ಭಾನುವಾರ, ಜನವರಿ 26, 2020
28 °C

ಜಲಮಂಡಳಿಗೆ ನಿರ್ವಹಣೆ ಸಾಧುವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕುಡಿಯುವ ನೀರು ಪೂರೈಸುವ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳೇ ನಿಭಾಯಿಸಬೇಕು. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀರು ನಿರ್ವಹಣೆಯನ್ನು ಹಸ್ತಾಂತರಿಸುವ ಪ್ರಸ್ತಾವಗಳು ಕಾರ್ಯ ಸಾಧುವಲ್ಲ ಎಂದು ಕಾನೂನು ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವ ಎಸ್. ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಕುರಿತು ಮಂಗಳವಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನಗರದಲ್ಲಿನ ನೀರು ನಿರ್ವಹಣೆಯನ್ನು ಮಂಡಳಿಗೆ ಹಸ್ತಾಂತರಿಸುವ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳೇ ನಿಭಾಯಿಸಬೇಕು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ವಿವರಿಸಿದರು.ನೀರು ನಿರ್ವಹಣೆಯ ಅನುಭವವಿಲ್ಲ ಎಂದಾದರೆ ಬೆಂಗಳೂರಿನ ಜಲಮಂಡಳಿ ವತಿಯಿಂದ ತರಬೇತಿ ನೀಡಲಾಗುವುದು. ಆದಾಗ್ಯೂ ಸಾಧ್ಯವಿಲ್ಲ ಎನ್ನುವುದಾದರೆ ಸರ್ಕಾರದ ಜತೆ ಕೆಲವು ಷರತ್ತುಗಳ ಬಗ್ಗೆ `ಸಿ~ ಒಡಂಬಡಿಕೆಗೆ ಸಹಿ ಹಾಕಬೇಕಾಗುತ್ತದೆ. ಒಟ್ಟು ನಿರ್ವಹಣೆ ವೆಚ್ಚವನ್ನು ನಗರಸಭೆ ವಹಿಸಿಕೊಳ್ಳಬೇಕು ಮತ್ತು ನೀರಿನ ಕಂದಾಯವನ್ನು ಸಂಗ್ರಹವನ್ನು ನಗರಸಭೆಯೇ ಮಾಡಬೇಕು. ಈ ರೀತಿಯ ಹಲವು ಷರತ್ತುಗಳನ್ನು ಒಪ್ಪುವುದಾದರೆ ಸರ್ಕಾರ ಪರಿಶೀಲನೆ ನಡೆಸುತ್ತದೆ ಎಂದು ತಿಳಿಸಿದರು.ಚಿತ್ರದುರ್ಗದಲ್ಲಿ `ಬಲ್ಕ್ ವಾಟರ್ ಮೀಟರ್ (ಫ್ಲೋಮೀಟರ್)~ ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ನೀರು ಪೂರೈಕೆ ಪ್ರಮಾಣ ಬಗ್ಗೆ ವಿವರ ದೊರೆಯಲಿದೆ. ಬೆಂಗಳೂರಿನಲ್ಲಿ `ನರ್ಮ್~ ಯೋಜನೆ ಅಡಿ ಈ ಮೀಟರ್ ಅಳವಡಿಸಲಾಗಿದೆ. ಈ ಮೀಟರ್ ಅನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಆಧಾರದ ಮೇಲೆ ಮೀಟರ್ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.ಚಳ್ಳಕೆರೆಗೆ ವಾಣಿವಿಲಾಸ ಸಾಗರದಿಂದ ಶಾಶ್ವತ ಕುಡಿಯುವ ನೀರು ಪೂರೈಸಲು ್ಙ 170 ಕೋಟಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ಮುಗಿದ್ದಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. 24 ತಿಂಗಳಲ್ಲಿ ಈ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ ಎಂದು ತಿಳಿಸಿದರು.ಹೊಸದುರ್ಗದಲ್ಲಿ ಮಳೆ ಬಾರದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ. ಹೊಸದುರ್ಗಕ್ಕೆ ಜಲಾಶಯ ಅಥವಾ ಕೆರೆಯಿಂದ ನೀರು ಪೂರೈಸುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ, ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಿಸುವ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಯೋಜನೆ ರೂಪಿಸಿ ಪ್ರಸ್ತಾವನೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಗಾಗಿ 22 ಜೀಪ್ ಮೌಂಟೆಡ್ ವಾಹನಗಳು ಮತ್ತು 13 ಆಟೋ ಟಿಪ್ಪರ್‌ಗಳು ಬೇಕಾಗಿವೆ. ಎಸ್‌ಎಫ್‌ಸಿ  ಅನುದಾನದ ಅಡಿ ಖರೀದಿಸಲು ಅನುಮೋದನೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.ಕಸ ನಿರ್ವಹಣೆಗಾಗಿ ಜಿಲ್ಲೆಯ 5 ತಾಲ್ಲೂಕು ಕೇಂದ್ರಗಳಲ್ಲಿ ನೆಲಭರ್ತಿಗಾಗಿ ್ಙ 5 ಕೋಟಿ ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಅನುಮೋದನೆ ನೀಡಬೇಕಾಗಿದೆ. ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ನೆಲಭರ್ತಿ ಸ್ಥಳದಲ್ಲಿ ಕಸ ಬೇರ್ಪಡಿಸುವ ಘಟಕ ಸ್ಥಾಪಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.ಚಿತ್ರದುರ್ಗ ನಗರಸಭೆಗೆ 44 ಪೌರಕಾರ್ಮಿಕರನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.ನರ್ಮ್ ಯೋಜನೆ ಅಡಿ ರಾಜ್ಯದ ಹೆಚ್ಚಿನ ನಗರಗಳನ್ನು ಸೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)