ಸೋಮವಾರ, ಮೇ 10, 2021
25 °C

ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹುನ್ನಾರ

ಆಹಾರ ಮತ್ತು ನಾಗರಿಕ ಇಲಾಖೆಯು ತಯಾರು ಮಾಡಿದ ನವೀನ `ಆಹಾರ ಭದ್ರತಾ ಕರಡು ಮಸೂದೆ~ ಲೋಕಸಭೆಯ ಅಂಗೀಕಾರ ಪಡೆಯಲು ಕಾದು ಕೂತಿದೆ. ಆದರೆ ಈ ಕರಡು ಮಸೂದೆಯು ಸದ್ಯದಲ್ಲಿ ದೇಶದ ನಾಗರಿಕರಿಗೆ ಇರುವಂಥ ಆಹಾರದ ಹಕ್ಕನ್ನು ಬಲಪಡಿಸುವುದರ ಬದಲಿಗೆ ಇನ್ನೂ ಬಲಹೀನಗೊಳಿಸಲಿದೆ ಮತ್ತು `ಆಹಾರ ಭದ್ರತೆ~ ಎಂಬ ಶಬ್ದಕ್ಕೇ ಅವಹೇಳನ ಮಾಡುವಂತಿದೆ.  ಆಹಾರ ಸುರಕ್ಷತೆ ಎಂದರೆ ಕೇವಲ ಅಕ್ಕಿ ಮತ್ತು ಗೋಧಿಯನ್ನು ಕೊಡುವುದು ಮತ್ತು ಬೇಯಿಸಿದ ಆಹಾರವನ್ನು ಕೊಡುವುದೆಂದು ಸರಕಾರವು ತಿಳಿದಂತಿದೆ.

 

ಬೇಳೆ, ಕಾಳು ಎಣ್ಣೆಯನ್ನು ಕೊಡುವುದರ ಬಗ್ಗೆ ಏನೇನೂ ಪ್ರಸ್ತಾಪವೇ ಇಲ್ಲ. ದೇಶದ ಜನರ ಪೌಷ್ಟಿಕ ಆಹಾರ ಭದ್ರತೆಗೆ ಬೇಕಾದ ಆಹಾರ ಉತ್ಪಾದನೆ, ಖರೀದಿ, ಶೇಖರಣೆ ಮತ್ತು ಹಂಚಿಕೆಗಳೆಲ್ಲವನ್ನು ಸಮಗ್ರವಾಗಿ ನೋಡುವಂಥ ಪ್ರಯತ್ನವೇ ಈ ಮಸೂದೆಯಲ್ಲಿ ಕಾಣುತ್ತಿಲ್ಲ.ಕೃಷಿಗೆ ಸರ್ಕಾರವು ತೋರುತ್ತಿರುವ ಅನಾದರದಿಂದಾಗಿ ಲಕ್ಷಗಟ್ಟಲೆ ರೈತರು ನೊಂದು, ಜೀವನ ಮುಂದುವರಿಸಲಾಗದೆ ಪ್ರಾಣ ಹಾನಿ ಮಾಡಿಕೊಳ್ಳುತ್ತಿದ್ದಾರೆ.ಆಹಾರ ಬೆಳೆಯುವುದು ಕಡಿಮೆ ಆಗುತ್ತಿರುವ ವಿಷಯವನ್ನು ನಿರ್ಲಕ್ಷಿಸಿ ಆಹಾರ ಭದ್ರತೆಯ ಬಗ್ಗೆ ಮಾತನಾಡುವುದು ಸಾಧ್ಯವಿಲ್ಲ.

