ಭಾನುವಾರ, ಮೇ 9, 2021
27 °C

ಜಾಹೀರಾತು: ಕಡಿವಾಣಕ್ಕೆ ಸಚಿವರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜನರನ್ನು ಹಾದಿ ತಪ್ಪಿಸುವ ಜಾಹೀರಾತುಗಳು ಇತ್ತೀಚೆಗೆ ಹೆಚ್ಚುತ್ತಿವೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಅವುಗಳಿಗೆ ಕಡಿವಾಣು ಹಾಕಲು ಅಂತರ ಸಚಿವರ ತಂಡವೊಂದನ್ನು ರಚಿಸಲು ಗಂಭೀರ ಚಿಂತನೆ ನಡೆಸಿದೆ.ಇಂತಹ ಜಾಹೀರಾತುಗಳನ್ನು ನಿಯಂತ್ರಿಸುವ ಮಾರ್ಗೋಪಾಯಗಳನ್ನು ವಿವಿಧ ಸಚಿವರನ್ನು ಒಳಗೊಂಡ ತಂಡ ಸರ್ಕಾರಕ್ಕೆ ಸೂಚಿಸಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ವಿ.ಥಾಮಸ್ ಗುರುವಾರ ತಿಳಿಸಿದರು.ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ, ಗ್ರಾಹಕರ ರಕ್ಷಣಾ ಕಾಯ್ದೆ, ಔಷಧ ಮತ್ತು ಸೌಂದರ್ಯ ವರ್ಧಕ ಗುಣಮಟ್ಟ ಕಾಯ್ದೆಗಳಂತಹ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆದರೂ, ಇಂಥ ಜಾಹೀರಾತುಗಳ ನಿಗ್ರಹ ಸಾಧ್ಯವಾಗುತ್ತಿಲ್ಲ. ಬದಲಾಗಿ ದಿನೇ ದಿನೇ ಅವುಗಳ ಹಾವಳಿ ಮಿತಿ ಮೀರುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.ಗ್ರಾಹಕರ ವ್ಯವಹಾರಗಳ ಸಚಿವಾಲಯ ಇಂಥ ಜಾಹೀರಾತುಗಳಿಗೆ ಕಡಿವಾಣ ಹಾಕಲು ಅಗತ್ಯವಿರುವ ಸಮಗ್ರ ಕಾನೂನು ರೂಪಿಸಲು ಮುಂದಾಗಿದ್ದು, ದೇಶದಾದ್ಯಂತ ಗ್ರಾಹಕರ, ಸಂಘ, ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.ಕಠಿಣ ಕಾನೂನು ಜಾರಿಗೆ ತಂದಲ್ಲಿ ಗ್ರಾಹಕರು ಹಾದಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಅವಕಾಶವಿದೆ ಎಂದು ಥಾಮಸ್ ತಿಳಿಸಿದರು.`ಟಿ.ವಿ, ಅಂತರ್ಜಾಲ ಯುಗದಲ್ಲಿ ಪ್ರತಿ ಮಾಧ್ಯಮಕ್ಕೂ ನಿರ್ದಿಷ್ಟ ಕಾನೂನು ಕಟ್ಟಳೆ ವಿಧಿಸುವುದು ಕಷ್ಟಸಾಧ್ಯ. ಹೀಗಾಗಿ ಎಲ್ಲ ಮಾಧ್ಯಮಗಳಿಗೂ ಅನ್ವಯವಾಗುವಂತಹ ಕಾನೂನು ರಚನೆ ನಮ್ಮ ಗುರಿ~ ಎಂದು ಸಚಿವರು ಅಭಿಪ್ರಾಯಪಟ್ಟರು. ಸರ್ಕಾರದ ನಿಷೇಧದ ಹೊರತಾಗಿಯೂ ಭಾರತದಲ್ಲಿ ಸಿಗರೇಟ್, ಬೀಡಿ, ಗುಟ್ಕಾ, ಮದ್ಯ, ಪಾನ್ ಮಸಾಲದಂಥ ಆರೋಗ್ಯಕ್ಕೆ ಮಾರಕವಾದ ಜಾಹೀರಾತುಗಳು ನಿತ್ಯ ಎಲ್ಲ ಮಾದ್ಯಮಗಳಲ್ಲಿ ಎಗ್ಗಿಲ್ಲದೆ ರಾಜಾಜಿಸುತ್ತಿವೆ.  ಈ ನಿಟ್ಟಿನಲ್ಲಿ ಸಮಗ್ರ ಕಾನೂನು ಜಾರಿಗೆ ವಿವಿಧ ಸಚಿವಾಲಯಗಳು ಸಹಕರಿಸಬೇಕು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.