ಶುಕ್ರವಾರ, ಮೇ 14, 2021
25 °C

ಚೀನಾಗಿಂತ ಭಾರತವೇಕೆ ಹಿಂದೆ ಬಿದ್ದಿದೆ?

-ಅಮರ್ತ್ಯ ಸೇನ್,(ದ ನ್ಯೂಯಾರ್ಕ್ ಟೈಮ್ಸ) Updated:

ಅಕ್ಷರ ಗಾತ್ರ : | |

ಆಧುನಿಕ ಭಾರತ ಇಂದು ಹಲವು ನೆಲೆಗಳಲ್ಲಿ ಯಶಸ್ಸು ದಾಖಲಿಸಿದೆ. ತಾನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಭಾರತ ಹೇಳಿಕೊಳ್ಳುತ್ತಿರುವುದರಲ್ಲಿ ಹುರುಳಿಲ್ಲದಿಲ್ಲ. ಇಲ್ಲಿನ ಮಾಧ್ಯಮಗಳು ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚು ಸ್ವತಂತ್ರವಾಗಿವೆ ಮತ್ತು ಸ್ಪಂದನಶೀಲವಾಗಿವೆ. ವಿಶ್ವದ ಇತರ ದೇಶಗಳಿಗಿಂತ ಭಾರತೀಯರು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ದಿನಪತ್ರಿಕೆಗಳನ್ನು ಖರೀದಿಸಿ ಓದುತ್ತಾರೆ.ಇಂದಿನ ಆಧುನಿಕ ಭಾರತ, ಸ್ವಾತಂತ್ರ್ಯಪೂರ್ವ ಭಾರತಕ್ಕಿಂತ ತುಂಬಾ ಭಿನ್ನವಾಗಿದೆ. 1947ರಲ್ಲಿ ಭಾರತದಲ್ಲಿ ಒಬ್ಬ ಮನುಷ್ಯನ ಸರಾಸರಿ ಜೀವಿತಾವಧಿ ಕೇವಲ 32 ವರ್ಷ ಆಗಿತ್ತು. ಆದರೆ, ಇಂದು ಆ ಜೀವಿತಾವಧಿ ದ್ವಿಗುಣಗೊಂಡಿದೆ. ಭಾರತೀಯನ ಇಂದಿನ ಜೀವಿತಾವಧಿ 66 ವರ್ಷಕ್ಕೇರಿದೆ. ದೇಶದ ತಲಾ ಆದಾಯ ಐದು ಪಟ್ಟು ಹೆಚ್ಚಾಗಿದೆ.ಮಂದಗತಿಯಲ್ಲಿದ್ದ ದೇಶದ ಆರ್ಥಿಕ ಅಭಿವೃದ್ಧಿಯ ವೇಗವನ್ನು ಆರ್ಥಿಕ ಸುಧಾರಣೆಗಳು ಚುರುಕುಗೊಳಿಸಿ ವಾರ್ಷಿಕ ವೃದ್ಧಿ ದರವನ್ನು ಶೇ 8ಕ್ಕೆ ಏರಿಸಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ವೃದ್ಧಿದರ ಮತ್ತೆ ಇಳಿಮುಖವಾಗಿದೆ.  ವಿಶ್ವದ ಅತಿ ದೊಡ್ಡ ಅರ್ಥವ್ಯವಸ್ಥೆಗಳಲ್ಲಿ ಚೀನಾದ ನಂತರ  ಭಾರತದ ಆರ್ಥಿಕ ಬೆಳವಣಿಗೆ ದರ  ಅನೇಕ ವರ್ಷಗಳ ಕಾಲ ಎರಡರ ಸ್ಥಾನದಲ್ಲೇ ಇದೆ. ಕನಿಷ್ಠ ಶೇಕಡ ಒಂದರಷ್ಟು ಅಂಶದಲ್ಲಿ ನಿರಂತರವಾಗಿ ಭಾರತ ಚೀನಾಗಿಂತ ಹಿಂದುಳಿಯುತ್ತಲೇ ಬಂದಿದೆ.ಆರ್ಥಿಕ ಬೆಳವಣಿಗೆಯಲ್ಲಿ ಚೀನಾಕ್ಕಿಂತ ಭಾರತ ಮುಂದಕ್ಕೆ ಹೋಗಬಹುದು ಎಂಬ ನಿರೀಕ್ಷೆ ಈಗ ದೂರದ್ದಾಗಿದೆ. ಆದರೆ ಆ  ಹೋಲಿಕೆ  ಭಾರತೀಯರನ್ನು ಹೆಚ್ಚು ಕಾಡಬೇಕಿಲ್ಲ. ಭಾರತ ಮತ್ತು ಚೀನಾದ ಮಧ್ಯೆ ಅತಿ ಹೆಚ್ಚಿನ ಅಂತರವಿರುವುದು  ಅಗತ್ಯ ಸಾರ್ವಜನಿಕ ಸೇವೆಗಳಲ್ಲಿ. ಈ ವೈಫಲ್ಯ ಜೀವನ ಮಟ್ಟಗಳನ್ನು  ಕುಂದಿಸುತ್ತದೆ ಹಾಗೂ ಬೆಳವಣಿಗೆಯ  ಗತಿಯನ್ನು ನಿಧಾನ ಮಾಡಿಸುತ್ತದೆ.ಎರಡೂ ರಾಷ್ಟ್ರಗಳಲ್ಲಿ ಅಸಮಾನತೆ ತೀವ್ರವಾಗಿ ಹೆಚ್ಚಿದೆ. ಆದರೆ ತನ್ನ ಜನರ ಜೀವಿತಾವಧಿ ಹೆಚ್ಚಿಸಲು, ಸಾಮಾನ್ಯ ಶಿಕ್ಷಣ ವಿಸ್ತರಿಸಲು ಹಾಗೂ ಆರೋಗ್ಯ ಪಾಲನೆಯಲ್ಲಿ ಭಾರತಕ್ಕಿಂತ ಚೀನಾ ಹೆಚ್ಚು ಕೆಲಸ ಮಾಡಿದೆ.ಪ್ರತಿಷ್ಠಿತರಿಗಾಗಿ ಭಾರತ ಬಗೆಬಗೆಯ ಉತ್ಕೃಷ್ಟ ಶಾಲೆಗಳನ್ನು ಹೊಂದಿದೆ.  ಆದರೆ  7 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಭಾರತೀಯರಲ್ಲಿ  ಐವರು ಗಂಡು ಮಕ್ಕಳಲ್ಲಿ ಒಬ್ಬ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬರು ಅನಕ್ಷರಸ್ತರಾಗಿದ್ದಾರೆ. ಮತ್ತು ಬಹುತೇಕ ಶಾಲೆಗಳಲ್ಲಿ ಕಲಿಸುವಿಕೆ  ಕೆಳಮಟ್ಟದಲ್ಲಿದೆ. ಬಹಳಷ್ಟು ಮಕ್ಕಳು ನಾಲ್ಕು ವರ್ಷಗಳು ಶಾಲೆಯಲ್ಲಿ ಓದಿದ ನಂತರವೂ  20ನ್ನು 5ರಿಂದ ಭಾಗಾಕಾರ ಮಾಡಲಾರರು.ಭಾರತ ವಿಶ್ವದಲ್ಲೇ ಅತಿ ದೊಡ್ಡ ಜೆನರಿಕ್ ಔಷಧಗಳ ಉತ್ಪಾದಕ ರಾಷ್ಟ್ರವಿರಬಹುದು.  