ್ಲಿ ಕೆಂಪನೆ ಬಣ್ಣದ ದಪ್ಪ ಬುಕ್ಕು ಹಿಡಿದು ಏನೋ ಹೇಳುತ್ತಿದ್ದ. ಅದರಲ್ಲಿ ಯಾರೋ ನನ್ನ ಹೆಸರಿಡಿದು ಕರೆಯುತ್ತಿದ್ದರು. ದಿಟ್ಟಿಸಿ ನೋಡಿದೆ ನನ್ನ ಗೆಳೆಯ ಹುಲಿಗೆಪ್ಪ. ಅವನನ್ನು ನೋಡಿದ್ದೆ ತಡ ಓಡಿ ಹೋಗಿ ಅವನ ಬಳಿ ಕುಳಿತೆ. ‘ಏನಿದೆಲ್ಲಾ’ ಅಂತ ಕೇಳಿದೆ. ಏಸು, ಪ್ರಾರ್ಥನೆ, ಪಾಸ್ಟರ್ ಅಂತ ಏನೆನೋ ಹೇಳಿದ.

ನನಗೆ ಒಂದೂ ಅರ್ಥವಾಗದಿದ್ದರೂ ಅವನ ಮೈಯಿಂದ ಬರುವ ಅದೆಂತಹದೋ ಘಮ ಹೀರಿಕೊಳ್ಳಕ್ಕಾದರೂ ದಿನಾಲೂ ಇಲ್ಲಿಗೆ ಬರಬೇಕು ಅಂತ ಅನಿಸಿ ಅವನಿಗೆ ಗಟ್ಟಿಯಾಗಿ ಆತು ಕುಳಿತುಕೊಂಡೆ. ಏಸುವಿನ ಬಗ್ಗೆ ಸುಮಾರು ಕತೆಗಳನ್ನು ಪಾಸ್ಟರ್ ಹೇಳಿದ. ‘ನಾವು ನಿಜವಾದ ಸ್ವರ್ಗ, ಮುಕ್ತಿ ಕಾಣಬೇಕಾದರೆ ಏಸುವಿನ ಪ್ರಾರ್ಥನೆ ಮಾಡಬೇಕು, ನಾವು ಏನೇ ತಪ್ಪು ಮಾಡಿದರು ಏಸು ಅದನ್ನ ಕ್ಷಮಿಸುತ್ತಾನೆ’ ಅಂತ ಹೇಳಿ ಚೆಂದದ ಕತೆಗಳ ಮೂಲಕ ಏಸುವಿನ ಮಹಿಮೆಗಳ ಬಗ್ಗೆ ವಿವರಿಸತೊಡಗಿದರು. ಆಮೇಲೆ ಏಸುವಿನ ಕುರಿತಾದ ಸುಂದರ ಗೀತೆಗಳನ್ನು ಹಾಡಿದರು. ಕೊನೆಗೆ ಪ್ರಾರ್ಥನೆ ಮುಗಿದ ಮೇಲೆ ನಮ್ಮ ಕೈಲಾದ ಕಾಣಿಕೆಗಳನ್ನು ಪಾಸ್ಟರ್ ಕೊಟ್ಟ ತಂಬಿಗೆಯೊಳಗೆ ಹಾಕಿದೆವು. ಹುಲಿಗೆಪ್ಪ ನನ್ನ ಕರೆದುಕೊಂಡು ಹೋಗಿ ಪಾಸ್ಟರ್ಗೆ ಪರಿಚಯ ಮಾಡಿಸಿದ. ಪಾಸ್ಟರ್ ನನ್ನನ್ನು ವಿಶೇಷವಾದ ಕಾಳಜಿಯಿಂದ ಮಾತನಾಡಿಸಿದರು.

ದಿನಾಲು ಬಂದು ಏಸುವಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು. ನನಗೆ ನಿಜಕ್ಕೂ ಆ ದಿನ ತುಂಬಾ ಖುಷಿಯಾಗಿತ್ತು. ದಿನಾಲು ಮನೆಯಲ್ಲಿ ಜಗಳ, ಅಪ್ಪನ ಕುಡಿತ, ಅದೇ ಮನೆ ಅದೇ ಮುಖಗಳು ನೋಡಿದ್ದ ನನಗೆ ಇಲ್ಲಿ ಬೇರೆಯದೆ ವಾತಾವರಣ. ಪ್ರಾರ್ಥನೆ, ಕತೆ, ಪಾಸ್ಟರ್, ಏಸು ಎಂಬ ಮೊಟ್ಟಮೊದಲ ಬಾರಿಗೆ ನಮ್ಮ ಊರಿಗೆ ಬಂದಿದ್ದ ದೇವರು. ಅಂದಿನಿಂದ ಪ್ರತಿದಿನ ಏಸುವಿನ ಸಭೆಯಲ್ಲಿ ಪಾಲ್ಗೊಳ್ಳಲು ತಪ್ಪದೆ ಬರತೊಡಗಿದೆ. ಅಲ್ಲಿ ಹಾಡುವ ಹಾಡುಗಳು ನನಗೂ ಕಂಠಪಾಠವಾಗಿದ್ದವು. ಜೋರು ಜೋರಾಗಿ ಮೈಕಿನಲ್ಲಿ ಹಾಡುಗಳನ್ನು ಎಲ್ಲರಿಗಿಂತ ಚೆಂದವಾಗಿ ಹಾಡುತ್ತಿದ್ದೆ. ಏಸುವಿನ ಕತೆಗಳನ್ನು ಶ್ರಧ್ದೆಯಿಂದ ಕೇಳಿ ಪಾಸ್ಟರ್ ಕೇಳುವ ಪ್ರಶ್ನೆಗಳಿಗೆ ತಪ್ಪಿಲ್ಲದೆ ಉತ್ತರಿಸುತ್ತಿದ್ದೆ.

ಹೊಸ ಒಡಂಬಡಿಕೆ ಬೈಬಲ್ನಲ್ಲಿನ ಕತೆಗಳನ್ನು ಓದುತ್ತಿದ್ದೆ. ಹೇಳಬೇಕೆಂದರೆ ಅಲ್ಲಿ ನಾನೊಬ್ಬ ಹೀರೋ. ಹೀಗೆ ಅನ್ಯಧರ್ಮೀಯನೊಬ್ಬ ಏಸುವಿನ ಭಜನೆಯಲ್ಲಿ ಪಾಲ್ಗೊಳ್ಳುವುದು ಹಾಡು ಹಾಡುವುದು ಪ್ರಾರ್ಥನೆ ಮಾಡುವುದು ಕೆಲವು ಊರ ಜನರ ಕೆಂಗಣ್ಣಿಗೆ ಗುರಿಯಾಯಿತು. ನಮ್ಮ ಮನೆಯಲ್ಲಿಯಂತೂ ಅಪ್ಪ ಚಿಕ್ಕಮ್ಮ ಇದ್ದ ಒಬ್ಬ ಮಗ ಯಾಕೆ ಹೀಗಾದಾ ಅಂತ ಕೊರಗುತ್ತಿದ್ದರು. ಕೆಲವು ಸಲ ಇದಕ್ಕೋಸ್ಕರನೇ ಮನೆಯಲ್ಲಿ ಜಗಳ. ಯಾರು ಏನೇ ಅಂದರೂ ನನ್ನನ್ನು ಆ ಪ್ರಾರ್ಥನೆಯಿಂದ ಅಲ್ಲಿನ ವಾತಾವಾರಣದಿಂದ ಹಾಗೂ ಹುಲಿಗೆಪ್ಪ ಎಂಬ ನನ್ನ ಗೆಳೆಯನಿಂದ ದೂರಮಾಡಲು ಸಾಧ್ಯವೇ ಇರಲಿಲ್ಲ.

