ಭಾನುವಾರ, ಜನವರಿ 19, 2020
29 °C

ಜನಾಂದೋಲನಕ್ಕೆ ಸಂದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಂದೋಲನವೊಂದು ವ್ಯವಸ್ಥೆಯ ಮೇಲೆ ನೈತಿಕ ಒತ್ತಡ ಹೇರುವುದರಲ್ಲಿ ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯೆಂಬಂತೆ  ಲೋಕ­ಪಾಲ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದೆ. ಇದು ಸಾಧ್ಯ­ವಾದುದರ ಹಿಂದೆ ಗಾಂಧೀವಾದಿ ಅಣ್ಣಾ ಹಜಾರೆ ನೇತೃತ್ವದ ಹೋರಾಟದ ಪಾತ್ರ ದೊಡ್ಡದು. ಲೋಕಪಾಲ ಮಸೂದೆಯನ್ನು ರಾಜಕೀಯ ಪಕ್ಷಗಳ ಮಟ್ಟಿಗೆ ಒಂದು ನೈತಿಕ ಪ್ರಶ್ನೆಯಾಗುವಂತೆ ಮಾಡಿದ್ದು ಈ ಹೋರಾಟ ಎಂಬುದರಲ್ಲಿ ಸಂಶಯವಿಲ್ಲ.

ಇದರ ಜೊತೆಗೆ ದೆಹಲಿ ರಾಜ್ಯದ ಚುನಾವಣಾ ಫಲಿತಾಂಶ ನೀಡಿದ ಸೂಚನೆಗಳನ್ನೂ ಆಡಳಿತಾರೂಢರು ಗ್ರಹಿಸಿರುವುದು ಈ ಮಸೂದೆಯನ್ನು ಅಂಗೀಕರಿಸಲು ಕಾರಣವಾಗಿದೆ. ಈ ಬೆಳವಣಿಗೆಯನ್ನು ಭ್ರಷ್ಟಾಚಾರದ ನಿಯಂತ್ರಣದ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಸಾಂಸ್ಥಿಕ ಸುಧಾರಣೆಗಳಲ್ಲಿ ಒಂದಾಗಿ ಗ್ರಹಿಸುವ ಅಗತ್ಯವೂ ಇದೆ.

ಮಾಹಿತಿ ಹಕ್ಕು ಕಾಯ್ದೆ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಸ್ಥಿರ-–ಚರ ಆಸ್ತಿಗಳನ್ನು ಘೋಷಿಸುವುದನ್ನು ಕಡ್ಡಾಯಗೊಳಿಸಿದ ನಿಯಮ, ನಾಗರಿಕ ಸೇವೆಗಳ ಖಾತರಿ ಕಾಯ್ದೆ ಇತ್ಯಾದಿಗಳು ಈಗಾಗಲೇ ಇವೆ. ಈ ಮೂರರಲ್ಲಿ ಮೊದಲೆರಡೂ ಸಮಾಜ ಮತ್ತು ನ್ಯಾಯಾಂಗದ ಒತ್ತಡದಿಂದಲೇ ರೂಪು­ಗೊಂಡವು ಎಂಬುದು ಗಮನಾರ್ಹ.

ಲೋಕಪಾಲ ಮಸೂದೆ ಈ ಹಾದಿ­ಯಲ್ಲಿ ಮತ್ತೊಂದು ದೊಡ್ಡ ಹೆಜ್ಜೆ. 1966ರ ಮೊದಲ ಆಡಳಿತಾ ಸುಧಾ­ರಣಾ ಆಯೋಗವೇ ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾ­ಯುಕ್ತ ವ್ಯವಸ್ಥೆಯನ್ನು ರೂಪಿಸಬೇಕೆಂದು ಹೇಳಿತ್ತು. 1968ರಿಂದ 2001ರ ನಡುವೆ ಎಂಟು ಬಾರಿ ವಿವಿಧ ಸರ್ಕಾರಗಳು ಈ ಮಸೂದೆಯನ್ನು ರೂಪಿಸಿ ಮಂಡಿಸಿದವಾದರೂ ಅದಕ್ಕೆ ಅಂಗೀಕಾರ ದೊರೆತಿರಲಿಲ್ಲ.