 

ರೈತರಿಂದ ಧಾನ್ಯದ ಖರೀದಿ ಮತ್ತು ಸಂಗ್ರಹಣೆ ಈಗಿರುವುದಕ್ಕಿಂತ ಹೆಚ್ಚು ವಿಸ್ತೃತವಾಗಿಬೇಕು. ಧಾನ್ಯಗಳ ಖರೀದಿ, ಸಂಗ್ರಹಣೆ ಮತ್ತು ಹಂಚಿಕೆ ಇವೆಲ್ಲವುಗಳಲ್ಲೂ ಅತ್ಯಂತ ಕಟ್ಟುನಿಟ್ಟಿನ ಬದಲಾವಣೆ ಆಗಬೇಕಾದ್ದು ಅತಿ ಅವಶ್ಯವಿದೆ.1. ಖರೀದಿ: ಇಂದು ಪೇಟೆಯಲ್ಲಿ ಬರುವಂಥ ಎಲ್ಲಾ ಬಗೆಯ ಆಹಾರ ಧಾನ್ಯಗಳಿಗೂ ಬೆಂಬಲ ಬೆಲೆ ಕೊಟ್ಟು ಸರ್ಕಾರವು ಖರೀದಿ ಮಾಡಬೇಕು. ಅಂದರೆ ಯಾವುದೇ ಬೆಂಬಲ ಇಲ್ಲದ ಅತಿ ಹೆಚ್ಚು ಬಗೆಯ ಧಾನ್ಯಗಳನ್ನು ಬೆಳೆಯುತ್ತಿರುವ ಬಡ, ಮೂಲೆಗುಂಪಾದ ಚಿಕ್ಕ ಹಿಡುವಳಿದಾರರು ಬದುಕಿಕೊಳ್ಳುತ್ತಾರೆ.2. ಸಂಗ್ರಹಣೆ: ಪ್ರತಿಯೊಂದು ತಾಲ್ಲೂಕಿನಲ್ಲೂ ಧಾನ್ಯ ಸಂಗ್ರಹಾಗಾರವಿರಬೇಕು.3.ಹಂಚಿಕೆ ಕೂಡ ಪ್ರಾದೇಶಿಕವಾಗಿ ನಡೆಯಬೇಕು. ಆಯಾ ಪ್ರದೇಶದ ಧಾನ್ಯ ಖರೀದಿ, ಸಂಗ್ರಹಣೆ ಮತ್ತು ಹಂಚಿಕೆ ಮೂರೂ ಅಲ್ಲಲ್ಲಿಯೇ ನಡೆಯಬೇಕು. ಕಡಿಮೆ ಬಿದ್ದಾಗ ಮಾತ್ರ ಹೊರಗಡೆಯಿಂದ ತರಿಸುವಂತಾಗಬೇಕು.

 

ಸ್ಥಳೀಯವಾಗಿ ಧಾನ್ಯ ಸಂಗ್ರಹಣೆಯು ಸ್ಥಳೀಯ ಆಹಾರ ಬೆಳೆಗಳನ್ನು ಮತ್ತು ಸಾಯುತ್ತಿರುವ ರೈತರನ್ನು ರಕ್ಷಿಸುವ ಸಾಧನವಾಗುತ್ತದೆ. ಜನರಿಗೂ ಕೂಡ ಸ್ಥಳೀಯ ಆಹಾರವೇ ಸಿಗುವಂತಾಗುತ್ತದೆ. ಸಾಗಾಣಿಕೆಯ ಅತಿ ದೊಡ್ಡ ಭಾರವನ್ನು ಇಳಿಸಿದ್ದರ ಜೊತೆಗೆ ಧಾನ್ಯ ಸೋರಿಕೆಯೂ ಕಡಿಮೆ ಆಗುತ್ತದೆ.ಆಹಾರ ಭದ್ರತಾ ಕಾನೂನಿನಲ್ಲಿ ಅವಶ್ಯವಾಗಿ ಆಗಬೇಕಾಗಿದ್ದೆಂದರೆ ಪಡಿತರ ವ್ಯವಸ್ಥೆಯನ್ನು ಗಟ್ಟಿ ಮಾಡಬೇಕಾಗಿದ್ದು. ಸೋರಿಕೆಯನ್ನು ತಡೆದು, ಸಾರ್ವತ್ರಿಕವಾಗಿ ಧಾನ್ಯವನ್ನು ಕೊಡುವ ಪದ್ಧತಿಯು ಬಲಗೊಳ್ಳಬೇಕು.

