ಸೋಮವಾರ, ಮಾರ್ಚ್ 8, 2021
20 °C
ಅಂಕದ ಪರದೆ

ಜನಮುಖಿ ರಂಗಚಟುವಟಿಕೆಗಳ ‘ಸೃಷ್ಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಮುಖಿ ರಂಗಚಟುವಟಿಕೆಗಳ ‘ಸೃಷ್ಟಿ’

‘‘ಆಕಾಲದಲ್ಲಿ ರಂಗತರಬೇತಿ ಎನ್ನುವುದು ಪಕ್ಕಾ ವಾಣಿಜ್ಯಾತ್ಮಕ ಉದ್ಯೋಗವಾಗಿಬಿಟ್ಟಿತ್ತು. ರಂಗಭೂಮಿ ತರಬೇತಿ ನೀಡುವ ನೆಪದಲ್ಲಿ ವಿಪರೀತ ಹಣ ದೋಚುತ್ತಿದ್ದರು. ಅದನ್ನು ನೋಡಿ ನನಗೆ ಇದಕ್ಕೆ ಏನಾದರೂ ಪರ್ಯಾಯ ದಾರಿ ಹುಡುಕಬೇಕು ಅನ್ನಿಸಿತು. ಇದೇ ಯೋಚನೆಯಲ್ಲಿ ಸುಚಿತ್ರದಲ್ಲಿ ಉಚಿತವಾಗಿ ರಂಗಭೂಮಿ ತರಬೇತಿ ನಡೆಸಿದೆ.ಅದಕ್ಕೆ ಜನರಿಂದ ಸಿಕ್ಕಿದ ಪ್ರತಿಸ್ಪಂದನೇ ತುಂಬ ಚೆನ್ನಾಗಿತ್ತು. ಆ ಸ್ಪಂದನೆಯೇ ‘ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ’ಯ ಪ್ರಾರಂಭಕ್ಕೆ ಪ್ರೇರಣೆಯಾಯಿತು’’ –ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿಯ ಪ್ರಾರಂಭದ ಹಿಂದಿನ ಪ್ರೇರಣೆಗಳನ್ನು ಸ್ಥಾಪಕ  ಮತ್ತು ಕಾರ್ಯದರ್ಶಿ ಶಶಿಕಾಂತ ಯಡಹಳ್ಳಿ ವಿವರಿಸುವುದು ಹೀಗೆ.

