ಸೋಮವಾರ, ಜೂನ್ 14, 2021
27 °C

ಚಾಲನೆ ಸುಲಭಗೊಳಿಸಿದ ಸೆಲೆರಿಯೊ!

ದಿಲೀಪ್ ಮೈತ್ರಾ/ ಕನ್ನಡಕ್ಕೆ: ಬಶೀರಅಹ್ಮದ್‌ ನಗಾರಿ Updated:

ಅಕ್ಷರ ಗಾತ್ರ : | |

ಕಾರು. ಇದು ಬಹುತೇಕ ಮಧ್ಯಮ ವರ್ಗದವರ ಕನಸು. ಖರೀದಿಗೆ ಮುಂದಾದರೆ ಯಾವುದು ಕೊಳ್ಳೊದೋ ಎಂಬ ಗೊಂದಲ! ಕಾರು ಮಾರುಕಟ್ಟೆ ಪ್ರವೇಶಿಸಿದರೆ ಸಾಕು ಎಲ್ಲವೂ ಒಂದೇ ರೀತಿ ಕಾಣಿಸುತ್ತವೆ. ಪ್ರಮುಖ ಗುಣಗಳು (ಬೇಸಿಕ್ ಫೀಚರ್), ಎಂಜಿನ್ ಸಾಮರ್ಥ್ಯ, ಆಸನ ಸಾಮರ್ಥ್ಯ ಹೀಗೆ ಬಹುತೇಕ ಅಂಶಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತವೆ. ಎದುರಿಗಿರುವ ಹಲವುಗಳಲ್ಲಿ ಒಂದು ನಿರ್ದಿಷ್ಟ ಮಾದರಿಯ ಕಾರ್‌ ಆಯ್ಕೆ ಮಾಡಲು ಸಾಮಾನ್ಯವಾಗಿ ಅದರ ನೋಟದ ಬಗೆಗಿನ ಗ್ರಹಿಕೆ ಕಾರಣ. ಇವುಗಳನ್ನು ಹೊರತುಪಡಿಸಿ ನೀವು ಹೇಗೆ ಆಯ್ಕೆ ಮಾಡುತ್ತೀರಿ? ಸದಾ ಹೊಸತು, ಸುಂದರತೆಯತ್ತ ತುಡಿಯುವ ಮನಸ್ಸು, ವಿಭಿನ್ನ ಹಾಗೂ ವಿಶಿಷ್ಟವಾಗಿರುವುದರತ್ತ ಆಕರ್ಷಣೆಯಾಗುತ್ತದೆ.

