ಭಾನುವಾರ, ಜೂನ್ 20, 2021
20 °C
ಕಾರ್ಯನಿರ್ವಾಹಕ ದಂಡಾಧಿಕಾರಿಗೆ ವಿಶೇಷ ಭದ್ರತೆ

ಚುನಾವಣಾ ವೆಚ್ಚ ವೀಕ್ಷಕರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಏಪ್ರಿಲ್‌ 17ರಂದು ನಡೆಯ­ಲಿರುವ ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಕರ್ತವ್ಯಕ್ಕೆ ನಿಯುಕ್ತಗೊಂಡಿರುವ ಫ್ಲೈಯಿಂಗ್ ವಿಚಕ್ಷಣಾ ತಂಡ ಹಾಗೂ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳಿಗೆ ವಿಶೇಷ ಭದ್ರತೆ ಒದಗಿಸಿ, ಶಸ್ತ್ರಸಜ್ಜಿತ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗು­ವುದು ಎಂದು ಜಿಲ್ಲಾ ಚುನಾವಣಾ­ಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು.ಕ್ರೀಡಾ ಇಲಾಖೆಯ ಸಭಾಂಗಣ­ದಲ್ಲಿ ಶುಕ್ರವಾರ  ಅಧಿಕಾರಿಗಳಿಗೆ ನಡೆದ ಚುನಾವಣಾ ತರಬೇತಿ ಕಾರ್ಯಾಗಾರ­ದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಶಾಂತಿ ಕದಡುವ 250 ಜನರಿಂದ ಐಪಿಸಿ ಸೆಕ್ಷನ್‌ 107ರ ಅಡಿ ಈಗಾಗಲೇ ಶಾಂತಿಗೆ  ಭಂಗವಾಗದಂತೆ ಸಹಕರಿಸುವುದಾಗಿ ಬಾಂಡ್‌ ಬರೆಸಿಕೊಳ್ಳಲಾಗಿದೆ ಎಂದರು.ರೌಡಿ ಶೀಟರ್‌ನಲ್ಲಿ ಇರುವವರ ವಿವರವನ್ನು ಸಿದ್ಧಪಡಿಸಿ ಮುಂಜಾಗ್ರತಾ ಕ್ರಮ  ಕೈಗೊಳ್ಳಲಾಗುತ್ತಿದೆ. ಇವರ ವಿವರವನ್ನು ಫ್ಲೈಯಿಂಗ್ ವಿಚಕ್ಷಣಾ ತಂಡಗಳಿಗೆ ರವಾನಿಸಲಾಗುವುದು. ಈಗಾಗಲೇ 6 ಮಂದಿಯನ್ನು  ಕಾರಾ­ಗೃಹ­ದಲ್ಲಿ ಇರಿಸಲಾಗಿದೆ.  ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳ­ಲಾಗಿದೆ. ಅತ್ಯಂತ ಸೂಕ್ಷ್ಮ ಮತಗಟ್ಟೆ­ಗಳಿಗೆ ಅಳವಡಿಸುವ ವೆಬ್ ಕ್ಯಾಮೆರಾ­ಗಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿ ಮತಗಟ್ಟೆಗಳಲ್ಲಿ ನಡೆಯುವ ಪ್ರಕ್ರಿಯೆ­ಗಳನ್ನು ಪರಿಶೀಲಿಸ­ಲಾಗುವುದು ಎಂದು ಅವರು ಹೇಳಿದರು.ಮತದಾರರಿಗೆ ಜಿಲ್ಲಾಡಳಿತದಿಂದ ಮತದಾರರ  ಗುರುತಿನ  ಚೀಟಿ ಹಾಗೂ ವಾಹನ ಪಾಸ್‌ಗಳಿಗೆ  ಹಾಲೋಗ್ರಾಂ ಅಳವಡಿಸಿ ವಿತರಿಸಲಾ­ಗುವುದು. ಸಂಬಂಧಿಸಿದ ಎಲ್ಲರೂ ನಿಗಾ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾ ಮಟ್ಟದಲ್ಲಿ ಎಂಸಿಸಿ ತಂಡವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದರು.ಪ್ರತಿ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಎಂಸಿಸಿ ತಂಡ, ಹೋಬಳಿ ಮಟ್ಟ ಹಾಗೂ ಗ್ರಾಮ ಮಟ್ಟದಲ್ಲೂ ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ­ರಿಗೆ ಸಿಮ್‌ ಕಾರ್ಡ್‌ಗಳನ್ನು ನೀಡಲಾಗುವುದು. ಚುನಾವಣಾ ಅಕ್ರಮ ಚಟುವಟಿಕೆಗಳು ಕಂಡು ಬಂದ ಕೂಡಲೇ ಗ್ರೂಪ್ ಎಸ್ಎಂಎಸ್ ಮೂಲಕ ಮೇಲಾಧಿಕಾರಿಗಳಿಗೆ ತಿಳಿಸಿದ ಕೂಡಲೇ  ಫ್ಲೈಯಿಂಗ್  ವಿಚಕ್ಷಣಾ ತಂಡ ಹಾಗೂ ಎಂಸಿಸಿ ತಂಡವು ಮುಂದಿನ ಕ್ರಮ ಕೈಗೊಳ್ಳಲಿದೆ. ಗೌಪ್ಯ­ವಾಗಿ ಮಾಹಿತಿಯನ್ನು ನೀಡ­ಬೇಕು. ಹೋಬಳಿ ಮಟ್ಟದ ಅಧಿಕಾರಿ­ಗಳಿಗೂ ವಾಹನವನ್ನು ಒದಗಿಸಲಾಗುವುದು. ಕಡಿಮೆ ಮತದಾನ  ಆಗಿರುವ ಕಡೆ ಮತದಾರ­ರಲ್ಲಿ ಜಾಗೃತಿ ಮೂಡಿಸ­ಬೇಕು ಎಂದು ಅವರು ತಿಳಿಸಿದರು.ಮಾಧ್ಯಮಗಳಲ್ಲಿ ಪ್ರಕಟವಾಗ­ಬಹು­ದಾದ ‘ಕಾಸಿಗಾಗಿ ಸುದ್ದಿ’, ‘ಜಾಹೀರಾತು’ಗಳ  ಪರಿಶೀಲನೆ­ಗಾಗಿ ಎಂಸಿಎಂಸಿ ತಂಡ, ಸಂಚಾರಿ ವಿಚಕ್ಷಣಾ ತಂಡ, ಸೆಕ್ಟರ್ ಅಧಿಕಾರಿ­ಗಳು, ಅಬಕಾರಿ ತಂಡ, ಪೊಲೀಸ್  ಅಧಿಕಾರಿ­ಗಳ ತಂಡ,  ಖರ್ಚು ವೆಚ್ಚಕ್ಕಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಚುನಾವಣಾ ವೆಚ್ಚದ ಪರಿಶೀಲನಾ ತಂಡ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಿ,  ಅವರು ಮಾಡ­ಬೇಕಾದ ಕರ್ತವ್ಯ­ಗಳ ಕುರಿತ ಆದೇಶ­ವನ್ನೂ ಈಗಾಗಲೇ ಕಳುಹಿಸ­ಲಾಗಿದೆ. ನಿಯೋಜಿತ­ರೆಲ್ಲರೂ ಪ್ರಾಮಾಣಿಕ­­ವಾಗಿ ಕಾರ್ಯ ನಿರ್ವಹಿಸ­ಬೇಕು ಎಂದು ಬಿಸ್ವಾಸ್ ಹೇಳಿದರು.