ಸೋಮವಾರ, ಮೇ 16, 2022
28 °C
ಪಾಲಿಕೆ ಕಾರ್ಯಾಚರಣೆ: 5 ದಿನದಲ್ಲಿ ರೂ 5 ಲಕ್ಷ ಶುಲ್ಕ ಸಂಗ್ರಹ

ಜಾಹೀರಾತಿನ ಅಕ್ರಮ ಫಲಕಗಳಿಗೆ ಕತ್ತರಿ

ಪ್ರಜಾವಾಣಿ ವಾರ್ತೆ / ಆರ್.ಜಿತೇಂದ್ರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜಾಹೀರಾತಿನ ಅಕ್ರಮ ಫಲಕಗಳ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಇದೇ ತಿಂಗಳ 11ರಿಂದ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಈವರೆಗೆ 20ಕ್ಕೂ ಹೆಚ್ಚು ಬೃಹತ್ ಫಲಕಗಳನ್ನು ತೆರವುಗೊಳಿಸಲಾಗಿದೆ. ಇದರೊಟ್ಟಿಗೆ ರೂ 5 ಲಕ್ಷಗಳಷ್ಟು ದಂಡ ಮತ್ತು ಶುಲ್ಕವೂ ಸಂಗ್ರಹವಾಗಿದೆ.2012-13ನೇ ಸಾಲಿಗೆ ಅಂತ್ಯಗೊಂಡಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 539 ಜಾಹೀರಾತು ಫಲಕಗಳನ್ನು ಹಾಕಲು ವಿವಿಧ ಏಜೆನ್ಸಿಗಳು ಅನುಮತಿ ಪಡೆದಿದ್ದವು.  ಒಟ್ಟು 36 ಏಜೆನ್ಸಿಗಳಿಗೆ ಜಾಹೀರಾತು ಪ್ರದರ್ಶನ ಸಂಬಂಧ ಅನುಮತಿ ನೀಡಲಾಗಿತ್ತು. ಜಾಹೀರಾತು ಪ್ರದರ್ಶನಕ್ಕೆ ಪ್ರತಿ ವರ್ಷ ಇಂತಿಷ್ಟು ಶುಲ್ಕ ತೆರಬೇಕಾಗುತ್ತದೆ. ಆದರೆ ಕೆಲವು ಏಜೆನ್ಸಿಗಳು ಅನುಮತಿ ಪಡೆದ ತರುವಾಯ 2-3 ವರ್ಷಗಳಿಂದ ಶುಲ್ಕವನ್ನೇ ತುಂಬಿರಲಿಲ್ಲ. ಹೀಗೆ ಅನಧಿಕೃತವಾಗಿ ಹಾಕಲಾಗಿದ್ದ 111 ಫಲಕಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.86 ಲಕ್ಷ ಸಂಗ್ರಹ: 2012-13ನೇ ಸಾಲಿನಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜಾಹೀರಾತು ಶುಲ್ಕದಿಂದ ಒಟ್ಟು ರೂ 1.1 ಕೋಟಿ ಆದಾಯದ ಗುರಿ ಹೊಂದಲಾಗಿತ್ತು. ಆದರೆ ಈ ಅವಧಿಯಲ್ಲಿ ರೂ 86 ಲಕ್ಷ ಸಂಗ್ರಹವಾಗಿತ್ತು. ಒಟ್ಟು 368 ಜಾಹೀರಾತು ಫಲಕಗಳಿಗೆ ಅನುಮತಿ ನೀಡುವ ಮೂಲಕ ಈ ಪ್ರಮಾಣದ ಶುಲ್ಕವನ್ನು ಸಂಗ್ರಹಿಸಲಾಗಿತ್ತು. 111 ಜಾಹೀರಾತು ಫಲಕಗಳಿಂದ ರೂ 14 ಲಕ್ಷ ಬಾಕಿ ಉಳಿದಿದೆ.ಇದೇ ವರ್ಷ ಏಪ್ರಿಲ್‌ನಿಂದ ಜಾಹೀರಾತು ಫಲಕಗಳ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಈವರೆಗೆ ರೂ 20 ಲಕ್ಷ ಸಂಗ್ರಹಗೊಂಡಿದೆ. ತಮ್ಮ ಪ್ರದರ್ಶನ ಫಲಕಗಳ ಅನುಮತಿಯನ್ನು ನವೀಕರಿಸಿಕೊಳ್ಳುವಂತೆ ಅಧಿಕಾರಿಗಳು 539 ಜಾಹೀರಾತು ಫಲಕಗಳ ಏಜೆನ್ಸಿಗಳಿಗೆ ನೋಟಿಸ್ ನೀಡಿದ್ದರು. ಅಕ್ರಮ ಜಾಹೀರಾತು ತೆರವು ಕಾರ್ಯಾಚರಣೆ ಆರಂಭಗೊಂಡ ಬಳಿಕ ಶುಲ್ಕ ಸಂಗ್ರಹದ ಪ್ರಮಾಣವು ಹೆಚ್ಚಳ ಕಂಡಿದೆ ಎನ್ನುತ್ತಾರೆ ಪಾಲಿಕೆಯ ಕಂದಾಯ ಇಲಾಖೆಯ ಮಾರುಕಟ್ಟೆ ವಿಭಾಗದ ಮಾರುಕಟ್ಟೆ ಇನ್‌ಸ್ಪೆಕ್ಟರ್ ವಾಸುದೇವ ರಾಯ್ಕರ್.ಬಾರಿ ಬಾಕಿ: ಜಾಹೀರಾತು ಅಕ್ರಮ ಫಲಕಗಳ ತೆರವಿನ ಜೊತೆಗೆ ಪಾಲಿಕೆಗೆ ವಸೂಲಾಗಬೇಕಾದ ಶುಲ್ಕದ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ. ಕೆಲವು ಏಜೆನ್ಸಿಗಳು ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಬೆಂಗಳೂರು ಮೂಲದ ಪಾಪ್ಯುಲರ್ ಆ್ಯಡ್ಸ್ ಏಜೆನ್ಸಿ ಕಳೆದ ವರ್ಷದ ಬಾಕಿ ಹಾಗೂ ಈ ವರ್ಷದ ಶುಲ್ಕ ಸೇರಿ ಪಾಲಿಕೆಗೆ ರೂ 20 ಲಕ್ಷ ನೀಡಬೇಕಿದೆ. ಇನ್ನೂ ಕೆಲವು ಏಜೆನ್ಸಿಗಳು ಸಹ ಸಾಕಷ್ಟು ಬಾಕಿ ಉಳಿಸಿಕೊಂಡಿದ್ದು, ಹಣ ವಸೂಲಿ ಸಂಬಂಧ ನೋಟಿಸ್ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.ಏನೆನ್ನುತ್ತದೆ ನಿಯಮ?: 1967ರ ಕರ್ನಾಟಕ ಮುನ್ಸಿಪಲ್ ಕಾಯ್ದೆ 139ನೇ ಸೆಕ್ಷನ್ ಪ್ರಕಾರ ಪ್ರತಿ ಜಾಹೀರಾತು ಫಲಕ ಪ್ರದರ್ಶನಕ್ಕೆ ಆಯಾ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಬೇಕಿದ್ದರೆ ನೇರ ಕಂದಾಯ ಇಲಾಖೆ ಸಂಪರ್ಕಿಸಬಹುದು. ಖಾಸಗಿ ಕಟ್ಟಡಗಳಲ್ಲಿ ಜಾಹೀರಾತು ಹಾಕಬೇಕಿದ್ದಲ್ಲಿ ಸಂಬಂಧಿಸಿದ ಕಟ್ಟಡ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು ಜಾಹೀರಾತಿನ ವಿವರ ಸಹಿತ ಅಫಿಡವಿಟ್ ಸಲ್ಲಿಸಬಹುದು.