 

ಇಂದು 65 ಮಿಲಿಯನ್ ಟನ್ ಆಹಾರ ಧಾನ್ಯವು ಕೇಂದ್ರದ ಉಗ್ರಾಣಗಳಲ್ಲಿ ದಾಸ್ತಾನಿರುವಾಗ ಮತ್ತು ತೆರೆದ ಉಗ್ರಾಣಗಳಲ್ಲಿ ಕೊಳೆಯುತ್ತಿರುವಾಗ ಪಡಿತರದಲ್ಲಿ ಹಂಚಲು ಆಹಾರ ಸಂಗ್ರಹಣೆ ಇಲ್ಲ. ಕೊರತೆ ಇದೆ ಎಂದು ಸರ್ಕಾರವು ಹೇಳುತ್ತಿರುವುದು ವಂಚನೆಯೇ ಅಲ್ಲವೇ? ಉದ್ದಿಮೆಗಳಿಗೆ, ಆದಾಯ ತೆರಿಗೆ ಕೊಡುವವರಿಗೆ, ಮಾರಾಟ ತೆರಿಗೆ, ಎಕ್ಸೈಸ್, ಕಸ್ಟಮ್ಸ, ಇವೆಲ್ಲವುಗಳಿಗೂ ಸಾಕಷ್ಟು ವಿನಾಯಿತಿ ತೋರಿಸುತ್ತಿರುವ ಸರಕಾರವು ಅದರ 1/5 ಭಾಗವನ್ನು ದೇಶದ ನಾಗರಿಕರಿಗೆ ಆಹಾರ ಭದ್ರತೆಯನ್ನು ಒದಗಿಸುವುದಕ್ಕೆ ಖರ್ಚು ಮಾಡಲು ತಯಾರಿಲ್ಲದಿರುವುದು ವಿಷಾದನೀಯ. ಬಡವರನ್ನು ಗುರುತಿಸಿ ಪ್ರತ್ಯೇಕಿಸುವ ಬಡತನ ರೇಖೆಯನ್ನು ಅತ್ಯಂತ ಕೆಳಮಟ್ಟದಲ್ಲಿ ಇಟ್ಟಿದ್ದು, ಅದು ಬಹಳಷ್ಟು ನಿಜವಾದ ಬಡವರನ್ನು ಹೊರಗಿಡುವಂಥ ರೇಖೆಯಾಗಿದೆ. ಸಮೀಕ್ಷೆಯು ಬಡತನ ರೇಖೆಯ ಕೆಳಗೆ ಇರುವವರ ಸಂಖ್ಯೆಯನ್ನೇ ಕಡಿಮೆ ಮಾಡ ಹೊರಟಿದ್ದು ಆದ್ಯತಾ ಗುಂಪು ಮತ್ತೂ ಚಿಕ್ಕದಾಗಲಿದೆ.

 

ಗ್ರಾಮೀಣ ಭಾಗದ ಶೇಕಡಾ 90ರಷ್ಟು ಜನರಿಗೆ ಆಹಾರ ಕೊಡಬೇಕು, ಬಡತನ ರೇಖೆಯ ಮೇಲಿರುವವರಿಗೂ ಕೂಡ ಒಬ್ಬರಿಗೆ 4 ಕಿಲೋ ಆಹಾರ ಕೊಡಬೇಕೆಂದು ಸಲಹಾ ಸಮಿತಿಯು ಹೇಳಿದ್ದರೆ ಈಗಿನ ಕರಡು ಮಸೂದೆ ಗ್ರಾಮೀಣ ಭಾಗದ ಶೇ 75  ಜನತೆಗೆ ಮತ್ತು ಬಡವರಲ್ಲದವರಿಗೆ 3 ಕೆಜಿ ಮಾತ್ರ ಆಹಾರ ಎನ್ನುತ್ತಿದೆ.ಪಡಿತರ ವ್ಯವಸ್ಥೆಯನ್ನು ಇಲ್ಲವಾಗಿಸಿ ಜನರಿಗೆ ಕಾಳಿನ ಬದಲಿಗೆ ಕಾಸು ಕೊಡುವಂಥ ವಿಚಾರ ಅಮಾನವೀಯವಾದುದು. ಈಗಾಗಲೇ ಹಲವು ವಿದ್ಯಾರ್ಥಿಗಳು ಮತ್ತು ಪರಿಣತರು ಹಲವು ರಾಜ್ಯಗಳಲ್ಲಿ ಸಂಚರಿಸಿ ಸಮೀಕ್ಷೆಗಳನ್ನು ಮಾಡಿ ಕಾಳಿನ ಬದಲಿಗೆ ಕಾಸು ಕೊಡುವುದು ದೇಶದ ಆಹಾರ ಭದ್ರತೆಗೇ ಅಪಾಯವನ್ನು ತರುವ ವಿಚಾರ ಎಂದು ಸಾರಿ ಹೇಳಿದ್ದಾರೆ.ಆಹಾರ ವಸ್ತುಗಳ ಬೆಲೆಯನ್ನು ನಿಯಂತ್ರಿಸದೆ, ಅವು ಸರಿಯಾಗಿ ಸಿಗುವಂತೆ ಮಾಡದೆ, ಕೈಯಲ್ಲಿ ಹಣ ಕೊಟ್ಟು ಕೈತೊಳೆದುಕೊಂಡು ಬಿಟ್ಟರೆ  ಬಡ ಗ್ರಾಹಕ ಪೇಟೆಯ ಬೆಲೆ ಏರಿಕೆಯ ಬಿರುಗಾಳಿಗೆ ಸಿಲುಕಿ ಸತ್ತು ಹೋಗುತ್ತಾನೆ.

