ಮಂಗಳವಾರ, ಮೇ 24, 2022
30 °C

ಚುರುಕುಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ರಸ್ತೆ ವಿಸ್ತರಣೆ ಬಳಿಕ ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದ ರಸ್ತೆಅಭಿವೃದ್ಧಿ ಕಾಮಗಾರಿ ಕಳೆದ ಒಂದು ವಾರದಿಂದ ಚುರುಕುಗೊಂಡಿದೆ.ಶಿವಾಜಿ ವೃತ್ತದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನ ವರೆಗೆ ರೂ. 75ಲಕ್ಷ, ಮತ್ತು ಬಸವೇಶ್ವರ ವೃತ್ತದಿಂದ ಹಳೆ ರಾಷ್ಟ್ರೀಯ ಹೆದ್ದಾರಿ ವರೆಗಿನ ರೂ. 50ಲಕ್ಷ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜಶೇಖರ ಪಾಟೀಲ ಅವರು ಕಳೆದ ಒಂದುವರೆ ತಿಂಗಳ ಹಿಂದೆ ಚಾಲನೆ ನೀಡಿದ್ದರು.ತೀವ್ರ ಗತಿಯಲ್ಲಿ ಸಾಗಬೇಕಿದ್ದ ಕಾಮಗಾರಿ ಕಾರಣಾಂತರ ಒಂದು ತಿಂಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಶ್ರೀವೀರಭದ್ರೇಶ್ವರರು ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಮತ್ತು ಆಂಧ್ರ ಮೊದಲಾದ ರಾಜ್ಯಗಳ ಭಕ್ತರ ಆರಾಧ್ಯ ದೈವ ಆಗಿದ್ದ ಹಿನ್ನೆಲೆಯಲ್ಲಿ ಶ್ರಾವಣ ಮಾಸ ಅವಧಿಯಲ್ಲಿ ದರ್ಶನ ಸಂಬಂಧ ಆಗಮಿಸಿದ್ದ ಅನೇಕ ಭಕ್ತರು ಮಾತ್ರ ಅಲ್ಲದೇ ರಸ್ತೆಮಧ್ಯೆ ನೀರುತುಂಬಿ ನಡೆಯಲು ಅಸಾಧ್ಯ ಆಗುತ್ತಿರುವ ಕುರಿತು ಪತ್ರಕರ್ತರ ಎದುರು ಅಸಮಾಧಾನ ವ್ಯಕ್ತಪಡಿಸಿದ್ದರು.ಕಳೆದ ಒಂದುವಾರದಿಂದ ರಸ್ತೆ ಸಮತಲಗೊಳಿಸುವುದು ಮೊದಲಾದ ಕಾಮಗಾರಿಗಳು ಚುರುಕುಗೊಂಡಿವೆ. ಆ ಕಾರಣಕ್ಕಾಗಿ ರಸ್ತೆಗಳು ಈಗಲಾದರೂ ಸುಧಾರಣೆಗೊಂಡು ವ್ಯಾಪಾರಸ್ಥರು ಮೊದಲಾಗಿ ವಿವಿಧ ಕಾರಣಗಳಿಂದ ಆಗಮಿಸುವ ಗ್ರಾಮೀಣ ಜನತೆ ನೆಮ್ಮದಿ ನಿಟ್ಟುಸಿರು ಬಿಡುತ್ತಿದ್ದಾರೆ. ಈ ಮಧ್ಯೆ ಶುಕ್ರವಾರ ಸಂಜೆ ಕಾಮಗಾರಿ ಕೈಗೊಳ್ಳುತ್ತಿರುವ ಗುತ್ತಿರಗೆದಾರ ಬೆಟ್ಟದ್ ಅವರನ್ನು `ಪ್ರಜಾವಾಣಿ~ ಪ್ರತಿನಿಧಿ ಸಂಪರ್ಕಿಸಿದಾಗ- ಪ್ರತಿಕ್ರಿಯಿಸಿದ್ದು ಹೀಗೆ- 15ದಿನಗಳಲ್ಲಿ ಕಾಮಗಾರಿ ಒಂದು ಹಂತಕ್ಕೆ ತಂದು  ನಿಲ್ಲಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾಗಿ ತಿಳಿಸಿದರು.ಬಲ್ಲ ಮೂಲಗಳ ಕಾಮಗಾರಿ ಕೈಗೊಳ್ಳುವುದಕ್ಕೆ ಅಡಚಣೆ ಆಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲಿನ ವಿವಿಧ ಕಟ್ಟಡಗಳನ್ನು ತೆವುಗೊಳಿಸಿದ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಸಾಧ್ಯವಾದಷ್ಟು ಶೀಘ್ರ ಚುರುಕುಗೊಳಿಸುವ ಸಾಧ್ಯತೆಗಳಿವೆ ಎನ್ನುವುದು ಉನ್ನತ ಮೂಲಗಳ ಅಂಬೋಣ.ಒಟ್ಟಾರೆ ರಸ್ತೆ ಕಾಮಗಾರಿಯನ್ನು ಗುಣಮಟ್ಟದ ಜೊತೆಗೆ ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆ. ಈ ಮಧ್ಯೆ ಕಾಮಗಾರಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಸಮ್ಮುಖದಲ್ಲೇ ನಡೆಯುವ ಕಾರಣ ಕಾಮಗಾರಿ ಸೂಕ್ಷ್ಮ ಗಮನಿಸುವಂತೆ ಶಾಸಕ ಪಾಟೀಲ ಸಾರ್ವಜನಿಕರಿಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.