ನಂದು ಆಗತಾನೆ ಎಸ್ಎಸ್ಎಲ್ಸಿ ರಿಜಲ್ಟ್ ಬಂದಿತ್ತು. ಹುಲಿಗೆಪ್ಪ ಫೇಲಾಗಿದ್ದ. ನಂದು ಫಸ್ಟ್ಕ್ಲಾಸ್ ಆಗಿತ್ತು. ಸುಮಾರು ದಿನಗಳಿಂದ ಆದುಮಿಟ್ಟುಕೊಂಡಿದ್ದ ಆಸೆ ಈಡೆರಿಸಿಕೊಳ್ಳುವ ಬಯಕೆ. ‘ರಸಿಕ ಬಾ’ ಎಂಬ ನೀಲಿ ಚಿತ್ರ ನನ್ನನ್ನೇ ಕೈ ಮಾಡಿ ಕರೆಯುತ್ತಿದೆಯೋನೋ ಅಂತ ಹಾಟ್ ಹಾಟ್ ಚಿತ್ರಗಳ ದೃಶ್ಯಗಳು ಗೋಡೆಗಳ ತುಂಬೆಲ್ಲಾ ಹೊಸ ಮದುಮಗಳಂತೆ ಕಂಗೊಳಿಸುತ್ತಿದ್ದವು. ಕಪ್ಪು ಬಿಳುಪು ನೆರಳಲ್ಲಿ ನಡೆಯುವ ದೃಶ್ಯಗಳು ನಿಜಕ್ಕೂ ನನ್ನಲ್ಲಿ ಹೊಸ ಹುರುಪು ತಂದಿದ್ದವು. ಹಾಗೆ ಹುಲಿಗೆಪ್ಪ ನೆನಪಾಗಿದ್ದ. ಮೊದಲ ಸಾರಿ ಅವನ ಜೊತೆ ಶಾಲೆಯ ಅವರಣದಲ್ಲಿ ಅಪ್ಪಿಕೊಂಡಾಗ ಅವನು ಏನೂ ಅಂದಿರಲಿಲ್ಲ.

ನಾನೆ ಸ್ವಲ್ಪ ಮುಂದುವರೆದು ಅವನ ಕೆನ್ನೆಗೆ ಮುತ್ತು ಕೊಟ್ಟಿದ್ದೆ ಅದಕ್ಕೂ ಅವನು ಏನೂ ಅಂದಿರಲಿಲ್ಲ. ಇನ್ನೂ ಸ್ವಲ್ಪ ಮುಂದುವರೆದು ಅವನ ಚಡ್ಡಿಯ ಒಳಗೆ ಕೈ ಹಾಕಿದ್ದೆ. ಇಬ್ಬರೂ ಆ ದಿನ ಶಾಲೆಯ ಆವರಣದಲ್ಲಿ ಉನ್ಮತ್ತ ಆನಂದ ಪಡೆದಿದ್ದೆವು. ಪ್ರತಿ ಸಾರಿ ಇಬ್ಬರೂ ಕೂಡಿದಾಗೆಲ್ಲಾ ನನ್ನ ಚಿಕ್ಕಮ್ಮನ ಮೇಲೆ ಸೇಡು ತಿರಿಸಿಕೊಂಡ ಭಾವ ನನಗೆ. ಅದಕ್ಕಾಗಿಯೆ ಏನೋ ಅವನ ಜೊತೆ ಮೇಲಿಂದ ಮೇಲೆ ನಾನೇ ಮುಂದುವರೆದು ಒಬ್ಬ ಹೆಂಡತಿಗಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದೆ. ಏಸುವಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದಕ್ಕೂ ಅವನ ಪ್ರೀತಿಯೇ ಕಾರಣವಾಗಿತ್ತು. ನಾವು ಹೈಸ್ಕೂಲು ಮೆಟ್ಟಿಲು ಹತ್ತಿದಾಗ ಇಬ್ಬರು ದೂರವಾದೆವು.

ನಮ್ಮ ಎಸ್ಎಸ್ಎಲ್ಸಿ ರಿಜಲ್ಟ್ ಬರುವಷ್ಟರಲ್ಲಿ ಊರಲ್ಲಿ ತುಂಬಾ ಬದಲಾವಣೆಗಳು ಆಗಿದ್ದವು. ಆಗಷ್ಟೇ ಮೈನೆರೆದ ಹುಡುಗಿಯನ್ನು ಪಾಸ್ಟರ್ ಓಡಿಸಿಕೊಂಡು ಹೋಗಿದ್ದ. ಆ ಜಾಗಕ್ಕೆ ಹೊಸ ಪಾಸ್ಟರ್. ಮೊದಲಿನಂತೆ ಹಾಡು ಭಜನೆ ಕತೆ ಯಾವುದು ಅಷ್ಟಾಗಿ ನಡೆಯುತ್ತಿರಲಿಲ್ಲ. ಕಾಲೇಜ್ ಮೆಟ್ಟಿಲು ಹತ್ತುತ್ತಿದ್ದಂತೆ ನನ್ನ ಜೀವನವೇ ಚೇಂಜ್ ಆಯಿತು. ಹೊಸ ಗೆಳೆಯರು ಹೊಸ ವಾತಾವಾರಣ ಕಲರ್ ಕಲರ್ ಹುಡುಗಿಯರು ಜೊತೆಗೆ ಹೊಸ ಸಂ...ಬಂ...ಧ.

