ಭಾನುವಾರ, ಮೇ 22, 2022
22 °C

ಜನರೊಂದಿಗೆ ಸೌಜನ್ಯದ ವರ್ತನೆ: ಗೃಹ ಸಚಿವರ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಾರ್ವಜನಿಕರು ಹಾಗೂ ದೂರು ನೀಡಲು ಬರುವವರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿ ಸದ್ಯದಲ್ಲೇ ರಾಜ್ಯದ ಎಲ್ಲ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ಹೇಳಿದರು.ವಕೀಲರ ಸಂಘವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಲಯಗಳ ಆದೇಶಗಳನ್ನು ಜಾರಿಗೊಳಿಸುವಲ್ಲಿ ವಕೀಲರು ಹಾಗೂ ಪೊಲೀಸರ ಪಾತ್ರ ಮತ್ತು ನ್ಯಾಯಾಲಯಗಳಿಗೆ ಭದ್ರತೆ ವಿಷಯ ಕುರಿತು ವಕೀಲರ ಅಹವಾಲು ಆಲಿಸಿದ ಬಳಿಕ ಅವರು ಮಾತನಾಡಿದರು.`ಪೊಲೀಸ್ ಠಾಣೆಗೆ ಬಂದವರನ್ನು ಅಗೌರವದಿಂದ ಕಾಣುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಾನೂನು ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸದಿರುವ ಘಟನೆಗಳು ನನ್ನ ಗಮನಕ್ಕೆ ಬಂದಿವೆ. ರಾಜ್ಯದಾದ್ಯಂತ ಹಲವು ಠಾಣೆಗಳಲ್ಲಿ ಇದೇ ಸ್ಥಿತಿಯಿದ್ದು, ಇದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದರು.`ಠಾಣೆಗಳಲ್ಲಿ ಭಯದ ವಾತಾವರಣವನ್ನು ಹೋಗಲಾಡಿಸಬೇಕು. ಸಾರ್ವಜನಿಕರನ್ನು ವಿಶ್ವಾಸದಿಂದ ಕಾಣಬೇಕು. ಕಾನೂನು- ಸುವ್ಯವಸ್ಥೆ ಪಾಲನೆಗೆ ಕ್ರಮ ಕೈಗೊಳ್ಳಬೇಕು. ಜನಸ್ನೇಹಿ ಎನಿಸುವ ರೀತಿಯಲ್ಲಿ ವರ್ತಿಸಬೇಕು ಎಂದು ಈ ಹಿಂದೆಯೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆದರೂ ಕೆಲವರ ಕೆಟ್ಟ ವರ್ತನೆಯಿಂದಾಗ ಇಡೀ ಇಲಾಖೆಗೆ ಕಳಂಕ ಬರುತ್ತಿದೆ~ ಎಂದು ಬೇಸರ ವ್ಯಕ್ತಪಡಿಸಿದರು.`ರಾಜ್ಯದಲ್ಲಿ ಲಕ್ಷ ಮಂದಿ ಪೊಲೀಸರಿದ್ದಾರೆ. ಏಕಾಏಕಿ ಅವರ ವರ್ತನೆಯನ್ನು ಬದಲಾಯಿಸುವುದು ಸಾಧ್ಯವಿಲ್ಲ. ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ಸುಲಭವಲ್ಲ. ಅಲ್ಪಸ್ವಲ್ಪ ಬದಲಾವಣೆಗಳು ಭಾರಿ ಪರಿಣಾಮ ಬೀರುತ್ತವೆ. ಹಾಗಿದ್ದರೂ ಸುಧಾರಣೆ ತರಲಾಗುತ್ತಿದೆ~ ಎಂದರು.`ಸಿವಿಲ್ ನ್ಯಾಯಾಲಯಕ್ಕೂ ಅಗತ್ಯ ಭದ್ರತೆ ಕಲ್ಪಿಸುವ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಲಾಗುವುದು. ನ್ಯಾಯಾಲಯಕ್ಕೆ ಕರ್ತವ್ಯದ ಮೇಲೆ ಹಾಜರಾಗುವ ಕಾನ್‌ಸ್ಟೇಬಲ್‌ಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸುವಂತೆ ಸೂಚಿಸಲಾಗುವುದು. ನ್ಯಾಯಾಲಯಕ್ಕೆ ನಿಯೋಜಿಸುವ ಸಿಬ್ಬಂದಿಯನ್ನು ಪ್ರತಿವರ್ಷ ಬದಲಾಯಿಸಲು ಚಿಂತಿಸಲಾಗುವುದು~ ಎಂದು ಭರವಸೆ ನೀಡಿದರು.ಸಚಿವ ಎಸ್. ಸುರೇಶ್‌ಕುಮಾರ್, `ಠಾಣೆಗೆ ಹೋಗುವ ವಕೀಲರಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ಅಗೌರವ ಉಂಟಾಗದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ. ಹಾಗಾಗಿ ಪೊಲೀಸರು ತಮ್ಮ ಮನೋಭಾವ ಬದಲಾಯಿಸಿಕೊಳ್ಳಬೇಕು. ವಕೀಲರು ಸಹ ತಮ್ಮ ವರ್ತನೆ ಬಗ್ಗೆ ಅವಲೋಕನ ಮಾಡಿಕೊಂಡರೆ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ~ ಎಂದು ಅಭಿಪ್ರಾಯಪಟ್ಟರು.`ನ್ಯಾಯಾಲಯಗಳಿಗೆ ಭದ್ರತೆ ಕಲ್ಪಿಸುವ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಹಾಗೆಯೇ ವಕೀಲರೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸುವ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, `ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವಾಚ್ಯ ಶಬ್ದ ಬಳಸಬಾರದು, ಅನಗತ್ಯವಾಗಿ ಕಿರುಕುಳ ನೀಡಬಾರದು. ಅಗತ್ಯಕ್ಕಿಂತ ಹೆಚ್ಚು ಮಾತನಾಡದಂತೆಯೂ ಸೂಚನೆ ನೀಡಲಾಗಿದೆ. ಇಲಾಖೆಯಲ್ಲೂ ಕೆಲ ಭ್ರಷ್ಟರಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು~ ಎಂದರು.ಇದಕ್ಕೂ ಮೊದಲು ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ, `ಇನ್‌ಸ್ಪೆಕ್ಟರ್, ಎಸ್.ಐ, ಕಾನ್‌ಸ್ಟೇಬಲ್‌ಗಳು ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಅವಹೇಳನಕಾರಿಯಾಗಿ ನಿಂದಿಸುವ ಪ್ರಸಂಗಗಳು ಸಂಭವಿಸುತ್ತಲೇ ಇವೆ. ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

