ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ

ಭಾನುವಾರ, ಜೂಲೈ 21, 2019
21 °C

ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ

Published:
Updated:

ಬೆಂಗಳೂರು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಸಕಾಲಕ್ಕೆ ಬಡ್ತಿ ನೀಡದೆ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಜಲಮಂಡಳಿ ಪ.ಜಾತಿ ಮತ್ತು ಪ.ಪಂಗಡದ ಅಧಿಕಾರಿಗಳು ಹಾಗೂ ನೌಕರರ ಸಂಘದ ಸದಸ್ಯರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಮಂಡಳಿಯ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.`ಪ.ಜಾತಿ ಮತ್ತು ಪ.ಪಂಗಡದ ಸುಮಾರು 300 ನೌಕರರಿಗೆ 1995ರಿಂದ ಬಡ್ತಿ ನೀಡಿಲ್ಲ. ಈ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.`ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ವರ್ಗದ ನೌಕರರಿಗೆ ಕಾಲಕಾಲಕ್ಕೆ ಬಡ್ತಿ ನೀಡಲಾಗುತ್ತಿದೆ. ಆದರೆ, ಪ.ಜಾ ಮತ್ತು ಪ.ಪಂಗಡದ ನೌಕರರನ್ನು ನಿರ್ಲಕ್ಷಿಸಲಾಗುತ್ತಿದೆ.  ಮಂಡಳಿಯ ವಿವಿಧ ಹುದ್ದೆಗಳಲ್ಲಿರುವ ಪ.ಜಾ ಮತ್ತು ಪ.ಪಂಗಡದ ನೌಕರರಿಗೆ ಹಲವು ವರ್ಷಗಳಿಂದ ಬಡ್ತಿ ನೀಡದ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯು ಪರಿಶೀಲನೆ ನಡೆಸಿ ಸರ್ಕಾರಕ್ಕೆ 2009ರಲ್ಲಿ ವರದಿ ಸಹ ನೀಡಿದೆ~ ಎಂದು ಸಂಘದ ಗೌರವ ಅಧ್ಯಕ್ಷ ಮಾರುತಿ ಮಾನ್ಪಡೆ ಅವರು ಹೇಳಿದರು.ಜುಲೈ ಅಂತ್ಯದೊಳಗೆ ಬಡ್ತಿ ನೀಡಬೇಕು. ಇಲ್ಲದಿದ್ದರೆ ಸಚಿವ ಸುರೇಶ್‌ಕುಮಾರ್ ಅವರ ನಿವಾಸದ ಎದುರು ಧರಣಿ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry