ಮಂಗಳವಾರ, ಮಾರ್ಚ್ 2, 2021
26 °C
ಎಲ್‌ಸಾಲ್ವಡಾರ್‌ ತನ್ನ ಪ್ರಜೆಗಳಿಗೆ ನೀಡಿರುವ ಈ ಸೂಚನೆ ಆ ದೇಶದ ಹತಾಶೆಯ ಪ್ರತೀಕ

ಜಿಕಾ: 2 ವರ್ಷ ಗರ್ಭ ಧರಿಸಬೇಡಿ!

ಅಜಂ ಅಹ್ಮದ್‌,ದಿ ನ್ಯೂಯಾರ್ಕ್‌ ಟೈಮ್ಸ್ Updated:

ಅಕ್ಷರ ಗಾತ್ರ : | |

ಜಿಕಾ: 2 ವರ್ಷ ಗರ್ಭ ಧರಿಸಬೇಡಿ!

ಮಧ್ಯ ಅಮೆರಿಕ ದೇಶವಾದ ಎಲ್‌ಸಾಲ್ವಡಾರ್‌ನಲ್ಲಿ ಜಿಕಾ ಸಾಂಕ್ರಾಮಿಕ ರೋಗದ ಭೀತಿ ವ್ಯಾಪಕವಾಗಿದೆ. ಮಹಿಳೆಯರು ಎರಡು ವರ್ಷ ಗರ್ಭ ಧರಿಸುವುದು ಬೇಡ ಎಂದು ಸರ್ಕಾರ ಸಲಹೆ ನೀಡಿದೆ. ಸಹಜವಾಗಿಯೇ ಎಲ್‌ಸಾಲ್ವಡಾರ್‌ ಮತ್ತು ಇತರ ಹಲವು ರಾಷ್ಟ್ರಗಳು ಈ ಬೆಳವಣಿಗೆಯಿಂದ ಹೌಹಾರಿವೆ.ಸೊಳ್ಳೆಯಿಂದ ಹರಡುವ ಜಿಕಾ ಕಾಯಿಲೆ ಅಂಟಿಕೊಂಡರೆ ನವಜಾತ ಮಗುವಿನ ತಲೆ ಮತ್ತು ಮಿದುಳು ಪೂರ್ಣವಾಗಿ ಬೆಳೆಯದೆ (ಸಣ್ಣತಲೆ ಮಗು) ಭಾರಿ ಸಮಸ್ಯೆ ಎದುರಾಗುವ ಅಪಾಯ ಇದೆ. ಹೀಗಾಗಿ  2018ರ ವರೆಗೆ ಎಲ್‌ಸಾಲ್ವಡಾರ್‌ನಲ್ಲಿ ಮಹಿಳೆಯರು ಗರ್ಭ ಧರಿಸದೆ ಇರುವುದೇ ಸೂಕ್ತ ಎಂದು ಸರ್ಕಾರ ಸಲಹೆ ನೀಡಿದೆ. ಸಹಜವಾಗಿಯೇ ಸರ್ಕಾರದ ಹತಾಶ ಮನೋಭಾವ ಇದರೊಂದಿಗೆ ಬಯಲಿಗೆ ಬಂದಿದೆ.‘ಇದು ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಲ್ಲ, ದೇವರಿಗೆ ಸಂಬಂಧಿಸಿದ್ದು’ ಎಂದು ಇದೀಗ ಎರಡನೇ ಹೆರಿಗೆಗಾಗಿ ಕಾಯುತ್ತಿರುವ 7 ತಿಂಗಳ ಗರ್ಭಿಣಿ ವನೇಸ್ಸಾ ಇರಾಹೆಟಾ (30) ಹೇಳುತ್ತಾರೆ. ‘ಯುವಕರು ಮಕ್ಕಳನ್ನು ಪಡೆಯದೆ ಇರುತ್ತಾರೆ ಎಂದು ನಾನು ಭಾವಿಸಿಲ್ಲ’ ಎನ್ನುತ್ತಾರೆ ಅವರು. ಜಿಕಾ ವೈರಾಣು ಈಗಾಗಲೇ ಲ್ಯಾಟಿನ್‌ ಅಮೆರಿಕ ದೇಶಗಳು, ಕೆರಿಬಿಯನ್‌ ರಾಷ್ಟ್ರಗಳನ್ನು ತತ್ತರಿಸುವಂತೆ ಮಾಡಿದೆ. ಈ ಪೈಕಿ ಬ್ರೆಜಿಲ್‌ನಲ್ಲಂತೂ 10 ಲಕ್ಷ ಮಂದಿ ಈ ಸೋಂಕಿಗೆ ತುತ್ತಾಗಿದ್ದು, ಈಗಾಗಲೇ 4 ಸಾವಿರದಷ್ಟು ಚಿಕ್ಕ ತಲೆಯ ಶಿಶುಗಳು ಅಲ್ಲಿ ಜನಿಸಿವೆ.