1
ನಿರಾಶ್ರಿತ ಪ್ರವಾಹ ಪೀಡಿತರ ತಗಡು ಸೆಡ್ಡುಗಳ ತಲೆಯ ಮೇಲಿಂದ ಹೆಲಿಕ್ಯಾಪ್ಟರೊಂದು ಹಾರಿ ಹೊರಟಿತ್ತು. ಮಾಸಿದ ಕೊಳೆ ಅಂಗಿ ತೊಟ್ಟ ಅರೆಬೆತ್ತಲೆ ಮಕ್ಕಳು ಕೆಸರೆರಚಾಟದಲ್ಲಿ ತೊಡಗಿದ್ದರು. ಮಧ್ಯಾಹ್ನದ ಬಿರುಬಿಸಿಲಿನ ಝಳ ತಾಗಿ ಕಾದ ತಗಡು ಕೋಣೆಯಲ್ಲಿ ಬೇಯುತ್ತ ಕಸ ಮುಸುರೆ ಊಟಾದಿ ಕರ್ಮಗಳಲ್ಲಿ ಹೆಂಗಸರು ಮಗ್ನರು.

ರಟ್ಟೇಲಿ ಬಲವುಳ್ಳೋರು ಕೂಲಿ-ನಾಲೀಗೆ ಹೋಗಿದ್ದರೆ, ವೃದ್ಧರು-ಕೈಲಾಗದ ಸಮೂಹ ಚಿಲುಮೆ, ಬೀಡಿ ಚುಟ್ಟಾ ಜಡಿಯುತ್ತ ನಿರಾಳ ದಮ್ಮೆಳೆವಲ್ಲಿ ಲೀನರು. ಮಳೆಯಲ್ಲಿ ಮನೆ ಕಳಕೊಳ್ಳದೇ ಇರುವವರೂ ಸಹ ಕೆಲವರು ಬಿದ್ದ ಮನೆಗಳೆದುರು ನಿಂತು ಫೋಟೋ ತೆಗೆಸಿಕೊಂಡು ಪರಿಹಾರದ ಅರ್ಜಿಗೆ ಸಿದ್ಧತೆ ನಡೆಸುತ್ತಿದ್ದರು.

ತಗಡುಗಳ ಸಾಲಲ್ಲಿ ಜಂಗು ಹಿಡಿದ ಬ್ಲೇಡಿನಂತಿದ್ದ ಬದುಕನ್ನು ಕಂಡು ಕಾಣಿಸಲು ಸುದ್ದಿವಾಹಿನಿಯ ಹುಡುಗರಿಬ್ಬರು ತಮ್ಮ ಸರಂಜಾಮಿನೊಟ್ಟಿಗೆ ಬರುವುದಕ್ಕೂ ಆ ಹೆಲಿಕ್ಯಾಪ್ಟರ್ ತಗಡು ಸೂರಿನ ಮೇಲಿಂದ ಹಾಯುವುದಕ್ಕೂ ಸರಿಹೋದ ಕ್ಷಣದಲ್ಲಿ ಅಜ್ಜಿಯೊಂದು ಮುಗಿಲಿಗೆ ಮೊಗವೊಡ್ಡಿ ಕಣ್ಣು ಕಿರಿದಾಗಿಸಿ ಬಾಯ್ತೆರೆದು ಬೆರಗಿಂದ ಹಣೆಗೆ ಕೈಯಿಟ್ಟು ನೋಡುತ್ತಿದ್ದಳು.

