ಬುಧವಾರ, ಜೂನ್ 23, 2021
27 °C

ಚುಂಚಘಟ್ಟದಲ್ಲಿ ಇಂದು ಕರಗೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿ ಹುಣ್ಣಿಮೆ ಬಂತೆಂದರೆ ಬೆಂಗಳೂರಿನ ಹತ್ತಾರು ಕಡೆ ಕರಗದ ಸಂಭ್ರಮ. ಧರ್ಮರಾಯನ ಕರಗಕ್ಕೆ ಬೆಂಗಳೂರು ಕರಗ ಎಂಬ ಹೆಗ್ಗಳಿಕೆ. ಅದೇ ಹೊತ್ತಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ವಿಶೇಷವಾಗಿ ರೇಣುಕಾ ಯಲ್ಲಮ್ಮ ದೇವಸ್ಥಾನಗಳಲ್ಲಿ ಹಸಿ ಕರಗ, ಹೂವಿನ ಕರಗ ಜಾತ್ರೆಯೋಪಾದಿಯಲ್ಲಿ ನಡೆಯುತ್ತದೆ.

 

ಬೆಂಗಳೂರಿನ ಮೂಲನಿವಾಸಿಗಳೆಂದೇ ಗುರುತಿಸಿಕೊಂಡಿರುವ ತಿಗಳ ಜನಾಂಗದವರ ಅತಿ ಸಂಭ್ರಮದ ಹಬ್ಬವಾದ ಕರಗ ಈಗ ಎಲ್ಲಾ ಜಾತಿ ಧರ್ಮಗಳವರನ್ನೂ ಒಳಗೊಳ್ಳುತ್ತಾ ಒಂದರ್ಥದಲ್ಲಿ ಊರಹಬ್ಬವಾಗಿ ಮಾರ್ಪಟ್ಟಿರುವುದು ವಿಶೇಷ.ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ನಿಂದ ಎರಡು ಕಿ.ಮೀ. ದೂರದಲ್ಲಿರುವ ಚುಂಚಘಟ್ಟದ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ 46ನೇ ವರ್ಷದ ಕರಗೋತ್ಸವಕ್ಕೆ ಕ್ಷಣಗಣನೆ ನಡೆದಿದೆ.

 

ಕಳೆದೊಂದು ವಾರದಿಂದಲೂ ಪೊಂಗಲ್ ಸೇವೆ, ಅಗ್ನಿಕೊಂಡ, ದೀಪೋತ್ಸವ, ಹಸಿ ಕರಗ ಇತ್ಯಾದಿ ಪೂರ್ವಭಾವಿ ಉತ್ಸವಗಳು ನೆರವೇರಿದ್ದು, ಉಪರಿ ಹುಣ್ಣಿಮೆಯ ರಾತ್ರಿಯಾದ ಮಾ. 7 (ಬುಧವಾರ) ರಾತ್ರಿ 1.30ರಿಂದ ವಿಜೃಂಭಣೆಯ ಹೂವಿನ ಕರಗ. ಚುಂಚಘಟ್ಟದ ವಿವಿಧ ಪ್ರದೇಶಗಳಲ್ಲಿ ಸವಾರಿ ಮಾಡುವ ಕರಗವು, ಸೂರ್ಯೋದಯದ ವೇಳೆ ದೇವಸ್ಥಾನಕ್ಕೆ ಮರಳಲಿದೆ.

 

ಸುತ್ತಮುತ್ತಲ ಬಡಾವಣೆಗಳ ಧಾರ್ಮಿಕ ಶ್ರದ್ಧಾಳುಗಳು ಕರಗಕ್ಕೆ ಪೂಜೆ ನೆರವೇರಿಸುತ್ತಾರೆ. ಗುರುವಾರ (ಮಾ. 8) ಉತ್ಸವ ಮುಕ್ತಾಯವಾಗಲಿದ್ದು, 16 ಹೂವಿನ ಪಲ್ಲಕ್ಕಿಗಳ ಮೆರವಣಿಗೆ ವಿಶೇಷ ಆಕರ್ಷಣೆಯಾಗಿರುತ್ತದೆ. ಮಧ್ಯಾಹ್ನ 3ರಿಂದ ಉಟ್ಲಕಾಯಿ ಒಡೆಯುವ ಸೇವೆ ಹಾಗೂ ವಸಂತೋತ್ಸವ ನೆರವೇರಲಿದೆ ಎಂದು ಕರಗ ಹೊರುವ ದ್ರೌಪದಿ ಪಾತ್ರಿ ಎಂ.ಸಿ. ನಾಗರಾಜು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.