ಅರ್ಧರಾತ್ರಿ. ದೊಡ್ಡ ದನಿಯಲ್ಲಿ ಜಗಳ. ಕಣ್ಣು ಬಿಟ್ಟು ನೋಡಿದೆ ಅಕ್ಕನ ಕೈಯಲ್ಲಿ ಪೊರಕೆ. ಸೀರೆಯ ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು ಚಿಕ್ಕಮ್ಮನ ಜೊತೆ ಜಗಳ ಮಾಡುತ್ತಿದ್ದಳು. ಚಿಕ್ಕಮ್ಮನ ಎಡಕ್ಕೆ ಸ್ವಲ್ಪ ದೂರದಲ್ಲಿ ಅವನು. ಒಳ್ಳೆ ಅರ್ಧರಾತ್ರಿಲಿ ಸಿಕ್ಕ ಕಳ್ಳನಂತೆ ನಿಂತುಕೊಂಡಿದ್ದ. ನನ್ನ ಎಚ್ಚರಿಕೆ ಅವರ ಗಮನಕ್ಕೆ ಬಂದರೂ ನನ್ನನ್ನು ಎಡಗಣ್ಣಿಂದ ಸಹ ನೋಡದೆ ತಮ್ಮ ಪಾಡಿಗೆ ತಾವು ಜಗಳವಾಡುತ್ತಿದ್ದರು. ನಾನು ಕೇವಲ ಮೂಕಪ್ರೇಕ್ಷಕನಾಗಿದ್ದೆ.

ಅವನು ಚಿಕ್ಕಮ್ಮನ ಕಣ್ಸನ್ನೆ ಮೇರೆಗೆ ಬಾಗಿಲು ದಾಟಿ ಹೊರಟುಹೋಗಿದ್ದ. ಬಾಗಿಲು ದಾಟುತ್ತಿದ್ದವನ ಮೇಲೆ ಅಕ್ಕ ಪೊರಕೆಯಿಂದ ಎರಡೇಟು ಹಾಕಿದ್ದಳು. ಚಿಕ್ಕಮ್ಮ ಸರಕ್ಕನೆ ಒಳಹೋಗಿ ಬಾಗಿಲು ಹಾಕಿಕೊಂಡಿದ್ದಳು. ನಾನು ಮೆಲ್ಲನೆ ಅಕ್ಕನ ಬಳಿ ಬಂದು ನಿಂತೆ. ಇಬ್ಬರ ಕಣ್ಣಲ್ಲೂ ಕಣ್ಣೀರು ಮಳೆಹನಿಯಾಗಿತ್ತು. ಮೊದಲ ಸಲ ನನ್ನ ಆಹಂಗೆ ಪೆಟ್ಟು ಬಿದ್ದಿತ್ತು. ಒಬ್ಬ ಹೆಣ್ಣುಮಗಳು ಇಷ್ಟು ಧೈರ್ಯಮಾಡಿರುವಾಗ ನಾನೆಂಥ ಹೇಡಿ ಅಂತ ನನ್ನ ಮೇಲೆ ನನಗೆ ಅಸಹ್ಯವಾಯಿತು.