ಆ ಬೊಚ್ಚುಬಾಯಿ ಅಜ್ಜಿಗೆ ಸುದ್ದಿಯವ ಮೈಕಿಡಿದು ಅಂದ,
‘ಅಜ್ಜಿ, ಅದೇನು ಇಷ್ಟು ಕುತೂಹಲದಿಂದ ನೋಡಾಕತ್ತಿ?’
‘ಯಪ್ಪ, ಮನಿ ಕಟ್ಟಸಿಕೊಡ್ತೀನಿ ಅಂದೋರು ಹಕ್ಕಿ ಹಂಗ ಈ ಕಬ್ಬಿಣ ಹಕ್ಕ್ಯಾಗ ಕೂತ ಬರಾಕತ್ತಾರೇನೋ ಅಂತ ನೋಡತಿದ್ನಿ!’
‘ಅವರೆಲ್ಲ ಇಲ್ಲಿಗಿ ಬರಾಕತ್ತಿಲ್ಲ... ರೆಸಾರ್ಟ್ ಪ್ರವಾಸ ಮಾಡಿ ತಿರುಗಿ ಹೊಂಟಾರ,.. ಬೆಂಗಳೂರಾಗ ಮತ ಹಾಕಾಕ’...
ಅಜ್ಜಿ ತಟ್ಟನೆ ಅಂದಳು,
‘ಅಯ್ಯ, ಅವರೆಲ್ಲಿ ಮತ ಹಾಕೋರು. ಮತ ಹಾಕತಕ್ಕೋರು ನಾವ ಅಲ್ಲೇನ? ಈ ಮಳಿ ಮಾರ ಕರಿಕಾಲವಾಗಿ ಬರೋದಕ್ಕ ಪೈಲೆ ನಮ್ಮೂರ ಹೊಳಿ-ಹಳ್ಳದ ದಂಡಿಮ್ಯಾಲ ನಳನಳಿಸತಿತ್ತು. ಆಗ ಮತ ಕೇಳಲಾಕ ಇವರೆಲ್ಲ ಮನಿ ಮನಿಗಿ ಬಂದಿದ್ದರು... ಅದ್ಯಾನೋ ತಟ್ಟೆಯೊಳಗ ನಾ ಮುಂದು ತಾ ಮುಂದು ಅನ್ನೋರ ಹಂಗ ಐನೂರೋ ಸಾವಿರೋ ಹಸರ ಕೆಂಪು ನೋಟು ಹಾಕತಿದ್ರು. ನಮ್ಮ ಬಾಯೊಳಗೂ ನೀರೂರಿತು. ಆಸಿಂದ ಸೊಸೆರೀಗಿ ಅವರಿಗೆ ಬೆಳಗಾಕ ಹೇಳಿದ್ನಿ... ಹುಂ! ಬಿತ್ತು ನೋಡು ತಟ್ಟೆಯೊಳಗ ಹಸರಗೆಂದು ನೋಟು!’.
ಊರಗಲ ಮಾರಿ ಮಾಡಿದ ಸುಕ್ಕುಗಳು ಮಿರಮಿರಗೊಂಡವು. ಮುದಿಗಣ್ಣೂ ಮಿಂಚಿತು.

ಸುದ್ದಿಯಂವ ಅಜ್ಜಿಗೆ ಬ್ರೇಕಿಂಗ್ ನ್ಯೂಜ್ ಹೇಳಿದ,
‘ಈಗವರು ಸರಕಾರಕ್ಕ ಬೆಂಬಲದ ಮತ ಹಾಕಲು, ಅಂದರ ಬರೇ ಕೈ ಎತ್ತಲು ತಲಾ ಒಬ್ಬರು ಇಪ್ಪತ್ತೈದು ಕೋಟಿ ತಗೊಂಡಾರಂತ!’.
ಅಜ್ಜಿ ತನ್ನ ಆಯುಷ್ಯದಲ್ಲಿ ‘ಕೋಟಿ’ ಎಂಬ ಶಬ್ದವನ್ನೆಂದೂ ಕೇಳಿಯೆ ಇರಲಿಲ್ಲ.

2
ಕುಖ್ಯಾತ ಕೈದಿಯೊಬ್ಬ ಮಧ್ಯರಾತ್ರಿಯಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಪಲಾಯನಗೈದ. ಓಡೋಡಿ ಏದುಸಿರು ಬಿಡುತ್ತ ಆ ಮಹಾನಗರದ ಸರ್ಕಲ್ಲಿನ ಗಾಂಧಿ ಪುತ್ಥಳಿಯ ಕಟ್ಟೆ ಮೇಲೆ ಕುಳಿತ ಮತ್ತು ತನ್ನನ್ನು ಸಾವರಿಸಿಕೊಂಡ. ತಲೆಯೆತ್ತಿ ಬಾಪೂನನ್ನು ದಿಟ್ಟಿಸಿದ. ಆತನಿಗೆ ನಿಷ್ಕಾಮ ರೂಪಿ ಮಹಾತ್ಮ ಧ್ಯಾನಮಗ್ನನಂತೆ ಕಂಡ. ಆ ಕೈದಿ ಹೊರಳಿ ಸರ್ಕಲ್ಲಿನ ಸುತ್ತಲೂ ತದೇಕನಾಗಿ ಕಣ್ಣಾಡಿಸಿದ. ರಾವಣನ ತಲೆಗಳಂತೆ ನೂರಾರು ಬಹುಪರಾಕಿ ಭಟ್ಟಂಗಿಗಳ ತಲೆಗಳಿದ್ದವು.