ಆಂಧ್ರದ ಗಡಿ ಪ್ರದೇಶಗಳಲ್ಲಿ 9 ಸೇರಿದಂತೆ ಜಿಲ್ಲೆಯಾದ್ಯಂತ 23 ಚೆಕ್ ಪೋಸ್ಟ್‌ ಸ್ಥಾಪಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ಸಾರ್ವಜನಿಕರು, ರಾಜಕೀಯ ಪಕ್ಷದವರು ದೂರು ನೀಡಬಹುದು. 48 ಅಧಿಕಾರಿಗಳನ್ನು ಕಾರ್ಯ ನಿರ್ವಾಹಕ ದಂಡಾಧಿಕಾರಿ­ಗಳನ್ನಾಗಿ ನೇಮಿಸಲಾಗುವುದು. ಇವರಿಗೆ ದಂಡಾಧಿಕಾರಿಯ ಅಧಿಕಾರ­ವನ್ನೂ ನೀಡಲಾಗಿರುತ್ತದೆ. ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದಿ­ರುವುದರ ಬಗ್ಗೆ ಸುಳಿವು ಬಂದರೆ ಅಂತಹವರ ಮನೆಗೆ ಯಾವುದೇ  ಅನುಮತಿ ಇಲ್ಲದೇ ಪ್ರವೇಶಿಸಿ ಜಪ್ತಿ ಮಾಡಬಹುದು ಎಂದು ವಿವರಿಸಿದರು.ವಿಧಾನಸಭೆ ಕ್ಷೇತ್ರ ಮಟ್ಟದ ತಂಡ­ಗಳಿಗೆ ಬೆಂಬಲಿತ ತಂಡ ನೇಮಿಸಲಾಗು­ವುದು. ಈ ತಂಡ ದಿನದ ಕಾರ್ಯಕ್ರಮ­ಗಳ ವರದಿಯನ್ನು ನೀಡಬೇಕು. ಪ್ರಚಾರ ಸಭೆ, ಕಾರ್ಯಕ್ರಮಗಳ ಬಗ್ಗೆ ಗ್ರಾಮ ಮಟ್ಟದ ತಂಡವು ವಿಡಿಯೋ ಚಿತ್ರೀಕರಣ ನಡೆಸಬೇಕು. ಅಭ್ಯರ್ಥಿ, ಬೆಂಬಲಿಗರು ವಾಹನ ಪರವಾನಗಿ ಪಡೆದು ಬಳಕೆ ಮಾಡಬೇಕು. ವಾಹನ­ಗಳಿಗೆ ಮೈಕ್‌ ಅಳವಡಿಸುವಂತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನು­ಮತಿ ಪಡೆಯಬೇಕು. ಸಾರ್ವ­ಜನಿಕ ಸ್ಥಳಗಳಲ್ಲಿ ಮೈಕ್ ಬಳಕೆ ಮಾಡಲು ಪೊಲೀಸ್ ಇಲಾಖೆಯ ಅನು­ಮತಿ ಪಡೆಯಬೇಕು ಎಂದರು.ನೀತಿ ಸಂಹಿತೆ ಉಲ್ಲಂಘನೆ, ದೇವ­ಸ್ಥಾನಗಳಲ್ಲಿ ಸಭೆ, ಸಮಾರಂಭ ಸೇರಿ­ದಂತೆ ಯಾವುದೇ ಘಟನೆಗಳನ್ನು ಮುಂಚಿತ­ವಾಗಿ  ತಿಳಿಸಬೇಕು. ಸಾಧನೆ­ ಕುರಿತು ಜಾಹೀರಾತು ನೀಡಬಾರದು. ಗೋಡೆ ಬರಹ, ಮನೆ ಬಾಗಿಲುಗಳ ಮೇಲೆ  ಪಕ್ಷಗಳು ಬರೆದ ಸೂಕ್ಷ್ಮ ಬರಹ­ಗಳನ್ನು ಅಳಿಸಬೇಕು. ವಸತಿ ನಿಲಯ, ಅಂಗನವಾಡಿ, ಗೋದಾಮು ಪರಿಶೀಲಿ­ಸಬೇಕು. ಸರ್ಕಾರಿ  ಕಚೇರಿ, ಸರ್ಕಾರದ ಅನು­ದಾನ­­ದಿಂದ ನಿರ್ಮಿ­ಸಿದ ಸಮು­ದಾಯ ಭವನ­ಗಳಲ್ಲಿ, ವಿಮ್ಸ್ ಮತ್ತು ವಿಶ್ವ­ವಿದ್ಯಾಲಯದ ಆವರಣ­ದಲ್ಲಿ  ರಾಜ­ಕೀಯ, ಪ್ರಚಾರ ಸಭೆ­ಗಳನ್ನು ನಡೆಸ­­ಬಾರದು.