ಆದರೆ ಅದರ ಆರೋಗ್ಯ ಪಾಲನಾ ವ್ಯವಸ್ಥೆ ಮಾತ್ರ ಅನಿಯಂತ್ರಿತ  ಗೊಂದಲದ ಗೂಡಾಗಿದೆ.  ಬಡ ಜನರು ಕೆಳ ಮಟ್ಟದ, ಕೆಲವೊಮ್ಮೆ ಶೋಷಣಾತ್ಮಕವಾದ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನು ನೆಚ್ಚಿಕೊಳ್ಳಬೇಕಿದೆ. ಏಕೆಂದರೆ ಸಾಕಷ್ಟು ಒಳ್ಳೆಯದಾಗಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇಲ್ಲ. ಆರೋಗ್ಯ ಪಾಲನೆ ಕ್ಷೇತ್ರದ ಮೇಲೆ ಸರ್ಕಾರದ ವೆಚ್ಚವಾಗಿ  ತನ್ನ ಒಟ್ಟು ದೇಶಿ ಉತ್ಪನ್ನದ ಶೇ 2.7ರಷ್ಟನ್ನು ಚೀನಾ ವ್ಯಯಿಸುತ್ತದೆ. ಆದರೆ ಇದಕ್ಕಾಗಿ ಭಾರತ ನಿಗದಿ ಪಡಿಸಿರುವುದು ಶೇ 1.2. ಏಷ್ಯನ್ ಆರ್ಥಿಕ ಅಭಿವೃದ್ಧಿ ಎಂದು ಪರಿಗಣಿಸಲಾಗುವ  ಉದಾಹರಣೆಗಳಿಂದ ಕಲಿಯದಿರುವುದೇ ಭಾರತದ  ಈ ಕಳಪೆ ಸಾಧನೆಗೆ ಕಾರಣ ಎಂದು ಗುರುತಿಸಬಹುದು.ಮಾನವ ಸಾಮರ್ಥ್ಯದ ತ್ವರಿತ ವಿಸ್ತರಣೆ  ಒಂದು ಗುರಿಯಷ್ಟೇ ಅಲ್ಲ. ತ್ವರಿತ ಬೆಳವಣಿಗೆ ಸಾಧನೆಗೆ ಅಂತರ್ಗತ ಅಂಶ  ಎಂಬುದು ಇಲ್ಲಿ ಮುಖ್ಯ. 1868ರಲ್ಲಿ ಮೇಜಿ ಸಾಮ್ರಾಜ್ಯಶಾಹಿ ಪುನರುತ್ಥಾನದ ನಂತರ,  ಜಪಾನ್ ಈ ವಿಧಾನವನ್ನು ಮೊದಲು ಆರಂಭಿಸಿತು. ಆಗ ಅದು ಕೆಲವೇ ದಶಕಗಳಲ್ಲಿ ಪೂರ್ಣ ಸಾಕ್ಷರ ಸಮಾಜ ನಿರ್ಮಾಣದ ಗುರಿ ಇರಿಸಿಕೊಂಡಿತು. ಆ  ಸುಧಾರಣಾ ಕಾಲದ ನಾಯಕ ಕಿಡೊ ತಕಾಯೊಷಿ  ಹೇಳುವುದು ಹೀಗೆ:  `ನಮ್ಮ ಜನರು  ಇಂದಿನ ಅಮೆರಿಕನ್ನರು ಅಥವಾ ಯೂರೋಪಿಯನ್ನರಿಗಿಂತ  ಭಿನ್ನವಾಗೇನೂ ಇಲ್ಲ.  ಇದು ಶಿಕ್ಷಣ ಅಥವಾ ಶಿಕ್ಷಣ ಇಲ್ಲದಿರುವ ವಿಚಾರ ಅಷ್ಟೇ'.  ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹಣ ಹೂಡಿಕೆಗಳಿಂದ, ಜೊತೆಗೆ ಮಾರುಕಟ್ಟೆ ಜೊತೆ ಸರ್ಕಾರದ ಸಹಭಾಗಿತ್ವದೊಂದಿಗೆ  ಜೀವನ ಗುಣಮಟ್ಟ ಹಾಗೂ ಕಾರ್ಮಿಕ ಉತ್ಪಾದಕತೆಯನ್ನು ಜಪಾನ್ ಹೆಚ್ಚು ಮಾಡಿಕೊಂಡಿತು.