ಭಾನುವಾರ, ಜೂಲೈ 5, 2020
26 °C

ಜಪಾನ್: ಕೋಟಿ ಪಟ್ಟು ಅಧಿಕ ವಿಕಿರಣ ಸೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನ್: ಕೋಟಿ ಪಟ್ಟು ಅಧಿಕ ವಿಕಿರಣ ಸೋರಿಕೆ

ಟೋಕಿಯೊ/ ಫುಕುಶಿಮಾ (ಪಿಟಿಐ): ಫುಕುಶಿಮಾ ಅಣು ಸ್ಥಾವರದ 2ನೇ ರಿಯಾಕ್ಟರ್ ಸಮೀಪದ ಟರ್ಬೈನ್ ಕಟ್ಟಡದ ತಳಭಾಗದ ನೀರಿನಲ್ಲಿ ಸಾಮಾನ್ಯ ಸ್ಥಿತಿಯಲ್ಲಿನ ವಿಕಿರಣ ಪ್ರಮಾಣಕ್ಕಿಂತ ಒಂದು ಕೋಟಿ ಪಟ್ಟು ಅಧಿಕ ವಿಕಿರಣ ಅಂಶ ಇರುವುದು ಪರೀಕ್ಷೆಯಿಂದ ಬೆಳಕಿಗೆ ಬಂದಿದೆ.ಇಂತಹ ಅಪಾಯಕಾರಿ ವಿಕಿರಣ ಸೋರಿಕೆಯ ಹಿನ್ನೆಲೆಯಲ್ಲಿ ಸ್ಥಾವರವನ್ನು ತಂಪುಗೊಳಿಸುವ ಕಾರ್ಯದಲ್ಲಿ ತೊಡಗಿರುವ ಕೆಲಸಗಾರರನ್ನು ತಾತ್ಕಾಲಿಕವಾಗಿ ಹೊರಗೆ ಕಳುಹಿಸಲಾಗಿದೆ. ಇದರಿಂದ ಸಹಜವಾಗಿಯೇ ಸ್ಥಾವರಗಳನ್ನು ತಂಪುಗೊಳಿಸುವ ಕಾರ್ಯವೂ ಕುಂಟುತ್ತ ಸಾಗುವಂತಾಗಿದೆ.ಸ್ಥಾವರದ ನಿರ್ವಾಹಕ ಕಂಪೆನಿಯಾದ ‘ಟೆಪ್ಕೊ’ ಪರೀಕ್ಷೆ ನಡೆಸಿದಾಗ ಕ್ಯೂಬಿಕ್ ಸೆಂಟೀಮೀಟರ್ ನೀರಿನಲ್ಲಿ 2.9 ಶತಕೋಟಿ ಬೆಕೆರೆಲ್ಸ್ ವಿಕಿರಣ ಅಂಶ ಇರುವುದು ಗೊತ್ತಾಗಿದೆ. ರಿಯಾಕ್ಟರ್ 1 ಮತ್ತು 3ನೇ ರಿಯಾಕ್ಟರ್‌ನ ಟರ್ಬೈನ್ ಕಟ್ಟಡದ ತಳಭಾಗದಲ್ಲಿ ಈಗಾಗಲೇ ಒಂದು ಸಾವಿರ ಪಟ್ಟು ಅಧಿಕ ವಿಕಿರಣ ಅಂಶ ಪತ್ತೆಯಾಗಿದೆ.ಸ್ಥಾವರವನ್ನು ಸಹಜ ಸ್ಥಿತಿಗೆ ತರುವ ಕಾರ್ಯ ನಿಧಾನಗತಿಯಲ್ಲಷ್ಟೇ ನಡೆಯುತ್ತಿದೆ ಎಂಬುದನ್ನು ಮುಖ್ಯ ಸಂಪುಟ ಕಾರ್ಯದರ್ಶಿ ಯುಕಿಯೊ ಎಡನೊ ಒಪ್ಪಿಕೊಂಡಿದ್ದಾರೆ.