ಭಾರತದ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇದನ್ನು ಚೆನ್ನಾಗಿ ಅರ್ಥೈಸಿಕೊಂಡಂತಿದೆ.  ಮಾರುತಿ ಮೊತ್ತಮೊದಲ ಬಾರಿಗೆ ‘ಆಟೊ ಗೇರ್ ಶಿಫ್ಟ್’ (ಸ್ವಯಂ ಚಾಲಿತ ಗೇರ್ ವರ್ಗಾವಣೆ) ಕಾರನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದರ ಹೆಸರು ‘ಸೆಲೆರಿಯೊ‘. ಇದು ಪೆಟ್ರೋಲ್ ಆಧರಿತವಾಗಿದ್ದು, ‘ಕೆ–ನೆಕ್ಸ್ಟ್‌’ ಎಂಜಿನ್‌ ಹೊಂದಿದೆ. ಈ ಕಾರು ಸದ್ಯ ಭಾರತದ ಕಾರು ಮಾರುಕಟ್ಟೆಯನ್ನು ಶೇಕಡಾ 70ರಷ್ಟು ಆವರಿಸಿಕೊಂಡಿರುವ  ಸಣ್ಣ/ ಮಧ್ಯಮ ವಿಭಾಗದಲ್ಲಿ ಬಿಡುಗಡೆಯಾಗಿದೆ.ಸೆಲೆರಿಯೊ ಆಟೊ ಗಿಯರ್‌ ಶಿಫ್ಟ್‌ ಕಾರು, ಎಲ್‌ಎಕ್ಸ್‌ (LX) ಹಾಗೂ ವಿಎಕ್ಸ್‌ಐ (VXi) ಸ್ವರೂಪಗಳಲ್ಲಿ ಲಭ್ಯವಿದ್ದು, ಬೆಂಗಳೂರಿನಲ್ಲಿ ಇದರ ಬೆಲೆ ಕ್ರಮವಾಗಿ ರೂ.4.42 ಲಕ್ಷ ಹಾಗೂ ರೂ. 4.72 ಲಕ್ಷ (ಎಕ್ಸ್‌ಷೋರೂಂ). ಸೆಲೆರಿಯೊ ಕಾರು ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್‌ನಲ್ಲೂ ಲಭ್ಯವಿದೆ. ಈ ವಿಭಾಗದಲ್ಲಿ ಮೂರು ಸ್ವರೂಪಗಳಲ್ಲಿ ದೊರೆಯುತ್ತಿದ್ದು, 4.02 ಲಕ್ಷ ರೂಪಾಯಿ ಆರಂಭಿಕ ಬೆಲೆ.ಆಟೊ ಗೇರ್‌ ಶಿಫ್ಟ್ ತಂತ್ರಜ್ಞಾನ ಅರಿಯಲು ಹಾಗೂ ಚಾಲನಾ ಅನುಭವದ ‘ಫೀಲ್‌’ ಪಡೆಯಲು ನಾನು ಇತ್ತೀಚೆಗೆ ಸೆಲೆರಿಯೊ ಕಾರನ್ನು ಒಂದು ದಿನದ ಮಟ್ಟಿಗೆ ಓಡಿಸಿದೆ. ನಗರದ ಇಕ್ಕಟಾದ ರಸ್ತೆ, ಹೆದ್ದಾರಿ ಜೊತೆಗೆ ದಿಬ್ಬದಿಂದ ಕೂಡಿದ ರಸ್ತೆಯಲ್ಲೂ ಸಂಚರಿಸಿದೆ. ಅದರ ಬಗ್ಗೆ ಹಾಗಿರಲಿ. ಸುಲಲಿತ ಚಾಲನೆ, ಅತ್ಯುತ್ತಮ ಇಂಧನ ಕ್ಷಮತೆ ಹಾಗೂ ಕೈಗೆಟುಕುವ ಬೆಲೆಗಾಗಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿರುವ ಕುತೂಹಲಕಾರಿ ಹಾಗೂ ವಿನೂತನ ತಂತ್ರಜ್ಞಾನದತ್ತ ನಾವು ಚಿತ್ತ ಹರಿಸೋಣ.

ಆಟೊ ಗೇರ್‌ ಶಿಫ್ಟ್

ಈ ತಂತ್ರಜ್ಞಾನವನ್ನು ಮಾರುತಿಯು ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್‌ ಎಂದು ಕರೆದಿದೆ, ಈ ತಂತ್ರಜ್ಞಾನದಲ್ಲಿ ತುಳಿಯಲು ಕ್ಲಚ್‌ ಪೆಡಲ್‌ಗಳೇ ಇಲ್ಲ. ಇದರಲ್ಲಿ ಇಂಟೆಲಿಜೆಂಟ್‌ ಶಿಫ್ಟ್‌ ಕಂಟ್ರೋಲ್ ಆ್ಯಕ್ಚುಯೇಟರ್‌ ಎಂಬ ಸಾಧನ ಅಳವಡಿಸಲಾಗಿದೆ. ಈ ಸಾಧನವು ಎಲೆಕ್ಟ್ರಿಕ್‌–ಹೈಡ್ರಾಲಿಕ್ ಆ್ಯಕ್ಚುಯೇಟರ್‌ ಆಗಿದ್ದು, ಸ್ವಯಂ ಚಾಲಿತವಾಗಿ ಕ್ಲಚ್‌ ಹಾಗೂ ಗಿಯರ್‌ ಶಿಫ್ಟ್‌ ಕಾರ್ಯಗಳನ್ನು ನಿರ್ವಹಿಸುತ್ತದೆ.

