ಜಿತು, ದೀಪಾಗೆ ಖೇಲ್ ರತ್ನ

ನವದೆಹಲಿ (ಪಿಟಿಐ): ಪಿಸ್ತೂಲ್ ಶೂಟರ್ ಜಿತು ರಾಯ್ ಮತ್ತು ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಅವರ ಹೆಸರನ್ನು ಬುಧವಾರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಗೌರವಕ್ಕೆ ಶಿಫಾರಸು ಮಾಡಲಾಗಿದೆ.
ಪ್ರಶಸ್ತಿಯ ಆಯ್ಕೆಗೆ ಕೇಂದ್ರ ಕ್ರೀಡಾ ಇಲಾಖೆ ನೇಮಿಸಿರುವ 12 ಸದಸ್ಯರ ಆಯ್ಕೆ ಸಮಿತಿ ಇವರ ಹೆಸರನ್ನು ಅಂತಿಮಗೊಳಿಸಿದೆ.
ತ್ರಿಪುರದ ದೀಪಾ ಅವರು ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನ ಜಿಮ್ನಾಸ್ಟಿಕ್ಸ್ನ ವಾಲ್ಟ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು.
ಚೊಚ್ಚಲ ಕೂಟದಲ್ಲೇ ಅಮೋಘ ಸಾಮರ್ಥ್ಯ ತೋರಿದ್ದ ದೀಪಾ ಸ್ವಲ್ಪದರಲ್ಲೆ ಕಂಚು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. 23 ವರ್ಷದ ದೀಪಾ 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟ ದಲ್ಲಿ ಕಂಚಿನ ಸಾಧನೆ ಮಾಡಿದ್ದರು.
ಜಿತು ಅನನ್ಯ ಸಾಧನೆ: ಶೂಟರ್ ಜಿತು ರಾಯ್ ಅವರು ಪುರುಷರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದಾರೆ.
ರಿಯೊ ಒಲಿಂಪಿಕ್ಸ್ನ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಗಳಿಸಿದ್ದ ಜಿತು, ಎಂಟನೇ ಸ್ಥಾನ ದೊಂದಿಗೆ ಸ್ಪರ್ಧೆ ಕೊನೆಗೊಳಿಸಿದ್ದರು.
50 ಮೀಟರ್ಸ್ ಪಿಸ್ತೂಲ್ ವಿಭಾಗ ದಲ್ಲೂ ಭಾರತದ ಸವಾಲು ಎತ್ತಿಹಿಡಿದಿದ್ದ ಅವರು ಫೈನಲ್ಗೆ ಅರ್ಹತೆ ಗಳಿಸಿರಲಿಲ್ಲ.
ಜಿತು ಅವರು ಅಜರ್ಬೈಜಾನ್ನ ಬಾಕುದಲ್ಲಿ ನಡೆದಿದ್ದ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಬ್ಯಾಂಕಾಂಕ್ನಲ್ಲಿ ನಡೆದಿದ್ದ ವಿಶ್ವಕಪ್ನ 50 ಮಿಟರ್ಸ್ ಪಿಸ್ತೂಲ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.
2014ರಲ್ಲಿ ಸ್ಪೇನ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಗೆದ್ದು ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದರು.
‘ಖೇಲ್ ರತ್ನ ಗೌರವಕ್ಕೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರೂ ಕೇಳಿ ಬಂದಿತ್ತು. ದೀಪಾ ಮತ್ತು ಜಿತು ಒಲಿಂಪಿಕ್ಸ್ನಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ಕಾರಣ ಅವರ ಹೆಸರನ್ನು ಕೈಬಿಡಲಾಗಿದೆ’ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದ ಪ್ರಕಾಶ್ಗೆ ಅರ್ಜುನ
ಕರ್ನಾಟಕದ ಪಿ.ಎನ್. ಪ್ರಕಾಶ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ರಿಯೊ ಕೂಟದ ಪುರುಷರ 50 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರಕಾಶ್ 25ನೇ ಸ್ಥಾನ ಗಳಿಸಿದ್ದರು.
ಕ್ರಿಕೆಟಿಗ ಅಜಿಂಕ್ಯ ರಹಾನೆ, ಬಾಕ್ಸರ್ ಶಿವ ಥಾಪ, ಶೂಟರ್ಗಳಾದ ಗುರ್ಪ್ರೀತ್ ಸಿಂಗ್ ಮತ್ತು ಅಪೂರ್ವಿ ಚಾಂಡೇಲ, ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್, ಫುಟ್ಬಾಲ್ ಆಟಗಾರ ಸುಬ್ರತಾ ಪಾಲ್, ಕುಸ್ತಿಪಟು ವಿನೇಶ ಪೋಗಟ್ ಮತ್ತು ಅಮಿತ್ ಧನಕರ್ ಹಾಗೂ ಸ್ನೂಕರ್ ಆಟಗಾರ ಸೌರವ್ ಕೊಠಾರಿ ಅವರ ಹೆಸರನ್ನೂ ಅರ್ಜುನ ಗೌರವಕ್ಕೆ ಶಿಫಾರಸು ಮಾಡಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.