ಶುಕ್ರವಾರ, ಮೇ 29, 2020
27 °C

ಜಿ.ಪಂ ಸಾಮಾನ್ಯ ಸಭೆ: ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಾದ್ಯಂತ ಸುಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪೇರಿ ಮಾಡಿ 15 ದಿನಗಳ ಒಳಗೆ ಅಳವಡಿಸಲು ಹೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಿಇಓ ವೀರಣ್ಣ ತುರಮರಿ ಅವರು ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೇ, ತಕ್ಷಣದಿಂದಲೇ ರಿಪೇರಿಯಾದ ಟಿ.ಸಿ. ಗಳನ್ನು ಒಂದೊಂದಾಗಿ ಅಳವಡಿಸಲು ಪ್ರಯತ್ನಿಸಿ ಎಂದು ಸಲಹೆಯನ್ನೂ ನೀಡಿದರು.ಇದಕ್ಕೂ ಮೊದಲು ಈ ವಿಚಾರವಾಗಿ ಸಭೆಯ ಗಮನ ಸೆಳೆದವರು ಶಾಸಕ ಕಳಕಪ್ಪ ಬಂಡಿ. ಜಿಲ್ಲೆಯ ಅನೇಕ ಕಡೆ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿ ಬಹಳಷ್ಟು ದಿನವಾಗಿದ್ದರೂ ಹೆಸ್ಕಾಂ ನವರು ಬದಲಿ ವ್ಯವಸ್ಥೆ ಮಾಡುವ ಗೋಜಿಗೂ ಹೋಗಿಲ್ಲ, ಅಲ್ಲದೆ ಸುಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪೇರಿ ಮಾಡಿಲ್ಲ. ಬೇಸಿಗೆ ಕಾಲವಾದ್ದರಿಂದ ಪಂಪ್‌ಸೆಟ್ ಹೊಂದಿರುವ ರೈತರು ಬೆಳೆಗಳಿಗೆ ನೀರು ಹಾಯಿಸಲು ಪರದಾಟಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.ಶಾಸಕರ ಪ್ರಶ್ನೆಗೆ ಉತ್ತರಿಸಿದ ಹೆಸ್ಕಾಂ ಎಂಜಿನಿಯರ್ ಜಿಲ್ಲೆಯಲ್ಲಿ ಪ್ರಸ್ತುತ 56 ಟಿ.ಸಿ.ಗಳು ರಿಪೇರಿಯಲ್ಲಿವೆ. ಅವುಗಳನ್ನು ಗದುಗಿನಲ್ಲಿಯೇ ಇರುವ ಸರ್ವೀಸ್ ಕೇಂದ್ರದಲ್ಲಿ ರಿಪೇರಿ ಮಾಡಬೇಕಾ ಗಿರುವುದರಿಂದ ಸ್ವಲ್ಪ ವಿಳಂಬವಾಗಿದೆ ಎಂದರು.ಶಾಸಕ ಕಳಕಪ್ಪ ಬಂಡಿ, ತಾಲ್ಲೂಕು ಕೇಂದ್ರದಲ್ಲಿ ರಿಪೇರಿ ಕೇಂದ್ರಗಳನ್ನು ತೆರೆದರೆ ಈ ಸಮಸ್ಯೆ ಇರುವುದಿಲ್ಲ ಎಂದರು.ಇದಕ್ಕೆ ಉತ್ತರಿಸಿದ ವೀರಣ್ಣ ತುರಮರಿ, ತಾಲ್ಲೂಕು ಕೇಂದ್ರಗಳಲ್ಲಿ ಸರ್ವೀಸ್ ಕೇಂದ್ರಗಳನ್ನು ತೆರೆಯುವುದಕ್ಕೆ ಹೆಸ್ಕಾಂ ಕಾಯ್ದೆಯಲ್ಲಿ ವ್ಯವಸ್ಥೆ ಇ್ದ್ದದರೆ, ಪರಿಶೀಲನೆ ನಡೆಸಿ, ತಾಲ್ಲೂಕಿಗೆ ಒಂದರಂತೆ ಸರ್ವೀಸ್ ಕೇಂದ್ರಗಳನ್ನು ತೆರೆಯವುದು ಸೂಕ್ತ ಎಂದು ಹೆಸ್ಕಾಂ ಎಂಜಿನಿಯರ ಅವರಿಗೆ ಸೂಚನೆ ನೀಡಿದರು.ಲಕ್ಕುಂಡಿಗೆ 24 ತಾಸು ವಿದ್ಯುತ್ ನೀಡುತ್ತೇವೆ ಎಂದು ಹಣ ಕಟ್ಟಿಸಿಕೊಂಡು ಹಲವಾರು ತಿಂಗಳು ಆಗಿದ್ದರೂ ಆ ಕೆಲಸ ಕಾರ್ಯಗತವಾಗಿಲ್ಲ ಎಂದು ಜಿಲ್ಲಾ ಪಂಚಾ ಅಧ್ಯಕ್ಷೆ ಚಂಬವ್ವ ಪಾಟೀಲ ಆರೋಪಿಸಿದರು.