ಸುಲಭ ಚಾಲನೆಗೆ ‘ಡಿ’ ವಿಧಾನ

ಈಗ ಗೇರ್‌ ವ್ಯವಸ್ಥೆಯ ಚಿತ್ರದ ಮೇಲೊಮ್ಮೆ ಕಣ್ಣಾಡಿಸಿ. ಕಾರು ಚಾಲನೆ ಮಾಡುವಾಗ ಗೇರ್ ಶಿಫ್ಟ್‌ ಲಿವರ್ ಕಡ್ಡಾಯವಾಗಿ ‘ಎನ್‌’ (ನ್ಯೂಟ್ರಲ್) ಸ್ಥಾನದಲ್ಲಿರಬೇಕು; ಬ್ರೇಕ್‌ ಪೆಡಲ್‌ ತುಳಿದಿರಬೇಕು. ಒಮ್ಮೆ ಎಂಜಿನ್ ಶುರುವಾದ ಶಬ್ದ ಕೇಳಿಸಿತು ಅಂದರೆ, ಲಿವರ್‌ ಅನ್ನು ‘ಡಿ’ಗೆ (D- ಡ್ರೈವ್‌) ತಂದು ಆ್ಯಕ್ಸಲರೇಟರ್‌ ತುಳಿಯಿರಿ. ಈಗ ಕಾರು ಚಲಿಸುತ್ತಿದೆ. ಗೇರ್‌ ಬದಲಾವಣೆಯ ತಲೆನೋವಿಲ್ಲ; ಕ್ಲಚ್‌ ಅಂತೂ ಮೊದಲೇ ಇಲ್ಲ. ವೇಗ ತಗ್ಗಿಸುವ ಹಾಗೂ ವರ್ಧಿಸುವ ವಿಧಾನ ಒಂದರ್ಥದಲ್ಲಿ ಸಂಪೂರ್ಣ ಆಟೊ ಟ್ರಾನ್ಸ್‌ಮಿಷನ್‌ ಕಾರಿನಂತೆಯೇ.

ವೇಗ ತಗ್ಗಿಸಲು ಬ್ರೇಕ್‌ ಒತ್ತಿದರೆ, ವೇಗ ಹೆಚ್ಚಿಸಲು ಮತ್ತದೇ ಆ್ಯಕ್ಸಲರೇಟರ್ ತುಳಿಯಬೇಕು. ನೀವು ತುಂಬಾ ಚುರುಕು  ಕಿವಿ ಯುಳ್ಳವರಾಗಿದ್ದರೇ ‘ಗೇರ್ ಬದಲಾವಣೆ’ ಅನುಭವಕ್ಕೆ ಬರುತ್ತೆ. ಇಕ್ಕಟ್ಟಾದ ರಸ್ತೆಗಳಲ್ಲಿ ಚಾಲನೆ ಮಾಡುವಾಗ ‘ಡಿ’ಮೋಡ್‌ (ವಿಧಾನ) ತುಂಬಾ ಉಪಯುಕ್ತ.ಈ ವಿಧಾನದಲ್ಲಿ ಗೇರ್ ಸ್ವಯಂ ಚಾಲಿತವಾಗಿ ಬದಲಾಗಲು ಟ್ರಾನ್ಸ್‌ಮಿಷನ್‌ ವ್ಯವಸ್ಥೆಯು ವೇಗದೊಂದಿಗೆ ಸರಿಗೂಡುವ ತನಕ ಚಾಲಕ ಸ್ವಲ್ಪ ಸಂಯಮ ವಹಿಸಬೇಕಾಗುತ್ತದೆ. ವಾಹನದ ವೇಗ ಹಾಗೂ ಆ್ಯಕ್ಸಲರೇಟರ್‌ ಪೆಡಲ್‌ನ ಕಾರ್ಯವೈಖರಿ ಆಧರಿಸಿ ಸೂಕ್ತವಾದ ಗೇರ್‌ ಸ್ವಯಂಚಾಲಿತವಾಗಿ ಆಯ್ಕೆಯಾಗಿರುತ್ತದೆ. ವೇಗ ಹೆಚ್ಚಿದಂತೆಲ್ಲ ಕಾರು ಹೆಚ್ಚಿನ ಗೇರ್‌ಗಳಿಗೆ, ಅಂದರೆ ಗರಿಷ್ಠ ಐದನೇ ಗೇರ್‌ವರೆಗೂ ಏರುತ್ತ ಸಾಗುತ್ತದೆ. ಕಾರು ಯಾವ ಗೇರ್‌ನಲ್ಲಿ ಚಲಿಸುತ್ತಿದೆ ಎಂಬುದನ್ನು ಎಲ್‌ಇಡಿ ಪರದೆ ತೋರಿಸುತ್ತದೆ. ಈ ವಿಧಾನದಲ್ಲಿ (ಡಿ ಮೋಡ್‌) ಉತ್ತಮ ಮೈಲೇಜ್‌ ಪಡೆಯಲು ನೀವು ಮಾಡಬೇಕಿರುವುದು ಇಷ್ಟೇ. ಯಾವಾಗಲೂ ಆ್ಯಕ್ಸಲರೇಟರ್‌ ಅನ್ನು ಲಘುವಾಗಿ ತುಳಿಯುತ್ತಿರಬೇಕು.