ಈ ಅಕಾಡೆಮಿ ಶುರುವಾಗಿದ್ದು 2000ರಲ್ಲಿ. ಕಳೆದ ಒಂದೂವರೆ ದಶಕದಿಂದ ಬೆಂಗಳೂರಿನ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಈ ಅಕಾಡೆಮಿ ಎರಡು ವಿಭಾಗಗಳಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತದೆ. ಒಂದು ವಿಭಾಗದ ಮೂಲಕ ಪ್ರತಿ ಭಾನುವಾರ ಉಚಿತ ಅಭಿನಯ ತರಬೇತಿ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದೆ. ಯಾರು ಬೇಕಾದರೂ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.‘ಮೊದಲ ಎರಡು ವರ್ಷ ಸುಚಿತ್ರದಲ್ಲಿ ತರಬೇತಿ ಶಿಬಿರ ಮಾಡಿದೆವು. ನಂತರ ವೈಯಾಲಿಕಾವಲ್‌ನ ಘಾಟೆ ಭವನದಲ್ಲಿ ಹತ್ತು ವರ್ಷಗಳ ಕಾಲ ಪ್ರತಿ ವಾರ ಶಿಬಿರವನ್ನು ನಡೆಸಿದೆವು. ಈಗ ಎರಡು ವರ್ಷಗಳ ಹಿಂದೆ ದೊಮ್ಮಲೂರಿನಲ್ಲಿ ನಮ್ಮದೇ ಒಂದು ಆಪ್ತರಂಗಮಂದಿರವನ್ನು ಕಟ್ಟಿಕೊಂಡಿದ್ದೇವೆ. ಅದರಲ್ಲಿಯೇ ಶಿಬಿರ ಮಾಡುತ್ತ ಬಂದಿದ್ದೇವೆ. ಪ್ರತಿವಾರವು ಸುಮಾರು 50 ಜನ ಆಸಕ್ತರು ಅಭಿನಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಶಶಿಕಾಂತ ಕಾರ್ಯಚಟುವಟಿಕೆಗಳನ್ನು ವಿವರಿಸುತ್ತಾರೆ.‘ಇದುವರೆಗೂ ಸುಮಾರು ಮೂರು ಸಾವಿರ ಜನರಿಗೆ ರಂಗತರಬೇತಿ ನೀಡಿದ್ದೇವೆ. ಇಲ್ಲಿ ತರಬೇತಿ ಪಡೆದ ಸುಮಾರು ಮುನ್ನೂರಕ್ಕೂ ಅಧಿಕ ಜನರು ಸಿನಿಮಾ, ಕಿರುತೆರೆ, ರಂಗಭೂಮಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ನೆನಪಿರಲಿ ಪ್ರೇಮ್‌ ಕೂಡ ನಮ್ಮಲ್ಲಿಯೇ ತರಬೇತಿ ಪಡೆದು ಹೋದವರು’ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.‘ಸೃಷ್ಟಿ’ ತಂಡದ ಆರಂಭದ ದಿನಗಳಲ್ಲಿ ಜತೆಗಿದ್ದವರು ‘ಇಪ್ಟಾ’ ಸ್ನೇಹಿತರು. ಈಗಲೂ ಕೂಡ ಈ ತಂಡ ಇಪ್ಟಾದ ಜತೆ ಸೇರಿಕೊಂಡು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ತಂಡದ ಕಾರ್ಯದರ್ಶಿ ಶಶಿಕಾಂತ ಯಡಹಳ್ಳಿ ಇಪ್ಟಾದ ಸಂಚಾಲಕರೂ ಆಗಿರುವುದು ಈ ಬಾಂಧವ್ಯಕ್ಕೆ ಪೂರಕವಾಗಿದೆ.