ಸೋಮವಾರ, ಏಪ್ರಿಲ್ 19, 2021
32 °C

ಚಿಕ್ಕದಾಸರಹಳ್ಳಿ ಬ್ಯಾಟರಾಯಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕದಾಸರಹಳ್ಳಿ ಬ್ಯಾಟರಾಯಸ್ವಾಮಿ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯ ಗುಡ್ಡದ ಮೇಲಿನ ಬ್ಯಾಟರಾಯಸ್ವಾಮಿ ದೇವಾಲಯ ಸುಮಾರು 900 ವರ್ಷಗಳಷ್ಟು ಹಳೆಯದು.ಇದು ಎತ್ತರವಾದ ಗುಡ್ಡ ಅಥವಾ ದಿಬ್ಬದ ಮೇಲೆ ವಿಸ್ತಾರವಾಗಿ ಹರಡಿಕೊಂಡಿದೆ.  ಐತಿಹ್ಯದ ಪ್ರಕಾರ ಮೂಲತಃ ಮಾಗಡಿಯಿಂದ ಬಂದ ಬ್ಯಾಟರಾಯಸ್ವಾಮಿ ದೇವರು ಮಳಮಾಚನಹಳ್ಳಿಯಲ್ಲಿ ತಾತ್ಕಾಲಿಕವಾಗಿ ತಂಗಿದ್ದು ನಂತರ ಇಲ್ಲಿಗೆ ಬಂದು ನೆಲೆಸುತ್ತಾನೆ.ದೇವಾಲಯದ ಮೆಟ್ಟಿಲುಗಳನ್ನು ಹತ್ತುವಾಗ ಎಡಭಾಗದಲ್ಲಿ ಒಂದು ದೊಡ್ಡ ಪುಷ್ಕರಣಿ ಇದೆ. ಇದರ ದಡದಲ್ಲಿ ಒಂದು ಚಿಕ್ಕ ಗುಡಿಯಿದ್ದು, ಒಳಗೆ ಸುಮಾರು ಮೂರು ಅಡಿ ಎತ್ತರದ ನರಸಿಂಹ ವಿಗ್ರಹವಿದೆ. ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಿರುವ ಭಂಗಿಯಲ್ಲಿರುವ ಈ ವಿಗ್ರಹವು ಬಹಳ ಕಾಲ ನೀರಿನಲ್ಲಿಯೇ ಇತ್ತೆಂದು ಸ್ಥಳೀಯರು ಹೇಳುತ್ತಾರೆ. ಇದರ ಎದುರಿಗೆ ಪ್ರಹ್ಲಾದನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯವು ವಿಶಾಲವಾದ ಪ್ರಾಕಾರ, ಗರ್ಭಗೃಹ, ಅರ್ಧಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡವು ಅಲಂಕಾರಿಕವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಬಿಂಬವನ್ನು ಹೊಂದಿದೆ.ದ್ವಾರದ ಎರಡೂ ಕಡೆ ದ್ವಾರಪಾಲಕರ ವಿಗ್ರಹಗಳಿವೆ. ಬ್ಯಾಟರಾಯಸ್ವಾಮಿಯ ವಿಗ್ರಹವು ಸುಮಾರು 4.5 ಅಡಿ ಎತ್ತರ, ಸ್ಥಾನಕ ಭಂಗಿಯಲ್ಲಿದೆ. ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಅಭಯ ಹಾಗೂ ಗದೆಗಳನ್ನು ಹೊಂದಿದೆ. ಶಿಲ್ಪಕಲಾ ದೃಷ್ಟಿಯಿಂದ ಅತ್ಯಂತ ಆಕರ್ಷಕ ಕಲಾನೈಪುಣ್ಯತೆಯನ್ನು ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿಯ ಜೊತೆಗೆ ಶ್ರೀದೇವಿ ಭೂದೇವಿಯರ ಸುಂದರ ಶಿಲ್ಪಗಳಿವೆ. ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ.ಬಲಗಡೆ ಪ್ರಸಾದವಾದರೆ ಶುಭ, ಎಡಗಡೆಯಾದರೆ ಅಶುಭ ಎಂದು ನಂಬುತ್ತಾರೆ. ಈ ದೇವಾಲಯದ ದಿಬ್ಬದ ಕೆಳಗೆ ವೀರಗಲ್ಲು ಮತ್ತು ಸನಿಹದಲ್ಲಿ ಆಂಜನೇಯನ ದೇವಾಲಯವಿದೆ. 

ಸೇವೆ, ದಾರಿ

ಪ್ರತಿ ಶನಿವಾರ ಮಾತ್ರ ಅಭಿಷೇಕ ಮತ್ತು ಪ್ರಸಾದ: ಶುಲ್ಕ 501 ರೂ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಿಂದ ಸುಮಾರು 6 ಕಿಮೀ ದೂರ ಚಿಕ್ಕದಾಸರಹಳ್ಳಿ ಗ್ರಾಮದ ಸಮೀಪ ಗುಡ್ಡದ ಮೇಲಿದೆ ದೇವಾಲಯ. ಮಾಹಿತಿಗೆ ಬ್ಯಾಟರಾಯಸ್ವಾಮಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬ್ಯಾಟರಾಯಶೆಟ್ಟಿ ಅವರ ಮೊಬೈಲ್ 92422 27306.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.