ಭಾನುವಾರ, ಮೇ 9, 2021
26 °C
ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸರ್ಕಾರ ನಿರ್ವಹಣೆ; ರೈತ ಪರ ಯೋಜನೆಗಳಿಗೆ ಒತ್ತು

ಜನರ ನಿರೀಕ್ಷೆ ಹುಸಿಗೊಳಿಸುವುದಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜನರ ನಿರೀಕ್ಷೆ ಹುಸಿಗೊಳಿಸುವುದಿಲ್ಲ; ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಭರವಸೆ ನೀಡಿದರು.ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗದ ವತಿಯಿಂದ ನಗರದ ಮದಕರಿ ನಾಯಕ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಕಾಂಗ್ರೆಸ್‌ಗೆ 9 ವರ್ಷಗಳಿಂದ ಅಧಿಕಾರ ಇರಲಿಲ್ಲ. ಎರಡು ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತು ರಾಜ್ಯದಲ್ಲಿ ಬದಲಾವಣೆ ತರಬೇಕು ಎಂದು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜನರ ಭಾವನೆಗಳನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿದೆ. ಸೋನಿಯಾ, ರಾಹುಲ್ ಗಾಂಧಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಶಾಸಕರ ಬೆಂಬಲವಿದೆ. ಜನರ ಆಶೀರ್ವಾದವಿದೆ. ವಿಭಿನ್ನವಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತೇವೆ' ಎಂದು ತಿಳಿಸಿದರು.ಬಡವರು, ನಿರ್ಗತಿಕರು ಹಸಿದು ಮಲಗಬಾರದು; ಅವರೂ ಎರಡು ಹೊತ್ತು ಊಟ ಮಾಡಬೇಕು ಎಂದು ರೂ1ಕ್ಕೆ ಕಿಲೋ ಅಕ್ಕಿ ನೀಡಲಾಗುತ್ತಿದೆ. ಜುಲೈನಲ್ಲಿ ಈ ಯೋಜನೆ ಜಾರಿ ಖಚಿತ ಎಂದು ಸ್ಪಷ್ಟಪಡಿಸಿದರು.ವಿವಿಧ ನಿಗಮಗಳಿಂದ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಪಡೆದ ಸಾಲ ಸಂಪೂರ್ಣ ಮನ್ನಾ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ರೂ7ರಿಂದ 8 ಸಾವಿರ ಕೋಟಿ ಹೊರೆಯಾಗುತ್ತದೆ. ಬಡವರ ಮನೆಗೆ `ಭಾಗ್ಯಜ್ಯೋತಿ' ವಿದ್ಯುತ್ ಸಂಪರ್ಕದ ಬಾಕಿ ಮನ್ನಾ ಮಾಡಿ, ಮರುಸಂಪರ್ಕ ನೀಡಲಾಗಿದೆ. ಹಿಂದಿನ ಸರ್ಕಾರ, ಬಾಕಿ ನೆಪದಲ್ಲಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿತ್ತು ಎಂದು ಟೀಕಿಸಿದರು.ಹಿಂದಿನ 2 ವರ್ಷ ಸರಿಯಾಗಿ ಮಳೆಯಾಗಿರಲಿಲ್ಲ. ರಾಜ್ಯದ ವಿವಿಧ ಕಡೆ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಉತ್ತಮವಾಗಿ ಬೀಳಬಹುದು ಎಂಬ ಆಶಾಭಾವ ಮೂಡಿದೆ. ರೈತರಿಗೆ ರಸಗೊಬ್ಬರ, ಬಿತ್ತನೆಬೀಜ, ಕ್ರಿಮಿನಾಶಕಗಳ ಕೊರತೆ ಆಗಬಾರದು. ತೊಂದರೆಯಾದರೆ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ಎಚ್ಚರಿಸಿದರು.ಸರಿಯಾಗಿ ಮಳೆಯಾಗಿ, ಬೆಳೆ ಉತ್ತಮವಾಗಿ ಬಂದರೆ ಸರ್ಕಾರಕ್ಕೆ ಅರ್ಧ ಸಮಸ್ಯೆ ನಿವಾರಣೆಯಾದಂತೆ ಎಂದರು.

ಎರಡು ವರ್ಷದಿಂದ ಬರಗಾಲವಿತ್ತು. 157 ತಾಲ್ಲೂಕಿನಲ್ಲಿ ಕುಡಿಯುವ ನೀರಿರಲಿಲ್ಲ; ಈಗಲೂ ಕೆಲವು ಕಡೆ ಸಮಸ್ಯೆ ಇದೆ. ಸರ್ಕಾರ ರೈತರ ಪರವಾಗಿ ಕಾರ್ಯ ನಿರ್ವಹಿಸಲಿದೆ.ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಆರಂಭಿಸಿದ್ದೇ ಇದಕ್ಕೆ ನಿದರ್ಶನ. ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ರೂ5,500 ಹಾಗೂ ರಾಜ್ಯ ಸರ್ಕಾರ ರೂ1 ಸಾವಿರ ನೀಡುತ್ತದೆ ಎಂದು ಉದಾಹರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.