ಆ ಬೃಹತ್ ಫ್ಲೆಕ್ಸು-ಹೋರ್ಡಿಂಗ್ಗಳಲ್ಲಿ ಮಂತ್ರಿ ಮಹೋದಯರ, ಶಾಸಕರ, ಸಂಸದರ ವಿವಿಧ ಭಂಗಿಯ ಪೋಜುಗಳಿದ್ದವು. ಒಬ್ಬ ಹಣೆ ಗಂಟಿಕ್ಕಿದ್ದರೆ, ಮತ್ತೊಬ್ಬ ನಗುಮೊಗದವ, ಮಗದೊಬ್ಬ ಕಣ್ ಕಿಸಿದಂಗೆ ಕಾಣುತ್ತಿದ್ದರು.

ಜನಕಲ್ಯಾಣದ ಮಂತ್ರಘೋಷ, ದೇಶ-ರಾಜ್ಯಗಳ ಪ್ರಗತಿಯ ಸಂಕೇತದ ಸ್ಲೋ-ಗನ್ನುಗಳಿದ್ದವು. ತುಟ್ಟಿ ಮೊಬೈಲ್ ಹಿಡಿದು ದೇಶ ರಕ್ಷಣೆಗೆ ಧಾವಿಸುತ್ತ ಎದೆಯುಬ್ಬಿಸಿ ಬಂದಂಥ ಗಟ್ಟಿಹೆಜ್ಜೆಯ ಭಂಗಿಗಳಿದ್ದವು. ಆ ಕೈದಿ ಒಮ್ಮೆ ಚೌಕ ಮಧ್ಯದ ಒಂಟಿ ಬಾಪೂನನ್ನು ಮೊಗೆಮೊಗೆದು ಕಣ್ಣೊಳಗೆ ತುಂಬಿಕೊಂಡ. ಮತ್ತೊಮ್ಮೆ ಸುತ್ತಲೂ ರಾರಾಜಿಸುತ್ತಿರುವ ನಾಯಕರು ಮತ್ತು ಭಟ್ಟಂಗಿ ಗುಂಪನ್ನು ಸೂಕ್ಷ್ಮವಾಗಿ ನಿರುಕಿಸಿದ.

ತಕ್ಷಣ ಎದ್ದುನಿಂತ. ಬಾಪೂ ಎದುರಿಗೆ ನಿಂತು ಕೈಮುಗಿದ ಮತ್ತು ಅಂದ,
‘ಬಾಪೂ ನಾನು ಹೊರಗೆ ಬಂದು ತಪ್ಪು ಮಾಡಿದೆ. ನನಗಿಲ್ಲಿ ಉಸಿರುಗಟ್ಟುತ್ತಿದೆ. ಕ್ಷಮಿಸು. ನಾನು ವಾಪಸ್ಸು ಜೈಲಿಗೆ ಹೋಗ್ತಿನಿ’.
ಆ ಕಗ್ಗತ್ತಲಲ್ಲೂ ಆತನಿಗೆ ಕಾರಾಗೃಹ ದಾರಿ ಬೆಳಗಿದಂತೆ ಕಂಡಿತು.

3
ಪೇಜ್ ಥ್ರೀನಲ್ಲಿ ಕಂಗೊಳಿಸುವ ರೋಗಗ್ರಸ್ತರು ಜನರ ಉದಾರತನದ ಲಾಭಕ್ಕೆ ಲಗ್ಗೆಯಿಡುತ್ತಾರೆ. ಜನರ ಉದಾರತನವು ಒಂದು ‘ಇಜಂ’ ಆಗಿ ಇಂದಿನ ವ್ಯವಸ್ಥೆಗೆ ಪೂರಕವಾಗಿ ನಿಂತಿದೆ. ರಾಜಕಾರಣಿಗಳ ಸಂಕುಚಿತ ವರ್ತನೆ, ಅಪಾರ ಬಡತನ, ಜನಸಂಖ್ಯೆ ಮತ್ತು ನಿುಮಿತ ಸಾಧನ ಸಂಪತ್ತನ್ನು ಅರಸುತ್ತ ಸಾಗುವವರು ಇಲ್ಲಿ ಹೇರಳ. ಹಾಗೆಯೇ ಆ ಬಗೆಯ ಸಂಪನ್ನ ನೆಲದಲ್ಲಿ ಉದಾರತನದ ಜಾತಿವ್ಯವಸ್ಥೆ-ಸಮಾಜವಾದ ಪದ್ಧತಿ ಮೊಳಕೆ ಕಾಣುತ್ತಿಲ್ಲ ಎಂಬ ಹಳಹಳಿಕೆ. ಅದಕ್ಕಿಂತ ಹೊಸಗನಸಿನ ಸ್ವಾರ್ಥತ್ಯಾಗದ ಕರ್ತವ್ಯಪಾಲನೆಯ ಸಮಾಜವಾದದ ಅಗತ್ಯ ಜರೂರಾಗಿದೆ.