 

ನ್ಯಾಯಾಲಯ, ಕಕ್ಷಿದಾರ, ವಕೀಲರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಪೊಲೀಸರಿಗೆ ಸೂಕ್ತ ಮಾಹಿತಿ ನೀಡಬೇಕು. ನಿತ್ಯ ಸುಮಾರು 8,000 ವಕೀಲರು ಹಾಗೂ 25,000ಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಿವಿಲ್ ನ್ಯಾಯಾಲಯಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು~ ಎಂದು ಕೋರಿದರು.ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಾಜಣ್ಣ, ಖಜಾಂಚಿ ಟಿ.ಜಿ. ರವಿ, ನಗರ ವಿಭಾಗದ ಉಪಾಧ್ಯಕ್ಷೆ ಬಿ.ಜೆ.ಜಿ. ಸತ್ಯಶ್ರೀ, ಜಂಟಿ ಕಾರ್ಯದರ್ಶಿ ವಿ.ಮಂಜುನಾಥ್ ಉಪಸ್ಥಿತರಿದ್ದರು.13,000 ಕಾನ್‌ಸ್ಟೇಬಲ್ ನೇಮಕ

`ಹೊಸದಾಗಿ 13,000 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ~ ಎಂದು ಗೃಹ ಸಚಿವ ಆರ್. ಅಶೋಕ ಹೇಳಿದರು. `ಪೊಲೀಸ್ ಇಲಾಖೆಗೆ ಅಗತ್ಯವಾಗಿರುವ 13,000 ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.