ಮಂಗಳವಾರ, ಏಪ್ರಿಲ್ 20, 2021
31 °C

ಚುನಾವಣೆಗೆ ರಾಹುಲ್ ಗಾಂಧಿ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿ ನೇತೃತ್ವದಲ್ಲಿ `ಚುನಾವಣಾ ಸಮನ್ವಯ ಸಮಿತಿ~ ಮತ್ತು ಮೂರು ಉಪ ಸಮಿತಿಗಳನ್ನು ರಚಿಸಿದ್ದಾರೆ.ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಈಚೆಗೆ ನಡೆದ ಹಿರಿಯ ಮುಖಂಡರ `ಚಿಂತನ ಮಂಥನ ಸಭೆ~ಯಲ್ಲಿ ಅವರು ಈ ಸಮಿತಿಗಳನ್ನು ರಚಿಸುವ ಘೋಷಣೆ ಮಾಡಿದ್ದರು.ಲೋಕಸಭೆ ಅವಧಿ ಪೂರ್ಣಗೊಳ್ಳಲು ಇನ್ನೂ 18 ತಿಂಗಳು ಉಳಿದಿರುವಾಗಲೇ ಸಮಿತಿಗಳನ್ನು ರಚಿಸಿರುವುದರಿಂದ ಅವಧಿಗೆ ಮೊದಲೇ ಚುನಾವಣೆಗೆ ನಡೆಯುವುದೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ.ಆದರೆ, ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಸಮಿತಿಗಳನ್ನು ರಚಿಸಲಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. 2ಜಿ, ಕಲ್ಲಿದ್ದಲು, ಭೂ ಹಗರಣಗಳ ಸುಳಿಯಲ್ಲಿ ಸಿಕ್ಕಿ ಕಳೆಗುಂದಿರುವ ಕಾಂಗ್ರೆಸ್‌ಗೆ ಶಕ್ತಿ ತುಂಬಲು ಸೋನಿಯಾ ಅಗತ್ಯವಾದ ಎಲ್ಲ ಕಸರತ್ತುಗಳನ್ನು ನಡೆಸುತ್ತಿದ್ದಾರೆ.ರಾಹುಲ್ ನೇತೃತ್ವದ ಸಮಿತಿಯಲ್ಲಿ ಸೋನಿಯಾ ರಾಜೀಯ ಕಾರ್ಯದರ್ಶಿ  ಅಹಮದ್ ಪಟೇಲ್, ವಕ್ತಾರ  ಜನಾರ್ದನ ದ್ವಿವೇದಿ, ಪ್ರಧಾನ ಕಾರ್ಯದರ್ಶಿಗಳಾದ ದಿಗ್ವಿಜಯ್ ಸಿಂಗ್, ಕರ್ನಾಟಕದ ಉಸ್ತುವಾರಿ ಹೊತ್ತಿರುವ ಮಧುಸೂದನ ಮಿಸ್ತ್ರಿ, ಹಿರಿಯ ಸಚಿವ ಜೈರಾಂ ರಮೇಶ್ ಇದ್ದಾರೆ.ಚುನಾವಣಾ ಪೂರ್ವ ಹೊಂದಾಣಿಕೆ ಉಪ ಸಮಿತಿಗೆ ಸಚಿವರಾದ ಎ.ಕೆ. ಆಂಟನಿ, ಎಂ. ವೀರಪ್ಪ ಮೊಯಿಲಿ, ಮಾಜಿ ಸಚಿವ ಮುಕುಲ್ ವಾಸ್ನಿಕ್, ಸುರೇಶ್ ಪಚೌರಿ, ಜಿತೇಂದ್ರ ಸಿಂಗ್ ಮತ್ತು ಮೋಹನ್ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಪ್ರಣಾಳಿಕೆ ಸಮಿತಿಗೆ ಆಂಟನಿ, ಪಿ. ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಆನಂದ ಶರ್ಮ, ಸಲ್ಮಾನ್ ಖುರ್ಷಿದ್ ಅವರ ಜತೆ ಪಕ್ಷದ ಪ್ರಮುಖರಾದ ಸಂದೀಪ್ ದೀಕ್ಷಿತ್, ಅಜಿತ್ ಜೋಗಿ, ರೇಣುಕಾ ಚೌಧರಿ, ಪಿ.