ಗುರುವಾರ , ಜೂನ್ 24, 2021
27 °C

ಜನಮನ ರಂಜಿಸಿದ ಸುಗ್ಗಿ– ಹುಗ್ಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ಜೋಳದರಾಶಿ ಡಾ.ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸುಗ್ಗಿ– ಹುಗ್ಗಿ ಜಾನಪದ ಉತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು ನೆರೆದಿದ್ದ ಪ್ರೇಕ್ಷಕರ ಮನರಂಜಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ದರೋಜಿಯ ಬುರ್ರಕಥಾ ಕಲಾವಿದೆ ಈರಮ್ಮ ಅವರು ಪ್ರಸ್ತುತಪಡಿಸಿದ ‘ಗಂಡುಗಲಿ ಕುಮಾರರಾಮ’ ಪ್ರಸಂಗ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು.ಸೋಗಿಯ ಹುಗ್ಗಿ ರುದ್ರಮ್ಮ ಅವರು ಪ್ರಸ್ತುತಪಡಿಸಿದ ಸಾಂಪ್ರದಾಯಿಕ ಹಾಡುಗಳು ಹಳೆಯ ಕಾಲಕ್ಕೆ ಕೊಂಡೊಯ್ದರೆ, ಸಂಡೂರು ತಾಲ್ಲೂಕಿನ  ಸುಶೀಲನಗರದ ಪಾರುಬಾಯಿ ಸಂಗಡಿಗರ ಲಂಬಾಣಿ ನೃತ್ಯ ಎವೆಯಿಕ್ಕದೆ ನೋಡುವಂತೆ ಮಾಡಿತು.ಕುರುಗೋಡು ಗ್ರಾಮದ ಅಂಡಿ ಜೋಗಿ ಹನುಮಂತಪ್ಪ ಸಂಗಡಿಗರಿಂದ ಕಿನ್ನರಿ ಜೋಗಿ ಪದ, ಅಶೋಕ ಕಾಟಾಪುರ ಅವರಿಂದ ಲಾವಣಿ ಪದ, ಕಂಪ್ಲಿಯ ಎಸ್‌.ಜಾನಕಿ ಸಂಗಡಿಗರಿಂದ ಹಕ್ಕಿ–ಪಿಕ್ಕಿ ನೃತ್ಯ, ಜಂಬುನಾಥನಹಳ್ಳಿಯ ಶಂಕರಪ್ಪ ಬಾದಿಗಿ ಅವರಿಂದ ಮೋರ್‌ಚಿಂಗ್‌ ವಾದನ ನೋಡುಗರನ್ನು ಕದಲದಂತೆ ಮಾಡಿದರೆ, ಅನಂತಶಯನ ಗುಡಿಯ ವಿರೂಪಾಕ್ಷಪ್ಪ ಮತ್ತು ಸಂಗಡಿಗರ ‘ಸುಡುಗಾಡು ಸಿದ್ದರ ಕೈಚಳಕ’ ನಕ್ಕು ನಲಿಸಿತು.ಚಿಕ್ಕಮಗಳೂರಿನ ಹೂಲಿಹಳ್ಳಿಯ ಎಚ್‌.ಎಂ. ಅಂಬಿಕಾ ಸಂಗಡಿಗರಿಂದ ನಡೆದ ಮಹಿಳಾ ವೀರಗಾಸೆ ಪ್ರೇಕ್ಷಕರಲ್ಲೂ ಆವೇಶ ಮೂಡಿಸಿದರೆ, ಬಂಡಿಹಟ್ಟಿಯ ಪಂಪಾಪತಿ ಸಾರಥಿ ಸಂಗಡಿಗರಿಂದ ಕೊನೆಯಲ್ಲಿ ಪ್ರದರ್ಶನಗೊಂಡ ‘ರಾವಣ ವಧೆ’ ಬಯಲಾಟ ಸನ್ನಿವೇಶ ನೂರಾರು ಪ್ರೇಕ್ಷಕರ ಮನಸೆಳೆಯಿತು.ರಾತ್ರಿ ಸಭಿಕರು ಮತ್ತು ಕಲಾವಿದರಿಗಾಗಿ ಸಿದ್ಧಪಡಿಸಿದ್ದ ಗೋಧಿ ಹುಗ್ಗಿ ಬಾಯಿ ಚಪ್ಪರಿಸುವಂತೆ ಮಾಡಿತು.ಕಲೆ ಉಳಿಸಿ: ಇದಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಉತ್ಸವ ಉದ್ಘಾಟಿಸಿದ ದರೋಜಿ ಈರಮ್ಮ, ಇತಿಹಾಸ ಹಾಗೂ ಪರಂಪರೆಯ ಧ್ಯೋತಕವಾಗಿರುವ ಜಾನಪದ ಕಲೆಯನ್ನು ಯುವಪೀಳಿಗೆ ಉಳಿಸಿ, ಬೆಳೆಸಬೇಕು ಎಂದು ಸಲಹೆ ನೀಡಿದರು.ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯ ಗಾಯನ ಪ್ರಸ್ತುತಪಡಿಸಿದ ಅವರು, ಆಧುನೀಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆ ಅಳಿಸಿಹೋಗಬಾರದು ಎಂದರು.ಸಂಸ್ಕೃತಿ ಮತ್ತು ನಾಗರಿಕತೆಯ ಸಮ್ಮಿಲನವೇ ಜೀವನ ಎಂದು ಜಿಲ್ಲಾ ಪಂಚಾಯ್ತಿ ಪ್ರಭಾರಿ ಸಿಇಓ ಬಿ.ಟಿ.ನಂದೀಶ್‌ ಅಭಿಪ್ರಾಯಪಟ್ಟರು. ನಗರ ಡಿವೈಎಸ್ಪಿ ಟಿ.ಎಸ್.ಮುರುಗಣ್ಣನವರ್, ಚೋರನೂರು ಟಿ.ಕೊಟ್ರಪ್ಪ ಮಾತನಾಡಿದರು.‘ಜಾನಪದ ಕಲೆಗಳು ನಡೆದು ಬಂದ ದಾರಿ’ ವಿಷಯ ಕುರಿತು ತೆಕ್ಕಲಕೋಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಡಾ.ಆರ್. ಚೇತನಕುಮಾರ ಉಪನ್ಯಾಸ ನೀಡಿದರು.ಪಾಲಿಕೆ ಸದಸ್ಯ ಬೆಣಕಲ್ ಬಸವರಾಜ, ಜಿಲ್ಲಾ ವಾರ್ತಾಧಿಕಾರಿ ಎಚ್.ಶ್ರೀನಿವಾಸ,  ಕ್ರೀಡಾಧಿಕಾರಿ ರಾಜಾಭಕ್ಷಿ ಬಾವಿಹಳ್ಳಿ, ಕಲಾವಿದರಾದ ವಿರೂಪಾಕ್ಷಪ್ಪ, ಜಿಲಾನ ಬಾಷಾ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸ್ವಾಗತಿಸಿದರು. ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.