ತಮ್ಮ ಜೇಬು ಭದ್ರಪಡಿಸುವವರ ಮಧ್ಯೆ ಹೋರಾಟವು ಒದ್ದೆಯಾದ ಮದ್ದುಗುಂಡಾಗಿದೆ. ಕಾಣುವುದಕ್ಕೆ ಸಿಡಿಯೋ ಮದ್ದು- ಆದರೆ ಸಿಡಿತದ ಶಕ್ತಿಶೂನ್ಯ. ಗ್ರಾಮ ಮತ್ತು ಕೃಷಿ ವ್ಯವಸಾಯ ಪ್ರಧಾನತೆ ಬದುಕಿನಲ್ಲಿ ಕರಗಿ ಮಾಯವಾಗುತ್ತಿದೆ.

ಜನರ ಅಭ್ಯುದಯ ಮತ್ತು ಅಮೂಲಾಗ್ರ ಬದಲಾವಣೆಗೆ ಮಲ್ಟಿನ್ಯಾಶನಲ್ ಕಂಪನಿಗಳ ಅಪಾಯಕಾರಿ ಆಮಿಷಗಳು ಭ್ರಮೆ ಹುಟ್ಟಿಸುತ್ತಿವೆ. ಈ ಭ್ರಮೆ ಹುಟ್ಟಿಸುವವರ ವಿರುದ್ಧ ಹೋರಾಡುವವರು ಯಾರು ಅಂತ ಯೋಚಿಸುತ್ತ ಬಡರೈತ ಬಾಪುಸಾಬ ಎಮ್ಮೆಲ್ಲೆ ಸಾಹೇಬರ ಮನೆ ಮುಂದೆ ನಿಂತಿದ್ದಾನೆ. ಆತನ ಸರದಿಗಾಗಿ ಕಾಯುತ್ತ ಕಣ್ತುಂಬ ಆಸೆ ಹೊತ್ತು ನಿಂತಿದ್ದಾನೆ.

ಎಮ್ಮೆಲ್ಲೆ ಸಾಹೇಬರ ಕೋಣೆ ನಿಶ್ಯಬ್ದವಾಗಿದೆ. ಯಾರೋ ಸತ್ತ ಹಾಗೆ. ಯಾರೋ ಏನು? ವ್ಯವಸ್ಥೆಯೆಂಬುದೇ ನೆಗೆದು ಬಿದ್ದಂಗಿದೆ. ಎಮ್ಮೆಲ್ಲೆ ಸಾಹೇಬರ ಮುಖ ಫೈಲು ನೋಡಿ ಧಗಧಗ ಉರಿಯತೊಡಗುತ್ತದೆ. ಅವರೊಬ್ಬರೇ ತಮ್ಮ ‘ಅಧಿ’ಕಾರದ ಕುರ್ಚಿಯಲ್ಲಿ ವಿರಾಜಮಾನರಾಗಿದ್ದಾರೆ. ಕಣ್ಣಗಲಿಸಿ ಫೈಲು ತಿರುವುತ್ತಿದ್ದಾರೆ.

ಮೂವರು ಅಧಿಕಾರಿಗಳು ಕೈಯಲ್ಲಿ ಫೈಲು-ಪೇಪರು ದಾಖಲೆಗಳ ಹಿಡಿದು ನಿಂತಿದ್ದಾರೆ. ಅವರ ಮುಖ ಆತಂಕದಿಂದ ಕೂಡಿದೆ. ಅವರು ಹಾಗೆ ನಿಂತೇ ಇರಲು ಕಾರಣ, ಸಾಹೇಬರ ಕೋಣೆಯಲ್ಲಿ ಯಾವಾಗಲು ಒಂದೇ ಕುರ್ಚಿಯಿರುತ್ತದೆ. ಭರ್ತಿ ಅಧಿಕಾರಯುತ ಕುರ್ಚಿ. ಒಮ್ಮೆಲೆ ಮುಖ ಮೇಲೆತ್ತಿ ಸಿಡಿದರು.