ಇದು ಅಕಾಡೆಮಿಯ ಒಂದು ಆಯಾಮವಾದರೆ ಇನ್ನೊಂದು ಆಯಾಮ ನಾಟಕ ಪ್ರದರ್ಶನದ್ದು. ಒಂದೆಡೆ ನಿರಂತರವಾಗಿ ಉಚಿತ ನಾಟಕ ತರಬೇತಿ ನೀಡುತ್ತಲೇ ಬಂದಿರುವ ಅಕಾಡೆಮಿಯಲ್ಲಿ ‘ಸೃಷ್ಟಿ ಜನಕಲಾ ಕೇಂದ್ರ’ ಎಂಬ ಪ್ರದರ್ಶನ ವಿಭಾಗವೂ ಇದೆ. ಇದು ನಿರಂತರವಾಗಿ ನಾಟಕಗಳ ಪ್ರದರ್ಶನದಲ್ಲಿ ತೊಡಗಿಸಿಕೊಂಡಿದೆ.ಈ ವಿಭಾಗವು ಮುಖ್ಯವಾಗಿ ಬೀದಿ ನಾಟಕ ಮತ್ತು ವೇದಿಕೆ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಇದುವರೆಗೆ ಸುಮಾರು 32 ಬೀದಿನಾಟಕಗಳನ್ನೂ ಎಂಟು ವೇದಿಕೆ ನಾಟಕಗಳನ್ನೂ ಈ ತಂಡವು ಪ್ರದರ್ಶಿಸಿದೆ. ಒಂದೊಂದು ನಾಟಕವೂ ಹಲವಾರು ಪ್ರದರ್ಶನಗಳನ್ನು ಕಂಡಿವೆ. ಹೀಗೆ ಒಂದು ಕಡೆ ರಂಗತರಬೇತಿ ನೀಡುವುದು ಹಾಗೆಯೇ ಇನ್ನೊಂದು ಕಡೆ ರಂಗಪ್ರದರ್ಶನ ಮಾಡಿಸುವುದು ಹೀಗೆ ಎರಡೂ ಆಯಾಮಗಳಲ್ಲಿ ಈ ಅಕಾಡೆಮಿ ತೊಡಗಿಕೊಂಡಿದೆ.‘‘ಈಗೆರಡು ವರ್ಷಗಳ ಹಿಂದೆ ದೊಮ್ಮಲೂರಿನಲ್ಲಿ ‘ಸೃಷ್ಟಿ ಆಪ್ತ ರಂಗಮಂದಿರ’ ಎಂಬ ಹೆಸರಿನ ಒಂದು ರಂಗಮಂದಿರವನ್ನೂ ಕಟ್ಟಿಕೊಂಡಿದ್ದೇವೆ. ಅಲ್ಲಿ ಬಡಾವಣೆ ರಂಗಭೂಮಿಯನ್ನು ಉತ್ತೇಜಿಸುವ ಉದ್ದೇಶದಿಂದ ತಮ್ಮ ತಂಡದ ನಾಟಕಗಳನ್ನಷ್ಟೇ ಅಲ್ಲದೇ ಬೇರೆ ಬೇರೆ ತಂಡಗಳನ್ನು ಕರೆಸಿಕೊಂಡೂ ನಾಟಕ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ’ ಎಂದು ತಂಡದ ಚಟುವಟಿಕೆಗಳನ್ನು ಶಶಿಕಾಂತ ವಿವರಿಸುತ್ತಾರೆ.ಬರೀ ರಂಗಮಂದಿರವಷ್ಟೇ ಅಲ್ಲದೇ, ಉತ್ತಮ ಗ್ರಂಥಾಲಯ, ಪರದೆಗಳು, ಬೆಳಕು, ಧ್ವನಿವ್ಯವಸ್ಥೆ ಹೀಗೆ ಒಂದು ನಾಟಕವನ್ನು ಮಾಡಲು ಏನೇನು ಬೇಕಾಗುತ್ತದೋ ಆ ಎಲ್ಲ ವ್ಯವಸ್ಥೆಗಳೂ ಅಲ್ಲಿವೆ. ಇದರ ಜತೆಗೆ ಹೊಸ ಹೊಸ ನಾಟಕಗಳ ವಾಚನ ಕಾರ್ಯಕ್ರಮಗಳು, ರಂಗಗೀತೆ ಗಾಯನ ಕಾರ್ಯಕ್ರಮ ಹೀಗೆ ಭಿನ್ನ ಕಾರ್ಯಕ್ರಮಗಳನ್ನೂ ಇಲ್ಲಿ ಆಯೋಜಿಸಲಾಗುತ್ತದೆ.ಹಾಗೆಯೇ ಅಭಿನಯ, ಪ್ರಸಾಧನ, ರಂಗವಿಮರ್ಶೆ ಬರವಣಿಗೆ ಕಾರ್ಯಾಗಾರ, ಮೂಕಾಭಿನಯ ಕಾರ್ಯಾಗಾರ ಹೀಗೆ ಅನೇಕ ಕಾರ್ಯಾಗಾರಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ. ‘ರಂಗಭೂಮಿ ರಾಜಾಶ್ರಿತ ಆಗಬಾರದು, ಅದು ಜನಾಶ್ರಿತ ಆಗಬೇಕು’ ಎನ್ನುವುದು ಈ ಸಂಸ್ಥೆಯ ಬಹುಮುಖ್ಯ ಧ್ಯೇಯ. ಇದಕ್ಕೆ ಅನುಗುಣವಾಗಿಯೇ ‘ಸೃಷ್ಟಿ’ ತನ್ನ ಚಟುವಟಿಕೆಗಳಿಗೆ ಸರ್ಕಾರದ  ಯಾವ ಇಲಾಖೆಯಿಂದಲೂ ಸಹಾಯಧನ ಪಡೆದುಕೊಳ್ಳುವುದಿಲ್ಲ. ಮತ್ತು ಈ ಸಂಸ್ಥೆಯ ಎಲ್ಲ ತರಬೇತಿಗಳು  ಉಚಿತವಾಗಿರುತ್ತವೆ.‘ನಾಟಕ ಪ್ರದರ್ಶನಕ್ಕೆ ಬೇಕಾದ ಎಲ್ಲ ಸಲಕರಣೆಗಳು ನಮ್ಮಲ್ಲಿಯೇ ಲಭ್ಯವಿದೆ. ಹಾಗೆಯೇ ನಮ್ಮಲ್ಲಿ ತರಬೇತಿ ಪಡೆದ ಕಲಾವಿದರೇ ಇರುತ್ತಾರೆ. ಆದ್ದರಿಂದ ನಾಟಕ ನಿರ್ಮಾಣಕ್ಕೆ ನಾವು ಮಾಡುವ ವೆಚ್ಚ ತುಂಬ ಕಡಿಮೆ. ಬೇರೆ ಕಡೆ ಪ್ರದರ್ಶನ ಮಾಡಿದಾಗ ಆಯೋಜಕರು ನಮ್ಮ ಪ್ರದರ್ಶನ ನೋಡಿ ಖುಷಿಯಿಂದ ನೀಡುವ ಹಣವೇ ನಮಗೆ ಸಾಕಾಗುತ್ತದೆ. ನಮ್ಮ ವೆಚ್ಚ ತೂಗಿಸಿ ಉಳಿದ ಹಣವನ್ನು ಕಲಾವಿದರಿಗೆ ನೀಡುತ್ತೇವೆ. ಯಾವುದೇ ಲಾಭದ ಉದ್ದೇಶ ಇರಿಸಿಕೊಳ್ಳದೇ ಕೇವಲ ಬದ್ಧತೆಯಿಂದಲೇ ರಂಗಭೂಮಿ ಕಟ್ಟಬೇಕು ಎಂಬುದು ನಮ್ಮ ಧ್ಯೇಯ’ ಎನ್ನುತ್ತಾರೆ ಶಶಿಕಾಂತ.‘ಪರಿವರ್ತನೆ’ ಈ ತಂಡದ ಯಶಸ್ವಿ ನಾಟಗಳಲ್ಲೊಂದು. ಶಶಿಕಾಂತ ಅವರೇ ಬರೆದು ನಿರ್ದೇಶಿಸಿದ ಈ ನಾಟಕ ಜಾಗತೀಕರಣ ಮತ್ತು ಕೋಮುವಾದದ ವಸ್ತುಗಳನ್ನು ಒಳಗೊಂಡಿದ್ದ ನಾಟಕ. ಹಾಗೆಯೇ ಇತ್ತೀಚೆಗೆ ನಿರ್ಮಿಸಿದ ಚಂಪಾ ಅವರ ‘ಕುಂಟ ಕುಂಟ ಕುರವತ್ತಿ’ ನಾಟಕವೂ ಉತ್ತಮ ಪ್ರದರ್ಶನಗಳನ್ನು ಕಾಣುತ್ತಿದೆ. ಬೀದಿ ನಾಟಕಗಳನ್ನೇ ಹೆಚ್ಚಾಗಿ ಆಡುವ ಈ ತಂಡವು ‘ಬೀದಿ ನಾಟಕ ಜನ ಜಾಗೃತಿಯ ಪರಿಣಾಮಕಾರಿ ಸಾಧನ’ ಎಂದು ಪರಿಗಣಿಸಿದೆ. ‘ಸಮಕಾಲೀನ ಸಮಸ್ಯೆಗಳನ್ನು ಆಧರಿಸಿಯೇ ನಾಟಕಗಳನ್ನು ಆಡಿಸುವುದು ಈ ತಂಡದ ವಿಶೇಷ.‘ಬೀದಿ ನಾಟಕದ ಅಬ್ಬರ ಮುಗಿದಿದೆ ಎಂಬುದು ಸತ್ಯವಲ್ಲ. ತಮ್ಮ ನಾಗರಿಕ ಸಮಸ್ಯೆಗಳನ್ನು ಬಿಂಬಿಸುವ ನಾಟಕಗಳನ್ನು ಮಾಡಿದರೆ ಖಂಡಿತವಾಗಿಯೂ ಜನರು ನೋಡುತ್ತಾರೆ. ಅದು ಜನಜಾಗೃತಿಯ ಅತ್ಯಂತ ಪರಿಣಾಮಕಾರಿ ಸಾಧನವೂ ಹೌದು’ ಎನ್ನುವ ಶಶಿಕಾಂತ, ‘ಬೀದಿ ನಾಟಕವು ಮೊದಲು ಪ್ರತಿಭಟನಾ ಮಾಧ್ಯಮವಾಗಿತ್ತು. ಈಗ ಅದು ಪ್ರಚಾರದ ಮಾಧ್ಯಮವಾಗಿ ಬದಲಾಗಿದೆ. ಮೊದಲು ಬೀದಿ ನಾಟಕಗಳ ಹಿನ್ನೆಲೆಯಾಗಿ ಚಳವಳಿಗಳಿದ್ದವು. ಈಗ ಚಳವಳಿಗಳು ನಿಂತು ಹೋಗಿ ಬೀದಿ ನಾಟಕಗಳು ಬರೀ ಚಟುವಟಿಕೆಯಾಯಿತು. ಆ ಚಟುವಟಿಕೆಯನ್ನು ಮುನ್ನಡೆಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಶಿಕಾಂತ ಯಡಹಳ್ಳಿ. 