ಜಪಾನ್‌ನ ಯುದ್ಧದ ವರ್ಷಗಳ ದುರಂತಗಳ ನಂತರವೂ  ಅದರ ಅಭಿವೃದ್ಧಿ ಪಾಠಗಳು  ಅಜರಾಮರವಾದವು ಹಾಗೂ ಯುದ್ಧಾನಂತರ ಅವಧಿಯಲ್ಲಿ ದಕ್ಷಿಣ ಕೊರಿಯಾ, ತೈವಾನ್, ಸಿಂಗಪುರ ಹಾಗೂ ಪೂರ್ವ ಏಷ್ಯಾದ ಇತರ ರಾಷ್ಟ್ರಗಳಿಗೆ ಇವು  ಅನುಕರಣೀಯ ಮಾದರಿಯಾದವು.  ಮಾವೊ ಯುಗದಲ್ಲಿ ಭೂ ಸುಧಾರಣೆ ಹಾಗೂ ಮೂಲ ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದ ಚೀನಾ  1980ರ ದಶಕದಲ್ಲಿ ಮಾರುಕಟ್ಟೆ ಸುಧಾರಣೆಗಳನ್ನು ಆರಂಭಿಸಿತು.  ಅದರ ಭಾರಿ ಯಶಸ್ಸು ವಿಶ್ವ ಆರ್ಥಿಕತೆಯ ಸ್ವರೂಪವನ್ನೇ ಬದಲಿಸಿತು. ಈ ಪಾಠಗಳಿಗೆ ಭಾರತ ಹೆಚ್ಚಿನ ಗಮನ ನೀಡಲಿಲ್ಲ.ತನ್ನ ಪ್ರಜೆಗಳಿಗೆ ಶಿಕ್ಷಣ  ನೀಡುವಲ್ಲಿ ಹಾಗೂ ಅವರ ಆರೋಗ್ಯ ಸುಧಾರಿಸುವಲ್ಲಿ ಚೀನಾಕ್ಕಿಂತ ಭಾರತದ ನಿರ್ವಹಣೆ ಕೆಟ್ಟದ್ದಾಗಿದೆ ಎಂಬ ವಿಚಾರದಲ್ಲಿ ಒಗಟೇನಾದರೂ  ಇದೆಯೇ?  ಬಹುಶಃ ಈ ಒಗಟಿಗೆ ಉತ್ತರ ನೀಡಲು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಯೂ ಇಲ್ಲ. ಪ್ರಜಾಸತ್ತಾತ್ಮಕ ಭಾಗವಹಿಸುವಿಕೆ, ಮುಕ್ತ ಅಭಿವ್ಯಕ್ತಿ ಹಾಗೂ ಕಾನೂನಿನ ಆಡಳಿತ  ಭಾರತದಲ್ಲಿ ವಾಸ್ತವ ಸತ್ಯಗಳು. ಆದರೆ ಇವು ಚೀನಾದಲ್ಲಿ ಬಹುಪಾಲು ಆಶಯಗಳಷ್ಟೇ. ಸ್ವಾತಂತ್ರ್ಯದ ನಂತರ ಭಾರತ ಕ್ಷಾಮವನ್ನು ಕಂಡಿಲ್ಲ. ಆದರೆ 1958ರಿಂದ 1961ರವರೆಗೆ  ಮಾವೊನ ಆರ್ಥಿಕ ಹಾಗೂ ಸಾಮಾಜಿಕ ಆಂದೋಲನದಲ್ಲಿ (ಗ್ರೇಟ್ ಲೀಪ್ ಫಾರ್ವರ್ಡ್) ಸುಮಾರು 30 ದಶಲಕ್ಷ ಜನರ ಹತ್ಯೆಯಾದ ನಂತರ ಚೀನಾ ಇತಿಹಾಸದಲ್ಲೇ ಭೀಕರವಾದ  ಕ್ಷಾಮವನ್ನೆದುರಿಸಿತ್ತು.  