ಶುಕ್ರವಾರ, ಮೇ 27, 2022
21 °C

ಜಪಾನ್ ದುರಂತ: ಭಾರತಕ್ಕೆ ಎಚ್ಚರಿಕೆಯ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನಿನಲ್ಲಿ ಒಂದಾದಮೇಲೊಂದರಂತೆ ಸ್ಫೋಟಗೊಳ್ಳುತ್ತಿರುವ ಅಣುಸ್ಥಾವರಗಳನ್ನು ನೋಡಿದರೆ ಪ್ರಾಯಶಃ 1945ರ ಅಮೆರಿಕದ ಅಣುಬಾಂಬ್ ದಾಳಿಗಿಂತ ಭೀಕರವಾದ ಸನ್ನಿವೇಶವನ್ನು ಆ ದೇಶ ಎದುರಿಸುತ್ತಿರುವಂತಿದೆ. ಆದರೆ ಜಪಾನಿನಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಆದ ಅನಾಹುತ ಭೀಕರವೇ ಆದರೂ ಅಣುಸ್ಫೋಟಗಳಿಂದ ಮಾತ್ರ ಇಡೀ ಜಗತ್ತು ಈಗ ಆತಂಕವನ್ನು ಎದುರಿಸುತ್ತಿದೆ.ಇಂದು ಕ್ಲೀನ್ ಎನರ್ಜಿಯ ಹೆಸರಿನಲ್ಲಿ ಇಡೀ ಜಗತ್ತಿನ ಮಾರುಕಟ್ಟೆಯನ್ನು ಕಬಳಿಸಲು ಸಿದ್ಧವಾಗಿರುವ ದೈತ್ಯ ಬಹುರಾಷ್ಟ್ರೀಯ ಅಣುಶಕ್ತಿ ಉದ್ಯಮಿಗಳೇ ಇಂದು ಜಪಾನ್ ಹಾಗೂ ಇಡೀ ವಿಶ್ವ ಎದುರಿಸುತ್ತಿರುವ ಆತಂಕ ಹಾಗೂ ಅನಾಹುತಗಳಿಗೆ ಕಾರಣ. ಜಪಾನಿನ ಅಣು ಸ್ಫೋಟದಿಂದ ಪಾಠ ಕಲಿಯದಿದ್ದರೆ ಭಾರತಕ್ಕೂ ಅಪಾಯ ತಪ್ಪಿದ್ದಲ್ಲ. ಕಳೆದ ಕೆಲವು ವರ್ಷಗಳಿಂದ ಅಣುಶಕ್ತಿ ಮಾತ್ರ ‘ಕ್ಲೀನ್ ಎನರ್ಜಿ’ ಎಂದೂ, ಅದು ಮಾತ್ರ ಇಂಗಾಲ ಹೊರ ಸೂಸದ ಶಕ್ತಿ ಮೂಲವಾದ್ದರಿಂದ ಬರುವ ದಿನಗಳಲ್ಲಿ ಇಡೀ ಜಗತ್ತು ಅಣುಶಕ್ತಿಯನ್ನೇ ತನ್ನ ಇಂಧನ ಮೂಲ ಮಾಡಿಕೊಳ್ಳಬೇಕೆಂಬ ಪ್ರಚಾರವನ್ನು ಅಣುಶಕ್ತಿ ಉದ್ಯಮಿಗಳು ಪ್ರಾರಂಭಿಸಿದ್ದಾರೆ. ಅದಕ್ಕೆ ಅಮೆರಿಕ, ಫ್ರಾನ್ಸ್‌ನಂಥಾ ಸಾಮ್ರಾಜ್ಯಶಾಹಿ ದೇಶಗಳು ಸಹ  ಬೆಂಬಲ ಕೊಡುತ್ತಾ ಬಂದಿವೆ. ಈಗ ತಮ್ಮ ಅಣು ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ಭಾರತದಂಥಾ ಬೃಹತ್ ಮಾರುಕಟ್ಟೆಯ ಮೇಲೆ ಕಣ್ಣುಹಾಕಿವೆ.ಆದರೆ ಅಣುಶಕ್ತಿ ಉತ್ಪಾದನೆಯಲ್ಲೇ ಅಂತರಿಕವಾಗಿ ಅವಘಡಗಳ ಸಾಧ್ಯತೆಗಳು ಅಡಕವಾಗಿವೆ. ಈ ಹಿನ್ನೆಲೆಯಲ್ಲಿ ಅಣುಸ್ಥಾವರಗಳು ಸಂಭವನೀಯ ಅಣುಬಾಂಬುಗಳೆ ಎಂದು ಜನಪರ ವಿಜ್ಞಾನಿಗಳು ಮತ್ತು ಕಾರ್ಯಕರ್ತರು ವಿರೋಧಿಸುತ್ತಾ ಬಂದಿದ್ದರೂ ಆ ಅಭಿಪ್ರಾಯವನ್ನು ಅಭಿವೃದ್ಧಿ ವಿರೋಧಿಯೆಂದು ಕಡೆಗಣಿಸಲಾಗುತ್ತಿದೆ. ಅಣುಶಕ್ತಿಯ ಉತ್ಪಾದನಾ ವೆಚ್ಚ ಮತ್ತು ಭದ್ರತೆಯ ಬಗ್ಗೆ ಸುಳ್ಳುಗಳನ್ನೇ ಹೇಳುತ್ತಾ ಬರಲಾಗಿದೆ.