ಶುಕ್ರವಾರ, ಜನವರಿ 17, 2020
24 °C

-ಜಿಲ್ಲಾಧಿಕಾರಿ ಎಂಬ ನಿಜದ ಸೂಜಿ ಮೊನೆ...

ಕೆ.ನರಸಿಂಹಮೂರ್ತಿ,ಕೋಲಾರ Updated:

ಅಕ್ಷರ ಗಾತ್ರ : | |

2010 ರ ಡಿಸೆಂಬರ್: ಜಿಲ್ಲಾ-–ತಾಲ್ಲೂಕು ಪಂಚಾ ಯಿತಿ ಚುನಾವಣೆಯ ಮತದಾನ ಸಂದರ್ಭ ದಲ್ಲಿ ಕೋಲಾರ ತಾಲ್ಲೂಕಿನ ಛತ್ರ­ಕೋಡಿಹಳ್ಳಿಯಲ್ಲಿ ಜನ ಗುರುತಿನ ಚೀಟಿ ತೋರಿಸದೇ ಮತದಾನ ಮಾಡುತ್ತೇವೆ ಎಂದು ಹಠ ಹಿಡಿದು ಸೆಕ್ಟರ್ ಅಧಿಕಾರಿಗಳೊಡನೆ ಜಗಳಕ್ಕೆ ನಿಂತಾಗ ಅಂದಿನ ಜಿಲ್ಲಾಧಿಕಾರಿ ಮನೋಜಕುಮಾರ್ ಮೀನಾ ಲಾಠಿ ಹಿಡಿದು ಮತದಾರರನ್ನು ನಿಯಂತ್ರಿಸಬೇಕಾಯಿತು.ನಿಯಂತ್ರಿ­ಸಬೇಕಾ­ದ­ವರು ಅಧಿಕಾರ ಚಲಾಯಿಸದೇ ಇದ್ದ ಪರಿಣಾಮ ಅದು. ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿಗಳು ಜೊತೆಗೇ ಇದ್ದರೂ ಜಿಲ್ಲಾಧಿಕಾರಿ ಲಾಠಿ ಹಿಡಿಯಬೇಕಾಯಿತು.2011ರ ಜೂನ್: ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸುವರ್ಣಭೂಮಿ ಯೋಜನೆಯ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಸಂಘಟನೆಯೊಂದರ ಮುಖಂಡರೊಬ್ಬರನ್ನು ಅದೇ ಜಿಲ್ಲಾಧಿಕಾರಿ ಕತ್ತು ಹಿಡಿದು ನೂಕುವವರೆಗೂ ಸನ್ನಿವೇಶ ನಿಯಂತ್ರಣಕ್ಕೇ ಬಂದಿರಲಿಲ್ಲ. ಅದುವರೆಗೂ ಆ ಸ್ಥಳದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ, ತಹಶೀಲ್ದಾರರು, ಪೊಲೀಸರು ಇದ್ದರೂ ಪ್ರಯೋಜನ ವಾಗಿರಲಿಲ್ಲ. ಜಿಲ್ಲಾಧಿಕಾರಿ, ಮುಖಂಡನನ್ನು ಆಚೆ ತಳ್ಳುವ ಕ್ಷಣದಲ್ಲಿ ಎಲ್ಲ ಅಧಿಕಾರಿಗಳಲ್ಲೂ ರೋಷಾವೇಶ ದಿಢೀರನೆ ಪ್ರತ್ಯಕ್ಷವಾಗಿತ್ತು. ನಂತರ ಮೀನಾ, ಕಲ್ಯಾಣಿ ಅಭಿವೃದ್ಧಿ ಕೆಲಸಕ್ಕೆ ಸದ್ದಿಲ್ಲದೆ ಚಾಲನೆ ನೀಡಿ ಹೋದರು.2012ರ ಜುಲೈ: ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ್,  ಕಲ್ಯಾಣಿ ಪುನಃಶ್ಚೇತನ ಕಾರ್ಯಕ್ರಮವನ್ನು ಆಂದೋಲನವಾಗಿ ರೂಪಿಸದೇ ಹೋಗಿದ್ದರೆ, ಇವತ್ತಿಗೂ ಜಿಲ್ಲೆಯ ನೂರಾರು ಕಲ್ಯಾಣಿಗಳು