ಶುಕ್ರವಾರ, ಮೇ 14, 2021
32 °C

ಜನರಿಂದ ದೂರವಾದ ಜನಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಸಮಸ್ಯೆಗಳನ್ನು ನಿವಾರಿಸಲು ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆಯನ್ನು ತರುವ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆ ಜನಸ್ಪಂದನ. ಜನರ ನೋವುಗಳನ್ನು ಪರಿಹರಿಸಲು ಅಧಿಕಾರಿಗಳು ಅವರಿದ್ದಲ್ಲಿಗೆ ಹೋಗುವ ವ್ಯವಸ್ಥೆ ಮಾಡಿತ್ತು ಸರ್ಕಾರ. ಆದರೆ ಇಂದಿನ ದಿನಗಳಲ್ಲಿ ಜನಸ್ಪಂದನ ಸಭೆಗಳು ಜನರ ಸಮಸ್ಯೆಯಿಂದ ದೂರವಾಗುತ್ತಿದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.ಜನಸ್ಪಂದನ ಎಂಬ ಕಾರ್ಯಕ್ರಮವನ್ನು ಹಾಕಿಕೊಂಡ ಸರ್ಕಾರ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಪರಿಹರಿಸಲು ಹಾಕಿಕೊಂಡ ಒಂದು ಉತ್ತಮ ಯೋಜನೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜನಸ್ಪಂದನ ಕಾರ್ಯಕ್ರಮ ಕೇವಲ ಕಾಟಾಚಾರಕ್ಕಾಗಿ ನಡೆಯುತ್ತಿದೆಯೇ ಹೊರತು ಜನರ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಬಹುತೇಕ ಅಧಿಕಾರಿಗಳು ಇಂತಹ ಕಾರ್ಯಕ್ರಮವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.ಜನಸ್ಪಂದನ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡ ಜನರಿಗೆ, ವರ್ಷಗಳು ಕಳೆದರೂ ಕೇವಲ ಅಧಿಕಾರಿಗಳ ಆಶ್ವಾಸನೆ ದೊರೆಯುತ್ತಿದೆಯೇ ಹೊರತು ಸಮಸ್ಯೆ ಬಗೆಹರಿಯುತ್ತಿಲ್ಲ. ಕೇವಲ ಸಂಧ್ಯಾಸುರಕ್ಷಾ, ವಿಧವಾ ವೇತನ ಮತ್ತು ವೃದ್ಧಾಪ್ಯ ವೇತನಗಳಂತಹ ಕೆಲವು ಸಮಸ್ಯೆಗಳನ್ನು ಮಾತ್ರ ಬಗೆಹರಿಸುತ್ತಿರುವ ಅಧಿಕಾರಿಗಳು, ಗ್ರಾಮೀಣ ಪ್ರದೇಶದ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಶೌಚಾಲಯದಂತಹ ಮೂಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಬೇಸರ ಜನರಲ್ಲಿ ಮನೆ ಮಾಡಿದೆ.ಗ್ರಾಮೀಣ ಪ್ರದೇಶದ ಜನರು ತಾಲ್ಲೂಕು ಹಾಗೂ ಜಿಲ್ಲಾ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಮ್ಮಿಕೊಂಡ ಕಾರ್ಯಕ್ರಮ ಜನಸ್ಪಂದನ. ಆದರೆ ಇಂದಿಗೂ ಜನರು ತಾಲ್ಲೂಕು ಹಾಗೂ ಜಿಲ್ಲಾ ಕಚೇರಿಗಳಿಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ನಡೆದ ಹಲವಾರು ಜನಸ್ಪಂದನ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರದೇ ಇರುವುದರಿಂದ ಜನ ಬಹಿಷ್ಕರಿಸಿದ ಹಲವಾರು ಉದಾಹರಣೆಗಳಿವೆ. ಈ ಜನಸ್ಪಂದನ ಕಾರ್ಯಕ್ರಮದ ಆರಂಭದ ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಿದ್ದರು. ಇದೀಗ ಜನಸ್ಪಂದನ ಸಭೆಯಲ್ಲಿ ಕೇವಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.