ದೇವಸ್ಥಾನ ಆವರಣ­ದಲ್ಲಿ ರಾಜಕೀಯ ಸಭೆ ನಡೆಸಿದ್ದು ರುಜು­ವಾತಾದರೆ 10 ವರ್ಷಗಳ ಅವಧಿ ಕಾರಾಗೃಹ ವಾಸ ಅನುಭವಿ­ಸ­ಬೇಕಾ­ಗುತ್ತದೆ. ನಿಯೋಜಿತ ಎಲ್ಲ ಅಧಿಕಾರಿ/ ಸಿಬ್ಬಂದಿ   ಕಾರ್ಯ­ಕ್ಷೇತ್ರ­ದಲ್ಲೇ ಇರ­ಬೇಕು. ಅನುಮತಿ ಪಡೆಯದೇ ಕ್ಷೇತ್ರ­ದಿಂದ ಹೊರಗೆ ಪ್ರಯಾಣಿಸಿದರೆ ಶಿಸ್ತು­ಕ್ರಮ ಜರುಗಿಸ­ಲಾ­ಗುವುದು ಎಂದು ಎಚ್ಚರಿಸಿದರು.ಬಳ್ಳಾರಿ ಕ್ಷೇತ್ರ ವ್ಯಾಪ್ತಿಯ ಹೂವಿನ­ಹಡಗಲಿ, ಹಗರಿಬೊಮ್ಮನ­ಹಳ್ಳಿ, ಸಂಡೂರು, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಗಳಿಗೆ ಮನೋಹರ್ (ಮೊಬೈಲ್ ದೂರವಾಣಿ ಸಂಖ್ಯೆ 94813– 01259) ಹಾಗೂ ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಸುಂದರ­ರಾಜ್ (94813– 01258) ಅವರನ್ನು ಆಯೋಗವು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಅವರು ಘೋಷಿಸಿದರು.ಲೋಕಸಭೆ ಚುನಾವಣೆ ಹಿನ್ನೆಲೆ­ಯಲ್ಲಿ ಅಭ್ಯರ್ಥಿಗಳು ಹಾಗೂ ಸಂಬಂಧಿ­ಸಿದ ಎಲ್ಲ ತಂಡಗಳು ಕಡ್ಡಾಯವಾಗಿ ಖರ್ಚು, ವೆಚ್ಚದ ವಿವರವನ್ನು ವೆಚ್ಚ ನಿರ್ವ­ಹಣಾ ಸಮಿತಿಗೆ ನೀಡಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕ­ರಾದ ಸುಂದರ್‌ರಾಜ್‌ ಮತ್ತು ಮನೋಹರ್ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕ­ಟೇಶ್, ಜಿ.ಪಂ. ಸಿಇಒ ಮಹಮ್ಮದ್ ಸಲಾ­ವುದ್ದೀನ್,  ಸಹಾಯಕ ಆಯುಕ್ತ­ರಾದ ಅನಿರುದ್ಧ್ ಶ್ರವಣ್, ಸುನೀಲ­ಕುಮಾರ್,  ಪ್ರೊಬೆಷನರಿ ಐಎಎಸ್ ಅಧಿ­ಕಾರಿ ನಿತೀಶ್ ಪಾಟೀಲ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.