ಚೆಂಡು ಹೂ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ

ಶನಿವಾರ, ಮೇ 25, 2019
22 °C

ಚೆಂಡು ಹೂ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ

Published:
Updated:

ಶ್ರೀನಿವಾಸಪುರ: ಈಗ ಬೆಲೆ ಕುಸಿತದ ಸರದಿ ಚೆಂಡು ಹೂವಿನದು. ತಾಲ್ಲೂಕಿನ ಚೆಂಡು ಹೂ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಒಳ್ಳೆ ಬೆಲೆ ಬರುತ್ತದೆ ಎಂದು ನಂಬಿ ತಾಲ್ಲೂಕಿನ ರೈತರು ಹೆಚ್ಚಿನ ವಿಸ್ತೀರ್ಣದಲ್ಲಿ ಚೆಂಡು ಹೂವನ್ನು ಬೆಳೆದಿದ್ದಾರೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಒಂದು ಕೆಜಿ ಚೆಂಡು ಹೂ ರೂ.70 ರವರೆಗೆ ಮಾರಾಟವಾಗಿ ಗ್ರಾಹಕರ ಹುಬ್ಬೇರಿಸಿತ್ತು. ಆದರೆ ಈಗ ಬೇಡಿಕೆಯಿಲ್ಲದೇ  ತೋಟ ಹಾಗೂ ಮಾರುಕಟ್ಟೆಯಲ್ಲಿ ಕೊಳೆಯುತ್ತಿದೆ. ಈಗ ಶುಭ ಕಾರ್ಯಗಳು ನಡೆಯುವುದಿಲ್ಲ. ಇದರಿಂದ ಹೂವಿಗೆ ಸಹಜವಾಗಿಯೇ ಬೇಡಿಕೆ ಕುಸಿಯುತ್ತದೆ. ಕಳೆದ ವರ್ಷ ಚೆಂಡು ಹೂವಿಗೆ ಒಳ್ಳೆ ಬೆಳೆ ಬಂದ ಪರಿಣಾಮ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ಇದು ಬೆಲೆ ಕುಸಿತಕ್ಕೆ ಕಾರಣ ಎಂದು ಹೂವಿನ ವ್ಯಾಪಾರಿಗಳು ಹೇಳುತ್ತಾರೆ.ಗಣೇಶನ ಹಬ್ಬದ ಸಂದರ್ಭದಲ್ಲಿ ಚೆಂಡು ಹೂ ಉತ್ತಮ ಬೆಲೆ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಅದು ಮುಗಿದನಂತರ ಬೆಲೆ ಬಿದ್ದು ಹೋಯಿತು. ಈಗ ಕೆಜಿಯೊಂದಕ್ಕೆ ರೂ.5 ಸಹ ಸಿಗುತ್ತಿಲ್ಲ. ಕೆಲವೊಕ್ಕೆ ಕೊಳ್ಳುವವರಿಲ್ಲದೆ ಮಾರುಕಟ್ಟೆಯಲ್ಲಿ ಎಸೆದು ಬರಬೇಕಾಗಿದೆ ಎಂಬುದು ಬೆಳೆಗಾರರ ಅಳಲು.ಈ ಮಧ್ಯೆ ಸಾಮಾನ್ಯವಾಗಿ ಎಲ್ಲ ತರಕಾರಿಗಳ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಇಳಿದ ಬೆಲೆಯ ಲಾಭ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry