ಶನಿವಾರ, ಏಪ್ರಿಲ್ 10, 2021
30 °C

ಚಿತ್ರ: ಕಂಸಾಳೆ ಕೈಸಾಳೆ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಸಾಂಸ್ಕೃತಿಕ ಅದ್ದೂರಿಯ `ನಾದಲೀಲೆ~ನಿರ್ಮಾಪಕ : ಮಹೇಶ್ ಮಂಜಯ್ಯ, ನಾಗಿಣಿ ಭರಣ

ಕಥೆ- ಚಿತ್ರಕಥೆ- ನಿರ್ದೇಶನ : ಟಿ.ಎಸ್. ನಾಗಾಭರಣ

ತಾರಾಗಣ : ಮಾಸ್ಟರ್ ಸ್ನೇಹಿತ್, ಶ್ರೀಧರ್, ನಾಗಾಭರಣ, ನಾಗಿಣಿ ಭರಣ, ಶಾಂತಮ್ಮ, ಇತರರು.`ಕುಣಿಯೋಣು ಬಾರಾ ಕುಣಿಯೋಣು ಬಾ~ ಎನ್ನುವ ಬೇಂದ್ರೆ ಪದ್ಯದಲ್ಲಿನ ಜೀವನೋತ್ಸಾಹದ ದೃಶ್ಯರೂಪ ಟಿ.ಎಸ್. ನಾಗಾಭರಣ ನಿರ್ದೇಶನದ `ಕಂಸಾಳೆ ಕೈಸಾಳೆ~. ಕಂಸಾಳೆಯ ಅಪೂರ್ವ ನಾದಲೋಕದೊಂದಿಗೆ ಮನುಷ್ಯ ಸಂಬಂಧಗಳನ್ನು ತಳುಕು ಹಾಕುವುದು ಈ ಚಿತ್ರದ ವಿಶೇಷ. ಈ ಚಿತ್ರದಲ್ಲಿ ಅದ್ದೂರಿ ಸೆಟ್‌ಗಳಿಲ್ಲ, ಪ್ರಖ್ಯಾತ ತಾರೆಗಳ ಭಾರವಿಲ್ಲ, ಕೃತಕ ಪ್ರಭಾವಳಿಗಳೂ ಇಲ್ಲ. ಚೌಕಟ್ಟಿಲ್ಲದ ಪರಿಸರ, ಪಾತ್ರ ಬಯಸುವ ಕಲಾವಿದರು ಹಾಗೂ ಅಪ್ಪಟ ದೇಸಿತನ ಇಡೀ ಚಿತ್ರವನ್ನು ಆವರಿಸಿದೆ.`ಕಂಸಾಳೆ ಕೈಸಾಳೆ~ ಚಿತ್ರದ ಸೊಗಸು ಇರುವುದು ಅದರ ಸೊಗಸಾದ ನಿರೂಪಣೆಯಲ್ಲಿ. ಅಪ್ಪನ ನಿಷೇಧಗಳಲ್ಲಿ ನಲುಗುವ ನಗರದ ಬಾಲಕನೊಬ್ಬ ಕಾಡಿನ ಕಿರುದಾರಿಗಳಲ್ಲಿ ತನ್ನ ಸ್ವಾತಂತ್ರ್ಯವನ್ನು ಕಂಡುಕೊಳ್ಳುವುದು ಚಿತ್ರದ ಕಥೆ. ಕೊನೆಗೆ, ಮಗನ ಭಾವಲೋಕದ ಕಾವು ಅಪ್ಪನನ್ನೂ ಕರಗಿಸುತ್ತದೆ.ಇಲ್ಲಿನ ಬಾಲಕನಿಗೆ ಶಬ್ದಗಳ ಬಗ್ಗೆ ಅಪರಿಮಿತ ಆಸಕ್ತಿ. ಅಮ್ಮನ ಪ್ರಯೋಗಶಾಲೆಯಲ್ಲಿನ ಸೌಟು, ಚಮಚೆ, ತಟ್ಟೆ ಲೋಟಗಳ ಸದ್ದಿನಿಂದ ಹಿಡಿದು, ಗಾಳಿಯಲ್ಲಿನ ವಿವಿಧ ಶಬ್ದಪ್ರಸಂಗಗಳ ಬಗ್ಗೆ ಹುಡುಗ ಕುತೂಹಲಿ. ಹೀಗೆ, ಶಬ್ದಗಳ ಬೆನ್ನು ಹತ್ತುವ ಬಾಲಕನಿಗೆ ಅಪರಿಚಿತ ನಾದವೊಂದು ಸೆಳೆಯುತ್ತದೆ. ಅದೇ `ನಾದ~ ಶೈಕ್ಷಣಿಕ ಪ್ರವಾಸಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಹೋದಾಗ ಕೇಳಿಸುತ್ತದೆ. ಆ ನಾದದ ಬೆನ್ಹತ್ತಿ ಹೋಗುವ ಬಾಲಕ ಬಸ್ಸು ತಪ್ಪಿಸಿಕೊಳ್ಳುತ್ತಾನೆ. ಅಲ್ಲಿಂದ ಅವನ `ನಿಜ ಪಯಣ~ ಶುರುವಾಗುತ್ತದೆ. ಮಾದಪ್ಪನ ದರ್ಶನಕ್ಕೆ ತನ್ನ `ಸಿಸು ಮಕ್ಕಳ~ ಜೊತೆ ಹೊರಟ `ದೇವರ ಗುಡ್ಡ~ ದಾರಿ ತಪ್ಪಿಸಿಕೊಂಡು ಬಂದ ಹುಡುಗನಿಗೆ ಅಪ್ಪಯ್ಯನಾಗುತ್ತಾನೆ.ಮುಂದಿನದು ಕಾಡಿನ ದಾರಿಯ ಕಥೆ.

