ಬುಧವಾರ, ಜನವರಿ 22, 2020
26 °C

ಚಾಲನಾ ಪರವಾನಗಿ ಲೋಪ: ಐಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದೇಶದಲ್ಲಿ ಚಾಲನಾ ಪರವಾನಗಿ ವಿತರಣೆಯಲ್ಲಿನ ಲೋಪದಿಂದಾಗಿ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಇತರೆ ದೇಶಗಳಲ್ಲಿ ಭಾರತದಲ್ಲಿ ನೀಡಿದ ಪರವಾನಗಿಯನ್ನು ನಂಬಲು ಹಿಂದೇಟು ಹಾಕುವಂತಹ ಸ್ಥಿತಿ ಇದೆ ಎಂದು ಪೂರ್ವ ವಲಯ ಐಜಿಪಿ ಸಂಜಯ್ ಸಹಾಯ್ ದೂರಿದರು.ಜಿಲ್ಲಾ ಪೊಲೀಸ್ ವತಿಯಿಂದ  ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜನಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ಸಂಚಾರ ದಟ್ಟಣೆ ನಿರಂತರವಾಗಿ ಹೆಚ್ಚುತ್ತಿದೆ. ಹಳೇ ನಗರಗಳ ಚಿಕ್ಕ ರಸ್ತೆಗಳು ಸಂಚಾರಕ್ಕೆ ತೊಡಕಾಗಿವೆ. ಇಂತಹ ಸವಾಲುಗಳ ನಡುವೆಯೇ ಪೊಲೀಸರು ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಸಂಚಾರ ವ್ಯವಸ್ಥೆ ಸರಿಪಡಿಸಲು ಕೆಲವೊಮ್ಮೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಸಾರ್ವಜನಿಕರು ಕಿರಿಕಿರಿ ಎಂದು ಭಾವಿಸಬಾರದು. ಪೊಲೀಸರು ಮಾಡುವ ಎಲ್ಲ ಕ್ರಮಗಳೂ ಜನರ ಒಳಿತನ್ನು ಒಳಗೊಂಡಿರುತ್ತದೆ ಎಂದರು.ಸಂಚಾರ ನಿಯಮಗಳ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಪ್ರತಿಯೊಬ್ಬರೂ ವೇಗಮಿತಿ ಅನುಸರಿಸಬೇಕು. ನಿಯಮಗಳಿಗೆ ಅನುಗುಣವಾಗಿಯೇ ವಾಹನ ಚಾಲನೆ ಮಾಡಬೇಕು. ಒಬ್ಬರು ಮಾಡುವ ತಪ್ಪಿಗೆ ಇನ್ನೊಬ್ಬರ ಜೀವ ಬಲಿಕೊಡಬಾರದು ಎಂದು ತಿಳಿ ಹೇಳಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿ ನಂಜರಾಜೇ ಅರಸ್ ಮಾತನಾಡಿ, ಎಲ್ಲ ವಾಹನಗಳ ಮಾಲೀಕರು ಹಾಗೂ ಚಾಲಕರು ಕಾನೂನು ಮೀರದಂತೆ ಕರ್ತವ್ಯ ನಿರ್ವಹಿಸಬೇಕು. ಜವಾಬ್ದಾರಿಯಿಂದ ಚಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್, ಎಎಸ್‌ಪಿ ಅನುಪಮ್ ಅಗರವಾಲ್, ನಗರ ಡಿವೈಎಸ್‌ಪಿ ಕೆ.ಪಿ. ಚಂದ್ರಪ್ಪ, ಸಿಪಿಐ ಎಚ್.ಕೆ. ರೇವಣ್ಣ, ಎಂ.ಸಿ. ದಶರಥಮೂರ್ತಿ, ನಾಗೇಶ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)