ಎಲ್. ಪುನಿಯಾ, ಮೋಹನ್ ಗೋಪಾಲ್ (ವಿಶೇಷ ಆಹ್ವಾನಿತರು) ನೇಮಕಗೊಂಡಿದ್ದಾರೆ.ಸಂಪರ್ಕ ಹಾಗೂ ಪ್ರಚಾರ ಸಮಿತಿಗೆ ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ, ಸಚಿವರಾದ ಮನಿಷ್ ತಿವಾರಿ, ಜ್ಯೋತಿರಾಧಿತ್ಯ ಸಿಂಧಿಯಾ, ರಾಜೀವ್ ಶುಕ್ಲ, ನಾಯಕರಾದ ದೀಪೇಂದರ್ ಹೂಡಾ,  ಭಕ್ತ ಚರಣ್ ದಾಸ್ ಅವರನ್ನು ನೇಮಿಸಲಾಗಿದೆ.ರಾಜ್ಯದವರಾದ ವೀರಪ್ಪ ಮೊಯಿಲಿ ಹಾಗೂ ಜೈರಾಂ ರಮೇಶ್ ಅವರಿಗೆ ಮಾತ್ರ ರಾಹುಲ್ ತಂಡದಲ್ಲಿ ಅವಕಾಶ ಸಿಕ್ಕಿದೆ. ಸಚಿವ  ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಎಸ್.ಎಂ. ಕೃಷ್ಣ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್ ಮತ್ತು ಬಿ.ಕೆ. ಹರಿಪ್ರಸಾದ್ ಸೇರಿದಂತೆ ಯಾರಿಗೂ ಚುನಾವಣಾ ಸಮಿತಿಗಳಲ್ಲಿ ಸ್ಥಾನ ಸಿಕ್ಕಿಲ್ಲ.ಕೇಂದ್ರ ಸಂಪುಟ ಪುನರ‌್ರಚನೆ ಸಮಯದಲ್ಲಿ ಸಚಿವ ಸ್ಥಾನ ತೆರವು ಮಾಡಿದವರನ್ನು ಪಕ್ಷದ ಕೆಲಸಗಳಿಗೆ ಬಳಸಿಕೊಳ್ಳುವುದಾಗಿ ಹೇಳಲಾಗಿತ್ತು. ವಿದೇಶಾಂಗ ಖಾತೆಗೆ ರಾಜೀನಾಮೆ ನೀಡಿದ ಕೃಷ್ಣ ಅವರಿಗೆ ಪಕ್ಷದೊಳಗೆ ಸೂಕ್ತ ಸ್ಥಾನಮಾನ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆ ಕೈಗೂಡಿಲ್ಲ. ಈಚೆಗೆ ಅವರೇ ತಮ್ಮ ಮುಂದಿನ ದಾರಿ ಸ್ಪಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದರು.ಬಡ್ತಿ: ಮನಮೋಹನ್‌ಸಿಂಗ್ ಸಂಪುಟದಲ್ಲಿ ಮೊದಲಿಗೆ ಕಾನೂನು ಸಚಿವರಾಗಿದ್ದ ಮೊಯಿಲಿ ಅವರಿಗೆ ಖಾತೆ ಬದಲಾವಣೆ ಮಾಡಿ ಕಂಪೆನಿ ವ್ಯವಹಾರಗಳ ಹೊಣೆ ನೀಡಲಾಗಿತ್ತು. ಸಂಪುಟ ಪುನರ‌್ರಚನೆ ಬಳಿಕ ಜೈಪಾಲ್ ರೆಡ್ಡಿ ಅವರಿಂದ ತೆರವಾದ ಪ್ರಮುಖ ಪೆಟ್ರೋಲಿಯಂ ಖಾತೆ ಜವಾಬ್ದಾರಿ ಕೊಡಲಾಗಿದೆ. ಈಗ ರಾಹುಲ್ ತಂಡದಲ್ಲೂ ಕಾಣಿಸಿಕೊಂಡಿರುವುದು ಅವರಿಗೆ ಸಿಕ್ಕ ಬಡ್ತಿ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.