ಮಂಗಳವಾರ, ಮೇ 24, 2022
28 °C

ಜಿಟಿಜಿಟಿ ಮಳೆ: ತೆರೆಯದ ಶಾಲೆ, ಕಾಲೇಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಕೂಡ ಮಳೆ ಮುಂದುವರೆದಿದೆ. ಜಿಲ್ಲೆಯಲ್ಲಿ ಹಲವು ದಿನಗಳಿಂದ ಆರ್ಭಟಿಸುತ್ತಿದ್ದ ಮಳೆ ಕೊಂಚ ಇಳಿಮುಖವಾಗಿ ಸುರಿಯುತ್ತಿದೆ.ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಸೋಮವಾರ ರಜೆಯನ್ನು ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಘೋಷಿಸಿದ್ದಾರೆ.ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಬಾಳಲೆ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ, ಕುಶಾಲನಗರ, ಸುಂಟಿಕೊಪ್ಪ ಉತ್ತಮ ಮಳೆ ಸುರಿದಿದೆ.ಜಿಲ್ಲೆಯಾದ್ಯಂತ ಮಳೆ ಮುಂದುವರೆದರೂ ಕೂಡ ಮಳೆಯ ಆರ್ಭಟ ಕೊಂಚ ಕಡಿಮೆಯಾದ ಪರಿಣಾಮ ಪ್ರವಾಹದ ಭೀತಿಯಿಂದ ತತ್ತರಿಸಿದ್ದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಮಡಿಕೇರಿಯಲ್ಲೂ ಭಾನುವಾರ ಉತ್ತಮ ಮಳೆ ಸುರಿದಿದೆ. ಬೆಳಿಗ್ಗೆ ವೇಳೆಯಿಂದಲೇ ಆರಂಭವಾದ ಮಳೆ ದಿನವಿಡೀ ಸುರಿದಿದೆ.

ಇಲ್ಲಿನ ಕಾಲೇಜು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವ ಪರಿಣಾಮ ಕಾಂಕ್ರಿಟ್ ರಸ್ತೆಯನ್ನು ಮಾಡಲು ಅನುದಾನ ಬಿಡುಗಡೆಯಾದರೂ, ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ, ಇದೀಗ ಮಳೆ ಸುರಿಯುತ್ತಿರುವ ಪರಿಣಾಮ ಅಲ್ಲಲ್ಲಿ ನೀರು ತುಂಬಿದ್ದು, ಸಂಚಾರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.ನಗರದಲ್ಲಿ ಭಾನುವಾರ ಮಳೆ ಕಡಿಮೆಯಾದರೂ ಮಳೆಯ ಹಾನಿ ಮುಂದುವರೆದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆರಂಭಿಸಿರುವ ಗಂಜಿ ಕೇಂದ್ರವನ್ನು ಹಾಗೆಯೇ ಮುಂದುವರೆಸಲಾಗಿದೆ.ಮಳೆ ಹಾನಿ: ಕೊಡಗಿನಲ್ಲಿ ಈ ಬಾರಿ ಮುಂಗಾರು ಮಳೆ ದಾಖಲೆ ಪ್ರಮಾಣದಲ್ಲಿ ಸುರಿದಿದ್ದು, ಮಳೆಯ ಆರ್ಭಟ ಕಡಿಮೆಯಾದರೂ ಹಾನಿ ಮಾತ್ರ ಮುಂದುವರೆದಿದೆ.ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಧನು ಎಂಬುವವರ ಮನೆ ಜಖಂಗೊಂಡಿದೆ. ಭಗವತಿ ದೇವಸ್ಥಾನ ಬಳಿಯ ಎಸ್. ಶಾರದಾ ಎಂಬುವವರ ಮನೆಯ ಪಕ್ಕದಲ್ಲಿದ್ದ ಬಾವಿಯ ಮೇಲೆ ಬರೆ ಕುಸಿದ ಪರಿಣಾಮ ಬಾರಿ ಸಂಪೂರ್ಣವಾಗಿ ಮಣ್ಣಿನಿಂದ ಆವೃತ್ತವಾಗಿದೆ. ಮೂರ್ನಾಡು ರಸ್ತೆಯ ನಿವಾಸಿ ರೋಶನ್ ಅವರ ಮನೆಯ ಬಳಿ ಬರೆಕುಸಿತ ಉಂಟಾಗಿದೆ.ವಿರಾಜಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಸೇತುವೆ ಮೇಲೆ ಮೂರು ಅಡಿಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ಸಂಚರಿಸಲು ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ 66.94 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 14.45 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ  1844.10 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 763.29 ಮಿ.ಮೀ ಮಳೆ ದಾಖಲಾಗಿತ್ತು.ಮಡಿಕೇರಿ ತಾಲ್ಲೂಕಿನಲ್ಲಿ 87.5ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 50.75 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 62.57 ಮಿ.ಮೀ. ಮಳೆ ಸುರಿದಿದೆ. ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 101.4 ಮಿ.ಮೀ., ನಾಪೋಕ್ಲು 72.8 ಮಿ.ಮೀ., ಸಂಪಾಜೆ 84.8 ಮಿ.ಮೀ., ಭಾಗಮಂಡಲ 91 ಮಿ.ಮೀ., ವೀರಾಜಪೇಟೆ ಕಸಬಾ 64.6 ಮಿ.ಮೀ., ಹುದಿಕೇರಿ 53.3 ಮಿ.ಮೀ., ಶ್ರಿಮಂಗಲ 66.4 ಮಿ.ಮೀ., ಪೊನ್ನಂಪೇಟೆ 41.2 ಮಿ.ಮೀ., ಅಮ್ಮತ್ತಿ 59 ಮಿ.ಮೀ., ಬಾಳಲೆ 20 ಮಿ.ಮೀ., ಸೋಮವಾರಪೇಟೆ ಕಸಬಾ 76.4 ಮಿ.ಮೀ., ಶನಿವಾರಸಂತೆ 56.4 ಮಿ.ಮೀ., ಶಾಂತಳ್ಳಿ 151.60 ಮಿ.ಮೀ., ಕೊಡ್ಲಿಪೇಟೆ 34 ಮಿ.ಮೀ., ಕುಶಾಲನಗರ 20 ಮಿ.ಮೀ., ಸುಂಟಿಕೊಪ್ಪ 37 ಮಿ.ಮೀ. ಮಳೆಯಾಗಿದೆ. ಹಾರಂಗಿಯಿಂದ ನದಿಗೆ ನೀರು