‘ಹೇಳಿದ ದಂಧೆ ನಿನ್ನಿಂದಾಗಿಲ್ಲ. ಎಂಥವ, ನಾಲಾಯಕ್?’ ಗುಡುಗಿದರು.
ಆ ಅಧಿಕಾರಿ- ‘ಸಾಹೇಬರ ಅದಕ್ಕ ಪರಿಸರವಾದಿಗಳ ವಿರೋಧ ಐತಿ... ಟಿವ್ಯಾಗೆಲ್ಲ ಬಂದದ’ ಎಂದು ಅಲವತ್ತುಕೊಂಡ.
‘ಅವರೇನು ನಾಕ ದಿನ ಒದರಾಡತಾರು. ಆಮ್ಯಾಲ ಬೀಜ ಜಜ್ಜಿಕೊಂಡ ಹೋರಿ ಹಂಗ ಮೆತ್ತಗಾಗತಾರು...’ ದುಸುಮುಸುಗುಟ್ಟಿದರು.

‘ಅದು ಬ್ರಿಟೀಷ್ ಕಾಲದಾಗಿನ ಫಾರ್ಮ ಐತಿ... ಆ ಕೆರೆ ಸುತ್ತ ವಿದೇಶದ ಹಕ್ಕಿಗಳು ಬರತಾವು... ವಿಶಿಷ್ಟ ಸಸ್ಯ ಮತ್ತು ಜೀವ ಸಂಕುಲಕ್ಕ ಧಕ್ಕೆ ಆಗತೇತಿ. ಅಲ್ಲಿ ಜನಾನೂ ತಕರಾರ ತೆಗೆದಾರು ಸಾಹೇಬರ’ ಎಂದು ಇನ್ನೊಬ್ಬ ಅಧಿಕಾರಿ ಪುರಾವೆಗಳನ್ನು ಕೊಡಲೆತ್ನಿಸಿದ.

‘ಆತು... ಎಲ್ಲ ತಣ್ಣಗಾತು. ಇಂಥ ಒಣ ಸಬೂಬ ಹೇಳಿ ನನ್ನ ಮಸ್ತಕ ಕೆಡಿಸಬ್ಯಾಡ್ರಿ...! ಮಾತು ಕೊಟ್ಟಿಂದದ... ಏನ ಹೇಳಲಿ?’ ಎಂದು ಫೈಲನ್ನು ಝಾಡಿಸಿ ಅವರತ್ತ ಬೀಸಿ- ‘ಹೆಂಗ ಮಾಡ್ತಿರೋ ಗೊತ್ತಿಲ್ಲ... ದಂಧೆ ಆಗಬೇಕಷ್ಟ. ಹುಂ, ನಡೀರಿ... ತೊಲಗಿರಿ... ಕೆಲಸ ಆಗದ ಮಕಾ ತೋರಿಸಬ್ಯಾಡ್ರಿ...’- ಕ್ರೋಧಿತನಾಗಿ ಕುರ್ಚಿಯಲ್ಲಿ ಚಡಪಡಿಸುವನು.ಅಧಿಕಾರಿಗಳು ಬೆವರೊರೆಸಿಕೊಳ್ಳುತ್ತ ನಿರ್ಗಮಿಸುವರು.

ಬಾಪುಸಾಬ ತನ್ನ ಸರದಿ ಬಂತೆನ್ನುವಂತೆ ಒಳನುಗ್ಗುವನು. ಅಷ್ಟರಲ್ಲಿ ಮಾಧ್ಯಮದವನೊಬ್ಬ ಧಾವಿಸಿದಂತೆ ಬಂದು ‘ಪಾಯ ಲಾಗೋ ಅಣ್ಣಾರ, ಆರಾಮದೀರಿ?’ ಎಂದು ಕಾಲಿಗೆ ಎರಗಿ ವಿಧೇಯನಂತೆ ಭಾವ ಅಭಿವ್ಯಕ್ತಿಸುತ್ತ ನಿಲ್ಲುವನು. ಒಳನುಗ್ಗಿದ ಬಾಪುಸಾಬಗೆ ತುಸು ಅಡಚಣೆಯಾಗುವುದು.