ಯಾವುದೇ ಅಣುಸ್ಥಾವರದಲ್ಲಿ ಕೋರ್ ಭಾಗದಲ್ಲಿ ಪರಮಾಣು ಇಂಧನಗಳು ಅಣು ವಿದಳನ ಪ್ರಕ್ರಿಯೆಯಲ್ಲಿ ಅಪಾರ ಶಾಖವನ್ನು ಮತ್ತು ವಿಕಿರಣ ಸೂಸುವ ತ್ಯಾಜ್ಯವನ್ನು ಹುಟ್ಟುಹಾಕುತ್ತವೆ. ಆದರೆ ಈ ಶಾಖದಿಂದ ಇಡೀ ಕೋರ್ ಭಾಗವೇ ಕರಗಿ ಹೋಗದಂತೆ ಸದಾ ಅದನ್ನು ತಣ್ಣಗಾಗಿಸಲು ಲಕ್ಷ ಲಕ್ಷ ಲೀಟರ್ ತಣ್ಣೀರನ್ನು ನಿರಂತರವಾಗಿ ಹರಿಸುತ್ತಲೇ ಇರಬೇಕು. ಒಂದು ವೇಳೆ ತಣ್ಣಗಾಗಿಸುವ ಪ್ರಕ್ರಿಯೆ ನಿಂತುಹೋದಲ್ಲಿ ಇಡೀ ಕೋರ್ ಭಾಗದಲ್ಲಿ ಅಪಾರ ಶಾಖ ಉಂಟಾಗಿ ಸ್ಥಾವರದಲ್ಲಿ  5000 ಡಿಗ್ರಿಗಿಂತಲೂ ಹೆಚ್ಚಿನ ಶಾಖ ಉಂಟಾಗುತ್ತದೆ. ಈ ಶಾಖವನ್ನು ತಡೆಯದೆ ಇಡೀ ಸ್ಥಾವರ ಸ್ಫೋಟಗೊಂಡು ವಿಕಿರಣ ತ್ಯಾಜ್ಯಗಳು ವಾತಾವರಣವನ್ನು ಸೇರಿಕೊಳ್ಳುತ್ತವೆ. ಆ ನಂತರ ಅವು 1945ರಲ್ಲಿ ಅಣುಬಾಂಬ್ ಸ್ಫೋಟದ ನಂತರದ ಜಪಾನಿನಲ್ಲಿ ಯಾವ ರೀತಿಯ ಅನಾಹುತಗಳನ್ನು ಸೃಷ್ಟಿಸಿತೋ ಅದೇ ಬಗೆಯ ಅನಾಹುತಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತವೆ. ಕ್ಯಾನ್ಸರ್, ಚರ್ಮದ ಕಾಯಿಲೆ, ಕಂಡರಿಯದ ರೀತಿಯಲ್ಲಿ ಮನುಷ್ಯನ ಜೀನ್‌ಗಳ ಪರಿವರ್ತನೆ, ಕೇಳರಿಯದ ಕಾಯಿಲೆಗಳು, ಪತ್ತೆ ಹಚ್ಚಲಾಗದಷ್ಟು ವಿಕೃತಿಗಳು ಪೀಳಿಗೆ ಪೀಳಿಗೆಗೆ ಮುಂದುವರೆಯುತ್ತಲೇ ಹೋಗುತ್ತವೆ.ಜಪಾನಿನಲ್ಲಾಗುತ್ತಿರುವ ದುರಂತಗಳು 1978ರಿಂದಲೂ ಜಗತ್ತಿನಾದ್ಯಂತ ಸಂಭವಿಸುತ್ತಲೇ ಇವೆ. 1978ರಲ್ಲಿ  ಅಮೆರಿಕದ ಥ್ರೀ ಮೈಲ್ ಐಲೆಂಡ್ ದುರಂತದಿಂದ ಮೊದಲುಗೊಂಡು ಪ್ರತಿವರ್ಷ ಸಣ್ಣ ಅಥವಾ ದೊಡ್ಡ ಪ್ರಮಾಣದ ಅವಘಡಗಳು ಸಂಭವಿಸುತ್ತಲೇ ಇವೆ. ಆಗ ಅದೊಂದು ಸಣ್ಣ ಪುಟ್ಟ ಪ್ರಮಾದದಿಂದ ಸಂಭವಿಸಿದ್ದು, ಈಗ  ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೆಂದರೆ ಅಣುಸ್ಥಾವರದಲ್ಲಿ ಅವಘಡಗಳು ಸಂಭವಿಸುವುದೇ ಇಲ್ಲ ಎಂದು ಜನರನ್ನು ನಂಬಿಸಲಾಗುತ್ತಿದೆ. ಆದರೆ 1986ರಲ್ಲಿ ರಷ್ಯದ ಚೆರ್ನೊಬಿಲ್‌ನಲ್ಲಿ ಅಣುಸ್ಥಾವರವೊಂದು ಯಾವ ವಿಜ್ಞಾನಿಗಳ ಅಂಕೆಗೂ ಸಿಗದಂತೆ ಸ್ಪೋಟಗೊಂಡು ಕಂಡು ಕೇಳರಿಯದ ದುರಂತವನ್ನು ಹುಟ್ಟಿಹಾಕಿತು. ಆದರೆ ಆಗಲೂ ಸರ್ಕಾರಗಳು ವಾಸ್ತವ ಸಂಗತಿಯನ್ನು  ಮುಚ್ಚಿಹಾಕಲು ಪ್ರಯತ್ನಿಸಿದವು.ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿಯ ಪ್ರಕಾರ ಈವರೆಗೆ ಚೆರ್ನೊಬಿಲ್ ದುರಂತದಿಂದ ಕೇವಲ 5000 ಜನರು ಸತ್ತಿದ್ದಾರೆ! ಆದರೆ ಒಂದು ಸ್ವತಂತ್ರ ಅಧ್ಯಯನದ ಪ್ರಕಾರ 1986ರಿಂದ 2004ರವರೆಗೆ  9.85,000 ಜನರು ರಷ್ಯಾ, ಉಕ್ರೇನ್, ಬೈಲೋರಷ್ಯಾದಲ್ಲಿ ಸಾವನ್ನಪ್ಪಿದ್ದಾರೆ.ಆದರೆ ಅಣು ಶಕ್ತಿ ಮಾರಾಟದ ದೇಶಗಳು ಭಾರತವನ್ನು ಇರುಳು ಕಂಡ ಬಾವಿಗೆ ಹಗಲಿನಲ್ಲೇ ಮುಳುಗಿಸುವ ತಯಾರಿ ಮಾಡಿಕೊಂಡಿವೆ. 2005ರಲ್ಲಿ ಆದ ನಾಗರಿಕ ಅಣುಶಕ್ತಿ ಒಪ್ಪಂದದ ಪ್ರಕಾರ ಭಾರತವು ಜಪಾನಿನ ಇಂದಿನ ಅಣು ಅವಘಡಗಳಿಗೆ ಕಾರಣವಾದ ಕಂಪೆನಿಗಳಿಗೇ 150ಕ್ಕೂ ಹೆಚ್ಚು ಅಣುಸ್ಥಾವರಗಳನ್ನು ಸ್ಥಾಪಿಸುವ ಸುಮಾರು 1,50,000 ಲಕ್ಷ ಕೋಟಿ ರೂಪಾಯಿಗಳ ಗುತ್ತಿಗೆ ನೀಡಿದೆ.ಅಲ್ಲದೆ ‘Civil Liability of Nuclear Damage Bill’ ಎಂಬ ಕಾಯಿದೆಯೂ ಸಂಸತ್ತಿನಲ್ಲಿ  ಪಾಸಾಗಿದೆ. ಅದರ ಪ್ರಕಾರ ಅವಘಡ ಸಂಭವಿಸಿದ ಅಣುಸ್ಥಾವರವನ್ನು ನಿರ್ಮಾಣ ಮಾಡಿದ ಅಥವಾ ಸರಬರಾಜು ಮಾಡಿದ ಅಮೆರಿಕನ್ ಕಂಪೆನಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ. ಕೇವಲ ಸಿವಿಲ್ ಮೊಕದ್ದಮೆಯನ್ನು ಹೂಡಿ ಹೆಚ್ಚೆಂದರೆ 300 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ಮಾತ್ರ ಕೇಳಬಹುದು. ಅಂದರೆ ಲಾಭ ಅಮೆರಿಕದ ಕಂಪೆನಿಗಳಿಗೆ. ಆದರೆ ಅಪಾಯದ ಯಾವ ಹೊಣೆಗಾರಿಕೆ ಆ ಕಂಪೆನಿಗಳಿಗೆ ಇಲ್ಲ! ಜಪಾನಿನಲ್ಲಿ ಈಗ ಸಂಭವಿಸಿದ ದುರಂತದ ನಂತರವಾದರೂ ಭಾರತ ತನ್ನ ನಾಗರಿಕ ಅಣು ಒಪ್ಪಂದದಿಂದ ಆಗಬಹುದಾದ ಅಪಾಯವನ್ನು ಪುನರಾವಲೋಕಿಸಬೇಕು. ಜಪಾನಿನ ದುರಂತದಿಂದಲಾದರೂ ಭಾರತ ಪಾಠ ಕಲಿಯ ಬೇಕು. ನಾಗರಿಕ ಅಣುಶಕ್ತಿ ಯೋಜನೆಗಳನ್ನು ರದ್ದುಗೊಳಿಸಿ ಪರ್ಯಾ ಇಂಧನ ಮೂಲದ ಉತ್ತೇಜನಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾದಾಗ ಮಾತ್ರ ಈ ದೇಶ ಸುಕ್ಷಿತವಾಗಿರಲು ಸಾಧ್ಯ. 

   


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.