ಕೊಳೆ, ಕಸ, ಪಾಚಿಗಳಿಂದ ಮುಚ್ಚಿ­ಹೋಗಿರು ತ್ತಿದ್ದವು. ಆದರೆ ಈಗ ಬಹಳಷ್ಟು ಕಲ್ಯಾಣಿಗಳು ಆಕಾಶಕ್ಕೇ ಕನ್ನಡಿ ಹಿಡಿಯುತ್ತಿವೆ! ಈ ಜಿಲ್ಲಾಧಿಕಾರಿ ಅಧಿಕಾರದ ದಂಡದ ಬದಲು, ಮನಃಪರಿವರ್ತನೆಯ ಚಿಕಿತ್ಸಕ ದಾರಿ ಹಿಡಿದರು.2013ರ ಅಕ್ಟೋಬರ್: ಧಾರಾಕಾರ ಮಳೆ ಸುರಿದು ಕೋಲಾರದ ತಗ್ಗಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿದರೂ ರಾಜಕಾಲುವೆಗಳ ಒತ್ತುವರಿ ತೆರವು ಮಾಡದೇ ಸುಮ್ಮನಿದ್ದ ಸಣ್ಣನೀರಾವರಿ ಇಲಾಖೆಯ ಪ್ರಮುಖ ಅಧಿಕಾರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 133ರ ಅನ್ವಯ ಜಿಲ್ಲಾಧಿಕಾರಿ ಡಿ.ಕೆ.ರವಿ, ಆದೇಶ  ನೀಡಿದರು. ನಂತರ ಕ್ಷಿಪ್ರಗತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಯಿತು.ಜಿಲ್ಲಾಧಿಕಾರಿಗಳ ಈ ಆದೇಶವನ್ನು ಪ್ರಶ್ನಿಸಿ ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಅವಕಾಶವೂ ಇರಲಿಲ್ಲ. ಹೀಗಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಆಡಳಿತದ ಯಾವ ಅಧಿಕಾರಿಗಳೂ ಸಬೂಬನ್ನು ಹೇಳದೆ ನಗರ ಮತ್ತು ಸುತ್ತಮುತ್ತಲಿನ ರಾಜಕಾಲುವೆ ಒತ್ತುವರಿಯನ್ನು ತೆರವು­ಗೊಳಿಸಲೇಬೇಕಾದ ಸನ್ನಿವೇಶ ನಿರ್ಮಾಣವಾಯಿತು.ಇತ್ತೀಚಿನವರೆಗೂ ಜಿಲ್ಲೆಯಲ್ಲಿ ಮರಳು ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಸ್ಥಳೀಯ ಬಹುತೇಕ ಅಧಿಕಾರಿಗಳು ಅದನ್ನು ತಡೆಯುವ ಉಸಾಬರಿ, ‘ಅಪಾಯದ ಕೆಲಸ’ ತಮಗೇಕೆ ಎಂದೇ ಸುಮ್ಮನಿದ್ದರು. ಅಲ್ಲೋ, ಇಲ್ಲೋ ಒಂದೆರಡು ಲಾರಿಗಳನ್ನು ತಡೆಯುವುದನ್ನು, ಮರಳು ಫಿಲ್ಟರ್ ಸಾಮಗ್ರಿಗಳನ್ನು ಸುಡುವುದನ್ನು ಬಿಟ್ಟರೆ ಕೆರೆಯಂಗಳಕ್ಕೇ ಇಳಿದು ಮರಳು ಅಡ್ಡೆಗಳ ಧ್ವಂಸ ಕಾರ್ಯಾಚರಣೆ ಮಾಡಿ ಪ್ರಕರಣ ದಾಖಲಿಸಿದ ಘಟನೆಗಳು ನಡೆದಿದ್ದು  ಅಪರೂಪ.  ಜಿಲ್ಲಾಧಿಕಾರಿ ಕಾನೂನು ದಂಡವನ್ನು ಹಿಡಿದುಕೊಂಡರಷ್ಟೇ. ‘ಡಿ.ಸಿ.