‘ನನ್ನ ಆರಾಮ ಹಾಳುಗೆಡವು. ನಮ್ಮ ಪಾರ್ಟಿ ಮನಸ್ಯಾಂದು ಭಾಳ ತೋರಿಸಾಕತ್ತೇರಿ... ನಾವೇನ ಇಲ್ಲಿ ಉದ್ದು ಹುರ್ಯಾಕತ್ತೇ!’ ಎಂದು ಕಿರಿದಾದ ಕಣ್ಣನ್ನು ಅಗಲಿಸಿ ಕೌತುಕದಿ ಕೇಳುವನು.
‘ಹಂಗೇನಿಲ್ಲ ಸಾಹೇಬರ, ಪ್ರವಾಹ ಪೀಡಿತರ ಪರಿಹಾರವನ್ನ ತಾವ ಜಾಸ್ತಿ ಹಂಚೇರಿ ಅಂತ ತೋರಿಸೇವ ಅಲ್ರಿ...’
‘ದಿಖಲಾತಾ ಹುಂ, ದಿಲಾತಾ ಹುಂ, ಅನ್ನೋ ತರ ಮಾಡೇರಿ’, ತನ್ನ ನಿಲುವನ್ನ ಸಮರ್ಥಿಸಿಕೊಳ್ಳುವರು. ಇನ್ನು ತಡೆದು ಫಾಯದೆ ಇಲ್ಲಂತ ತಿಳಿದು ಬಾಪುಸಾಬ ‘ಸಾಹೇಬರ ನನ್ನ ಹೊಲ ಉಳಿಸಿರಿ...’ ಎಂದು ಗೋಗರೆಯುತ್ತ ಕಾಲಿಗೆ ಅಡ್ಡ ಬೀಳುವನು.

ಅನಿರೀಕ್ಷಿತ ಬಂದೆರಗಿದ ಗೋಗರೆತದ ಆಘಾತಕ್ಕೀಡಾದ ಎಮ್ಮೆಲ್ಲೆ ಸಾಹೇಬರು ಕೊಂಚ ದಂಗಾದರು. ಮಾಧ್ಯಮದವ ‘ಒಂದು ಒಳ್ಳೆ ಸ್ಟೋರಿ ಮಿಸ್ಸಾಯತಲ್ಲ’ ಅಂತ ಮನದೊಳಗೆ ಪೇಚಾಡಿದ.
‘ಏಯ್ ಏಳ್ ಏಳು... ಇದ್ಯಾನಿದು ಹಿಂಗ!’, ಎಮ್ಮೆಲ್ಲೆ ಕಾಲುಗಳನ್ನು ಬಿಡಿಸಿಕೊಂಡರು. ಬಾಪುಸಾಬ ಮುಖ ಮೇಲೆತ್ತುವನು.

‘ಅರೆ, ಬಾಪ್ಯಾ ಏನಲೆ? ಅಲ್ಲೋ ನಿನಗ ಹೇಳೇತಿ ಅಲ್ಲ! ಪರಿಹಾರ ಲಕ್ಷಲಕ್ಷ ಸಿಗತದ ಅಂತ. ಅದಲ್ಲದ ನಿನ್ನ ಮಗನಿಗಿ ಫ್ಯಾಕ್ಟರ್ಯಾಗ ನೌಕರಿ ಕೊಡಿಸತದ ಅಲ್ಲ?’ ತುಟಿಮೇಲಿನ ಸಾಂತ್ವನ ನುಡಿಗಳು.
‘ಸಾಹೇಬರ ಆ ಹೊಲ ನನ್ನ ಜೀಂವಾ ಆಗೇತಿರಿ... ಅದಿಲ್ಲದ ನಾ ಬದುಕಾಕ ಸಾಧ್ಯುಲ್ಲ. ಹಿರಹಿರೇರ ಕಾಲದ ಆ ಜಮೀನಿನ್ಯಆಗ ನನ್ನ ಹಿರೇರ ಆತ್ಮಗಳಿದಾವರಿ ಸಾಹೇಬರ’ ಎಂದು ಗಳಗಳಿಸಿ ಕೇಳುವನು.
‘ಎಂಥ ಆತ್ಮಾನೋ?’- ಎಮ್ಮೆಲ್ಲೆ ಅಂದ.

‘ಸಾಹೇಬರ ನಮ್ಮ ಸತ್ತು ಹೋದ ಹಿರೇರ ಥಡಿಗಳು, ಎಲುವು ಚೂರು ತುಂಬಿದ ಮಡಕೆಗಳು ಆ ಹೊಲದಾಗ ಅದಾವು. ಪರಂಪರಾಗತ ಅಲ್ಲಿ ಮೂಲ್ಯಾಗ ಹುಗೀತಾ ಬಂದೇವಿ. ಈ ರಿವಾಜ ಪೀಳಿಗಿ ಪೀಳಿಗಿಗೆ ನಡೀತಾ ಹೋಗೋದರಿ... ಅದಕ್ಕ ನಮ್ಮ ಹಿರಿ ತಲಿಗಳಿಂದ ಯಾರು ಮಾರಿಲ್ಲ. ನಿಮ್ಮ ಕಾಲಿಗಿ ಬಿಳತೇನಿ... ಹೆಂಗಾರ ಮಾಡಿರಿ ಸಾಹೇಬರ ಉಳಿಸಿಕೊಡಿರಿ...’. ಮತ್ತೊಮ್ಮೆ ಬಾಪು ಎಮ್ಮಲ್ಲೆಯವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವನು.