2005­ರಲ್ಲಿ ಎರಡನೇ ಆಡಳಿತಾ ಸುಧಾರಣಾ ಆಯೋಗವೂ ಲೋಕಾಪಾಲ ಮಸೂದೆಯ ಬಗ್ಗೆ ಹೇಳಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದು 2011ರಲ್ಲಿ ಅಣ್ಣಾ ಹಜಾರೆ  ಆರಂಭಿಸಿದ ಚಳವಳಿ. ಒಂದು ಸಾಮಾಜಿಕ ಒತ್ತಡದ ಪರಿಣಾಮವಾಗಿ ರೂಪುಗೊಳ್ಳುವ ಯಾವುದೇ ನಿಯಂತ್ರಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ಆಡಳಿತಾರೂಢರು ತೊಡಗಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಆದರೂ ಸಾಂಸ್ಥಿಕ ವ್ಯವಸ್ಥೆಯೊಂದು ನಿಧಾನವಾಗಿಯಾದರೂ ಪರಿಣಾಮಕಾರಿ­ಯಾಗುವ ವಾಸ್ತವವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚುನಾವಣಾ ಆಯೋಗದ ಶಕ್ತಿ ಏನೆಂದು ತಿಳಿಯುವುದಕ್ಕೆ ಹಲವು ದಶಕಗಳೇ ಬೇಕಾಗಿ ಬಂದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಈಗ ಸಂಸತ್ತು ಒಪ್ಪಿಕೊಂಡಿರುವ ಮಸೂದೆಗೆ ಅನೇಕ ಮಿತಿಗಳಿವೆ. ಆದರೆ ಅದನ್ನು ಕಾನೂನಾಗಿ ಪರಿವರ್ತಿಸುವ ಹಾದಿಯಲ್ಲಿ ಈ ಮಿತಿಗಳು ಮತ್ತಷ್ಟು ಹೆಚ್ಚದಂತೆ ನೋಡಿಕೊಳ್ಳಲು ಸಾಧ್ಯವಿದೆ.

ಅದಕ್ಕಾಗಿ ಈಗಾಗಲೇ ಲೋಕಾ­ಯುಕ್ತ ವ್ಯವಸ್ಥೆ ಜಾರಿಯಲ್ಲಿರುವ ರಾಜ್ಯಗಳ ಅನುಭವದ ಸೂಕ್ಷ್ಮ ಪರಿಶೀಲನೆಯೊಂದು ನಡೆಯಬೇಕು. ಭ್ರಷ್ಟಾಚಾರಕ್ಕೆ ಒಂದು ಹಂತದ ಸಾಮಾಜಿಕ ಒಪ್ಪಿಗೆಯೂ ಇರುವ ಭಾರತದಲ್ಲಿ ಕೇವಲ ಸರ್ಕಾರ ರೂಪಿ­ಸುವ ಸಾಂಸ್ಥಿಕ ವ್ಯವಸ್ಥೆಯೊಂದರ ಮೂಲಕವಷ್ಟೇ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗದು.

ಸಾಲದ್ದಕ್ಕೆ ಲೋಕಪಾಲ ವ್ಯವಸ್ಥೆಯೂ, ‘ನಿಧಾನ ನ್ಯಾಯ’ದ ಸಂಕೇತವಾಗಿಬಿಟ್ಟಿರುವ  ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೇ ನಂಬಿಕೊಂಡಿದೆ. ಆದ್ದರಿಂದ ಈ ಕಾಯ್ದೆ ಭ್ರಷ್ಟಾಚಾರಿಗಳಲ್ಲಿ ಭಯವನ್ನೇನೂ ಹುಟ್ಟಿಸಲಾರದು. ಭ್ರಷ್ಟಾಚಾರವನ್ನು ಮಟ್ಟಹಾಕಲು ಬೇಕಿರುವುದು ಸಾಮಾ­ಜಿಕ ನಿಯಂತ್ರಣ. ಭ್ರಷ್ಟಾಚಾರಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವಂತಹ ವಾತಾವರಣ ರೂಪಿಸುವುದಕ್ಕಾಗಿ ಮುಂದಿನ ಹಂತದ ಜನಾಂದೋಲನಗಳು ರೂಪುಗೊಳ್ಳಬೇಕಾಗಿದೆ.

ಪ್ರತಿಕ್ರಿಯಿಸಿ (+)