ಬೆಟ್ಟದ ಕಿರುದಾರಿಗಳಲ್ಲಿ ಸಾಗುವ `ದೇವರ ಗುಡ್ಡ~ ಮತ್ತು ಸಿಸು ಮಕ್ಕಳ ಪಯಣ ಒಂದು ಮೋಹಕ ಪಯಣ. ಅಲ್ಲಲ್ಲಿ ರೋಚಕವೂ ಹೌದು. ದಾರಿ ಸವೆಸುವುದರೊಂದಿಗೆ ಕಲಿಕೆಯೂ ನಡೆಯುತ್ತದೆ. ಕಂಸಾಳೆಯ ಪಟ್ಟುಗಳನ್ನು ಮಕ್ಕಳಿಗೆ ಹೇಳಿಕೊಡುವುದರೊಂದಿಗೆ ಮಾದಪ್ಪನ ಮಹಿಮೆಯನ್ನು `ದೇವರ ಗುಡ್ಡ~ ಬಣ್ಣಿಸುತ್ತಾನೆ. ಈ ಪಯಣದಲ್ಲಿ ಮಕ್ಕಳ ನಡುವಣ ಅಸೂಯೆ, ಅನಾರೋಗ್ಯಕರ ಸ್ಪರ್ಧೆಗಳು ತಿಳಿಯಾಗುತ್ತವೆ. ಕಂಸಾಳೆಯ ಕಲಿಕೆಯ ಅಂಗಳ ಬದುಕನ್ನು ಅರಿತುಕೊಳ್ಳುವ ಶಾಲೆಯೂ ಆಗಿ ಪರಿಣಮಿಸುತ್ತದೆ. ಆ ಕಾರಣದಿಂದಲೇ ಇದು- `ಕಂಸಾಳೆ ಕೈಸಾಳೆ~.ಸಂಗೀತದ ಮೂಲಕ, ಮುಖ್ಯವಾಗಿ ಕಂಸಾಳೆಯ ನಾದದ ಮೂಲಕ ಕಥನವನ್ನು ಕಟ್ಟಿಕೊಡುವುದು ನಿರ್ದೇಶಕರ ಉದ್ದೇಶ. ಈ ಪ್ರಯತ್ನ ಸಿನಿಮಾಕ್ಕೊಂದು ರಮಣೀಯ ಪ್ರಭಾವಳಿಯನ್ನು ಕಲ್ಪಿಸಿದೆ. ಮಹದೇಶ್ವರ ಕಾವ್ಯದ ತುಣುಕುಗಳ ಬಳಕೆ ಕೂಡ ಸಿನಿಮಾದ ಕಸುವು ಹೆಚ್ಚಿಸಿದೆ. ಮಕ್ಕಳ ತುಂಟತನ, ಕುತೂಹಲ, ಬೆರಗು, ಮುಗ್ಧತೆಗಳನ್ನು ಚಿತ್ರದಲ್ಲಿ ಕಾಣಿಸುವುದು ನಿರ್ದೇಶಕರಿಗೆ ಸಾಧ್ಯವಾಗಿದೆ.ಛಾಯಾಗ್ರಾಹಕ ಅನಂತ ಅರಸ್ ಹಾಗೂ ಕಲ್ಯಾಣ್ ಅವರ ಸಂಗೀತ ಗುರುಶಿಷ್ಯರ ಪಯಣದ ಹಾದಿಯನ್ನು ಸಿಂಗರಿಸಿದೆ. ದೇವರ ಗುಡ್ಡನ ಪಾತ್ರ ಸ್ವತಃ ನೃತ್ಯಗಾರರೂ ಆದ ಶ್ರೀಧರ್ ಅವರಿಗೆ ಹೇಳಿಮಾಡಿಸಿದಂತಿದೆ. ಅಪ್ಪನ ಪಾತ್ರದಲ್ಲಿ ನಾಗಾಭರಣ, ಅಜ್ಜಿಯಾಗಿ ಶಾಂತಮ್ಮ ಗಮನಸೆಳೆಯುತ್ತಾರೆ. ಮಾಸ್ಟರ್ ಸ್ನೇಹಿತ್ ಕೇಂದ್ರದಲ್ಲಿರುವ ಮಕ್ಕಳ ತಂಡ ಸೊಗಸಾಗಿದೆ.ಅಚ್ಚುಕಟ್ಟಾದ ಈ ಚಿತ್ರದಲ್ಲೂ ಸಣ್ಣಪುಟ್ಟ ತೊಡಕುಗಳಿವೆ. ಸರಾಗ ಮತ್ತು ಸಹಜ ನಡೆಯ ಸಿನಿಮಾ ಕೊನೆಯಲ್ಲಿ ಕೊಂಚ ನಾಟಕೀಯ ಎನ್ನಿಸುತ್ತದೆ. ಬಾಲಕನಿಗೂ ಕಂಸಾಳೆಗೂ ಬಾದರಾಯಣ ಸಂಬಂಧ ಕಲ್ಪಿಸಿರುವುದೂ ಚಿತ್ರಕಥೆಗೆ ಭಾರವೇ ಆಗಿದೆ.

