ಗುರುವಾರ , ಮೇ 19, 2022
20 °C

ಜಾತಿ ಪ್ರಮಾಣ ಪತ್ರ: ಈ ರಾಜಕಾರಣ ಅರ್ಥವಾಗಬಹುದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ಮುಖ್ಯಮಂತ್ರಿಗಳ ಕಚೇರಿ  `ಕೃಷ್ಣ~  ಒಳಕ್ಕೆ ಬಂದ ಅಲೆಮಾರಿಗಳು ದಿಕ್ಕು ತೋಚದಂತೆ ಅವಾಕ್ಕಾಗಿದ್ದರು. ನನ್ನೊಂದಿಗೆ ಬಂದ ಬಾಲಗುರುಮೂರ್ತಿ, ಗೋವಿಂದ ಸ್ವಾಮಿ ಮತ್ತು ಶೇಷಪ್ಪನನ್ನು ಬಿಟ್ಟರೆ ಮಿಕ್ಕವರ‌್ಯಾರೂ ಮುಖ್ಯಮಂತ್ರಿಗಳ ಕಚೇರಿಯನ್ನು ನೋಡುವುದಿರಲಿ ಊಹಿಸಿರಲೂ ಇಲ್ಲ.ಯಾವುದೋ ದೊಡ್ಡಮೋರಿ ಬಳಿ, ಸ್ಮಶಾನದ ಹೊರವಲಯದಲ್ಲಿ, ಊರಾಚೆಯ ಗಬ್ಬುಗಿಡಗಳ ಮೈದಾನದಲ್ಲಿ ಟೆಂಟುಗಳನ್ನು ಹಾಕಿಕೊಂಡು ಬದುಕುವ ಈ ಜೀವಿಗಳಿಗೆ ಮುಖ್ಯಮಂತ್ರಿಯ ಮನೆ, ಕಚೇರಿಗಳು ಯಾವ ರೀತಿಯಲ್ಲಿ ತಾನೇ ಕಲ್ಪನೆಗೆ ಸಿಗಬೇಕು?ಅಲೆಮಾರಿಗಳಿಗೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಆಲೋಚನೆ ಬಂದಿದ್ದೇ ಇವರ  ಸಹಜ  ಬದುಕಿನಲ್ಲಿ ಏನೆಲ್ಲಾ ಕಷ್ಟ ಕಾರ್ಪಣ್ಯಗಳು ಕಾಣಿಸಿಕೊಂಡು ಜಾತಿ ಸರ್ಟಿಫಿಕೇಟ್‌ಗಾಗಿ ಸಿಕ್ಕಸಿಕ್ಕ ಅಧಿಕಾರಿಗಳಿಗೆಲ್ಲ ಕಾಲಿಗೆ ಬಿದ್ದು, ಅವರಲ್ಲಿನ  ದೊಡ್ಡ ಅಧಿಕಾರಿ  ಈ ಅಲೆಮಾರಿಗಳಿಗೆ ಎಂದಿಗೂ ಜಾತಿ ಪ್ರಮಾಣ ಪತ್ರ ಸಿಗದಂತೆ ಸರ್ಕುಲರ್ ಹೊರಡಿಸಿದ ಪರಿಣಾಮ ಇವರು ಮುಖ್ಯಮಂತ್ರಿಯವರ ಕಚೇರಿಯನ್ನು ಕಂಡು ದಂಗಾಗುವಂತ ಪರಿಸ್ಥಿತಿಯನ್ನು ತಂದೊಡ್ಡಿದ್ದವು!ಈ ಅಲೆಮಾರಿ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರ ಕೊಡಲಾರದಂತಹ ರಾಜಕಾರಣವಾದರೂ ಏನಿರಬಹುದು? ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ನೂರೊಂದು ಜಾತಿ ಪಟ್ಟಿಯಲ್ಲಿ ಬುಡ್ಗಜಂಗಮರದೂ ಒಂದು. ಮೀಸಲಾತಿ ಸೌಲಭ್ಯದ ಅರಿವಿಲ್ಲದ ಈ ಬುಡ್ಗಜಂಗಮರ ಅನ್ನವನ್ನು ಕದಿಯಲು ಬಂದವರು ಅವರ ತಟ್ಟೆಯಲ್ಲಿ ಇಲಿ, ಅಳಿಲುಗಳನ್ನು ಆಹಾರವಾಗಿ ಕಂಡು ಬೆಚ್ಚಿಬಿದ್ದು ಕೆಲವರು ದೂರವಾದರೆ, ಇವರ ತಟ್ಟೆಯಲ್ಲೇ ಉಂಡು ಅಭ್ಯಾಸ ಮಾಡಿಕೊಂಡ ಹೊಟ್ಟೆತುಂಬಿದವರು ಈ ಇಲಿ, ಅಳಿಲುಗಳ ಶವಗಳ ನಡುವೆ ಇರುವ ಭಿಕ್ಷಾನ್ನವನ್ನೇ ಉಣ್ಣಲು ಯತ್ನಿಸುತ್ತಾ `ನಾವೆಲ್ಲಾ ಒಂದೇ~ ಎಂದು ಬುಡ್ಗಜಂಗಮರ ಜೋಳಿಗೆ ಅಡಿಯಲ್ಲಿ ಮುಖಮುಚ್ಚಿಕೊಳ್ಳತೊಡಗಿದರು.ಈ ಬೇಡಜಂಗಮರೊಂದಿಗೆ ತಮ್ಮ ಕವಳಕ್ಕಾಗಿ ಹೊಡೆದಾಡುತ್ತಿರುವಾಗಲೇ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ  ಬಲಾಢ್ಯರು ಈ ಬುಡ್ಗಜಂಗಮರಿಗೆ ತೊಡಕಾಗಿರುವುದು ಮತ್ತೊಂದು ದುರಂತ!ಬುಡ್ಗಜಂಗಮರ ಕೊಂಡಮಾಮನೊಬ್ಬ ಹೇಗೋ ವಿದೇಶಕ್ಕೆ ಹಾರಿ ಅಲ್ಲಿ ಶಕುನವನ್ನೋ, ಶಾಸ್ತ್ರವನ್ನೋ ಹೇಳಿ ಅಥವಾ ಭಿಕ್ಷೆ ಎತ್ತಿ ಹಣಮಾಡಿ ಮುಳಬಾಗಿಲಿಗೆ ಬಂದು ಸರಾಗವಾಗಿ ಹಣ ಖರ್ಚುಮಾಡುತ್ತಾ ಚುನಾವಣೆಗೆ ಸಿದ್ಧನಾದ, ಅಲ್ಲಿನ ಸ್ಥಾನವನ್ನು ತನ್ನ ಮಗಳಿಗೊ, ಅಳಿಯನಿಗೋ ಅಥವಾ ಕನಿಷ್ಠ ಬಾವಮೈದುನನಿಗೋ ನೀಡಬೇಕೆಂದು ಆಸೆ ಇಟ್ಟುಕೊಂಡಿದ್ದ ಅಲ್ಲಿನ ಲೋಕಸಭಾ ಸದಸ್ಯರು ಕೇಂದ್ರ ಮಂತ್ರಿಗಳು ಆದವರಿಗೆ ಈ ಕೊಂಡಮಾಮನನ್ನು ತಡೆಯಲು ಇದ್ದ ಏಕೈಕ ಮಾರ್ಗ ಈತನಿಗೆ ಜಾತಿ ಪ್ರಮಾಣಪತ್ರ ಕೊಡಿಸದೇ ಇರುವುದು.ಸಹಜವಾಗಿಯೇ ಕೇಂದ್ರ ಮಂತ್ರಿಗಳು ಅಲ್ಲಿನ ಜಿಲ್ಲಾಧಿಕಾರಿ, ತಹಸೀಲ್ದಾರ್ ಮೇಲೆ ಒತ್ತಡ ತಂದುದರಿಂದಾಗಿ ಎಲ್ಲಾ ಬುಡ್ಗಜಂಗಮರಿಗೂ ಜಾತಿ ಪ್ರಮಾಣ ಪತ್ರ ಸಿಗದಂತೆ ತಡೆದು ರಾಜಕಾರಣ  ಮಾಡಿದರು.