ಕೆಂಭಾವಿಯಲ್ಲಿ ಇತ್ತಿಚಿಗೆ ನಡೆದ ಜನಸ್ಪಂದನ ಸಭೆಯಲ್ಲಿ “ನನಗೊಂದು ಆಶ್ರಯ ಮನೆ ನೀಡಿ. ನಾನು ಬಡವಳಿದ್ದೇನೆ. ಕಳೆದ ಒಂದು ವರ್ಷದಿಂದ ನಡೆದ ಎಲ್ಲ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದೇನೆ. ನನಗೆ ಯಾರ ಶಿಫಾರಸು ಇಲ್ಲ. ಕೇವಲ ಶಿಫಾರಸು ಇದ್ದವರಿಗೆ ಮಾತ್ರ ಮನೆ ಸಿಗುತ್ತಿವೆ. ನನಗೆ ತಾವೇ ಶಿಫಾರಸ್ಸು ನೀಡಿ” ಎಂದು ವೃದ್ಧೆಯೊಬ್ಬರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕರ ಮುಂದೆ ಅಳಲು ತೋಡಿಕೊಂಡರು.ಆದರೆ ಅಧಿಕಾರಿಗಳು ಮಾತ್ರ ಸಮಾಧಾನ ಉತ್ತರ ನೀಡಿದರೇ ಹೊರತು, ಆಕೆಗೆ ಆಶ್ರಯ ಕೊಡಿಸುವ ಭರವಸೆ ನೀಡಲಿಲ್ಲ. ಬಡವರಿಗೆ ಸ್ಪಂದಿಸದ ಅಧಿಕಾರಿಗಳು, ಜನಸ್ಪಂದನ ಕಾರ್ಯಕ್ರಮದಲ್ಲಿ ಯಾವ ರೀತಿ ಸಮಸ್ಯೆ ಬಗೆಹರಿಸುವರು ಎಂದು ಜನ ಮಾತನಾಡಿಕೊಳ್ಳುವಂತಾಗಿತ್ತು.ಕೇವಲ ಸಭೆಗಳನ್ನು ನಡೆಸುವುದರಲ್ಲಿ ಅರ್ಥವಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಕೆಲವೇ ಕೆಲವು ಅಧಿಕಾರಿಗಳು ಸಭೆಗೆ ಹಾಜರಾಗುತ್ತಿರುವುದರಿಂದ ಜನರ ಸಮಸ್ಯೆಗಳು ಹಾಗೆಯೇ ಉಳಿದಿವೆ. ಸರ್ಕಾರದ ಆಶಯಗಳು ಈಡೇರುವುದು ಕನಸಿನ ಮಾತಾಗಿದೆ ಎನ್ನುವುದು ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ ಹೇಳುತ್ತಾರೆ.ಪ್ರತಿ ಸಾರಿ ನಾವು ಸಭೆಗೆ ಬರುವುದು, ಮನವಿ ಸಲ್ಲಿಸುವುದೇ ಆಗಿದೆ. ಅವುಗಳಿಗೆ ಪರಿಹಾರ ಒದಗಿಸುವ ಲಕ್ಷಣಗಳೇನು ಕಾಣುತ್ತಿಲ್ಲ. ಪರಿಹಾರ ಸಿಗದೇ ಇದ್ದ ಮೇಲೆ ಜನಸ್ಪಂದನ ಸಭೆಯನ್ನಾದರೂ ಏಕೆ ಮಾಡಬೇಕು ಎಂದು ಇಲಿಯಾಸ್ ಹೇಳುತ್ತಾರೆ.ಸರ್ಕಾರದ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಜನರ ಬಳಿಗೆ ಆಡಳಿತ ವ್ಯವಸ್ಥೆ ಎಂಬುದು ಇದೀಗ ಮರೀಚಿಕೆ ಆಗುತ್ತಿದೆ. ಇದೆಲ್ಲವನ್ನು ನೋಡುತ್ತಿದ್ದರೂ, ಸರ್ಕಾರದ ಕಾರ್ಯಗಳು ಕುಂಠಿತವಾಗುತ್ತಿದೆ. ಜನರಿಗೆ ಜನಸ್ಪಂದನದ ಮೇಲಿನ ವಿಶ್ವಾಸ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎನ್ನುವುದು ವಾಮನರಾವ ದೇಶಪಾಂಡೆ ಅವರ ಅಭಿಪ್ರಾಯ.ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಅದಕ್ಕೆ ಪರಿಹಾರ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಬಗೆಹರಿದಿಲ್ಲ. ಇದರಿಂದಾಗಿ ಜನರು ಜನಸ್ಪಂದನ ಸಭೆಗಳಿಗೆ ಬರುವುದನ್ನೇ ಬಿಟ್ಟಿದ್ದಾರೆ. ದಿನೇ ದಿನೇ ಜನಸ್ಪಂದನ ಕಾರ್ಯಕ್ರಮ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಸರ್ಕಾರದ ಮೂಲ ಉದ್ದೇಶಕ್ಕೆ ಈ ಯೋಜನೆ ದೂರವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.ಕೇವಲ ಕಡತಗಳಲ್ಲಿ ಮಾತ್ರ ಈ ಸಭೆ ಯಶಸ್ವಿಯಾಗದೇ ಸಾಮಾನ್ಯ ಜನರ ಸಮಸ್ಯೆ ಬಗೆಹರಿಸುವ ಯೋಜನೆಯಾಗಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ.ಜಿಲ್ಲಾಧಿಕಾರಿಗಳು ಜನಸ್ಪಂದನ ಸಭೆಗಳನ್ನು ನಡೆಸಿದ ವಿವರಗಳನ್ನು ಖುದ್ದಾಗಿ ಆಲಿಸಿ ಜನರ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.