‘ದಿನಾಲು ಈ ನರಕದಲ್ಲಿ ಬದುಕುವುದಕ್ಕಿಂತ ಸತ್ತು ಹೋಗೋಣವಾ?’ ಚಿಕ್ಕಮ್ಮನ ಬಾಯಿಂದ ಬಂದ ಈ ಮಾತು ಕೇಳಿ ಅಕ್ಕ ನಾನು ಮುಖ-ಮುಖ ನೋಡಿಕೊಂಡು ಮೌನವಾದೆವು. ಆಗ ನಾನಿನ್ನು ಪ್ರೈಮರಿ ಸ್ಕೂಲು ಹುಡುಗ. ನನಗೆ ನನ್ನ ಗೆಳೆಯರು, ನಮ್ಮ ಸ್ಕೂಲು, ನಮ್ಮ ಮೇಷ್ಟ್ರು, ಡಬ್ಬಿಯಲ್ಲಿ ಮುಚ್ಚಿಟ್ಟಿದ್ದ ನಾ ಗೆದ್ದು ತಂದ ಬಣ್ಣ ಬಣ್ಣದ ಗೋಲಿಗಳು ತಕ್ಷಣಕ್ಕೆ ನೆನಪಿಗೆ ಬಂದು ‘ಚಿಕ್ಕಮ್ಮ ಇದೊಂದು ಸಾರಿ ಬೇಡ ಅಪ್ಪ ಇನ್ನು ಮೇಲೆ ಮತ್ತೆ ಹೀಗೆ ಮಾಡಿದರೆ ಆಗ ಸತ್ತು ಹೋಗೋಣ’ ಅಂತ ಅಳುತ್ತಾ ಹೇಳಿದೆ. ಆದರೆ ಅಕ್ಕ ‘ಅಮ್ಮ ನೀ ಹೇಗೆ ಹೇಳ್ತಿಯೋ ಹಾಗೆ’ ಅಂದಳು. ಅಪ್ಪ ಎಲ್ಲೋ ಹೊರಗಡೆ ಹೋಗಿದ್ದ. ಮೂವರು ಅಳುತ್ತಾ ಕುಳಿತೆವು. ನನಗೆ ಹಾಗೆ ನಿದ್ದೆಯ ಮಂಪರು.

ಅಲ್ಲೇ ಮಲಗಿಬಿಟ್ಟೆ. ಆ ದಿನ ಕನಸು ಬಿದ್ದಿದ್ದು ಇನ್ನೂ ನೆನಪಿದೆ. ನಾನು ಅಕ್ಕ, ಚಿಕ್ಕಮ್ಮ, ಯಾವುದೋ ವಿಚಿತ್ರವಾದ ಹೂಗಳಿಂದ ಆಲಂಕಾರಗೊಂಡ ವಾಹನದಲ್ಲಿ ಕುಳಿತಿದ್ದೇವೆ. ನಮ್ಮ ಎದುರಿಗೆ ದೊಡ್ಡ ಮೀಸೆಯ, ಗಜ ಹಿಡಿದ, ಪಳ ಪಳ ಕಿರೀಟ ತೊಟ್ಟ ಡೊಳ್ಳು ಹೊಟ್ಟೆಯ ವ್ಯಕ್ತಿ. ಅಕ್ಕ-ಚಿಕ್ಕಮ್ಮ ಖುಷಿಯಿಂದ ಸುತ್ತಲೂ ನೋಡುತ್ತಿದ್ದಾರೆ. ನಾ ಕೆಳಗೆ ಬಗ್ಗಿ ನೋಡಿದೆ. ಎಲ್ಲೆಲ್ಲೂ ಬಿಳಿ ಮೋಡಗಳೇ. ನನ್ನ ಮನೆ ಶಾಲೆ ಗೆಳೆಯರು ಮೇಷ್ಟ್ರು ನನ್ನ ಬಣ್ಣ ಬಣ್ಣದ ಗೋಲಿಗಳು ಯಾವುದೂ ಇಲ್ಲ. ದಿಗ್ಗನೆ ಕಣ್ಣು ಬಿಟ್ಟು ನೋಡಿದೆ. ಮೋಡ, ದೊಡ್ಡ ಮೀಸೆಯ ಆ ವ್ಯಕ್ತಿ, ಅಮ್ಮ ಅಕ್ಕ ಯಾರೂ ಇಲ್ಲ. ಸದ್ಯ ಇದು ಕನಸು ಅಂತ ಸಮಾಧಾನಗೊಂಡೆ. ಆದರೆ ಮೂಲೆಯಲ್ಲಿ ಅಕ್ಕ ಅಳುತ್ತಾ ಕುಳಿತಿದ್ದಾಳೆ, ಅಪ್ಪ ತಲೆ ಮೇಲೆ ಕೈ ಹೊತ್ತು ಕಟಕಟ ಹಲ್ಲು ಕಡಿಯುತ್ತಾ ತಲೆಬಗ್ಗಿಸಿದ್ದಾನೆ. ನನಗೆ ಒಂದೂ ಅರ್ಥವಾಗಲಿಲ್ಲ. ನಾ ಎದ್ದು ಕುಳಿತು ಪೆಕರುಪೆಕರಾಗಿ ನೋಡುತ್ತಿದ್ದನ್ನು ಕಂಡು ಅಕ್ಕ ನನ್ನ ಹತ್ತಿರ ಬಂದು ‘ಚಿಕ್ಕಮ್ಮ ಎಲ್ಲೂ ಕಾಣಿಸ್ತಾ ಇಲ್ಲ’ ಎಂದು ಅಳತೊಡಗಿದಳು.

