ಭಾನುವಾರ, ಮೇ 9, 2021
26 °C

ಚಿಕ್ಕಮಗಳೂರು: ಗುಡ್‌ಫ್ರೈಡೆ- ಕ್ರೈಸ್ತರ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರದ ಸಂತ ಜೋಸೆಫರ ಆರಾಧನಾಲಯದ ಹೊರ ಆವರಣದಲ್ಲಿ ಶುಕ್ರವಾರ ಗುಡ್‌ಫ್ರೈಡೆ ಅಂಗವಾಗಿ ಧರ್ಮ ಗುರು ಜಾರ್ಜ್ ಡಿಸೋಜ ನೇತೃತ್ವದಲ್ಲಿ ಕ್ರೈಸ್ತರು ಏಸುಕ್ರಿಸ್ತನಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಪ್ರಧಾನ ದೇವಾಲಯದ ಗುರುಗಳು ಶಿಲುಬೆಯ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುವಾಗ, ಕ್ರೈಸ್ತ ಭಕ್ತರು ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.ಮಾನವನ ಪಾಪ ಪರಿಹಾರಕ್ಕಾಗಿ ಏಸು ಕ್ರಿಸ್ತರು ಶಿಲುಬೆ ಹೊತ್ತು 14 ಸ್ಥಳಗಳಲ್ಲಿ ಅನುಭವಿಸಿದ ಯಾತನೆಯ ವೃತ್ತಾಂತ ವಿವರಿಸುವಂತೆ ಚರ್ಚ್ ಆವರಣದ 14 ಸ್ಥಳಗಳಲ್ಲಿ ಶಿಲುಬೆ ನೆಡಲಾಗಿತ್ತು. ಶಿಲುಬೆ ಮುಂದೆ ಪ್ರಭು ಏಸು ಕ್ರಿಸ್ತರ `ಶಿಲುಬೆ ಹಾದಿ ವೃತ್ತಾಂತ~ ಪಠಿಸುತ್ತ ಸಾವಿರಾರು ಕ್ರೈಸ್ತರು ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸಿದರು.ಏಸುವಿನ ಶಿಲುಬೆಯ ಮರಣದ ವೃತ್ತಾಂತದ ದಿವ್ಯ ಬಲಿಪೂಜೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಧಾನ ದೇವಾಲಯದ ಒಳಾಂಗಣದಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಬಿಷಪ್ ಡಾ.ಅಂಥೋಣಿ ಸ್ವಾಮಿ ನೆರವೇರಿಸಿದರು.ಶ್ರದ್ಧಾಭಕ್ತಿಯ ಗುಡ್‌ಫ್ರೈಡೆ

