ಗುರುವಾರ , ಮೇ 13, 2021
40 °C

ಜಾತಿ ಪೋಷಿಸುವ ದೇಗುಲ ತಿರಸ್ಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಾತಿ ಪದ್ಧತಿ ಪೋಷಿಸುವ ದೇವಾಲಯಗಳನ್ನು ಬಸವಣ್ಣನ ಆಶಯದಂತೆ ತಿರಸ್ಕರಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಕರೆ ನೀಡಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಮಂಗಳವಾರ ತರಾಸು ರಂಗಮಂದಿರದಲ್ಲಿ ನಡೆದ ಮಹಾನ್ ಮಾನವತವಾದಿ, ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ದೇವಾಲಯಗಳಲ್ಲಿ ನಡೆಯುತ್ತಿವೆ. ಎಲ್ಲ ಸಮುದಾಯಗಳು ಪೂಜೆ ಮಾಡಲು ಅನರ್ಹವಾದರೆ ಅಂತಹ ದೇವಾಲಯಗಳನ್ನು ತಿರಸ್ಕರಿಸಬೇಕು. ಆದ್ದರಿಂದಲೇ ಬಸವಣ್ಣನವರು `ದೇಹವೇ ದೇಗುಲ~ ಎನ್ನುವ ಕಲ್ಪನೆ ಮೂಡಿಸಿದರು. ದೇವಾಲಯಗಳ ಬದಲಾಗಿ ಶೌಚಾಲಯ ನಿರ್ಮಿಸಬೇಕು. ಇನ್ನೂ ದೇಶದಲ್ಲಿ ಹಲವೆಡೆ ಬಯಲು ಶೌಚಾಲಯ ವ್ಯವಸ್ಥೆ ಇದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಜತೆಗೆ ಸಾಮೂಹಿಕ ಶೌಚಾಲಯಗಳಲ್ಲಿ ಜಾತಿ ಭೇದದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.ಜನಪ್ರತಿನಿಧಿಗಳು ಬಸವಣ್ಣನ ಆಶಯ ಅರ್ಥ ಮಾಡಿಕೊಂಡಿದ್ದರೆ 12ನೇ ಶತಮಾನದ ಕ್ರಾಂತಿ ಮತ್ತೊಮ್ಮೆ ಪುನರಾವರ್ತನೆ ಆಗುತ್ತಿತ್ತು ಮತ್ತು ಇಂದಿನ ಅವ್ಯವಸ್ಥೆ ಕಾಣುತ್ತಿರಲಿಲ್ಲ ಎಂದು ಹೇಳಿದರು.

ಜಗತ್ತಿನ ಎಲ್ಲ ಸುಧಾರಕರ ಪಟ್ಟಿಯಲ್ಲಿ ಬಸವಣ್ಣ ಮುಂಚೂಣಿ ಸ್ಥಾನದಲ್ಲಿದ್ದಾರೆ. ಬಸವಣ್ಣ 12ನೇ ಶತಮಾನದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು ಇಲ್ಲದ ಸಂದರ್ಭದಲ್ಲಿ ಅನಕ್ಷರಸ್ಥ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಸಮಾನತೆಯ ಸಮಾಜ ಕಟ್ಟಿದರು.ಆದರೆ, ಕಳೆದ 65 ವರ್ಷಗಳ ಶಿಕ್ಷಣ ನಮಗೆ ನೀಡಿರುವುದು ಅಕ್ಷರಸ್ಥ ಜಾತಿವಾದ, ಅಕ್ಷರಸ್ಥ ಕೋಮುವಾದ ಮತ್ತು ಮೂಢನಂಬಿಕೆಗಳು. ವಿಶ್ವ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ಅಪಾರ. ಆದರೆ, ವಚನಗಳ ಆದರ್ಶ ಪಾಲಿಸಿದ್ದರೆ ವಚನ ಚಳವಳಿಗೆ ನಿಜವಾದ ಅರ್ಥ ಬರುತ್ತಿತ್ತು ಎಂದು ತಿಳಿಸಿದರು.ಇಂದಿಗೂ ಬಸವಣ್ಣನ ಸಂದೇಶಗಳು ಪ್ರಸ್ತುತ ಎಂದರು.ಶಾಸಕ ಎಸ್.ಕೆ. ಬಸವರಾಜನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಸದಸ್ಯರಾದ ರುದ್ರಾಣಿ ಗಂಗಾಧರ್, ಶಂಕರ್, ಜಿ.ಪಂ. ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಜಿ.ಪಂ. ಸಿಇಒ ಎನ್. ಜಯರಾಂ, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಹಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಜಿ.ಪಂ.ಸದಸ್ಯರಾದ ಮಹಾಲಿಂಗಪ್ಪ, ಅನಿಲ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಪಾರ್ವತಿ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ ಹಾಜರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ ಸ್ವಾಗತಿಸಿದರು. ತಹಶೀಲ್ದಾರ್ ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.ಜಾತಿವ್ಯವಸ್ಥೆ ನಿವಾರಣೆಗೆ ಬಸವಣ್ಣ ಯತ್ನ