*

ಆಡಳಿತ ಮಂಡಳಿ

ಈ ತಂಡ ಚಟುವಟಿಕೆಗಳನ್ನು ನೋಡಿಕೊಳ್ಳಲು ಆಡಳಿತ ಮಂಡಳಿ ಇದ್ದು ಹದಿನೈದು ಸದಸ್ಯರು ಇದ್ದಾರೆ. ದೇವರಾಜಪ್ಪ ಆಡಳಿತ ಮಂಡಳಿಯ ಅಧ್ಯಕ್ಷರು. ಶಶಿಕಾಂತ ಯಡಹಳ್ಳಿ ಅವರೇ ಕಾರ್ಯದರ್ಶಿಯಾಗಿದ್ದಾರೆ.

*

ತಂಡದ ಪ್ರಮುಖ ನಾಟಕಗಳು

ಬೀದಿ ನಾಟಕಗಳು:
ಸಾಕ್ಷರತೆ, ಕುರ್ಚಿ, ದಿಲ್ ಮಾಂಗೇ ಮೋರ್, ಹೆಲ್ಮೆಟ್ಟಾಯಣ, ಧರ್ಮಕಾಂಡ, ಆಕ್ರಂದನ, ಸತ್ಯಮೇವ ಜಯತೆ, ತ್ರಿಕರಣ, ನೇಗಿಲಯೋಗಿ,  ಫಲಾನುಭವಿಗಳು, ಕೋಲಾಹಲ, ನಿಜವ ಹೇಳಬಲ್ಲಿರಾ, ಪರಿಹಾರ, ಸಾಹೇಬರ ನಾಯಿ.

ವೇದಿಕೆ ನಾಟಕಗಳು: ಪರಿವರ್ತನೆ, ಗಾಂಧಿ ಹೆಸರಲ್ಲಿ, ಪೂಜಾರಿ ಮತ್ತು ಸೈತಾನ, ಕಣ್ಣು ಕಾಣದ ಗಾವಿಲರು, ವ್ಯಸನ, (ರಚನೆ  ಮತ್ತು  ನಿರ್ದೇಶನ- ಶಶಿಕಾಂತ ಯಡಹಳ್ಳಿ). ಕುಂಟಾ ಕುಂಟಾ ಕುರವತ್ತಿ,  (ರಚನೆ- ಚಂದ್ರಶೇಖರ ಪಾಟೀಲ. ನಿರ್ದೇಶನ- ಶಶಿಕಾಂತ ಯಡಹಳ್ಳಿ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.