ಗುರುವಾರ , ಮೇ 13, 2021
35 °C
ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಆಫ್ರಿಕಾದ ಎದುರು ಮುಂದುವರಿದ ಭಾರತದ ಗೆಲುವಿನ ಓಟ

ಜಯದ `ಶಿಖರ' ಕಟ್ಟಿದ ಧವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯದ `ಶಿಖರ' ಕಟ್ಟಿದ ಧವನ್

ಕಾರ್ಡಿಫ್: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಅಮೋಘ ಆಟವದು. ಎದುರಾಳಿ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಚೆಂಡಾಡಿದ ಎಡಗೈ ಬ್ಯಾಟ್ಸ್‌ಮನ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ಗಳಿಸಿದರು. ಇದರ ಪರಿಣಾಮ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ 26 ರನ್‌ಗಳ ಅಮೋಘ ಗೆಲುವು ಸಾಧಿಸಿತು.ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬ್ಯಾಟ್ ಮಾಡಲು ಅವಕಾಶ ನೀಡಿತು. ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಭಾರಿ ನಿರೀಕ್ಷೆ ಮೂಡಿಸಿದ್ದ ಭಾರತ 50 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 331 ರನ್‌ಗಳನ್ನು ಕಲೆ ಹಾಕಿತು.ಈ ಸವಾಲಿನ ಮೊತ್ತ ಎ.ಬಿ. ಡಿವಿಲಿಯರ್ಸ್ ಸಾರಥ್ಯದ ಆಫ್ರಿಕಾಕ್ಕೆ ಸವಾಲು ಎನ್ನಿಸುವಂತೆ ಮಾಡಿದ್ದು ಭಾರತದ ಬೌಲರ್‌ಗಳು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 305 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ದ. ಆಫ್ರಿಕಾದ ಎದುರು ಭಾರತದ ಗೆಲುವಿನ ಓಟ ಮುಂದುವರಿಯಿತು. ಉಭಯ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಮೂರು ಸಲ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲಿ ಭಾರತವೇ ಗೆಲುವು ಪಡೆದಿದೆ.ಉತ್ತಮ ಜೊತೆಯಾಟ: ರೋಹಿತ್ ಶರ್ಮ (65, 81, 8 ಬೌಂಡರಿ, 1 ಸಿಕ್ಸರ್) ಮತ್ತು ಧವನ್ (114, 94ಎಸೆತ, 12 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 127 ರನ್‌ಗಳನ್ನು ಕಲೆ ಹಾಕಿ ಬುನಾದಿ ಗಟ್ಟಿಗೊಳಿಸಿತು. ಆರನೇ ಏಕದಿನ ಪಂದ್ಯವನ್ನಾಡಿದ ಧವನ್ 31.6ನೇ ಓವರ್‌ನಲ್ಲಿ ರೊರಿ ಕ್ಲೈನ್‌ವೆಲ್ಟ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದರು.ಉತ್ತಮ ಆರಂಭ ಪಡೆದ ಭಾರತಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೆರವಾಗಲಿಲ್ಲ. ವಿರಾಟ್ ಕೊಹ್ಲಿ, ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿದ್ದ ದಿನೇಶ್ ಕಾರ್ತಿಕ್ ಪ್ರಭಾವಿ ಎನಿಸಲಿಲ್ಲ. ಆದರೆ, ಆಲ್‌ರೌಂಡರ್ ರವಿಂದ್ರ ಜಡೇಜ (ಔಟಾಗದೆ 47, 29ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿ ಭಾರತ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಂಕಷ್ಟದ ನಂತರ ಚೇತರಿಕೆ: ಅರಂಭದ ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡು ದಕ್ಷಿಣ ಆಫ್ರಿಕಾಕ್ಕೆ ರಾಬಿನ್ ಪೀಟರ್ಸನ್ (68, 72ಎಸೆತ, 6ಬೌಂಡರಿ) ಮತ್ತು ಎ.ಬಿ. ಡಿವಲಿಯರ್ಸ್ (70, 71ಎಸೆತ, 7ಬೌಂಡರಿ) ನೆರವಾದರು. ಆದರೆ, ವೇಗಿಗಳಾದ ಉಮೇಶ್ ಯಾದವ್ (75ಕ್ಕೆ2) ಮತ್ತು ಇಶಾಂತ್ ಶರ್ಮ (66ಕ್ಕೆ2) ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಸುರೇಶ್ ರೈನಾ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.