ಈ ಹಿನ್ನೆಲೆಯಲ್ಲಿ ಮುಳಬಾಗಿಲಿನ ಅಡ್ರೆಸ್ ಇಲ್ಲದ ಮೂರು ಮಂದಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಒಂದು ಮೂಗರ್ಜಿ ನೀಡಿ  ಮುಳುಬಾಗಿಲಿನಲ್ಲಿ `ಬೈರಾಗಿ~ ಹೆಸರಿನ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಬಾರದೆಂದು  ಕೋರಿದ್ದರು. ಆ ಮೂಗರ್ಜಿ ಬಂದ  (09-04-2012) ದಿನವೇ, ಆ ಮೂಗರ್ಜಿಯನ್ನು ಆಧಾರವಾಗಿಟ್ಟುಕೊಂಡ ಪ್ರಧಾನ ಕಾರ್ಯದರ್ಶಿಗಳು ಆತುರದಿಂದ ಸುತ್ತೋಲೆಯೊಂದನ್ನು ಹೊರಡಿಸಿ ಕೋಲಾರ ಜಿಲ್ಲೆಯಲ್ಲೇ `ಬೈರಾಗಿ~ ಹೆಸರಿನ ಬುಡ್ಗಜಂಗಮರಿಗೆ ಜಾತಿ ಪ್ರಮಾಣಪತ್ರ ನೀಡಬಾರದೆಂದು  ಹುಕುಂ  ಹೊರಡಿಸಿದರು.ಇದರ ಪರಿಣಾಮ ಮಕ್ಕಳನ್ನು ಶಾಲೆಗೆ ಸೇರಿಸಬೇಕಾದ ಈ ಸಂದರ್ಭದಲ್ಲಿ ನತದೃಷ್ಟ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರವಿಲ್ಲದೆ ಅವರ ಮಕ್ಕಳನ್ನು ಓದಿಸುವ ಕನಸಿಗೆ ಸಿಡಿಲು ಬಡಿದು ಚಿಂತಾಕ್ರಾಂತರಾಗಿ ಕೂರಬೇಕಾದ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಯಿತು.ದುರಂತವೆಂದರೆ ಮೂಗರ್ಜಿಯ ಮೇಲೆ ಸುತ್ತೋಲೆ ಹೊರಡಿಸಿದ ಪ್ರಧಾನ ಕಾರ್ಯದರ್ಶಿ ಕೂಡ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ  ಬಲಾಢ್ಯಕೋಮಿಗೆ ಸೇರಿದವರೆ, ಈ ಕಾರಣಕ್ಕೆ ಮೂಗರ್ಜಿ ಬಂದ ದಿನವೇ ಸುತ್ತೋಲೆ ಹೊರಡಿಸುವ ಆತುರದ  ರಾಜಕಾರಣ ಮಾಡಿದ್ದು.ಮುಳಬಾಗಿಲಿನಲ್ಲಿ `ಬೈರಾಗಿ~ಗಳು ಇಲ್ಲವೇ ಇಲ್ಲ. ಜನಪದರು ಕರೆದ ಹೆಸರನ್ನೇ ಇಟ್ಟುಕೊಂಡ ಬುಡ್ಗಜಂಗಮರು ಹೊಟ್ಟೆಪಾಡಿನ ಅನಿವಾರ್ಯತೆಯಿಂದಾಗಿ ಭಿಕ್ಷೆ ಸಿಗುತ್ತದೆಂಬ ಆಸೆಯಿಂದ ಈ ಹೆಸರನ್ನು ಕಟ್ಟಿಕೊಂಡಿದ್ದರು ಎನ್ನಲಿಕ್ಕೆ ಸಾಕಷ್ಟು ದಾಖಲೆಗಳು, ಮಾನವಶಾಸ್ತ್ರೀಯ ಅಧ್ಯಯನಗಳು, ನ್ಯಾಯಾಲಯದ ತೀರ್ಪುಗಳು, ಸ್ಥಳ ಪರಿಶೀಲನೆಮಾಡಿದ ಸಮಾಜ ಕಲ್ಯಾಣ ಇಲಾಖೆಯ ವರದಿಗಳು ಇವೆ. ಆದರೆ ಇವ್ಯಾವುದನ್ನು ನೋಡುವ ಕಣ್ಣು ಸರ್ಕಾರಕ್ಕಿಲ್ಲದಿರುವುದು ವಿಪರ್ಯಾಸ.