ಮೋಜಿನ ಚಾಲನೆಗೆ ‘ಎಂ’ ವಿಧಾನ

ಹೆದ್ದಾರಿಯಲ್ಲಿ ತಕ್ಷಣಕ್ಕೆ ವೇಗ ವರ್ಧಿಸಬೇಕಿದೆಯೇ? ಇಲ್ಲವೇ ನಿಮಗೆ ಚಾಲನೆ ಮಾಡುವಾಗ ಗೇರ್‌ನೊಂದಿಗೆ ‘ಮೋಜು’ ಮಾಡಬೇಕೆನಿಸುತ್ತದೆ ಅಂದಾಗ ಎಂಜಿನ್‌ ಸ್ಟಾರ್ಟ್ ಆದ ಬಳಿಕ ನೀವು ‘ಎಂ’ ವಿಧಾನ (ಮ್ಯಾನ್ಯುಯಲ್‌ ಮೋಡ್‌) ಆಯ್ದುಕೊಳ್ಳಿ (ಡ್ರೈವಿಂಗ್‌ ಮಾಡುವಾಗ ‘ಡಿ’ ಹಾಗೂ ‘ಎಂ’ ವಿಧಾನಗಳ ನಡುವೆ ಬದಲಾವಣೆಯೂ ಮಾಡಿಕೊಳ್ಳಬಹುದು).ಈ ವಿಧಾನದಲ್ಲಿ ಗೇರ್‌ ಆಯ್ಕೆ ಮ್ಯಾನ್ಯುಯಲ್‌ ಆಗಿದೆ. ಗೇರ್‌ಗಳು 1 ರಿಂದ 2ನೇ, 3ನೇ, 4ನೇ ಹಾಗೂ 5ನೇ ಹೀಗೆ ಕ್ರಮಾನುಗತವಾಗಿವೆ. ಗೇರ್‌ ಹೆಚ್ಚಿಸಲು ಲಿವರ್‌ ಅನ್ನು ಹಿಂದೆ (+) ನೂಕಬೇಕು. ಹಾಗೆಯೇ ಗೇರ್‌ ತಗ್ಗಿಸಲು ಲಿವರ್‌ ಅನ್ನು ಮುಂದೆ (–) ತಳ್ಳಬೇಕು. ಕಾರಿನ ವೇಗ ತಗ್ಗುತ್ತಿರುವಾಗ ಗೇರ್‌ ಸ್ವಯಂ ಚಾಲಿತವಾಗಿ ಕಡಿಮೆಯಾಗುತ್ತದೆ. ಮತ್ತೆ ವೇಗ ಹೆಚ್ಚುತ್ತ ಹೆಚ್ಚುತ್ತ ‘ಕರೆಕ್ಟ್‌ ರೇಂಜ್‌’ನ ಸನಿಹದಲ್ಲಿದ್ದರೆ ಲಿವರ್‌ ತಳ್ಳಬೇಕಾಗುತ್ತದೆ.‘ಎಂ’ ವಿಧಾನದಲ್ಲಿ (ಮ್ಯಾನ್ಯುಯಲ್‌ ಮೋಡ್‌) ಗೇರ್‌ ಬದಲಾವಣೆಗೆ ಇರುವ ಸ್ವಾತಂತ್ರ್ಯ ಪ್ಲಸ್‌ ಪಾಯಿಂಟ್‌. ಬೆಟ್ಟದ ರಸ್ತೆಗಳ ತೀಕ್ಷ್ಣ ಹಾಗೂ ಕಡಿದಾದ ತಿರುವುಗಳಲ್ಲಿ ಚಾಲನೆ ಮಾಡಲು ನಿಮ್ಮ ವಾಹನಕ್ಕೆ ಬೇಕಾಗುವ ಹಠಾತ್‌ ಶಕ್ತಿಯನ್ನು ಇದರಿಂದ ಪಡೆಯಬಹುದು. ಕ್ಲಚ್‌ ರಹಿತ ತಂತ್ರಜ್ಞಾನದ ಆಕರ್ಷಕ ಗುಣವೇನೆಂದರೆ ಗೇರ್‌ ಬದಲಾವಣೆಗೆ ಕೇವಲ ಬೆರಳುಗಳ ಸಣ್ಣ ಶ್ರಮ ಸಾಕು!