ಹಿರಿಯೂರು: ವರ್ಣಾಶ್ರಮ ಪದ್ಧತಿಯ ಮೂಲಕ ಮನುಷ್ಯ ಮನುಷ್ಯರಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದ್ದ ಜಾತಿ ವ್ಯವಸ್ಥೆಯನ್ನು ಅಂತರ್ಜಾತಿ ವಿವಾಹ ನಡೆಸುವ ಮೂಲಕ ಹೋಗಲಾಡಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದ ಬಸವಣ್ಣನ ಕಳಕಳಿ ಅನುಕರಣನೀಯ ಎಂದು ತಾ.ಪಂ. ಸದಸ್ಯೆ ಡಾ.ಜೆ.ಆರ್. ಸುಜಾತಾ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದುಡಿದು ತಿನ್ನುವುದರಲ್ಲಿ ಸುಖವಿದೆ ಎಂಬ ಬಸವಣ್ಣನ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣ ಬಹು ದೊಡ್ಡ ವಿಚಾರವಾದಿ. ಆತನ ವಿಚಾರಗಳು ಜಗತ್ತನ್ನು ಆಳುತ್ತವೆ. ಅವರ ನಂತರ ಬಂದ ಹಲವು ದಾರ್ಶನಿಕರಿಗೆ ಬಸವಣ್ಣನೇ ಆದರ್ಶವಾಗಿದ್ದರು. ಸಾಮಾಜಿಕ, ಆರ್ಥಿಕ ಸಮಾನತೆ ಕುರಿತಂತೆ ಅವರ ಚಿಂತನೆಗಳು ಇಂದಿಗೂ ಸ್ವೀಕಾರಾರ್ಹವಾಗಿವೆ ಎಂದು ತಿಳಿಸಿದರು.ಡಾ.ಎಸ್. ಶೇಖರ್, ಕರಿಯಮ್ಮ, ಎಂ. ರೇವಣಸಿದ್ದಪ್ಪ, ಶ್ರೀನಿವಾಸರೆಡ್ಡಿ, ಸುರೇಂದ್ರಪ್ಪ, ವೈ. ಮಹಂತಪ್ಪ, ಟಿ. ರಂಗನಾಥ್, ಜ್ಯೋತಿಲಕ್ಷ್ಮೀ, ಬಿ. ಗಿರೀಶ್, ಜಿ.ಆರ್. ರಮೇಶ್, ರೋಷನ್ ಜಮೀರ್, ಲಕ್ಷ್ಮೀದೇವಮ್ಮ ಮತ್ತಿತರರು ಹಾಜರಿದ್ದರು.ಲೋಕೋಪಯೋಗಿ ಇಲಾಖೆ:
ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಮಂಗಳವಾರ ಬಸವ ಜಯಂತಿ ಆಚರಿಸಲಾಯಿತು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದಲಿಂಗಪ್ಪ, ಸಹಾಯಕ ಎಂಜಿನಿಯರ್ ಎಂ. ಮಂಜಣ್ಣ ಮಾತನಾಡಿದರು. ಸಹಾಯಕ ಎಂಜಿನಿಯರ್ ಆರ್. ಸ್ವಾಮಿನಾಯ್ಕ, ಭೀಮಾರೆಡ್ಡಿ, ಡಿ. ಬಾಲಣ್ಣ, ಚನ್ನಬಸಪ್ಪ, ಮಂಜುನಾಥ್, ಎಂ. ಅಶ್ವತ್ಥಾಮ, ಬಿ. ಅನಂತರಾಜು ಮತ್ತಿತರರು ಹಾಜರಿದ್ದರು.ಸಾಮೂಹಿಕ ವಿವಾಹ

ಸಿರಿಗೆರೆ:
ಇಲ್ಲಿನ ತರಳಬಾಳು ಬೃಹನ್ಮಠದ ಅಣ್ಣನ ಬಳಗದ ವತಿಯಿಂದ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಮಂಗಳವಾರ ಬಸವ ಜಯಂತಿ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿತ್ತು. 40 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ನಿವೃತ್ತ ಉಪನ್ಯಾಸಕಿ ಎಸ್.ಎಂ. ಮಲ್ಲಮ್ಮ ಮಾತನಾಡಿ, ವೈಚಾರಿಕತೆಯ ಪ್ರತಿಮೂರ್ತಿ ಬಸವಣ್ಣ. ಪ್ರಪ್ರಥಮ ಬಾರಿಗೆ ಸಮಾನತೆ ಸಾರಿದ ಧೀಮಂತ ಎಂದರು.ಸಾಮಾನ್ಯರಿಗೆ ಅತ್ಯಂತ ಸರಳವಾಗಿ ತಮ್ಮ ಆಡುನುಡಿಯಲ್ಲಿ ವಚನ ಸಾಹಿತ್ಯ ಉಣಬಡಿಸಿದ  ದೈವೀಪುರುಷರು ಎಂದು ಬಣ್ಣಿಸಿದರು.ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿವಾಹ ಪವಿತ್ರವಾದ ಸಂಸ್ಕಾರ. ಯಾರೇ ಗಲಾಟೆ ಎಬ್ಬಿಸಲು ಬಂದರೂ ಅವರ ಮಾತುಗಳಿಗೆ ಓಗೊಡದೆ ಉತ್ತಮ ರೀತಿಯಲ್ಲಿ ಜೀವನ ಸಾಗಿಸಬೇಕು. ಕನಸು ನನಸಾಗಬೇಕಾದರೆ ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಪ್ರಾಂಶುಪಾಲ ಪ್ರೊ.ಡಿ.ಎಂ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ನಾಗಶ್ರೀ ಪ್ರಾರ್ಥಿಸಿದರು. ಎಸ್.ಟಿ. ಉಮೇಶ್ ಸ್ವಾಗತಿಸಿದರು. ರಾಜಶೇಖರಯ್ಯ ವಧು- ವರರನ್ನು ಪರಿಚಯಿಸಿದರು. ಜಿ.ಡಿ. ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್. ಮರುಳಸಿದ್ದಪ್ಪ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.