ಅದೇಕೋ ಗೊತ್ತಿಲ್ಲ, ಇತ್ತೀಚಿಗೆ ಅನ್ನುವುದಕ್ಕಿಂತ ಸುಮಾರು ದಿನಗಳಿಂದ ನನ್ನೊಳಗಿದ್ದ, ಬಾಯಿ ಬಾಯಿ ಬಡಿದುಕೊಳ್ಳುವ ಈ ಖಾಯಿಲೆ ಈಗೀಗ ನನ್ನ ಗೆಳೆಯನಾಗಿ ಬಿಟ್ಟಿದೆ. ಯಾವಾಗದರೊಮ್ಮೆ ಸಣ್ಣಗೆ ಬಾಯಿ ಬಾಯಿ ಬಡಿದು ಸಂಭ್ರಮಿಸುತ್ತಿದ್ದೆ. ಆಗ ಚಿಕ್ಕಮ್ಮ ‘ನಿನಗೇನು ಬಂತು ಕೇಡುಗಾಲ ತುಂಬಿದ ಮನೇಲಿ ಬಾಯಿ ಬಡಿದುಕೊಳ್ಳುತ್ತಿ’ ಅಂತ ಗದರಿದಾಗ, ‘ಇಲ್ಲ ಚಿಕ್ಕಮ್ಮ ವಿರಾಟ್ ಕೋಹ್ಲಿ ಸಿಕ್ಸ್ ಹೊಡೆದ’ ಅಂತ ಹೇಳುತ್ತಿದ್ದೆ. ‘ಏನು ಕ್ರಿಕೆಟ್ಟೋ ಸುಡುಗಾಡೊ ಯಾರು ಗೆದ್ದರೂ, ಸೋತರೂ ನಮಗೇನ್ ಬರುತ್ತೆ ಮಣ್ಣು, ರಾತ್ರಿಯೆಲ್ಲ ಆ ಹಾಳು ಕ್ರಿಕೆಟ್ ನೋಡೋ ಬದಲು ಮಲಗಿಕೊಂಡರೆ ಕಣ್ಣುತುಂಬ ನಿದ್ದೆನಾದರೂ ಆಗುತ್ತೆ’ ಅಂತ ಬೈಯುತ್ತಿದ್ದಳು.

