ಶುಕ್ರವಾರ, ಮೇ 7, 2021
25 °C

ಜನತಂತ್ರ ವ್ಯವಸ್ಥೆಗೇ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧ ದಂಧೆ ಮಾಡುತ್ತಿದ್ದವರೆಲ್ಲ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಗಿಟ್ಟಿಸಿ ಚುನಾವಣಾ ಅಖಾಡಕ್ಕಿಳಿದ ಮೇಲೆ ಮತದಾರರನ್ನು ಭ್ರಷ್ಟರನ್ನಾಗಿಸುವ ಕೆಟ್ಟ ವ್ಯವಸ್ಥೆ ರಾಜ್ಯದ ಅನೇಕ ಕಡೆಗಳಲ್ಲಿ ವ್ಯಾಪಿಸಿದೆ.ಚುನಾವಣೆಯ ಪ್ರಚಾರದ ದಿನಗಳಲ್ಲಿ ಹಣ, ಗಿಫ್ಟ್ ಕೂಪನ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳು, ಪೋಷಕರ ಮೇಲೆ ಪ್ರಭಾವ ಬೀರಲು ಮಕ್ಕಳಿಗೂ ಉಡುಗೊರೆ ನೀಡುವಂಥ ಹಲವು ದುರ್ಮಾರ್ಗಗಳನ್ನು ಅನುಸರಿಸಿ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನು ರೂಢಿಸಿಕೊಳ್ಳಲಾಗಿದೆ.ವಿಧಾನ ಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದ್ದರೂ ಈಗಾಗಲೇ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಈಗಿನಿಂದಲೇ ಮನೆ ಮನೆಗಳಿಗೆ ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿರುವ ಆತಂಕಕಾರಿ ವಿದ್ಯಮಾನ ವರದಿಯಾಗಿದೆ.ಶಿಕ್ಷಕರಿಗೂ ಹಲವಾರು ಉಡುಗೊರೆಯನ್ನು ನೀಡಲಾಗುತ್ತಿದೆ. ಜೊತೆಗೆ ಪುಕ್ಕಟೆ ತೀರ್ಥ ಯಾತ್ರೆ, ಮದುವೆ ಮುಂಜಿ ಇದ್ದರೆ ಅಕ್ಕಿ, ಸಕ್ಕರೆ ಹಂಚಿಕೆ, ಹಬ್ಬಗಳಿಗೆ ದೇವರ ಮೂರ್ತಿಗಳ ವಿತರಣೆ ಮಾಡುವ ಕೆಟ್ಟ ಸಂಪ್ರದಾಯವನ್ನು ಅನುಸರಿಸುತ್ತಿರುವುದು ಈ ಕಸರತ್ತಿನಲ್ಲಿ ಸೇರಿದೆ.ಚುನಾವಣೆ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಪ್ರತಿ ವರ್ಷವೂ ಹತ್ತಾರು ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಕಟಿಸುತ್ತಿದೆ. ಆದರೆ, ನಮ್ಮ ಫಟಿಂಗ ರಾಜಕಾರಣಿಗಳು ಅಡ್ಡದಾರಿಗಳನ್ನು ಹುಡುಕಿ ಚುನಾವಣೆ ವ್ಯವಸ್ಥೆಯನ್ನು ಮತ್ತಷ್ಟು ಅಧೋಗತಿಗಿಳಿಸುವ ಕಾರ್ಯತಂತ್ರಗಳನ್ನು ಹೆಣೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ.ಚುನಾವಣೆ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲು ರಾಜಕಾರಣಿಗಳು ಒಡ್ಡುತ್ತಿರುವ ಆಮಿಷಕ್ಕೆ ಮತದಾರರೂ ನಾಚಿಕೆ ಮತ್ತು ಸ್ವಾಭಿಮಾನ ಬಿಟ್ಟು ಅವರ ಋಣಭಾರಕ್ಕೆ ಬಲಿಬೀಳುತ್ತಿರುವುದು ಆಘಾತಕಾರಿ.ಚುನಾವಣಾ ಆಕಾಂಕ್ಷಿಗಳ ಋಣಭಾರಕ್ಕೆ ಬಿದ್ದರೆ, ಕ್ಷೇತ್ರದ ಕೆಲಸ ಕಾರ್ಯದ ಬಗೆಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆಯನ್ನೂ ಜನರು ಕಳೆದುಕೊಳ್ಳುತ್ತಿದ್ದಾರೆ.

ಇಂಥ ಸ್ಥಿತಿ ಪ್ರಜಾಸತ್ತೆಯಲ್ಲಿ ಅತ್ಯಂತ ಅಪಾಯಕಾರಿ ಬೆಳವಣಿಗೆ.ಕ್ಷೇತ್ರದಲ್ಲಿ ಜನರಿಗೆ ಬೇಕಾಗಿರುವುದು ಶಾಲೆ, ಕಾಲೇಜು, ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಕೃಷಿಗೆ ಬೇಕಾದ ನೀರಾವರಿ ಮತ್ತಿತರ ಸೌಲಭ್ಯ. ಇಂತಹ ಮೂಲಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳಾಗ ಬಯಸುವ ರಾಜಕಾರಣಿಗಳ ಗುರಿಯಾಗಬೇಕು.ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದರೆ ಅವರೇ ದುಡಿದು ಸ್ವಾವಲಂಬಿಗಳಾಗುವಂತೆ ಮಾಡಬೇಕಾಗಿರುವುದು ದೂರದೃಷ್ಟಿಯುಳ್ಳ ಜನಪ್ರತಿನಿಧಿಗಳ ನಿಜವಾದ ಕರ್ತವ್ಯವಾಗಬೇಕು. ಇದೆಲ್ಲವೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕವೇ ಆಗಬೇಕು.ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ತಲುಪದಿದ್ದಲ್ಲಿ ಲೋಪಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಬೇಕಾದುದು ಶಾಸಕರ ಕರ್ತವ್ಯ. ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿವೆ.ಅವುಗಳನ್ನು ಮಂಜೂರು ಮಾಡಿಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಾದುದು ಆಯಾ ಜನಪ್ರತಿನಿಧಿಗಳ ಪ್ರಾಥಮಿಕ ಹೊಣೆಯಾಗಬೇಕು. ಇಂತಹ ಕರ್ತವ್ಯಗಳನ್ನು ನಿರ್ಲಕ್ಷಿಸಿ, ಮತದಾರರಿಗೆ ಉಡುಗೊರೆಗಳ ಆಮಿಷ ಒಡ್ಡಿ ಅವರನ್ನು ವಶೀಕರಣ ಮಾಡಿಕೊಳ್ಳುವುದು ಅತ್ಯಂತ ಕೆಟ್ಟ ನಡವಳಿಕೆ. ಇಂತಹ ನೀತಿಗೆಟ್ಟ ರಾಜಕಾರಣದಿಂದ ಅಪಾಯಕ್ಕೆ ಒಳಗಾಗುವುದು ಜನತಂತ್ರ ವ್ಯವಸ್ಥೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.