ಶುಕ್ರವಾರ, ಏಪ್ರಿಲ್ 23, 2021
23 °C

ಜಾತ್ಯತೀತ ರಾಷ್ಟ್ರ ಗಾಂಧೀಜಿ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರ ಪಾತ್ರ ಮಹತ್ತರ. ಅಹಿಂಸಾ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಚಳವಳಿಗೆ ಅವರು ಪಟ್ಟ ಶ್ರಮ ಅಪಾರ. ಸ್ತ್ರೀ ಸ್ವಾತಂತ್ರ್ಯ, ಶೋಷಣೆ ಮುಕ್ತ ಸಮಾಜ ನಿರ್ಮಾಣ, ಜ್ಯಾತ್ಯತೀತ ರಾಷ್ಟ್ರವನ್ನು ಕಟ್ಟುವ ಗುರಿಯನ್ನು ಗಾಂಧೀಜಿ  ಹೊಂದಿದ್ದರು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನಗಳ ಆಶ್ರಯದಲ್ಲಿ ಇಲ್ಲಿನ ಲಿಂಗೇರಿ ಕೋನಪ್ಪ ಆರ್. ನಾಡಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೋತ್ಸವ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿ, ಭಾರತದ ದಂಡಕಾರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹಗಳು ಅವರ ಹೋರಾಟದ ಪ್ರಮುಖ ಮಜಲುಗಳು. ದೇಶದ ಏಕತೆ, ಬಡತನ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಅಹೋ ರಾತ್ರಿ ದುಡಿದ ಬರಿಗಾಲಿನ ಫಕೀರ ಮಹಾತ್ಮ ಗಾಂಧೀಜಿ. ಗಾಂಧೀಜಿಯವರು ರಾಷ್ಟ್ರ ಭಾಷೆಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಹೇಳಿದ ಅವರು, ಗಾಂಧೀಜಿ ಅವರನ್ನು ತಾವು ಭೇಟಿಯಾದ ಹಲವು ಸಂದರ್ಭಗಳನ್ನು ನೆನಪಿಸಿಕೊಂಡರು.ಗಾಂಧೀಜಿ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ, ಪ್ರೌಢ ಶಿಕ್ಷಣ ಪಡೆಯುತ್ತಿರುವಾಗಲೇ ದೇಶಾಭಿಮಾನದ ಜ್ವಾಲೆ ಗಾಂಧೀಜಿಯವರಲ್ಲಿ ಹೊತ್ತಿ ಉರಿಯುತ್ತಿತ್ತು. ಮುಂದೆ ಕಾನೂನು ಪದವಿ ಪಡೆದು, ದಕ್ಷಿಣ ಆಫ್ರಿಕಾಕ್ಕೆ ತೆರಳಿದಾಗ ಅಲ್ಲಿನ ಕರಿಯರು ಮತ್ತು ಬಿಳಿಯರು ಎಂಬ ವರ್ಣ ಭೇದ ನೀತಿ ಅವರನ್ನು ಅಪಮಾನಗೊಳಿಸಿತ್ತು. ಇದುವೇ ದೇಶದ ಸ್ವಾತಂತ್ರ್ಯ ಚಳವಳಿಗೆ ನಾಂದಿಯಾಯಿತು ಎಂದರು.ಶ್ರವಣ ಕುಮಾರ ಮತ್ತು ಸತ್ಯ ಹರಿಶ್ಚಂದ್ರ ಎಂಬ ಎರಡು ನಾಟಕಗಳು ಗಾಂಧೀಜಿಯವರ ಬದುಕಿನ ಚಿತ್ರಣವನ್ನೇ ಬದಲಾಯಿಸಿದವು. ನನ್ನ ಸತ್ಯಾನ್ವೇಷಣೆ ಎಂಬ ಗ್ರಂಥವನ್ನು ಗಾಂಧೀಜಿ ರಚಿಸಿದ್ದಾರೆ. ದೇಶ ಸ್ವಾತಂತ್ರ್ಯ ಕಂಡ ಸಂಭ್ರಮದಲ್ಲಿ ಇರುವಾಗಲೇ 1948ರ ಜನವರಿ 30 ರಂದು ನಾಥುರಾಮ ಗೋಡ್ಸೆ ಎಂಬ ಹಂತಕನ ಗುಂಡಿಗೆ ಗಾಂಧೀಜಿ ಬಲಿಯಾದರು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಚನ್ನೂರ, ಗಾಂಧೀಜಿಯವರ ಭಾವಚಿತ್ರಕ್ಕೆ ಗೌರವ ಪುಷ್ಪಾರ್ಪಣೆ ಮಾಡಿದರು.ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅತಿಥಿಗಳಾಗಿ ಚಂದ್ರಶೇಖರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮಪ್ಪ ಪಾಟೀಲ ಚೆಗುಂಟಾ, ನ್ಯೂ ಕನ್ನಡ ಕಾಲೇಜಿನ ಪ್ರಾಚಾರ್ಯ ರಘುನಾಥರಡ್ಡಿ ಪಾಟೀಲ, ಶಾಲೆಯ ಮುಖ್ಯಾಧ್ಯಾಪಕ ಚಂದ್ರಕಾಂತ ಲೇವಡಿ ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಂಗನಬಸಯ್ಯ ಕೊಡೇಕಲಮಠ ನಿರೂಪಿಸಿದರು. ಎಂ.ಕೆ. ಬಿರನೂರ ಸ್ವಾಗತಿಸಿದರು. ಜಗದೀಶ ತೀವಾರಿ ವಂದಿಸಿದರು.ಅಯ್ಯಣ್ಣ ಹುಂಡೇಕಾರ್, ವಿ.ಸಿ. ರಡ್ಡಿ, ಸಿ.ಎಂ. ಪಟ್ಟೇದಾರ, ಜಿ.ಎಸ್. ಬಸವರಾಜ ಶಾಸ್ತ್ರಿ, ಸಂಗಣ್ಣ ಹೋತಪೇಠ, ಶ್ರೀನಿವಾಸ ಕರ್ಲಿ, ಪ್ರಕಾಶ ಚಟ್ನಳ್ಳಿ, ನೂರಂದಪ್ಪ ಲೇವಡಿ, ರಾಜು ಹಂದೆ, ದೇವರಾಜ ವರ್ಕನಳ್ಳಿ, ಸಿದ್ದು ಹತ್ತಿಕುಣಿ ಮುಂತಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.