ನರಸಿಂಹರಾಜಪುರ:
ತಾಲ್ಲೂಕಿನಾದ್ಯಂತ ಕ್ರೈಸ್ತರು  ಗುಡ್‌ಫ್ರೈಡೆಯನ್ನು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಗುಡ್‌ಫ್ರೈಡೇ ಹಬ್ಬದ ಪ್ರಯುಕ್ತ ಶುಕ್ರವಾರ ಇಲ್ಲಿನ ದೀಪ್ತಿ ಪ್ರೌಢಶಾಲೆಯ ಬಳಿಯ ಲಿಟಲ್‌ಫ್ಲವರ್ ಚರ್ಚ್‌ನಲ್ಲಿ ಬೆಳಿಗ್ಗೆ ವಿಶೇಷ ಬಲಿ ಪೂಜೆ ಸಲ್ಲಿಸಲಾಯಿತು. ವಿಗಾರ್ ಜೋಸ್ ಮುದುಫ್ಲಾಕಿಲ್, ಬಿನೋಷ್ ವಿಶೇಷ ಪೂಜೆ ನಡೆಸಿದರು. ನಂತರ ಲಿಟ್ಟಲ್‌ಫ್ಲವರ್ ಚರ್ಚ್‌ನಿಂದ ಪಟ್ಟಣದ ನೀರಿನ ಟ್ಯಾಂಕ್ ವೃತ್ತದವರೆಗೆ ಏಸು ಕ್ರಿಸ್ತರ ಮೃತ  ಶರೀರದ ಪ್ರತಿ ಕೃತಿಯನ್ನು ಹೊತ್ತು ಕೊಂಡು ಸಾವಿರಾರು ಸಂಖ್ಯೆಯಲ್ಲಿದ್ದ ಕ್ರೈಸ್ತರು ಮೌನ ಮೆರವಣಿಗೆ ನಡೆಸಿದರು.  ಮೆರವಣಿಗೆಯ ನಂತರ ಚರ್ಚ್‌ನಲ್ಲಿ ಭಕ್ತರು ಹರಕೆ ತೀರಿಸಿದರು. ಗುಡ್‌ಫ್ರೈಡೇ ಬರುವ 50ದಿನಗಳ ಮೊದಲೇ ಕ್ರೈಸ್ತರು ಸಂಪೂರ್ಣ ಮಾಂಸ ಆಹಾರವನ್ನು ತ್ಯಜಿಸಿ ಸಸ್ಯಹಾರ ಸೇವಿಸುತ್ತಾರೆ. ಶುಕ್ರವಾರವೂ ಸಹ  ಉಪವಾಸ ಆಚರಿಸಿದರು. ಶನಿವಾರ ಮಧ್ಯ ರಾತ್ರಿ ಈಸ್ಟರ್ ಹಬ್ಬದ ಪ್ರಯುಕ್ತ ವಿಶೇಷ ಗಾನಬಲಿ ಪೂಜೆ ನಡೆಯಲಿದೆ. ಭಾನುವಾರಕ್ಕೆ ಉಪವಾಸ ಕೊನೆಗೊಳ್ಳಲಿದೆ.     ನಾಟಕಕ್ಕೆ  ದುಃಖಿಸಿದ ಜನತೆ

ಮೂಡಿಗೆರೆ : ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ ಶುಭ ಶುಕ್ರವಾರ. ಅದರ ಅಂಗವಾಗಿ  ಪಟ್ಟಣದ ಸಂತ ಅಂತೋಣಿ ಚರ್ಚ್ ಆವರಣದಲ್ಲಿ  ಶಿಲುಬೇಗೇರಿದ ಏಸುವಿನ ವೃತ್ತಾಂತ ಕುರಿತು  ಒಂದು ಗಂಟೆಗೂ ಹೆಚ್ಚು ಕಾಲ ಸಂತ ಅಂತೋಣಿ ಚರ್ಚ್ ಸದಸ್ಯರು ನಾಟಕ ಅಭಿನಯಿಸುವುದರ ಮೂಲಕ ಜನರ ಮನಸ್ಸನ್ನು ಸೂರೆಗೊಂಡರು. ಚರ್ಚ್ ಫಾಧರ್ ಲ್ಯಾನ್ಸಿ ಪಿಂಟೋ ನಿರ್ದೇಶನದಲ್ಲಿ ಶಿಲುಬೆಗೇರಿದ ಏಸುವಿನ ನೈಜ ಚಿತ್ರಣವನ್ನು ನಾಟಕರೂಪದಲ್ಲಿ  ಅಭಿನಯಿಸಿದರು.  ನಾಟಕವನ್ನು ಪ್ರೇಕ್ಷಕರು ಮಳೆಯನ್ನು ಲೆಕ್ಕಿಸದೆ ವೀಕ್ಷಿಸಿದರು. ನೈಜ ಘಟನೆಯೇ ಕಣ್ಣ ಮುಂದೆ ನಡೆಯುತ್ತಿದೆ ಎಂಬ ರೀತಿಯಲ್ಲಿ ಅಭಿನಯವನ್ನು ಕಂಡು ಹಿರಿಯ ಮಹಿಳಾ ಕ್ರೈಸ್ತಬಾಂಧವರು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.