ಶುಕ್ರವಾರ, ಮೇ 14, 2021
25 °C

ಚಾರಣಪ್ರಿಯರ ಬಾಳೇಕಲ್ ಸಿದ್ದಪ್ಪ ಬೆಟ್ಟ

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

ಚನ್ನಗಿರಿ-ಭದ್ರಾವತಿ ರಸ್ತೆಯಲ್ಲಿ ಬರುವ ಜೋಳದಹಾಳ್ ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಐತಿಹಾಸಿಕ ಅಮ್ಮನಗುಡ್ಡ ಸುಕ್ಷೇತ್ರವಿದೆ. ಇಲ್ಲಿಂದ ಸುಮಾರು 3 ಕಿ.ಮೀ ದೂರದಲ್ಲಿ ಚಾರಣಿಗರಿಗೆ ಹೇಳಿ ಮಾಡಿಸಿದಂತಹ ಬಾಳೇಕಲ್ ಸಿದ್ದಪ್ಪ ಬೆಟ್ಟ ಕಣ್ಣಿಗೆ ಕಾಣಿಸುತ್ತದೆ.

 

ಈ ಬೆಟ್ಟದ ಮೇಲೆ ಹೋಗಿ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರೆ ಸಹ್ಯಾದ್ರಿ ಅರಣ್ಯ ಪ್ರದೇಶದಲ್ಲಿರುವ ಮರಗಿಡಗಳ ಹಸಿರು ರೋಮಾಂಚನಗೊಳಿಸುತ್ತದೆ.ಕುಕ್ಕವಾಡೇಶ್ವರಿ ದೇವಸ್ಥಾನದಿಂದ ದಕ್ಷಿಣಕ್ಕೆ ಕಾಡು ಹಾದಿ ಸವೆಸಿ ಸಾಗಿದರೆ ಈ ರಮಣೀಯ ದೃಶ್ಯ ಇರುವ ಬಾಳೇಕಲ್ ಸಿದ್ದಪ್ಪ ಬೆಟ್ಟ ಸಿಗುತ್ತದೆ. ಅಮ್ಮಗುಡ್ಡಕ್ಕೆ ಹೋಗಲು ಆಟೋರಿಕ್ಷಾ ಸೌಲಭ್ಯ ಉಂಟು. ಆದರೆ, ಬಾಳೇಕಲ್ ಸಿದ್ದಪ್ಪ ಬೆಟ್ಟ ತಲುಪಲು ಕಾಲ್ನಡಿಗೆಯೇ ಗತಿ. ಗಗನಕ್ಕೆ ಮುತ್ತಿಕ್ಕುತ್ತಿರುವ ಮರಗಳ ಸಾಲು, ಕಡಿದಾದ ಜಾಗ, ಪ್ರಾಣಿ ಪಕ್ಷಿಗಳ ಕಲರವ.. ನೋಡುತ್ತಾ ಬೆಟ್ಟ ತಲುಪಬಹುದು.ಸುಮಾರು 3ಕಿ.ಮೀ ಎತ್ತರದ ಜಾಗದಲ್ಲಿ ಪುರಾತನ ಪ್ರಸಿದ್ಧವಾದ ಬಾಳೇಕಲ್ ಸಿದ್ದಪ್ಪ ದೇವಾಲಯ ಇದೆ. ಪ್ರತಿ ಶ್ರಾವಣ ಮಾಸದಲ್ಲಿ ಅಮ್ಮನಗುಡ್ಡ ಕುಕ್ಕವಾಡೇಶ್ವರಿ ದೇವಿಯ ದರ್ಶನ ಪಡೆಯಲು ಹೋಗುವ ಭಕ್ತರು ಕಡ್ಡಾಯವಾಗಿ ಈ ಬಾಳೇಕಲ್ ಸಿದ್ದಪ್ಪ ಬೆಟ್ಟವನ್ನು ಹತ್ತಿ ಈ ದೇವರ ದರ್ಶನವನ್ನು ಪಡೆದುಕೊಂಡು ಬರುವ ಸಂಪ್ರದಾಯವನ್ನು ಹಲವಾರು ದಶಕಗಳಿಂದ ರೂಢಿಸಿಕೊಂಡು ಬಂದಿದ್ದಾರೆ.ಹಾಗೆಯೇ ಈ ಬೆಟ್ಟದಲ್ಲಿಯೇ ಇರುವ ಪವಿತ್ರವಾದ ಅಂತರಗಂಗೆಯಲ್ಲಿ ಮಿಂದು ಈ ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇಲ್ಲಿನ ಜನರಲ್ಲಿ ಮನೆ ಮಾಡಿಕೊಂಡಿದೆ.ಮಳೆಗಾಗಿ ಈ ಬಾಳೇಕಲ್ ಸಿದ್ದಪ್ಪನನ್ನು ಪೂಜಿಸಿ, ಇಲ್ಲಿರುವ ಅಂತರಗಂಗೆಯಿಂದ ಪವಿತ್ರವಾದ ಜಲವನ್ನು ತೆಗೆದುಕೊಂಡು ತಮ್ಮ ಗ್ರಾಮದ ಗ್ರಾಮ ದೇವತೆಯನ್ನು ಪೂಜಿಸಿದರೆ ಸಮೃದ್ಧವಾಗಿ ಮಳೆ, ಬೆಳೆಯಾಗುತ್ತದೆ ಎಂಬ ಪ್ರಬಲವಾದ ನಂಬಿಕೆಯಿಂದ ಇಲ್ಲಿಗೆ ಜನರು ಕಡ್ಡಾಯವಾಗಿ ಹೋಗುತ್ತಾರೆ.ಅತ್ಯಂತ ಎತ್ತರದ ಪ್ರದೇಶದಲ್ಲಿ ಈ ಬೆಟ್ಟ ಇರುವುದರಿಂದ ಯಾವಾಗಲೂ ತಂಪಾದ ವಾತಾವರಣ ಇರುತ್ತದೆ. ಹಾಗೆಯೇ ಕಡಿದಾದ ಬೃಹತ್ ಗಾತ್ರದ ಬಂಡೆಗಳು ಇರುವುದರಿಂದ ಸಾಹಸಿಗರು ಚಾರಣವನ್ನು ಕೂಡಾ ಮಾಡಬಹುದು.

 

ಆದ್ದರಿಂದ ಈ ಸ್ಥಳವನ್ನು ಪ್ರಸಿದ್ಧ ಗಿರಿಧಾಮವನ್ನಾಗಿ ಮಾಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಿ ಉತ್ತಮ ಆದಾಯ ಗಳಿಸಬಹುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಗಮನಹರಿಸಬೇಕಾಗಿದೆ ಎನ್ನುತ್ತಾರೆ ಚಂದ್ರಪ್ಪ, ಗವಿಯಪ್ಪ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.