ಶಕ್ತಿಶಾಲಿ ಎಂಜಿನ್‌

ಚಿಕ್ಕ ಎಂಜಿನ್‌, ಸೆಲೆರಿಯೊ ಕಾರಿನ ಮತ್ತೊಂದು ವೈಶಿಷ್ಟ್ಯ. ‘ಕೆ–ನೆಕ್ಸ್ಟ್‌’ ಎಂಜಿನ್ ಅಳವಡಿಸಿಕೊಂಡಿರುವ ಮಾರುತಿಯ ಮೊದಲ ಕಾರು ಇದು. ಒಂದು ಲೀಟರ್‌ (998ಸಿಸಿ) ಪೆಟ್ರೋಲ್‌ನ ಮೂರು ಸಿಲಿಂಡರ್‌ಗಳುಳ್ಳ ಎಂಜಿನ್‌ ಸಂಪೂರ್ಣ ಅಲ್ಯೂಮಿನಿಯಂನಿಂದ ರೂಪುಗೊಂಡಿದೆ. ಚಿಕ್ಕ ಹಾಗೂ ಮೂರು ಸಿಲಿಂಡರ್‌ಗಳಿದ್ದರೂ ಎಂಜಿನ್‌ ಶಬ್ದ ಮಾತ್ರ ಗಮನಾರ್ಹ ಎನ್ನಬಹುದಾದಷ್ಟು ಸೌಮ್ಯ. ನಾನು ಗಮನಿಸಿದಂತೆ ಗೇರ್‌ ಬದಲಾವಣೆ ವೇಳೆ ಅದೆಷ್ಟೋ ಬಾರಿ ಎಂಜಿನ್‌ ಸಪ್ಪಳ ಅರಿವಿಗೇ ಬರಲಿಲ್ಲ. ಆದರೆ ವೇಗದ ಚಾಲನೆಯಲ್ಲಿ ಮಂದವಾಗಿ ಸಪ್ಪಳ ಕೇಳಿಸಿತು. ಎನ್‌ವಿಎಚ್‌ (noise, vibration, and harshness) ಪ್ರಮಾಣ ತಗ್ಗಿಸುವ ನಿಟ್ಟಿ­ನಲ್ಲಿ ಮಾರುತಿ ಉತ್ತಮ ಕೆಲಸ ಮಾಡಿದೆ.ಕೆ–ನೆಕ್ಸ್ಟ್‌ ಎಂಜಿನ್ ಗರಿಷ್ಠ 68 ಪಿಎಸ್‌ ಶಕ್ತಿ ಹಾಗೂ 90 ಎನ್‌ಎಂ (ನ್ಯೂಟನ್‌ ಮೀಟರ್‌) ಟಾರ್ಕ್‌ ಉತ್ಪಾದಿಸುತ್ತದೆ. ಇದರಲ್ಲಿರುವ ಫ್ಲ್ಯಾಟ್‌ ಟಾರ್ಕ್‌, ನೀವು ಐದನೇ ಗೇರ್‌ನಲ್ಲಿದ್ದಾಗಲೂ ನಿಧಾನ ವೇಗದಿಂದ ಒಮ್ಮೆಲೇ ಪಿಕಪ್‌ ಪಡೆಯಲು ಅವಕಾಶ ನೀಡುತ್ತದೆ.