ಫುಕುಶಿಮಾ ಸ್ಥಾವರಕ್ಕೆ 30 ಕಿ.ಮೀ. ದೂರದಲ್ಲೂ ಒಂದು ವರ್ಷದಲ್ಲಿ ಕಂಡುಬರಬಹುದಾದ ಒಟ್ಟು ವಿಕಿರಣ ಪ್ರಮಾಣಕ್ಕಿಂತ 40 ಪಟ್ಟು ಅಧಿಕ ವಿಕಿರಣ ಅಂಶ ಈಗ ವಾತಾವರಣದಲ್ಲಿ ಸೇರಿಕೊಂಡಿರುವುದು ಗೊತ್ತಾಗಿದೆ. ಇದರಿಂದಾಗಿ ವಿಕಿರಣ ಸೋರಿಕೆ ಗಂಭೀರ ಹಂತ ತಲುಪಿರುವುದು ದೃಢಪಟ್ಟಿದೆ.ಈ ಮಧ್ಯೆ, ಭೂಕಂಪ ಮತ್ತು ಸುನಾಮಿಯಲ್ಲಿ ಸತ್ತವರ ಸಂಖ್ಯೆ 10,489ಕ್ಕೆ ಏರಿದ್ದು, 16,600 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜಪಾನ್ ಪೊಲೀಸರು ತಿಳಿಸಿದ್ದಾರೆ. ಮಿಯಾಗಿ ಪ್ರಾಂತ್ಯವೊಂದರಲ್ಲೇ 6,333 ಮಂದಿ ಸತ್ತಿದ್ದಾರೆ. ದುರಂತದಲ್ಲಿ ಹಲವಾರು ಮಕ್ಕಳು ತಬ್ಬಲಿಗಳಾಗಿರುವ ಸಾಧ್ಯತೆಗಳಿದ್ದು, ಅವರನ್ನು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಚೀನಾ, ಅಮೆರಿಕದಲ್ಲಿ ವಿಕಿರಣ ಪತ್ತೆ: ಜಪಾನ್ ಅಣು ದುರಂತದ ಕರಿ ಛಾಯೆ ಚೀನಾ ಮತ್ತು ಅಮೆರಿಕಗಳಲ್ಲಿ ಕಾಣಿಸತೊಡಗಿದೆ.  ಚೀನಾದ ಈಶಾನ್ಯ ಭಾಗದ  ಹೈಲಾಂಗ್‌ಜಿಯಾಮಗ್ ಪ್ರಾಂತ್ಯದಲ್ಲಿ ವಾತಾವರಣದಲ್ಲಿ ಅಯೀಡಿನ್-131 ವಿಕಿರಣ ಅಂಶ ಪತ್ತೆಯಾಗಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಇಲ್ಲ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ.ಅಮೆರಿಕದ ಲಾಸ್ ವೆಗಾಸ್‌ನಲ್ಲೂ ವಿಕಿರಣ ಅಂಶ ಪತ್ತೆಯಾಗಿದೆ. ಇಲ್ಲಿನ ನವೇಡಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ  ಅಯೋಡಿನ್-131 ಮತ್ತು ಝೆನಾನ್-133 ವಿಕಿರಣ ಅಂಶಗಳು ವಾತಾವರಣದಲ್ಲಿ ಕಂಡುಬಂದಿವೆ, ಸಾಮಾನ್ಯವಾಗಿ ಇಂತಹ ವಿಕಿರಣಗಳು ಇಲ್ಲಿ ಕಾಣಿಸುವುದಿಲ್ಲ, ಜಪಾನ್ ದುರಂತದ ಫಲವೇ ಇದು, ಆದರೆ ಇದು ಇಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕಾಣಿಸಿರುವುದರಿಂದ ಆರೋಗ್ಯದ ಮೇಲೆ ಅಪಾಯ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.ದುರಂತದ ಚಿತ್ರಣ: ಭೂಕಂಪ, ಸುನಾಮಿಯಿಂದ ತತ್ತರಿಸಿರುವ ಜಪಾನ್‌ನಲ್ಲಿನ ದುರಂತದ  ದೃಶ್ಯಕ್ಕೆ ಕನ್ನಡಿ ಹಿಡಿಯುವುದು ಅಲ್ಲಿನ ಸಾಮೂಹಿಕ ಸಮಾಧಿ ಸ್ಥಳಗಳು. ಬೌದ್ಧ ಸಂಪ್ರದಾಯದಂತೆ ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರಕ್ಕೆ ಹತ್ತಾರು ವಿಧಿ ವಿಧಾನಗಳಿವೆ. ಆದರೆ ಇಲ್ಲಿ ಇದೀಗ ಸೈನಿಕರು ಮೃತದೇಹಗಳನ್ನು ಶವಪಟ್ಟಿಗೆಯಲ್ಲಿ ಇಟ್ಟು ಒಂದೊಂದಾಗಿ ಗುಂಡಿಗಳಲ್ಲಿ ಇಟ್ಟು ಮಣ್ಣು ಮುಚ್ಚುತ್ತಿದ್ದಾರೆ. ಬಂಧುಗಳು ಅಸಹಾಯಕರಾಗಿ ಈ ಸನ್ನಿವೇಶವನ್ನು ನೋಡಿ ಮಮ್ಮಲ ಮರುಗುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.