ಬರುಬರುತ್ತಾ ಅಂದರೆ, ನನ್ನ ಹೆಂಡತಿ ಜೊತೆ ಜಗಳ ಆದಾಗ, ಚಿಕ್ಕಮ್ಮ ಮುನಿಸಿಕೊಂಡಾಗ, ಆಫೀಸ್ನಲ್ಲಿ ಕಸ್ಟಮರ್ಸ್ ಬೇಕು ಅಂತಲೇ ಇಲ್ಲದ ಸೇವಿಂಗ್ಸ್ಗಳ ಬಗ್ಗೆ ಕೇಳಿದಾಗ, ಮನಸಿಗೆ ತುಂಬಾ ಖುಷಿಯಾದಾಗ, ಹಾಗೆ ದುಃಖವಾದಾಗ, ಅಪ್ಪನ ಚಿತ್ರ ಕಣ್ಣ ಮುಂದೆ ಬಂದಾಗ, ರಾತ್ರೋ ರಾತ್ರಿ ಕಾಣೆಯಾಗಿದ್ದ ಚಿಕ್ಕಮ್ಮ ಮೂರು ದಿನ ಬಿಟ್ಟು ಮನೆಗೆ ಬಂದದ್ದು ನೆನೆಸಿಕೊಂಡಾಗ, ದುಡ್ಡು ಇರದಿದ್ದ ಟೈಮಲ್ಲಿ ಆತ್ಮೀಯರೊಬ್ಬರು ಸಾಲ ಕೇಳಿದಾಗ, ಹುಲಿಗೆಪ್ಪ ನನ್ನ ನೋಡಿ ಹೀಯಾಳಿಸಿ ನಕ್ಕಿದ್ದು ನೆನೆಸಿಕೊಂಡಾಗ, ಅರ್ಜೆಂಟ್ ಕೆಲಸ ಇದ್ದಾಗ ಬಾಸ್ ರಜೆ ಕೊಡದಿದ್ದಾಗ ಇಂತಹ ಹಲವಾರು ಕಾರಣಗಳಿಗೆ ಒಬ್ಬನೆ ದೂರ ಹೋಗಿ ಇಲ್ಲ ಅಂದರೆ ಎಲ್ಲರ ಮಧ್ಯದಲ್ಲಿಯೇ ಬಾಯಿ ಬಾಯಿ ಬಡಿದುಕೊಂಡು ಹಗುರವಾಗಬೇಕು ಅನಿಸುತ್ತದೆ. ಮನೆಯಲ್ಲಿ ಒಮ್ಮೊಮ್ಮೆ ಚಿಕ್ಕಮ್ಮ, ಇವಳೂ ಇದ್ದರೂ ಸಹ ಹಾಗೆ ಸುಮ್ಮನೆ ಬಾಯಿ ಬಾಯಿ ಬಡಿದುಕೊಳ್ಳುತ್ತಿರುತ್ತೇನೆ. ಚಿಕ್ಕಮ್ಮ ದಿಟ್ಟಿಸಿ ನೋಡಿ ಸುಮ್ಮನಾದರೆ ಒಮ್ಮೊಮ್ಮೆ ಇವಳು ನನ್ನ ಜೊತೆ ಸಾಥ್ ಕೊಡುತ್ತಾಳೆ.

ನನ್ನ ಮೊಬೈಲ್ ರಿಂಗಣಿಸಿತು ತಕ್ಷಣ ಎಚ್ಚೆತ್ತು ‘ಹಲೋ’ ಅಂದೆ. ಆ ಕಡೆಯಿಂದ ಚಿಕ್ಕಮ್ಮ ‘ಚಾನ್ನೆ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾಳೆ ಎಷ್ಟು ಸಲ ಫೋನ್ ಮಾಡೊದು ಬೇಗ ಸಂಜೀವಿನಿ ದವಾಖಾನೆಗೆ ಬಾ’ ಅಂತ ಫೋನಿಟ್ಟಳು. ಮೊಬೈಲ್ ನೋಡಿಕೊಂಡೆ ಆರು ಮಿಸ್ಡ್ಕಾಲ್ ಆಗಿದ್ದವು. ನಾ ಒಂದೇ ಉಸಿರಿಗೆ ‘ಸಂಜೀವಿನಿ ದವಾಖಾನೆಗೆ’ ಹೋದೆ. ಚಿಕ್ಕಮ್ಮನ ತೊಡೆ ಮೇಲೆ ಚಾನ್ನೆ ಬಾಯಲ್ಲಿ ಬೆರಳಿಟ್ಟುಕೊಂಡು ಕಣ್ಣರಳಿಸಿಕೊಂಡು ಆ ಕಡೆ ಈ ಕಡೆ ನೋಡುತ್ತಿತ್ತು. ಮೊಮ್ಮಗಳನ್ನು ಚಿಕ್ಕಮ್ಮ ತುಂಬಾ ಹಚ್ಚಿಕೊಂಡಿದ್ದಳು. ಚಾನ್ನೆಯ ಅಂಗಾಲು ನೆಲತಾಗದಂತೆ ಎಚ್ಚರವಹಿಸುತ್ತಿದ್ದಾಳೆ. ಅಕ್ಕ ಈಗಲೂ ಚಿಕ್ಕಮ್ಮನ ಜೊತೆ ಅಷ್ಟಕಷ್ಟೆ ಮಾತು.