ಇಂಧನ ಕ್ಷಮತೆ

ಆಟೊ ಗೇರ್‌ ಶಿಫ್ಟ್‌ ಕಾರುಗಳು ಇಂಧನ ಮಿತವ್ಯಯಿ ಅಲ್ಲ ಎಂಬ ಆರೋಪವಿದೆ. ಆದರೆ ಈ ಕಾರು ಪ್ರತಿ ಲೀಟರ್‌ ಪೆಟ್ರೋಲ್‌ಗೆ 23.1 ಕಿಲೋ ಮೀಟರ್‌ ಇಂಧನ ಕ್ಷಮತೆ ಹೊಂದಿದೆ ಎಂದು ದೃಢೀಕರಣ ಪಡೆದಿದೆ. ಅದಾಗ್ಯೂ ನಗರ, ಹೆದ್ದಾರಿ ಹಾಗೂ ಬೆಟ್ಟದ ರಸ್ತೆಗಳ ಸಮ್ಮಿಶ್ರಣ ಪಯಣದಲ್ಲಿ ನನಗೆ ಸಿಕ್ಕಿದ್ದು ಪ್ರತಿ ಲೀಟರ್‌ಗೆ ಸರಾಸರಿ ಸುಮಾರು 18 ಕಿ.ಮೀ. ಪೆಟ್ರೋಲ್‌ ಮಾದರಿಯಲ್ಲಿ ಇದು ನಿಜಕ್ಕೂ ಅತ್ಯುತ್ತಮ ಮೈಲೇಜ್ ಎನ್ನಬಹುದು.ಗಮನಾರ್ಹ ಅಂಶ ಅಂದರೆ ‘ಆಟೊ ಶಿಫ್ಟ್‌ ಗೇರ್‌‘ ಸೌಲಭ್ಯ ಹೊಂದಿರುವ ಸೆಲೆರಿಯೊ, ಸಂಪೂರ್ಣ ಸ್ವಯಂ ಚಾಲಿತ. ಚಿಕ್ಕ ಕಾರಿಗಿಂತಲೂ ಉತ್ಕೃಷ್ಟ ಮೈಲೇಜ್‌ ನೀಡುತ್ತದೆ. ಸಂಪೂರ್ಣ ಸ್ವಯಂ ಚಾಲಿತ ಕಾರು ಪ್ರತಿ ಲೀಟರ್‌ಗೆ ನೀಡುವ ಮೈಲೇಜ್‌ ಕೇವಲ ಸುಮಾರು 12 ಕಿಲೋ ಮೀಟರ್‌. ಬೆಲೆಯಲ್ಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವ್ಯತ್ಯಾಸವಿರುತ್ತದೆ.

ಸಮಕಾಲೀನ ವಿನ್ಯಾಸ!

ಸೆಲೆರಿಯೊ ಕಾರಿನ ವಿನ್ಯಾಸ ಸಮಕಾಲೀನ ಹಾಗೂ ಏರೊಡೈನಾಮಿಕ್‌ ಆಗಿದೆ. ಗರಿಷ್ಠ ಸ್ಥಳಾವಕಾಶ ಹಾಗೂ ಹೆಚ್ಚು ಆರಾಮ ಆಗಿರುವಂತೆ ಕಾರಿನ ಒಳಾಂಗಣ ವಿನ್ಯಾಸವಿದೆ. 235 ಲೀಟರ್‌ನಷ್ಟು ಲಗೇಜ್‌ ಜಾಗವಿದ್ದು (ಬೂಟ್‌ ಸ್ಪೇಸ್‌), ಹಿಂದಿನ ಸೀಟುಗಳನ್ನು 60:40ರ ಅನುಪಾತದಲ್ಲಿ ವಿಭಾಗಿಸಿ/ಮಡಚಿ ಜಾಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶವಿದೆ.ಡ್ಯಾಷ್‌ಬೋರ್ಡ್‌ ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ತೋರಿಸುತ್ತದೆ. ರಿಯಲ್‌ ಟೈಮ್‌ ಇಂಧನ ಕ್ಷಮತೆ, ಸರಾಸರಿ ಇಂಧನ ಕ್ಷಮತೆ, ಎಷ್ಟು ದೂರ ಕ್ರಮಿಸಿದರೆ ಇಂಧನ ಖಾಲಿಯಾಗುತ್ತದೆ (ರೇಂಜ್‌), ಗೇರ್‌ ಯಾವ ಪೊಸಿಷನ್‌ನಲ್ಲಿದೆ ಇತ್ಯಾದಿ. ಬುದ್ಧಿವಂತಿಕೆಯಿಂದ ಉಪಯೋಗಿಸಿದರೆ ಈ ಮಾಹಿತಿಗಳು ನಿಮ್ಮ ಡ್ರೈವಿಂಗ್‌ ಅಭ್ಯಾಸವನ್ನು ಸುಧಾರಿಸಬಲ್ಲವು.