‘ಏಯ್ ಬಿಡೋ ಬಾಪೂ... ಇವನಾಪ್ಪನ ಕಾಲನ ಹಿಡಿಕೋತಿಯಲ್ಲೊ?’ ಎನ್ನುತ್ತ ಕಾಲು ಬಿಡಿಸಿಕೊಳ್ಳುವರು. ಮಾಧ್ಯಮದವನತ್ತ ಹೊರಳಿ “ಓಹೋ ಈಗ ನೆನಪಾತು. ಇಂವದ ಸುದ್ದಿ ಅಲ್ಲ... ‘ಡಿ.ಸಿ. ಕಚೇರಿ ಮುಂದ ಹರತಾಳ ಕೂತ ಆಧುನಿಕ ಬಾಪೂ’ ಅಂತ ನೀವ ಜಡದದ್ದ ಜಡಿದದ್ದು. ನಿಮಗ ಹೇಳ್ತೀನಿ... ನೀವಂತು ಇಲಿ ಹೋದರ ಹುಲಿ ಹೋಯಿತಂತ ಇಪ್ಪತ್ನಾಲ್ಕು ತಾಸೂ ಕಟೀತೀರಿ ಅಪ”.

ಕಿರುನಗೆ ಬೀರಿ ‘ಅದು ನಮ್ಮ ದಂಧೇರಿ... ಆದರ ಈ ಸುದ್ದಿ ರಾಜ್ಯದ ತುಂಬ ಚರ್ಚಾ ಮಾಡಿತು. ಎಷ್ಟೋ ಬುದ್ಧಿಜೀವಿಗಳು, ಸಾಹಿತಿ, ಕಲಾವಿದರು ಪ್ರತಿಭಟಿಸಿದರು’. ಮಾಧ್ಯಮದವ ಹೇಳಿದ. ಎಮ್ಮೆಲ್ಲೆಯವರ ಮೊಗವು ತುಸು ಕಪ್ಪಾಯಿತು.

ವಿಚಿತ್ರ ರೇಗು ಮತ್ತು ಕಸಿವಿಸಿ ತುಂಬಿಕೊಂಡ ಎಮ್ಮೆಲ್ಲೆಯವರು,‘ಬಾಪೂ ನಿನ್ನ ವಿಷಯಾನ ಮುಖ್ಯಮಂತ್ರಿಗಳ ತನಕ ತಗೊಂಡು ಹೋಗೇನಿ... ಅವರು ಏನೂ ಮಾಡೋದಕ್ಕ ಬರೋದಿಲ್ಲಂತ ಕಡ್ಡಿ ಮುರದಂಗ ಹೇಳಿದರು. ಈಗ ನಿನ್ನ ಸುತ್ತಲಿನ ರೈತರೆಲ್ಲ ತಮ್ಮ ಜಮೀನು ಕೊಟ್ಟು ರಗಡ ರೊಕ್ಕ ತಗೊಂಡಾರು. ನಿಂದೊಬ್ಬನದ ಹೊಲ ‘ಕಾಲಾಗ ನಟ್ಟಿದ ಮುಳ್ಳು’ ಆಗೇತಿ. ಕಾಲಾಗ ನಟ್ಟಿದ ಮುಳ್ಳನ್ನ ಹಂಗ ಇಟಗೊಂಡರೇನಾಗತದ ಹೇಳು? ಕಾಲು ನಂಜ ತುಂಬಿಕೋತದ... ಕೊಳಿತದ... ನಂಜಾದ ಕಾಲನ್ನ ಒಮ್ಮಿ ಕತ್ತರಿಸಿ ಚೆಲ್ಲಬೇಕಾಗತದ ಅಷ್ಟ ತಿಳಕೊ’- ಅವನ ಬದುಕಿನ ದಿಕ್ಸೂಚಿಗಳನ್ನೇ ಎದುರು ಹಿಡಿದರು.