ಬುಡ್ಗಜಂಗಮರ ಪಾಲಿಗೆ ಅತ್ಯಂತ ದೊಡ್ಡ ಸಮಸ್ಯೆಯಾದ ಜಾತಿ ಪ್ರಮಾಣ ಪತ್ರ ಪಡೆಯುವುದು ಮುಖ್ಯಮಂತ್ರಿಗಳ ದೃಷ್ಟಿಯಲ್ಲಿ ಅತ್ಯಂತ ಚಿಕ್ಕ ಸಮಸ್ಯೆ. ಮುಖ್ಯಮಂತ್ರಿಗಳಿಗೆ ಇವನ್ನೆಲ್ಲಾ ಅರ್ಥಮಾಡಿಕೊಳ್ಳುವಷ್ಟು ಸಮಯಾವಕಾಶವಾಗಲಿ, ಮನಸ್ಥಿತಿಯಾಗಲಿ, ಸಿದ್ಧತೆಯಾಗಲಿ ಇರಲಿಲ್ಲ, ಇರಲಿಕ್ಕೆ ಸಾಧ್ಯವೂ ಇಲ್ಲ.ಆದರೆ ಮುಖ್ಯಮಂತ್ರಿಗಳು ಈ ಅಸಹಾಯಕರ ಬಗ್ಗೆ ಒಂದಿಷ್ಟು ಗಮನವಿಟ್ಟು ಕೇಂದ್ರ ಮಂತ್ರಿಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ  ಜಾತಿ ರಾಜಕಾರಣದ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದರೆ ಈ ಅಲೆಮಾರಿಗಳ ಸಮಸ್ಯೆ ನಿಮಿಷದಲ್ಲಿ ಪರಿಹಾರವಾಗುತ್ತಿತ್ತು ಆದರೆ ಈ ಅಲೆಮಾರಿಗಳ ವಿಷಯದಲ್ಲಿ ಅಪರಾಧವೆಸಗಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೇ ಇದರ ಮೇಲೆ ವರದಿ ನೀಡಲು ಮುಖ್ಯಮಂತ್ರಿಗಳು ಕೇಳಿದ್ದಾರೆ! ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕೋಲಾರ ಜಿಲ್ಲಾಧಿಕಾರಿಗಳಿಗೆ ಬರೆದು ತನ್ನ ಸುತ್ತೋಲೆಯನ್ನು ಸಮರ್ಥಿಸುವ ದಾಖಲೆಗಳಿಗಾಗಿ ಹುಡುಕಾಡುತ್ತಿದ್ದಾರೆ.!ಬುಡ್ಗಜಂಗಮರ ಜಾತಿಯಲ್ಲಿ ದೊಡ್ಡ ಅಧಿಕಾರಿಗಳೂ ಇಲ್ಲ. ಇವರಿಗೆ ರಾಜಕೀಯ ಅಧಿಕಾರವೂ ಇಲ್ಲ, ಈ ಬಲಾಢ್ಯರ ಆಟದಲ್ಲಿ ಈ ಅಸಹಾಯಕರು ಯಾರ ಬಳಿ ಸಾಮಾಜಿಕ ನ್ಯಾಯ ಕೇಳಬೇಕು? ದೊಡ್ಡ ಮೀನು ಸಣ್ಣ ಮೀನನ್ನು ನುಂಗುವ ಕತೆ.....

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.