ಆಟೊ ಗೇರ್ ಇತಿಹಾಸ

ಸ್ವಯಂಚಾಲಿತ ಗೇರ್ ಮೊದಲ ಬಾರಿಗೆ ಬಳಕೆಗೆ ಬಂದಿದ್ದು 1921ರಲ್ಲಿ. ಕೆನೆಡಾದ ಆಲ್ಫರ್ಡ್‌ ಹಾರ್ನರ್‌ ಮುನ್ರೊ ಎಂಬ ಸ್ಟೀಮ್ ಎಂಜಿನಿಯರ್‌ ಇಂಥದ್ದೊಂದು ಪ್ರಯೋಗಕ್ಕೆ ಕೈಹಾಕಿ ಸೈ ಎನಿಸಿಕೊಂಡರು.  ಹೈಡ್ರಾಲಿಕ್‌ ಫ್ಲೂಯಿಡ್‌ ಬಳಸುವ ಬದಲು ಒತ್ತಡದ ಗಾಳಿಯನ್ನು ಮುನ್ರೊ ಬಳಸಿದ್ದರು. ಇದರಿಂದಾಗಿ ಈ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಗಿಲ್ಲದ್ದರಿಂದ ವಾಣಿಜ್ಯ ಉಪಯೋಗಕ್ಕೆ ಇದು ಬಳಕೆಯಾಗಲಿಲ್ಲ.ಈ ತಂತ್ರಜ್ಞಾನಕ್ಕಾಗಿ ಮುನ್ರೊ ಅವರು 1923ರಲ್ಲಿ ಕೆನಡಾ ಹಾಗೂ 1927ರಲ್ಲಿ ಅಮೆರಿಕ ಸರ್ಕಾರದ ಪೇಟೆಂಟ್‌ ಪಡೆದಿದ್ದರು. ನಂತರ ವಾಣಿಜ್ಯ ಬಳಕೆಯ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಅನ್ನು ಅಮೆರಿಕದ ಜನರಲ್‌ ಮೋಟಾರ್ಸ್‌ ಅವರು ಮೊದಲ ಬಾರಿಗೆ ಪರಿಚಯಿಸಿದರು. 1930ರಲ್ಲೇ ಈ ಪ್ರಯೋಗಕ್ಕೆ ಕೈಹಾಕಿದ ಕಂಪೆನಿ 1940ರಲ್ಲಿ ‘ಹೈಡ್ರಾ–ಮ್ಯಾಟಿಕ್‌’ ಎಂಬ ಹೆಸರಿನಲ್ಲಿ ಪರಿಚಯಿಸಿದರು.ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಜನರಲ್ ಮೋಟಾರ್ಸ್‌ ಅಭಿವೃದ್ಧಿಪಡಿಸಿದ್ದ ಟ್ಯಾಂಕ್‌ಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಿತ್ತು. ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನಲ್ಲಿ ಕಂಟಿನ್ಯೂಯಸ್ಲಿ ವೇರಿಯಬಲ್‌ ಟ್ರಾನ್ಸ್‌ಮಿಷನ್‌ (ಸಿವಿಟಿ) ಹಾಗೂ ಸೆಮಿ ಆಟೊಮ್ಯಾಟಿಕ್‌ ಎಂಬ ವಿಧಗಳಿವೆ. ಇದೀಗ ಮರ್ಸಿಡೀಸ್‌, ಬಿಎಂಡಬ್ಲೂ, ಆಡಿ, ಲ್ಯಾಂಡ್‌ ರೋವರ್‌, ಜಾಗ್ವರ್‌ ಮುಂತಾದ ವಿಲಾಸಿ ಕಾರುಗಳಲ್ಲಿ ಏಳು ಗೇರ್‌ಗಳನ್ನು ಬದಲಿಸಬಲ್ಲ ವ್ಯವಸ್ಥೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.