ಲಕ್ಕುಂಡಿಗೆ ಎಕ್ಸ್‌ಪ್ರೆಸ್ ಲೈನ್‌ನಿಂದ ವಿದ್ಯುತ್ ನೀಡಲು ಶುರುವಾಗಿದೆ. ಗ್ರಾಮದಲ್ಲಿ ನಾಲ್ಕೈದು ಟಿ.ಸಿ.ಗಳನ್ನು ಬದಲಾವಣೆ ಮಾಡಲಾಗುತ್ತದೆ. ಅದು ಮುಗಿದ ಬಳಿಕ 24 ತಾಸು ವಿದ್ಯುತ್ ನೀಡಲಾಗುತ್ತದೆ ಎಂದು ಎಂಜಿನಿಯರ್‌ಸ್ಪಷ್ಟನೆ ನೀಡಿದರು.ಕಾಳಸಂತೆಯಲ್ಲಿ ಕನಕ-ಕ್ರಮಕ್ಕೆ ಆಗ್ರಹ: ಬಿಟಿ ಹತ್ತಿಯ ತಳಿಯಾದ `ಕನಕ~ ಬಿತ್ತನೆ ಬೀಜವನ್ನು ಮಾರಾಟ ದರಕ್ಕಿಂತ ದುಪ್ಪಟ್ಟು ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜ್ಲ್ಲಿಲೆಯ ಬಹುತೇಕ ರೈತರು ಕನಕ ಹತ್ತಿಯ ಬೀಜವನ್ನೇ ಕೇಳುತ್ತಿದ್ದಾರೆ. ಈ ಅವಕಾಶವನ್ನು ಉಪಯೋಗ ಮಾಡಿಕೊಂಡು ಅನೇಕ ಮಾರಾಟಗಾರರು 2000 ರೂಪಾಯಿಯೂ ಹೆಚ್ಚು ಬೆಲೆಗೆ ಮಾರಾಟ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಎಂ.ಎಸ್ ಪಾಟೀಲ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.ಜಿಲ್ಲೆಯಲ್ಲಿ ಇಂತಹ ಯಾವುದೇ ದೂರುಗಳು ಬಾರದಂತೆ ಸೂಕ್ತ ರೀತಿಯ ಕ್ರಮ ವಹಿಸಬೇಕು. ಬಿತ್ತನೆ ಬೀಜ ಸಮರ್ಪಕವಾಗಿ ರೈತರಿಗೆ ಸಿಗುವಂತೆ  ನೋಡಿಕೊಳ್ಳಬೇಕು ಎಂದು ವೀರಣ್ಣ ತುರಮರಿ ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ ಅವರಿಗೆ ನಿರ್ದೇಶನ ನೀಡಿದರು.ಶಿರಹಟ್ಟಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ಗೆ ಖಾಸಗಿಯವರು ಬೀಗ ಜಡಿದಿದ್ದಾರೆ. ಸರ್ಕಾರಿ ಕಟ್ಟಡಕ್ಕೆ ಬೀಗ ಹಾಕಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಯೂ ಈ ವಿಚಾರವನ್ನು ಕೇಳಿಲ್ಲ. ಹೀಗಾದರೆ ಜಿಲ್ಲಾ ಪಂಚಾಯಿತಿಯ ಗೌರವ ಎಲ್ಲಿ ಉಳಿಯಬೇಕು ಎಂದು ಸದಸ್ಯ ಎಂ.ಎ.ದೊಡ್ಡಗೌಡರ ಆಕ್ರೋಶ ವ್ಯಕ್ತಪಡಿಸಿದರು.ಈ ವಿಚಾರವಾಗಿ ಪೊಲೀಸ್ ಇಲಾಖೆಗೆ ದೂರು ದಾಖಲಿಸಲು ಸಿಇಓ ಸಮಾಜ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.ಉಪಾಧ್ಯಕ್ಷ ಬೀರಪ್ಪ ಬಂಡಿ, ಸದಸ್ಯರಾದ ರೇವಣ್ಣಪ್ಪ ಕೊಂಡಿಕೊಪ್ಪ, ಅನ್ನಪೂರ್ಣ ಡಬಾಲಿ, ಶಾರದ ಹಿರೇಗೌಡರ, ಸುನಿತಾ ಹಳ್ಳೆಪ್ಪನವರ, ಬಸವರಾಜೇಶ್ವರಿ ಪಾಟೀಲ, ಶಾರವ್ವ ತೋಟದ, ಹೇಮ ಗಿರೀಶ ಹಾವಿನಾಳ, ಕಸ್ತೂರವ್ವ ಪಾಟೀಲ, ಕಮಲವ್ವ ಸಜ್ಜನರ, ಬಸವರಡ್ಡೇರ ಬಿಷ್ಟಪ್ಪ, ನಿರ್ಮಲಾ ಬರದೂರ, ಶಂಕುತಲಾ ಗಾಣಿಗೇರ, ಶಾಂತವ್ವ ದಂಡಿನ, ರಮೇಶ ಮುಂದಿನಮನಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.