ಬೆಕ್ಕಿನ ಬಾಯಿಗೆ ತುತ್ತಾಗೋ ಮುಂಚೆ ವಿಲಿವಿಲಿ ಒದ್ದಾಡೋ ಇಲಿ ಮರಿಯಂತೆ ಒದ್ದಾಡುತ ಇರೋ ಬಾಪು- ‘ನೀವ ಹಿಂಗ ಹೇಳಿದರ ಹೆಂಗ? ನನಗ ಬೇರೆ ದಂಧೆ ಗೊತ್ತಿಲ್ಲರಿ. ಭಾವನೆಗಳನ್ನ ಒಂದು ವ್ಯಾಳೆ ಕೊಂದು ಬದುಕಬೋದು, ಆದರ ಆತ್ಮಾನ ಕೊಂದ ಹೆಂಗ ಬದುಕಲಿ? ನನ್ನ ಮಗಾನು ಭಾಳ ಕಲಿತಿಲ್ಲ. ಮೆಟ್ರಿಕ್ ನಾಪಾಸ ಆಗ್ಯಾನ’ ಹೇಳಿದ.
‘ನಿನ್ನ ಮಗನಿಗಿ ಸಿಪಾಯಿ ನೌಕರಿ ಸಿಗತದ. ಭರಮಸಾಟ ರೊಕ್ಕ ಬರತಾವು’ ಎಮ್ಮೆಲ್ಲೆ ಹೇಳಿದ.

‘ರೊಕ್ಕ ನಮ್ಮನ್ನ ಹಾಳ ಮಾಡತತಿರಿ’ ಅಂದ ಬಾಪುಸಾಬ.
‘ಏಯ್, ಅದೆಲ್ಲ ಕತಿ ಬ್ಯಾಡ.. ಹೂಂ ನಡಿ ಇನ್ನ... ನನಗ ಹೊರಡೋದದ’ ಎಂದು ಮೇಲೆದ್ದು ತಮ್ಮ ಒಳಕೋಣೆಗೆ ಹೋಗುವ ಮುನ್ನ ಮಾಧ್ಯಮದವರಿಗೆ ‘ಬರ್ತಾ ಇರ್ರಿ’ ಅಂತ ಹೇಳಿ ಒಳ ನಡೆವರು.

4
ಎಮ್ಮೆಲ್ಲೆ ಸಾಹೇಬರ ಆ ಕೋಣೆಯಲ್ಲಿ ಖುಷಿಯ ಅಲೆಗಳು ತೇಲುತ್ತಿದ್ದವು. ಫೈಲು ನೋಡುತ್ತಿರುವ ಅವರ ಮುಖ ಊರಗಲವಾಗಿತ್ತು. ಅವರೊಬ್ಬರೇ ತಮ್ಮ ‘ಅಧಿ’ಕಾರದ ಕುರ್ಚಿಯಲ್ಲಿ ವಿರಾಜಮಾನರಾಗಿದ್ದಾರೆ. ಮೂವರು ಅಧಿಕಾರಿಗಳು ಬಗಲಲ್ಲಿ ಫೈಲು ಹಿಡಿದು ಪೇಪರು-ದಾಖಲೆ ಸಮೇತ ನಿಂತಿದ್ದಾರೆ. ಹಾಗೆ ನಿಲ್ಲಲು ಕಾರಣ ಸಾಹೇಬರ ಕೋಣೆಯಲ್ಲಿ ಯಾವಾಗಲೂ ಒಂದೇ ಕುರ್ಚಿಯಿರುತ್ತದೆ. ಅದೂ ಸಹ ಅಧಿಕಾರದಿಂದ ಭರ್ತಿಯಾದ ಕುರ್ಚಿ.

ಎದುರು ಟಿಪಾಯ ಮೇಲೆ ಬಿದ್ದ ದಿನಪತ್ರಿಕೆಯ ಮುಖಪುಟದಲ್ಲಿ ಸುದ್ದಿಗಳು ಠಳಾಯಿಸಿದ್ದವು. ‘ಬ್ರಿಟೀಷ್ ಕಾಲದ ಫಾರ್ಮ ಖಾಸಗಿ ಒಡೆತನಕ್ಕೆ! ವಿಶಿಷ್ಟ ಸಸ್ಯ ಮತ್ತು ಜೀವ ಸಂಕುಲಕ್ಕೆ ಧಕ್ಕೆ!’. ಅದೇ ಬಾತಮಿಯ ಕೆಳಗೆ- ‘ಬ್ರಿಟೀಷ್ ಕಾಲದ ಫಾರ್ಮನ ಕೆರೆಯಲ್ಲಿ ಬಾಪು(ಸಾಬ)ನ ಅಂತ್ಯ- ಕೊಲೆಯೋ ಆತ್ಮಹತ್ಯೆಯೋ?’- ಇವೆರಡೂ ಸುದ್ದಿಯ ತುಣುಕುಗಳು ಖುಷಿಯ ಅಲೆಯ ಆ ಕೋಣೆಯಲ್ಲಿ ಸತ್ತ ಹೆಣಗಳಾಗಿ ಬಿದ್ದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.