ಈ ಪ್ರದೇಶದ ಇತರ ರಾಷ್ಟ್ರಗಳೂ ಎಲ್‌ಸಾಲ್ವಡಾರ್‌ ನೀಡಿದಂತಹ ಎಚ್ಚರಿಕೆಗಳನ್ನೇ ನೀಡಿವೆ. ಕೆಲವು ತಿಂಗಳ ಮಟ್ಟಿಗೆ ಅಥವಾ ಈ ವೈರಸ್ ಬಗ್ಗೆ ಸರಿಯಾಗಿ ತಿಳಿವಳಿಕೆ ಮೂಡುವವರೆಗೆ ಗರ್ಭ ಧರಿಸುವುದನ್ನು ಮುಂದಕ್ಕೆ ಹಾಕಿ ಎಂಬ ಸಲಹೆಯನ್ನು ಕೊಲಂಬಿಯಾ ಮತ್ತು ಈಕ್ವೆಡಾರ್‌ನ ಅಧಿಕಾರಿಗಳು ನೀಡಿದ್ದಾರೆ. ಆದರೆ ಎಲ್‌ಸಾಲ್ವಡಾರ್‌ನಲ್ಲಿ ಮಾತ್ರ ಪೂರ್ತಿ ಎರಡು ವರ್ಷ ಮಕ್ಕಳನ್ನು ಹೆರಲೇಬಾರದು ಎಂದು ಸಲಹೆ ನೀಡಿದ್ದರಿಂದ ಹಲವಾರು ಪರಿಣತರು ದಿಗ್ಭ್ರಾಂತರಾಗಿದ್ದಾರೆ. ಸಾಂಕ್ರಾಮಿಕ ರೋಗವೊಂದು ಕಾಣಿಸಿಕೊಂಡಂತೆಯೇ ತನ್ನ ಇಡೀ ಜನನ ಪ್ರಕ್ರಿಯೆಯನ್ನೇ ಹತ್ತಿಕ್ಕಲು ದೇಶ ಪ್ರಯತ್ನಿಸುತ್ತಿದೆಯೇ ಎಂಬ ಅಚ್ಚರಿ ಮೂಡುವಂತಾಗಿದೆ.‘ನಾನು ಇದುವರೆಗೆ ಇಂತಹ ಸಾರ್ವಜನಿಕ ಕೋರಿಕೆಯನ್ನು ಕೇಳಿಯೂ ಇಲ್ಲ, ಓದಿಯೂ ಇಲ್ಲ’ ಎಂದು ಹೇಳುತ್ತಾರೆ ಹಾರ್ವರ್ಡ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಅರ್ಥಶಾಸ್ತ್ರ ಮತ್ತು ಜನಸಂಖ್ಯಾ ವಿಭಾಗದ ಪ್ರೊಫೆಸರ್‌ ಡೇವಿಡ್‌ ಬ್ಲೂಮ್‌. ‘ಇಂತಹ ಸಲಹೆ ಬಂದಿದೆ ಎಂಬ ಕಾರಣಕ್ಕೆ ನೀವು ವಂಶಾಭಿವೃದ್ಧಿಯ ಆಸೆಯನ್ನೇ ಎರಡು ವರ್ಷ ಅದುಮಿಡುತ್ತೀರಾ’ ಎಂದು ಪ್ರಶ್ನಿಸುವ ಎಲ್‌ಸಾಲ್ವಡಾರ್‌ನ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಅರ್ನೆಸ್ಟೊ ಸೆಲ್ವಸತ್ತರ್‌, ಇದೊಂದು ನಿರುಪಯುಕ್ತ ಸಲಹೆ ಎಂದೇ ಹೇಳುತ್ತಾರೆ.ಸಣ್ಣ ದೇಶವಾಗಿರುವ ಎಲ್‌ಸಾಲ್ವಡಾರ್‌ನಲ್ಲಿ ಗುಂಪು ಘರ್ಷಣೆಗಳು ಸಾಮಾನ್ಯವಾಗಿಬಿಟ್ಟಿವೆ. ಈ ಹಿಂಸೆಯಿಂದ ಬೇಸತ್ತು ಪ್ರತಿವರ್ಷ ಸಾವಿರಾರು ಯುವಕರು ದೇಶವನ್ನು ತೊರೆಯುತ್ತಿದ್ದಾರೆ. ಈ ಭಾಗದಲ್ಲಿನ ಅತ್ಯಂತ ಹಿಂಸಾನಿರತ ದೇಶ ಎಲ್‌ಸಾಲ್ವಡಾರ್‌ ಎಂದು ಈಗಾಗಲೇ ಕುಖ್ಯಾತಿ ಪಡೆದಿದೆ. ಇದೀಗ ಜಿಕಾ ವೈರಸ್‌ ದೇಶಕ್ಕೆ ಅಪಾಯದ ಕರೆಗಂಟೆಯನ್ನು ಬಾರಿಸಿದೆ. 