ದೀರ್ಘ ವಿರಾಮದ ನಂತರ ಟಿ.ಎಸ್. ನಾಗಾಭರಣ ನಿರ್ದೇಶಿಸಿರುವ ಚಿತ್ರ ಈ `ಕಂಸಾಳೆ ಕೈಸಾಳೆ~. ಕನ್ನಡದ ಅತ್ಯುತ್ತಮ ಮಕ್ಕಳ ಚಿತ್ರಗಳಲ್ಲಿ ಒಂದಾದ `ಚಿನ್ನಾರಿ ಮುತ್ತ~ ನಿರ್ದೇಶಿಸಿದ್ದ ಭರಣರು ಈಗ ಕಂಸಾಳೆಯ ಮೂಲಕ ಮತ್ತೊಮ್ಮೆ ಮಕ್ಕಳಲೋಕಕ್ಕೆ ಲಗ್ಗೆ ಹಾಕಿದ್ದಾರೆ. ಅದ್ದೂರಿತನಕ್ಕೆ ದುಡ್ಡೇ ಮಾನದಂಡವಾಗಿರುವ ಪ್ರಸಕ್ತ ಸಂದರ್ಭದಲ್ಲಿ, ಸಾಂಸ್ಕೃತಿಕ ಅದ್ದೂರಿತನದ ಪರ್ಯಾಯವಾಗಿ ಭರಣರ `ಕಂಸಾಳೆ~ ಭಿನ್ನ ಎನ್ನಿಸಿಕೊಳ್ಳುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.