ಸೋದರ ಸಂಬಂಧದಲ್ಲಿ ಮದುವೆಯಾದರೂ ಇವಳು ಚಿಕ್ಕಮ್ಮನ್ನ ಅಷ್ಟಾಗಿ ಸೇರದೆ, ಮನೆಯಲ್ಲಿ ಶೀತಲ ಸಮರ ಇದ್ದೇ ಇರುತ್ತಿತ್ತು. ಅಮ್ಮ ಸತ್ತ ವರ್ಷದಲ್ಲೇ ಚಿಕ್ಕ ಮಕ್ಕಳಾಗಿದ್ದ ನನ್ನ ಮತ್ತು ಅಕ್ಕನನ್ನು ನೋಡಿಕೊಳ್ಳಲು ಅಪ್ಪ ಚಿಕ್ಕಮ್ಮನ ಮದುವೆಯಾಗಿದ್ದ. ಚಿಕ್ಕಮ್ಮನಿಗೆ ಮಕ್ಕಳೇ ಆಗಲಿಲ್ಲ. ಆದರೂ ನಮ್ಮನ್ನು ಮಲತಾಯಿಯಂತೆ ಎಂದೂ ನೋಡಿಲ್ಲ. ಚಿಕ್ಕಮ್ಮ ನನಗೋಸ್ಕರ ಎಷ್ಟೆಲ್ಲಾ ಕಷ್ಟಪಟ್ಟಿದ್ದಾಳೆ. ಏನೆಲ್ಲಾ ನೋವು ಅವಮಾನ ಅನುಭವಿಸಿದ್ದಾಳೆ.

ಆದರೆ ನಾ ಚಿಕ್ಕಮ್ಮಗೆ ಏನು ಮಾಡಿದ್ದೇನೆ? ಒಮ್ಮೆ ಇವಳು ಸಹ ‘ನಿನ್ನ ಚಿಕ್ಕಮ್ಮ ಚಾನ್ನೆನ ಅಷ್ಟು ಹಚ್ಚಿಕೊಂಡಿದ್ದು ನನಗೆ ಸರಿ ಬರುತ್ತಿಲ್ಲ’ ಅಂದಾಗ ಇವಳ ಮಾತಿನಿಂದ ದಂಗಾದ ನಾನು ಸಿಟ್ಟಿನಿಂದ ‘ನೀ ಏನು ಹೇಳುತ್ತಿದ್ದೀಯಾ ಅನ್ನುವುದರ ಮೇಲೆ ನಿನಗೆ ಗಮನ ಇದೆಯಾ?’ ಕೇಳಿದ್ದೆ. ‘ಹೌದು ಗಮನ ಇದ್ದೆ ನಾ ಈ ಮಾತು ಹೇಳ್ತಾ ಇದೀನಿ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅಂತ ಗಾದೆ ಕೇಳಿಲ್ವಾ?’ ನಾನು ಇವಳದು ಯಾವಾಗಲೂ ಕಿರಿಕಿರಿ ಇದ್ದಿದ್ದೆ ಅಂತ ಅವಳ ಮಾತಿಗೆ ಅಷ್ಟು ಗಮನ ಕೊಡದೆ ಹೊರಟುಹೋಗಿದ್ದೆ. ಆದರೆ ಅವಳು ಹೇಳಿದರಲ್ಲಿ ಬೇರೆಯದೇ ಅರ್ಥ ಇದೆ ಅಂತ ನನಗೆ ಆಮೇಲೆ ಗಮನಕ್ಕೆ ಬಂತು.

ನನ್ನನ್ನು ನೋಡಿದ ಚಿಕ್ಕಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ಚಾನ್ನೆಯ ಹಣೆಗೆ ತಗುಲಿದ ಗಾಯದ ಕಡೆ ನೋಡಿದಳು. ನಾನು ನಿಂತೆ ಇದ್ದೆ ಸುಮಾರು ವರ್ಷಗಳಿಂದ ಗಟ್ಟಿಯಾಗಿ ಅಲುಗಾಡದೆ ಇದ್ದ ಕಲ್ಲು ಬಂಡೆಯಂತೆ.
** ಚಾನ್ನೆ ಅಂದರೆ ಬೆಳದಿಂಗಳು ಅಂತ ಅರ್ಥ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.