60 ಲಕ್ಷದಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಇದುವರೆಗೆ 5 ಸಾವಿರದಷ್ಟು ಮಂದಿಗ ಜಿಕಾ ಸೋಂಕು ತಗುಲಿದೆ.ಕಳೆದ ಒಂದು ತಿಂಗಳಲ್ಲೇ ಕನಿಷ್ಠ 1,500 ಮಂದಿ ಈ ಸೋಂಕಿಗೆ ಒಳಗಾಗಿದ್ದಾರೆ. ಈಡಿಸ್‌ ಸೊಳ್ಳೆಯಿಂದ ಡೆಂಗಿ, ಚಿಕೂನ್‌ಗುನ್ಯ, ಹಳದಿ ಜ್ವರದಂತಹ ಕಾಯಿಲೆಗಳೂ ಹರಡುತ್ತವೆ. ಹೀಗಾಗಿ ಇದರ ಪರಿಹಾರಕ್ಕಾಗಿ ಎಲ್‌ಸಾಲ್ವಡಾರ್‌ ಸರ್ಕಾರ ಇದೀಗ ಹೆಣಗಾಡುತ್ತಿದೆ. ಅತ್ಯಂತ ಜನದಟ್ಟಣೆಯ ರಾಜಧಾನಿಯ ಹಲವು ಬೀದಿಗಳಲ್ಲಿ ಕೊಚ್ಚೆ ನೀರು ನಿಂತಿರುವುದು ಸಾಮಾನ್ಯ. ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುವುದು ಇಲ್ಲೇ. ಗುಂಪು ಘರ್ಷಣೆಗಳ ಕಾರಣ ಮೂರು ತಿಂಗಳ ಹಿಂದೆ ಇಲ್ಲಿದ್ದ ಸರ್ಕಾರಿ ಚಿಕಿತ್ಸಾಲಯವೊಂದು ಬಂದ್‌ ಆಗಿದೆ. ಇಂತಹ ಸ್ಥಿತಿಯಲ್ಲಿ ವೈರಸ್‌ ಅನ್ನು ನಿಗ್ರಹಿಸುವುದು ಕಷ್ಟದ ಕೆಲಸ ಎಂದು ಸಮುದಾಯ ನಾಯಕರೊಬ್ಬರು ಹೇಳುತ್ತಾರೆ.ಈ ಸೊಳ್ಳೆಗಳು ಇಲ್ಲಿ ಇರುವುದು ನಿಜ ಮತ್ತು ರೋಗವನ್ನು ಹರಡುತ್ತಿರುವುದೂ ನಿಜ. ಹೀಗಾಗಿ ಜಿಕಾ ಸೋಂಕು ತಡೆಗಟ್ಟುವ ಸಲುವಾಗಿ ಮಕ್ಕಳನ್ನು ಹೆರದೆ ಇರುವುದೇ ಸೂಕ್ತ ಎಂಬುದು ಸರ್ಕಾರದ ತಾತ್ಕಾಲಿಕ  ಕಾರ್ಯತಂತ್ರವೇ ಹೊರತು ಅಂತಿಮ ನಿಲುವಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ ದೇಶದ ಉಪ ಅರೋಗ್ಯ ಸಚಿವ ಎಡ್ವರ್ಡೊ ಎಸ್ಪಿನೋಜಾ. ‘ಗರ್ಭ ಧರಿಸಬೇಕೆಂದು ಬಯಸುವವರು ಸದ್ಯ ಅದನ್ನು ಮುಂದೂಡೋಣ ಎಂದು ತಮಗೆ ತಾವೇ ಬದ್ಧತೆ ಪ್ರದರ್ಶಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದೂ ಅವರು ಹೇಳುತ್ತಾರೆ. ಎರಡು ವರ್ಷ ಗರ್ಭ ಧರಿಸಬೇಡಿ ಎಂದು ತಾನು ಖಂಡಿತ ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.