 

ಇದು ಚಿಲ್ಲರೆ ಮಾರಾಟದ ಪೇಟೆಯಲ್ಲಿ ಅಂತರ ರಾಷ್ಟ್ರೀಯ ಬಂಡವಾಳವನ್ನು ಹೆಚ್ಚಿಸುವ ಎಫ್.ಡಿ.ಐ ನಿರ್ಧಾರದ ಜೊತೆಗೇ ಬಂದಿದ್ದು ದೇಶದಲ್ಲಿ ಪಡಿತರ ವ್ಯವಸ್ಥೆಯನ್ನು ತೆಗೆದುಹಾಕಿ ರಿಟೇಲ್ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕಾರ್ಪೋರೇಟ್‌ಗಳ ಪ್ರವೇಶಕ್ಕೆ ಸುಲಭದ ಹಾದಿ ಮಾಡುವ ದುರುದ್ದೇಶದಿಂದ ಕೂಡಿದ್ದೆಂಬ ಅನುಮಾನ ಕಾಡುತ್ತಿದೆ.ಮಕ್ಕಳು, ಮಹಿಳೆಯರು ಮತ್ತು ನಿರ್ಗತಿಕರಿಗೆ ಕೊಡಮಾಡಬೇಕಾದ ಆಹಾರದ ಬಗ್ಗೆಯೂ ಕರಡು ಮಸೂದೆಯು ಕಂಜೂಸಿತನವನ್ನು ತೋರಿಸಿದೆ. ಸಲಹಾ ಸಮಿತಿಯ ಸಲಹೆಯಂತೆ ಬಾಣಂತಿಯರಿಗೆ ತಿಂಗಳಿಗೆ 1000 ರೂಪಾಯಿಗಳ ಭತ್ಯೆಯು ಇಲ್ಲಿ ಕಾಣಿಸುತ್ತಿಲ್ಲ.ಅಪೌಷ್ಟಿಕ ಮಕ್ಕಳಿಗೆ, ಶಾಲೆಯಿಂದ ಹೊರಗಿರುವ ಮಕ್ಕಳಿಗೆ, ವಲಸೆ ಹೋಗಿರುವ ಜನಕ್ಕೆ, ಹಸಿವಿನಿಂದ ಸಾವನ್ನು ತಡೆಯುವುದಕ್ಕೆ ಇರಬೇಕಾಗಿದ್ದ ಸಮುದಾಯ ಬಿಸಿಯೂಟದ ವಿಚಾರವನ್ನೇ ಕೈ ಬಿಡಲಾಗಿದೆ.

