ಭಾನುವಾರ, ಮೇ 16, 2021
22 °C

ಜನಸೇವೆ ಸಕಾಲಕ್ಕೆ ಸ್ಪಂದಿಸಿ:ಬಯ್ಯಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ನಾಗರಿಕ ಸೇವೆಗೆ ಖಾತರಿ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ `ಸಕಾಲ್~ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಮಾಣಿಕ ಪ್ರಯತ್ನ ಮಾಡುವಂತೆ ಶಾಸಕ ಅಮರೇಗೌಡ ಬಯ್ಯಾಪುರ ಸೋಮವಾರ ಇಲ್ಲಿ ಹೇಳಿದರು.ನಾಗರಿಕ ಸೇವಾ ಖಾತರಿ ಅಧಿನಿಯಮ 2012ರ ಕಾಯ್ದೆ ಅಡಿಯಲ್ಲಿ ಬರುವ `ಸಕಾಲ್~ ಯೋಜನೆಗೆ ಇಲ್ಲಿಯ ತಹಶೀಲ್ದಾರರ ಕಚೇರಿಯಲ್ಲಿ ಸಾಂಕೇತಿಕ ಚಾಲನೆ ನೀಡಿದ ಅವರು, ಅಧಿಕಾರಿಗಳಷ್ಟೆ ಜವಾಬ್ದಾರಿ ಜನಪ್ರತಿನಿಧಿಗಳ ಮೇಲೆಯೂ ಇದ್ದು ಎಲ್ಲರೂ ಒಟ್ಟಾಗಿ ಸೇರಿ ಜನರಿಗೆ ಸಕಾಲದಲ್ಲಿ ಸೇವೆ ಒದಗಿಸುವುದಕ್ಕೆ ಮುಂದಾಗೋಣ ಎಂದರು.ಇತ್ತೀಚಿನ ದಿನಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದೆ, ಸಾಮಾನ್ಯರಲ್ಲೂ ಸಮಾಜಿಕ ಪ್ರಜ್ಞೆ ಬೆಳೆಯುತ್ತಿದ್ದು ಪ್ರತಿಯೊಂದನ್ನು ಪ್ರಶ್ನಿಸುವ ಮಟ್ಟದಲ್ಲಿ ಜನ ಇದ್ದಾರೆ. ಹಾಗಾಗಿ ಗುರುತಿಸಲಾಗಿರುವ 11 ಪ್ರಮುಖ ಇಲಾಖೆಗಳಿಗೆ ಸೇರಿದ 151 ನಿರ್ದಿಷ್ಟ ಕೆಲಸಕಾರ್ಯಗಳನ್ನು ಜನರಿಗೆ ಒದಗಿಸುವುದಕ್ಕೆ ಎಲ್ಲರೂ ಪ್ರಮಾಣ ಮಾಡಬೇಕು ಎಂದು ಹೇಳಿದರು. ಸಕಾಲದಲ್ಲಿ ಕೆಲಸ ಮಾಡದವರಿಗೆ ದಿನಕ್ಕೆ ರೂ 20 ರಿಂದ ಗರಿಷ್ಟ 500ವರೆಗೂ ದಂಡ ಹಾಕಲಾಗುತ್ತದೆ. ಆದರೆ ದಂಡ ಕಟ್ಟಿದರಾಯಿತು ಎಂಬ ಉದಾಸೀನ ಭಾವನೆ ನೌಕರರಲ್ಲಿ ಇರಕೂಡದು. ದಂಡ ಶಿಕ್ಷೆಯಿಂದ ದೂರ ಉಳಿಯುವುದಕ್ಕೆ ಪ್ರತಿಜ್ಞೆಗೈಯ್ಯಬೇಕು ಎಂದರು.ಪ್ರಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ ವೀರೇಶ ಬಿರಾದಾರ, ಸಕಾಲ್ ಯೋಜನೆಯನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಬೇಕಿದೆ, ಪಾರದರ್ಶಕತೆ ಮತ್ತು ಪ್ರಾಮಾಣಿಕ ಯತ್ನ ನಡೆಸುವ ಮೂಲಕ ಎಲ್ಲ ಜನರಿಗೂ ಸೇವೆ ಒದಗಿಸಬೇಕಿದೆ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಈರಣ್ಣ ವಾಲಿ, ಹೊಸ ಯೋಜನೆಯನ್ನು ಸ್ವಾಗತಿಸೋಣ, ತೊಂದರೆ ಎದುರಾದರೂ ಎಲ್ಲರೂ ಕೂಡಿ ನಿಷ್ಟೆಯಿಂದ ಕರ್ತವ್ಯ ನಿಭಾಯಿಸೋಣ ಎಂದು ಹೇಳಿದರು.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಇಇ ಒಣಕುದರಿ, ಉಪನೋಂದಣಿ ಅಧಿಕಾರಿ ಜಾನ್ ಫಿಲಿಪ್ಸ್, ಲೋಕೋಪಯೋಗಿ ಇಲಾಖೆ ಎಇಇ ಎನ್.ಎಸ್.ಗೋಟೂರು ಮತ್ತಿತರರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಜೆ.ಶರಣಪ್ಪ ಪ್ರಾರ್ಥಿಸಿದರು. ಸಿರಸ್ತೆದಾರ ಸುರೇಶ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು. ಸಾರ್ವಜನಿಕರು, ವಿವಿಧ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.