ಗುರುವಾರ , ಮೇ 6, 2021
21 °C

ಜನರ ಮನ ಗೆದ್ದ ಡಾ.ಅನ್ನದಾನೀಶ್ವರ ಶ್ರೀ

ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಮುಂಡರಗಿ: ಪಟ್ಟಣದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಗದಗ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮಳನದ ಸರ್ವಾಧ್ಯಕ್ಷರನ್ನಾಗಿ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಸರ್ವಾನುಮತದಿಂದ ಆಯ್ಕೆ ಮಾಡಿರುವುದಕ್ಕೆ ಜಿಲ್ಲೆ ಹಾಗೂ ನಾಡಿನ ಜನತೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರು ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಾ ಕೇವಲ ಒಂದು ಸಂಸ್ಥಾನ ಮಠದ ಅಧಿಪತಿಯಾಗಿ ಕುಳಿತುಕೊಂಡಿದ್ದರೆ ನಾಡೋಜದಂತಹ ನಾಡಿನ ಹೆಮ್ಮೆಯ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬರುತ್ತಿರಲ್ಲಿಲ್ಲ.ಬಿಡುವಿಲ್ಲದ ತಮ್ಮ ದೈನಂದಿನ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕೆಲಸ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಸುಮಾರು 120 ಗ್ರಂಥಗಳನ್ನು ರಚಿಸುವ ಮೂಲಕ ಕನ್ನಡ ನುಡಿ ಸೇವೆಯನ್ನು ಚಾಚುತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಆ ಕಾರಣದಿಂದ ನಾಡೋಜದಂತಹ ಪ್ರಶಸ್ತಿಗಳು ಶ್ರಿಗಳನ್ನು ಹುಡುಕಿಕೊಂಡು ಬರುತ್ತಿವೆ.ಒಬ್ಬ ಶ್ರೇಷ್ಠ ಸಾಹಿತಿ, ತ್ರಿಭಾಷಾ ಪಂಡಿತ, ಉತ್ತಮ ವಾಗ್ಮಿಗಳಾಗಿರುವ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿಯಂತವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮಳನದ ಸರ್ವಾಧ್ಯಕ್ಷರಾಗಬೇಕಿತ್ತು ಎಂದು ಹಲವಾರು ಬುದ್ಧಿಜೀವಿಗಳು ಹೇಳುತ್ತಲೇ ಬಂದಿದ್ದಾರೆ. ಅಂತಹ ಸ್ಥಾನಮಾನ ಹೊಂದಲು ಇರಬೇಕಿರುವ ಸರ್ವ ಅರ್ಹತೆಗಳು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರಲ್ಲಿವೆ. ಬಿಜಾಪುರದ ಪೀರಾಪುರ ಗ್ರಾಮದಲ್ಲಿ 4.5.1943ರಲ್ಲಿ ಜನಿಸಿದ ಪೂಜ್ಯರು ನಂತರ ಕಾಶಿ, ಅಲಹಾಬಾದ ಮೊದಲಾದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ, ಹಿಂದಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆದುಕೊಂಡರು.ಮುಂದೆ 1962ರಲ್ಲಿ ಮುಂಡರಗಿಯ ಅನ್ನದಾನೀಶ್ವರ ಮಠದ ಪೀಠಾರೋಹಣ ಗೈದು ಈ ನಾಡಿಗೆ ಬೆಳಕಾದರು. ಶ್ರಿಗಳ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕಳೆದ ಹಲವು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯವು ಶ್ರಿಗಳಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ನಂತರ ಕನ್ನಡದ ಹಂಪಿ ವಿಶ್ವವಿದ್ಯಾಲಯವು ನಾಡಿನ ಪ್ರತಿಷ್ಠಿತ `ನಾಡೋಜ' ಪ್ರಶಸ್ತಿಯನ್ನು ನೀಡುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ.    

   

ಬರವಣಿಗೆಯನ್ನು ಸದಾ ಇಷ್ಟಪಡುವ ಶ್ರಿಗಳು ಸ್ವತಃ 120 ಮೌಲಿಕ ಗ್ರಂಥಗಳನ್ನು ರಚಿಸಿರುವುದಲ್ಲದೆ ಮಠದಲ್ಲಿ ಅನ್ನದಾನೀಶ್ವರ ಗ್ರಂಥ ಮಾಲೆಯನ್ನು ಸ್ಥಾಪಿಸಿ ಆ ಮೂಲಕ ಬೇರೆಯವರು ರಚಿಸಿರುವ ಸುಮಾರು 208 ಉತ್ತಮ ಗ್ರಂಥಗಳನ್ನು ಬೆಳಕಿಗೆ ತಂದಿದ್ದಾರೆ.ಇಂಗ್ಲಿಷ್ ಭಾಷೆ ಸೇರಿದಂತೆ ಶ್ರಿಗಳ ಹಲವಾರು ಗ್ರಂಥಗಳು ದೇಶದ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕಾಶ್ಮೆರವು ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಉಪನ್ಯಾಸ ಮಾಲಿಕೆಗಳಲ್ಲಿ ವಿದ್ವತ್‌ಪೂರ್ಣ ಉಪನ್ಯಾಸ ನೀಡಿ ಪಂಡಿತರಿಂದ ಮೆಚ್ಚುಗೆ ಗಳಿಸಿದ್ದಾರೆ.ತಮ್ಮ ಚಟುವಟಿಕೆಗಳನ್ನು ಕೇವಲ ಮಠಕ್ಕೆ ಮಾತ್ರ ಸೀಮಿತಗೊಳಿಸಿದೆ ಕಳೆದ ವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಕೈಗೊಂಡಿದ್ದ ಪೋಸ್ಕೊ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರಿಗಳು ರೈಲ್ವೆ ಮಂಜೂರಾತಿ ಸೇರಿದಂತೆ ವಿವಿಧ ಜನಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮನ ಗೆದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.