 

`ಬೇಯಿಸಿದ ಬಿಸಿ ಆಹಾರ~ ಎನ್ನುವ ಬದಲಿಗೆ, `ತಿನ್ನಲು ತಯಾರಿರುವಂಥ ಆಹಾರ~ ಎಂದು ಬರೆದಿದ್ದು ಅದು ರೆಡಿಮೇಡ್ ಆಹಾರ ತಯಾರಿಸುವ ಕಂಪೆನಿಗಳಿಗೆ ಒಳ ಬರಲು ಒಳ್ಳೆಯ ದಾರಿ ಮಾಡಿ ಕೊಟ್ಟಂತಾಗಿದೆ.ಆಹಾರದ ಹಕ್ಕಿಗಾಗಿ ಆಂದೋಲನವು ಹೇಳಿದ್ದ ರೀತಿಯಲ್ಲಿ ಸಲಹಾ ಸಮಿತಿಯು ಕೂಡ ಸಲಹೆ ಮಾಡಿದ್ದ, ದೂರು ನಿವಾರಣಾ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ತೆಗೆದೊಗೆಯಲಾಗಿದೆ.

ರಾಷ್ಟ್ರೀಯ ಮತ್ತು ರಾಜ್ಯ ಆಹಾರ ಭದ್ರತಾ ಕಮಿಷನರ್‌ಗಳ ನೇಮಕಾತಿಯ ಬಗ್ಗೆ ಬರೆದಿದ್ದರೂ ಕೂಡ ಅದನ್ನು ಸ್ವತಂತ್ರವಾಗಿಡದೆ, ಅವರಿಗೆ ಯಾವುದೇ ರೀತಿಯ ಅಧಿಕಾರ ಕೊಡದ ಕಾನೂನು ಇದು..ಕಾನೂನಿಗೆ ತಿದ್ದುಪಡಿ ತರುವ, ಮತ್ತು ಕೊಟ್ಟಿದ್ದ ಯಾವುದೇ ಹಕ್ಕನ್ನು ಹಿಂತೆಗೆದುಕೊಳ್ಳುವ, ವೆಚ್ಚಗಳನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಳ್ಳುವ/ಬಿಡುವ ಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದು, ಮಸೂದೆಯ 4, 5, 6 ನೇ ಭಾಗಗಳಲ್ಲಿ ಹೇಳಿರುವ ಸಮಗ್ರ ಶಿಶು ಅಭಿವೃದ್ಧಿಯ ಹಕ್ಕುಗಳನ್ನು ಸರಕಾರವು ಯಾವಾಗ ಬೇಕಾದರೂ ಕಿತ್ತುಕೊಳ್ಳುವ ಅವಕಾಶವನ್ನು ಇಟ್ಟಿದೆ.

 