ಕುಶಾಲನಗರ: ಕೊಡಗಿನ ಪ್ರಮುಖ ಜಲಾಶಯ ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾನುವಾರ ಸಂಜೆ ಜಲಾಶಯದಿಂದ 26,400 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ ಸಂಜೆ 4ಗಂಟೆಯ ವರದಿಯಂತೆ 2856.66 ಅಡಿ ನೀರು ಸಂಗ್ರಹವಿದೆ. 11,360 ಕ್ಯೂಸೆಕ್ ನೀರಿನ ಒಳಹರಿವಿದೆ. ಭಾನುವಾರ ಬೆಳಿಗ್ಗೆ 8ಗಂಟೆ ವರದಿಯಂತೆ 28.6 ಮಿ.ಮೀ ಮಳೆ ಸುರಿದಿದೆ.ಎರಡು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಎಡಬಿಡದೆ ಮಳೆ ಸುರಿದಿದ್ದರಿಂದ ಶುಕ್ರವಾರ ಸಂಜೆ 26,750 ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗಿದೆ. ಆದರೆ, ಶನಿವಾರ ಸಂಜೆಯಿಂದ ಮಳೆ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗಿದೆ. ಹೊರಹರಿವಿನ ಪ್ರಮಾಣದಲ್ಲೂ ಕಡಿಮೆ ಮಾಡಿದ್ದು, 26,400 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.ಭಾನುವಾರ ಬೆಳಿಗ್ಗೆ ರಭಸವಾಗಿ ಸುರಿದ ಮಳೆ 10ಗಂಟೆ ನಂತರ ಬಿಡುವು ನೀಡಿತು. ಆದರೆ, ಮಧ್ಯಾಹ್ನ ಒಂದು ಗಂಟೆಗೆ ಪುನಃ ಧಾರಾಕಾರ ಮಳೆ ಸುರಿಯಿತು.ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಅಪಾಯದ ಮಟ್ಟದಲ್ಲಿ ಕಾವೇರಿ ಹರಿಯುತ್ತಿದೆ. ಗುಡ್ಡೆಹೊಸೂರು, ಕೂಡಿಗೆ ಮುಂತಾದೆಡೆಗಳಲ್ಲಿ ಹೊಲಗದ್ದೆಗಳಿಗೆ ಮತ್ತು ಕೊಲ್ಲಿಗಳಲ್ಲಿ ಆವರಿಸಿದ್ದ ಕಾವೇರಿ ನೀರು ಕಡಿಮೆಯಾಗಿಲ್ಲ.ಅಪಾರ ಆಸ್ತಿ ಹಾನಿ

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಮಳೆ ಮುಂದುವ ರಿದಿದ್ದು, ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟವಾಗಿದೆ.

ನಗರದ ರೇಂಜರ್ ಬ್ಲಾಕಿನ ಶಿಕ್ಷಕರ ವಸತಿ ಗೃಹದ ಸಮೀಪದ ಮಾಣಿಕ್ಯರವರ ಮನೆಯ ಬರೆ ಕುಸಿದು ರಾಣಿ ಎಂಬವರ ಮನೆ ಕುಸಿದಿದೆ. ನಿವಾಸಿ ಸತ್ಯನಾರಾಯಣ ಮತ್ತು ಮಂಜುಳ ಅವರ ಮನೆಯ ಮೇಲೆ ವಿದ್ಯುತ್ ಕಂಬ ಬೀಳುವ ಹಂತದಲ್ಲಿದೆ. ತಕ್ಷಣ ಸೆಸ್ಕ್ ಈ ವಿದ್ಯುತ್ ಕಂಬ ತೆರವಿಗೆ ಮನವಿ ಮಾಡಿದ್ದಾರೆ. ಐಗೂರಿನ ಬಳಿ ಚೋರನಹೊಳೆ ತುಂಬಿಹರಿದು ಪಕ್ಕದ ಕಾಫಿತೋಟ ಗದ್ದೆ ಆವೃತವಾಗಿದೆ. ತಾಲ್ಲೂಕಿನಲ್ಲಿ ಮಳೆ ಮುಂದುವರಿದಿ ರುವುದರಿಂದ ನಾಳೆ ಶಾಲಾ ಕಾಲೇಜಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.ಕಳೆದ 24 ಗಂಟೆ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ ಶಾಂತಳ್ಳಿಗೆ 151.4, ಕುಶಾಲನಗರಕ್ಕೆ 20 ಮಳೆಯಾ ಗಿದೆ. ಉಳಿದಂತೆ ಸೋಮವಾರಪೇಟೆ 76.4 ಮಿ ಮೀ, ಶನಿವಾರಸಂತೆಗೆ 56.4, ಕೊಡ್ಲಿಪೇಟೆಗೆ 34, ಸುಂಟಿಕೊಪ್ಪಕ್ಕೆ 37 ಮಿ.ಮೀ ಮಳೆಯಾದ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.