‘ಇಂತಹ ಶಿಫಾರಸು ಮಾಡುವ ಮೊದಲು ಹಲವು ಪ್ರಶ್ನೆಗಳು ಏಳುತ್ತವೆ, ಅವುಗಳಿಗೆ ಉತ್ತರ ನೀಡಲೇಬೇಕಾಗುತ್ತದೆ’ ಎಂದು ಪಾನ್‌ ಅಮೆರಿಕನ್‌ ಹೆಲ್ತ್‌ ಆರ್ಗನೈಸೇಷನ್‌ನ ಸೋಂಕು ಕಾಯಿಲೆ ವಿಭಾಗದ ನಿರ್ದೇಶಕ ಡಾ.ಮಾರ್ಕೊಸ್‌ ಎಸ್ಪಿನಲ್‌ ಹೇಳುತ್ತಾರೆ. ದೇಶ ನಿಜವಾಗಿಯೂ ಸಾಂಕ್ರಾಮಿಕ ರೋಗದ ಪರಾಕಾಷ್ಠೆಯಲ್ಲಿದೆಯೇ ಎಂಬುದು ಬಹಳ ಮುಖ್ಯವಾದುದು. ‘ಇಂತಹ ಶಿಫಾರಸು ಮಾಡುವುದರಿಂದ ದೇಶದ ಜನನ ಪ್ರಮಾಣದ ಮೇಲಾಗುವ ಪರಿಣಾಮ ಎಂತಹುದು ಎಂಬುದನ್ನೂ ನೀವು ವಿಶ್ಲೇಷಣೆ ಮಾಡಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.‘ಗರ್ಭ ಧರಿಸಬೇಡಿ ಎಂದು ಯಾವುದೇ ಸರ್ಕಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದರ ಬಗ್ಗೆ ನಾನು ಇದುವರೆಗೆ ಕೇಳಿಯೂ ಇಲ್ಲ, ಓದಿಯೂ ಇಲ್ಲ’ ಎಂದು ಮಿಶಿಗನ್‌ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಇತಿಹಾಸವನ್ನು ಬೋಧಿಸುವ ಡಾ.ಹೋವರ್ಡ್ ಮರ್ಕೆಲ್‌ ಹೇಳುತ್ತಾರೆ. ಗರ್ಭ ಧರಿಸುವುದಕ್ಕೆ ಸಂಬಂಧಿಸಿದಂತೆ ಈ ಮೊದಲು ನೀಡಲಾದ ಎಚ್ಚರಿಕೆಗಳನ್ನು ಅವರು ಉಲ್ಲೇಖಿಸುತ್ತಾರೆ. ಅವರು ರುಬೆಲ್ಲಾ  ಸೋಂಕಿನ ಬಗ್ಗೆ ಬೊಟ್ಟುಮಾಡಿ ತೋರಿಸುತ್ತಾರೆ. ಈ ರುಬೆಲ್ಲಾ ಸೋಂಕು ಬಾಧಿಸಿದರೆ ಹಲವಾರು ಬಗೆಯಲ್ಲಿ ಜನನ ತೊಂದರೆಗಳು ಎದುರಾಗುತ್ತವೆ, ಸಣ್ಣ ತಲೆಯ ಮಗು ಜನಿಸುವ ಅಪಾಯವೂ ಇದೆ. ಹೀಗಾಗಿ ರುಬೆಲ್ಲಾ ಸೋಂಕು ಇದ್ದವರ ಬಳಿ ಸುಳಿಯಬೇಡಿ ಎಂದು ವೈದ್ಯರು ಗರ್ಭಿಣಿಯರಿಗೆ  ಎಚ್ಚರಿಕೆ ನೀಡಿದ್ದು ಇದೆ ಎಂದು ಅವರು ಹೇಳುತ್ತಾರೆ.ಎಚ್ಐವಿ/ ಏಡ್ಸ್  ಕಂಡುಬಂದ ಆರಂಭಿಕ ಹಂತದಲ್ಲೂ ಇಂತಹದೇ ಚರ್ಚೆ ಚಾಲ್ತಿಯಲ್ಲಿತ್ತು. ಎಚ್‌ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಸೋಂಕು ಹರಡುವ ಅಪಾಯ ಇದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಮಗುವಿಗೆ ಅಪಾಯ ಇರುವ ಕಾರಣ ಎಚ್‌ಐವಿ ಸೋಂಕಿತ ಮಹಿಳೆ ಗರ್ಭ ಧರಿಸಕೂಡದು ಎಂದು ವೈದ್ಯರು ಸಲಹೆ ನೀಡಬಹುದೇ ಎಂಬುದು ನೈತಿಕ ಪ್ರಶ್ನೆಯೊಂದಿಗೆ ಬಹು ಚರ್ಚಿತ ವಿಷಯವೂ ಆಗಿತ್ತು. ಆದರೆ ಅಂದೂ ಸಹ ಯಾವ ವೈದ್ಯರೂ ಇದನ್ನು ಮಾಡಲೇಬೇಕು ಎಂದು ಕಟ್ಟಪ್ಪಣೆ ನೀಡಿರಲಿಲ್ಲ ಎಂಬುದನ್ನು ಉಲ್ಲೇಖಿಸುತ್ತಾರೆ ಡಾ.ಮರ್ಕೆಲ್‌.ಎಲ್‌ಸಾಲ್ವಡಾರ್‌ ಒಂದು ಸಂಪ್ರದಾಯವಾದಿ, ಧಾರ್ಮಿಕ ನಂಬಿಕೆಯ ದೇಶವಾಗಿದ್ದು, ಗರ್ಭ ಧರಿಸುವುದನ್ನು ಮುಂದೂಡಬೇಕೆಂಬ ಸರ್ಕಾರದ ಸಲಹೆ ಇಲ್ಲಿ ಅತ್ಯಂತ ಸೂಕ್ಷ್ಮ ವಿಚಾರ. ಈ ಸಲಹೆ ಕಾರ್ಯರೂಪಕ್ಕೆ ಬರಬೇಕಿದ್ದರೆ ಭಾರಿ ಪ್ರಮಾಣದಲ್ಲಿ ಗರ್ಭ ನಿರೋಧಕಗಳನ್ನು ಬಳಸಬೇಕಾಗುತ್ತದೆ. ಶೇ 50ಕ್ಕಿಂತ ಅಧಿಕ ರೋಮನ್‌ ಕೆಥೋಲಿಕರನ್ನು ಹೊಂದಿರುವುದರಿಂದ ಇದು ಮತ್ತಷ್ಟು ಸಂಕೀರ್ಣ ವಿಚಾರವಾಗಿಬಿಟ್ಟಿದೆ.ಸರ್ಕಾರದಂತೆ ರೋಮನ್‌ ಕೆಥೋಲಿಕ್‌ ಚರ್ಚ್‌ ಸಹ ಈ ಸಂದಿಗ್ಧ ಸನ್ನಿವೇಶಕ್ಕೆ ಹೊಂದಿಕೊಳ್ಳಲು ತಯಾರಾದಂತೆ ಇಲ್ಲ. ಅಸೌಖ್ಯದಿಂದ ಬಳಲುತ್ತಿರುವ ಆರ್ಚ್‌ಬಿಷಪ್ ಅವರಿಂದ ಇದುವರೆಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಮುಂದಿನ ವಾರ ಬಿಷಪ್‌ಗಳ ಸಭೆ ನಡೆಯುವ ನಿರೀಕ್ಷೆ ಇದ್ದು, ಈ ಬಿಕ್ಕಟ್ಟಿಗೆ ಒಂದು ಉತ್ತರ ದೊರಕುವ ಸಾಧ್ಯತೆ ಇದೆ ಎಂದು ಬಿಷಪ್‌ ಗ್ರೆಗರಿಯೊ ರೋಜಾ ಚವೆಸ್ ಹೇಳಿದ್ದಾರೆ. ‘ಖಂಡಿತವಾಗಿಯೂ ಇದೊಂದು ಹೊಸ ವಿಚಾರ. ಇದನ್ನು ತಾಳ್ಮೆಯಿಂದ ವಿಚಾರಿಸುವ ಅಗತ್ಯ ಇದೆ. ಚರ್ಚ್‌ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಅವರು ಹೇಳಿದ್ದಾರೆ.ಗರ್ಭ ಧರಿಸುವುದನ್ನು ಮುಂದೂಡುವುದು ದೇಶದ ಕೆಲವು ಮಹಿಳೆಯರಿಗೆ ಸಮಸ್ಯೆ ಎಂಬುದಾಗಿ ಕಾಣಿಸಿದಂತಿಲ್ಲ. ಇತರ ಹಲವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಎಲ್‌ಸಾಲ್ವಡಾರ್‌ನಲ್ಲಿನ ಜನನ ಪ್ರಮಾಣ ಕಡಿಮೆಯೇ ಇದೆ. ತಾವು ಏಕೆ ಗರ್ಭವತಿಯರಾಗಲು ಬಯಸುವುದಿಲ್ಲ ಎಂದು ಹೇಳುವ ಮಹಿಳೆಯರು ನೀಡುವ ಪಟ್ಟಿಯಲ್ಲಿ ಜಿಕಾ ಆತಂಕ 3ನೇ ಅಥವಾ 4ನೇ ಸ್ಥಾನದಲ್ಲಷ್ಟೇ ಇದೆ. ಮಹಿಳೆಯರು ಗರ್ಭ ಧರಿಸುವುದಕ್ಕೆ ಹಿಂದೇಟು ಹಾಕುವುದಕ್ಕೆ ಮೊದಲ ಕಾರಣ ಹಿಂಸಾಚಾರ. ಈ ಗುಂಪುಗಳು ತಮ್ಮೊಂದಿಗೆ ಸೆಣಸಾಡುವುದು ಮಾತ್ರವಲ್ಲ, ಪೊಲೀಸರೊಂದಿಗೂ ಹಿಂಸಾಚಾರಕ್ಕಿಳಿಯುತ್ತವೆ. ದೇಶದಲ್ಲಿ ನಾಗರಿಕ ಸಮರ ಕೊನೆಗೊಂಡದ್ದು 1992ರಲ್ಲಿ. ಇದೀಗ ಮತ್ತೆ ಅಂತಹುದೇ ಕಲಹಗಳು ಕಾಣಿಸಿ ಜನ ಭೀತರಾಗಿದ್ದಾರೆ.ಆರ್ಥಿಕ ಕಾರಣದಿಂದಲೂ ಮಹಿಳೆಯರು ಗರ್ಭ ಧರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ತೀವ್ರ ತರವಾದ ನಿರುದ್ಯೋಗದಿಂದಾಗಿ ದೇಶದ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಮಂದಿ ಬಡತನ ರೇಖೆಯಿಂದ ಕೆಳಗೆ ಇದ್ದಾರೆ. ‘ಇದು ಕಾಯಿಲೆಯ ಪ್ರಶ್ನೆಯಲ್ಲ. ಇದೊಂದು ಆರ್ಥಿಕ ಪ್ರಶ್ನೆ ಮತ್ತು ದೇಶದ ಭದ್ರತೆಯ ಪ್ರಶ್ನೆಯೂ ಹೌದು’ ಎಂದು 3 ವರ್ಷದ ಮಗಳೊಂದಿಗಿದ್ದ ಸಾರಾ ಗಾಲ್ದಮೆಜ್‌ (21) ಹೇಳುತ್ತಾರೆ. ದೇಶದಲ್ಲಿ ಚರ್ಚ್‌ನ ಪ್ರಭಾವ ಇದ್ದರೂ ಗರ್ಭನಿರೋಧಕಗಳ ಬಳಕೆಯಲ್ಲಿ ಅದು ಅಂತಹ ಪ್ರಭಾವ ಬೀರಿಲ್ಲದಿರುವುದು ಗೊತ್ತಾಗಿದೆ. ಎಲ್‌ಸಾಲ್ವಡಾರ್‌ನಲ್ಲಿ ಬಳಕೆಯಾಗುವ ಗರ್ಭ ನಿರೋಧಕಗಳ ಪ್ರಮಾಣ ಅಮೆರಿಕದಲ್ಲಿ ಬಳಕೆಯಾಗುವ ಪ್ರಮಾಣಕ್ಕೆ ಸರಿಸಮನಾಗಿದೆ ಎಂದು ಅಮೆರಿಕ ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ.‘ಯಾವುದೇ ಕಾಯಿಲೆಯ ಭಯ ಇದ್ದರೂ ಜನರನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಗರ್ಭ ಧರಿಸದಂತೆ ನೋಡಿಕೊಳ್ಳಲು ಬೇರೆ ಸಾಕಷ್ಟು ದಾರಿಗಳಿವೆಯಲ್ಲ’ ಎಂದು ತನ್ನ ಬಾಯ್‌ಫ್ರೆಂಡ್ ಜತೆಗಿದ್ದ 17ರ ಹರೆಯದ ಡೆನಿಲ್ಲಾ ಹೆರ್ಮಂಡೆಜ್‌ ಹೇಳಿದರು. ಗರ್ಭ ಧರಿಸಕೂಡದು ಎಂದು ಸರ್ಕಾರ ಸಲಹೆ ನೀಡುವುದರ ಹಿಂದೆ ಜನಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಪಿತೂರಿ ಇದ್ದಂತಿದೆ ಎಂದು ಅಂದಾಜಿಸುತ್ತಾರೆ ವೆರೋನಿಕಾ ವೆಲಾಸ್‌ಕ್ವೆಜ್‌. ಈಗಾಗಲೇ ಎಲ್‌ಸಾಲ್ವಡಾರ್ ದಟ್ಟಣೆಯಿಂದ ಕೂಡಿದೆ, ಯಾವುದೇ ರೀತಿಯಿಂದಲಾದರೂ ಜನಸಂಖ್ಯೆಯನ್ನು ನಿಯಂತ್ರಿಸುವುದು ಅದರ ಉದ್ದೇಶವಿದ್ದಂತಿದೆ ಎಂದು ದೂರುತ್ತಾರೆ ಅವರು.ಜಿಕಾ ಸೋಂಕಿನ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಸರ್ಕಾರ ಇದೀಗ ಹೆಣಗಾಡುತ್ತಿದೆ. ಮುಂದಿನ ಎರಡು ವರ್ಷ ಮಕ್ಕಳನ್ನು ಹೆರಲೇಬಾರದು ಎಂದು ಹೇಳಿದರೆ ಅದು ಎಂತಹ ದುಷ್ಪರಿಣಾಮ ಬೀರಬಹುದು ಎಂಬುದನ್ನು ಅಂದಾಜಿಸಿದ್ದೀರಾ ಎಂದು ಕೇಳಿದರೂ ದೇಶದ ಉಪ ಆರೋಗ್ಯ ಸಚಿವರು ‘ಅದು ದೊಡ್ಡ ದುಷ್ಪರಿಣಾಮ ಬೀರುವ ಸಂಗತಿಯಾಗಲಾರದು’ ಎಂದೇ ಹೇಳುತ್ತಿದ್ದಾರೆ. ‘ಉತ್ತರ ಅಮೆರಿಕ ಖಂಡದಲ್ಲೇ ಅತ್ಯಂತ ಹೆಚ್ಚು ಜನದಟ್ಟಣೆಯ ದೇಶ ನಮ್ಮದು. ನಮ್ಮಲ್ಲಿನ ಜನನ ಪ್ರಮಾಣದಲ್ಲಿ ಕುಸಿತ ಕಾಣಿಸಿದ್ದೇ ಆದರೆ ಅದು ಅಂತಹ ಕೆಟ್ಟ ವಿಚಾರವಂತೂ ಆಗಲಾರದು’ ಎಂದು ಅವರು ಹೇಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.