ಹೀಗಿದ್ದೂ ತೀವ್ರ  ಅಪೌಷ್ಟಿಕತೆ,  ಅವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆ ಅಥವಾ ಕೆಲಸ ಮಾಡದ ಶಾಲಾ ವ್ಯವಸ್ಥೆಗಳಂತಹ ನಿರಂತರ ಸಮಸ್ಯೆಗಳ ಪರಿಹಾರಕ್ಕೆ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಬಳಸುವುದೆಂದರೆ  ನಿರಂತರ  ಚರ್ಚೆ, ರಾಜಕೀಯ ತೊಡಗಿಕೊಳ್ಳುವಿಕೆ, ಮಾಧ್ಯಮ ಪ್ರಚಾರ, ಜನರ ಒತ್ತಡ ಬೇಕಾಗುತ್ತದೆ.  ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ , ಇದಕ್ಕಿಂತ ಕಡಿಮೆ ಇರುವುದಿಲ್ಲ.ಚೀನಾದಲ್ಲಿ ನಿರ್ಧಾರ ಕೈಗೊಳ್ಳುವಿಕೆ ಕೆಲಸ ಉನ್ನತ ಹಂತದಲ್ಲಿ ಆಗುತ್ತದೆ.  ಬಹು ಪಕ್ಷದ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಸಂಬಂಧಿಸಿದಂತೆ ಅವರು ಪೂರ್ಣ ವಿರೋಧ ತೋರದಿದ್ದರೂ ಸಂಶಯ ಹೊಂದಿರುವವರು. ಆದರೆ  ಹಸಿವು, ಅನಕ್ಷರತೆ  ಹಾಗೂ ವೈದ್ಯಕೀಯ ನಿರ್ಲಕ್ಷ್ಯ  ಹೋಗಲಾಡಿಸುವುದಕ್ಕೆ ಅವರು ಬಲವಾಗಿ ಬದ್ಧರಾಗಿದ್ದಾರೆ. ಅದು ಅವರ ಯಶಸ್ಸು.ಪ್ರಜಾಪ್ರಭುತ್ವವಲ್ಲದ ವ್ಯವಸ್ಥೆಯಲ್ಲಿ ಅನಿವಾರ್ಯವಾದ  ದುರ್ಬಲತೆಗಳೂ ಇರುತ್ತವೆ.  ತಪ್ಪುಗಳನ್ನು ಇಲ್ಲಿ ಸರಿ ಪಡಿಸುವುದು ಕಷ್ಟ.  ವಿರೋಧ ಅಪಾಯಕಾರಿ.  ಅನ್ಯಾಯಕ್ಕೊಳಗಾದವರಿಗೆ ಪರಿಹಾರ ಇರುವುದು ಕಷ್ಟ. ಒಂದೇ ಮಗು ಎಂಬಂತಹ ನೀತಿಗಳೂ ಭಾರಿ ಕಠಿಣವಾಗಿರುತ್ತವೆ. ಹೀಗಿದ್ದೂ ಮಾನವ ಸಾಮರ್ಥ್ಯ ವಿಸ್ತರಿಸುವ ಮೂಲಕ ಅಭಿವೃದ್ಧಿಯನ್ನು ಹೆಚ್ಚಳ ಮಾಡುವ ಮೂಲ ವಿಧಾನವನ್ನು  ಹೆಚ್ಚಿನ ದೃಢ ನಿರ್ಧಾರ ಹಾಗೂ ಕೌಶಲದಿಂದ ಚೀನಾದ ಇಂದಿನ ನಾಯಕರು ಬಳಸಿದ್ದಾರೆ.