ಒಟ್ಟಾರೆಯಾಗಿ ಈ ಕರಡು ಮಸೂದೆಯಲ್ಲಿ ಸರ್ಕಾರದ ಖರ್ಚನ್ನು ಕಡಿಮೆ ಮಾಡುವ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮತ್ತು ಈಗ ಇರುವ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ಉದ್ದೆೀಶವು ಎದ್ದು ಕಾಣುತ್ತದೆ.ಆಹಾರ ಭದ್ರತಾ ಮಸೂದೆಯು ಇದೇ ರೂಪದಲ್ಲಿ ಸಂಸತ್ತಿನಲ್ಲಿ ಅಂಗೀಕಾರ ಪಡೆದರೆ ಸರ್ಕಾರವು ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಡವರಿಗೆ ದ್ರೋಹ ಬಗೆದಂತಾಗುತ್ತದೆ.ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಕಾನೂನಿನಲ್ಲಿ  ಈ ಕೆಳಗಿನ ಅಂಶಗಳನ್ನು ಸೇರಿಸಿಕೊಳ್ಳಬಹುದು:* ಪಡಿತರವು ಸಾರ್ವತ್ರೀಕರಣಗೊಳ್ಳಬೇಕು. ಪಡಿತರದಲ್ಲಿ ಬೇಳೆ, ಎಣ್ಣೆಯನ್ನೊಳಗೊಂಡ ಪೌಷ್ಟಿಕ ಆಹಾರ ಸಿಗಬೇಕು.* ಆಹಾರ ಬೆಳೆಯುವವರಿಗೆ ಹೆಚ್ಚು ಪ್ರೋತ್ಸಾಹ, ವಿಕೇಂದ್ರೀಕೃತ ಖರೀದಿ, ಸಂಗ್ರಹಣೆ, ಇರಬೇಕು.* ಹಿಮಾಚಲ ಪ್ರದೇಶ, ಒರಿಸ್ಸಾ, ಛತ್ತೀಸ್‌ಗಢ, ತಮಿಳುನಾಡುಗಳಲ್ಲಿ ಮಾಡಿದಂತೆ ಹಂಚಿಕೆಯನ್ನು ಉತ್ತಮಗೊಳಿಸಬೇಕು.* ಶಾಲಾ ಮಧ್ಯಾಹ್ನದೂಟ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳು, ತಾಯಂದಿರ ಪೌಷ್ಟಿಕತೆ, ತಾಯ್ತನದ ಸೌಲಭ್ಯಗಳು, ಮತ್ತು ಅಪೌಷ್ಟಿಕ ಮಕ್ಕಳಿಗೆ ಸೌಲಭ್ಯಗಳು ಮುಂತಾದ ಮಕ್ಕಳ ಅಪೌಷ್ಟಿಕತೆಗೆ ಸಂಬಂಧಪಟ್ಟ ವಿಚಾರಗಳನ್ನು ಸಮಗ್ರವಾಗಿ ನೋಡಬೇಕು.* ಸಮಾಜದ ಅತಿ ಬಲಹೀನ ಗುಂಪುಗಳಾದ ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ವಲಸೆ ಹೋದ ಕೂಲಿಗಳಿಗೆ ಸಾಮಾಜಿಕ ಭದ್ರತಾ ವೇತನಗಳನ್ನು ಮತ್ತು ಆಹಾರದ ಭದ್ರತೆಯನ್ನು ಕಲ್ಪಿಸಬೇಕು.* ದೂರು ನಿವಾರಣೆಗೆ ಪಾರದರ್ಶಕತೆ, ಉತ್ತರ ದಾಯಿತ್ವ ಮತ್ತು ಜವಾಬ್ದಾರಿ ಹೊಂದಿರುವ ವ್ಯವಸ್ಥೆಗಳು ಇರಬೇಕು.* ಆಹಾರ ಮತ್ತು ಪೌಷ್ಟಿಕತೆಯ ವಿಚಾರದಲ್ಲಿ ಅನವಶ್ಯಕವಾಗಿ ಲಾಭದಾಶೆಯುಳ್ಳ ಉದ್ದಿಮೆಗಳು ಪಾಲುದಾರರಾಗಾದಂತೆ ಮತ್ತು ಕಾಳಿನ ಬದಲು ಕಾಸು ಕೊಡುವ ವಿಚಾರ ಸುಳಿಯದಂತೆ ಮಾಡಬೇಕು.(`ಆಹಾರದ ಹಕ್ಕಿಗಾಗಿ ಆಂದೋಲನ~ದ ಅಂಗವಾಗಿ  ಎಚ್.ಎಸ್.ದೊರೆಸ್ವಾಮಿ, ನಾಗೇಶ ಹೆಗಡೆ, ಸಿದ್ದನಗೌಡ ಪಾಟೀಲ, ನಂದಿನಿ, ರಹಮತ್ ತರೀಕೆರೆ, ಟಿ.ಆರ್.ಚಂದ್ರಶೇಖರ, ಭಾಗ್ಯಲಕ್ಷ್ಮಿೆ, ಶಾರದಾ ಗೋಪಾಲ, ಗೋಪಾಲ ದಾಬಡೆ, ಕ್ಷಿತಿಜ್ ಅರಸ್, ಕೆವಿನ್ ಬೆಂಗಳೂರು, ಸುರೇಂದ್ರ ಕೌಲಗಿ , ರೂಪ ಹಾಸನ, ಸ್ವರ್ಣ ಭಟ್ಟ ಬಾಗಲಕೋಟೆ ಮತ್ತು ದಿಲೀಪ ಕಾಮತ್ ಅವರು ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಬರೆದಿರುವ ಪತ್ರವನ್ನು ಆಧರಿಸಿ ಈ ಲೇಖನವನ್ನು ತಯಾರಿಸಲಾಗಿದೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.