ಅಧಿಕಾರಿಗಳು ಅದನ್ನು ಪರಿಶೀಲಿಸಿ ಸ್ಥಿರತಾ ಪ್ರಮಾಣಪತ್ರ ನೀಡುತ್ತಾರೆ. ನಂತರ ನಿಗದಿತ ಶುಲ್ಕ ತುಂಬಬೇಕಾಗುತ್ತದೆ. ಏಪ್ರಿಲ್‌ನಿಂದ ಮುಂಬರುವ ಮಾರ್ಚ್‌ವರೆಗೆ ಒಂದು ವರ್ಷದ ಅವಧಿಗೆ ಅನುಮತಿ ನೀಡಲಾಗುತ್ತದೆ.ಸಾರಿಗೆ ಸಂಸ್ಥೆಗೆ ನೋಟಿಸ್: ಪಾಲಿಕೆ ಗಮನಕ್ಕೆ ತರದೇ ಜಾಹೀರಾತು ಪ್ರದರ್ಶಿಸಿದಲ್ಲಿ ಅದನ್ನು `ಅಕ್ರಮ' ಎಂದು ಪರಿಗಣಿಸಲಾಗುತ್ತದೆ.ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಗಳಲ್ಲಿ ಹೀಗೆ ಅನುಮತಿ ಪಡೆಯದೇ ಜಾಹೀರಾತು ಹಾಕಲಾಗಿದೆ. ಈ ಸಂಬಂಧ ವಿವರಣೆ ನೀಡುವಂತೆ ಕೋರಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪಾಲಿಕೆ ಅಧಿಕಾರಿಗಳು ಮೂರು ದಿನದ ಹಿಂದೆ ನೋಟಿಸ್ ನೀಡಿದ್ದಾರೆ.ಹಾಗೆಯೇ, ಅನುಮತಿ ಇಲ್ಲದೇ ಜಾಹೀರಾತು ಪ್ರಕಟಿಸಿದ ಖಾಸಗಿ ಆಭರಣ ಮಳಿಗೆಯೊಂದಕ್ಕೆ ಸಹ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ಪ್ರಸಿದ್ಧ ಆಭರಣ ಮಳಿಗೆಗೆ ಈ ಸಂಬಂಧ ರೂ 6,000 ದಂಡ ವಿಧಿಸಲಾಗಿದೆ. ತರುವಾಯ ಮಳಿಗೆಯ ಮಾಲೀಕರು ರೂ 49,000 ಶುಲ್ಕ ತೆತ್ತು ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.