ಭಾರತದಲ್ಲಿನ ಶಕ್ತಿಗುಂದಿಸುವ ಅಸಮಾನತೆಯನ್ನು  ಹೋಗಲಾಡಿಸುವ ವಿಚಾರ ಸಾಮಾಜಿಕ ನ್ಯಾಯಕ್ಕಷ್ಟೇ ಸಂಬಂಧಿಸಿಲ್ಲ. ಏಷ್ಯಾದ ಆರ್ಥಿಕ ಅಭಿವೃದ್ಧಿಯ ದೊಡ್ಡ ಪಾಠವನ್ನು  ಚೀನಾ ಅರ್ಥಮಾಡಿಕೊಂಡಿದೆ. ವಿಶೇಷವಾಗಿ ಸಮಾಜೋಆರ್ಥಿಕ  ವ್ಯವಸ್ಥೆಯಲ್ಲಿ  ಅತಿಕೆಳಮಟ್ಟದಲ್ಲಿರುವ ಜನರ ಜೀವನ ಸುಧಾರಣೆಯಿಂದ ಬರುವ ಆರ್ಥಿಕ ಲಾಭಗಳನ್ನು ಚೀನಾ ಅರಿತುಕೊಂಡಿದೆ. ಭಾರತಕ್ಕೆ ಇದು ಮನವರಿಕೆಯಾಗಿಲ್ಲ.  ರಫ್ತಿನಿಂದ ಭಾರತದ ಬೆಳವಣಿಗೆ ಹಾಗೂ ಅದರ ಗಳಿಕೆ  ಅತಿ ಕಡಿಮೆ ವಲಯಗಳನ್ನು  ಎಂದರೆ  ಮಾಹಿತಿ ತಂತ್ರಜ್ಞಾನ,  ಔಷಧ ಉದ್ಯಮ ಹಾಗೂ ವಿಶೇಷ  ಯಂತ್ರೋಪಕರಣ ಭಾಗಗಳಂತಹ ವಲಯಗಳನ್ನು ಅವಲಂಬಿಸಿದೆ.  ಇವುಗಳು ಅತಿ ಹೆಚ್ಚಿನ ತರಬೇತಿ  ಪಡೆದ  ಸುಶಿಕ್ಷಿತ ವರ್ಗಗಳನ್ನು ಅವಲಂಬಿಸಿದೆ.   ಚೀನಾದ ತಯಾರಿಕಾ ಸಾಮರ್ಥ್ಯದ ಬಾಹುಳ್ಯ,  ತಂತ್ರಜ್ಞಾನದ ವ್ಯಾಪಕ ಬಳಕೆ ಹಾಗೂ ಉತ್ತಮ ಗುಣಮಟ್ಟ ನಿಯಂತ್ರಣದೊಂದಿಗೆ  ಬಹುತೇಕ ಎಲ್ಲಾ ರೀತಿಯ ಗ್ಯಾಜೆಟ್‌ಗಳನ್ನೂ ಉತ್ಪಾದಿಸುವ ಸಾಮರ್ಥ್ಯಕ್ಕೆ ಸರಿಸಾಟಿಯಾಗಲು  ಭಾರತಕ್ಕೆ  ಒಳ್ಳೆಯ ಶಿಕ್ಷಣ ಪಡೆದ ಆರೋಗ್ಯಕರ ಕಾರ್ಮಿಕ ಶಕ್ತಿ ಸಮಾಜದ ಎಲ್ಲಾ ವಲಯಗಳಲ್ಲೂ ಅಗತ್ಯ. ಅಸಮಾನತೆ ಹಾಗೂ ಅದು  ತರುವ ಹಾನಿಕಾರಕ ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಹಾಗೂ ಸಾರ್ವಜನಿಕ ಚರ್ಚೆ ಅಗತ್ಯ. ಆರ್ಥಿಕ ಬೆಳವಣಿಗೆಗೂ ಇದು ಬೀರುವ ಮಾರಕ ಪರಿಣಾಮಗಳ ಕುರಿತು ಅರಿವು ಮೂಡಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.