ಸಾಹೇಬರು ಅಪ್ಪಣೆ ಕೊಡಿಸಿದ್ದಾರೆ’ ಎಂದು ಅಧಿಕಾರಿಗಳು ಕೆರೆಗಳಿಗೆ ಇಳಿದಿದ್ದಾರೆ.ಇತ್ತೀಚಿನ ಒಂದು ಘಟನೆ: ಕೋಲಾರದ ಟೇಕಲ್ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಆರು ತಿಂಗಳ ಹಿಂದೆ ಸಾಲುಮರಗಳನ್ನು ಕಡಿಯಲಾಯಿತು. ಸುಮಾರು 900 ಮೀಟರ್‌ ರಸ್ತೆಯನ್ನು ನೆತ್ತಿ ಸುಡುವ ಸೂರ್ಯನಿಗೆ ಒಪ್ಪಿಸಿದ ಅಧಿಕಾರಿಗಳು, ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಲೇ ಇಲ್ಲ. ‘ನಾಳೆಯಿಂದಲೇ ಕಾಮಗಾರಿ ಶುರು ಮಾಡಿ. ಒಂದು ತಿಂಗಳೊಳಗೆ ವಿಸ್ತರಣೆ ಪೂರ್ಣಗೊಂಡಿರ ಬೇಕು. ಇಲ್ಲವಾದರೆ...’ ಎಂದು ಜಿಲ್ಲಾಧಿಕಾರಿ ಹೇಳಿದ ಮರುದಿನವೇ ಅಧಿಕಾರಿಗಳು ಚುರುಕಾಗಿ ರಸ್ತೆಗಿಳಿದರು...ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಿಪ್ತ ಮತ್ತು ನಿರ್ಲಕ್ಷ್ಯ ತುಂಬಿದ ಕಾರ್‍ಯವೈಖರಿಯ ಪರಿಣಾಮವಾಗಿಯೇ ಟೇಕಲ್ ರಸ್ತೆಯಲ್ಲಿದ್ದ ಹಚ್ಚಹಸಿರಿನ ಮರಗಳು ಅಕಾಲ ಮರಣವನ್ನು ಕಾಣಬೇಕಾಯಿತು.-ಇವೆಲ್ಲವೂ ಮೂರ್ನಾಲ್ಕು ವರ್ಷಗಳಲ್ಲಿನ ಕೆಲವು ನಿದ­ರ್ಶನ­ಗಳಷ್ಟೇ. ಕುಡಿಯುವ ನೀರು ಪೂರೈಕೆ, ಬಳಕೆ ಅವಧಿ ಮೀರಿದ ಹಾಲಿನ ಪುಡಿ ಪೂರೈಕೆ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಿಗೆ ಆಹಾರ ಪೂರೈಕೆ, ಅಂಗನವಾಡಿಗೆ ಸೌಕ­ರ್ಯ, ಸರ್ಕಾರಿ ಭೂಮಿ ಒತ್ತುವರಿ ತೆರವು, ಅವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಜಿಲ್ಲಾಧಿಕಾರಿಗಳು ಹೇಳಲೇಬೇಕು ಎಂದು ಅಧಿಕಾರಿಗಳು ಕಾಯುತ್ತಾರೆ.ಕಾನೂನು ಕ್ರಮ ಕೈಗೊಳ್ಳುವುದರಿಂದ ಕೆಟ್ಟ ಹೆಸರು ಬರುವುದಾದರೆ ಅವರಿಗೇ ಬರಲಿ, ನಿಂದನೆಗೆ ಗುರಿಯಾಗುವುದಾರೆ ಅವರಿಗೇ ಆಗಲಿ ಎಂಬುದು ಕೆಳಹಂತದ ಅಧಿಕಾರಿಗಳ ಸಾಮಾನ್ಯ ಧೋರಣೆಯಾಗಿದೆ. ಇದು ಸಾಂಕ್ರಾಮಿಕವೂ ಆಗುತ್ತಿರುವುದು ಸದ್ಯದ ವಿಪರ್ಯಾಸ.ರಾಜಕೀಯ ಶಾಸ್ತ್ರದ ಒಂದು ಅಧ್ಯಯನ ಶಿಸ್ತಾದ ಸಾರ್ವಜನಿಕ ಆಡಳಿತ ಎಂಬುದು ಕೋಲಾರ ಜಿಲ್ಲೆಯಲ್ಲಿ ಹೀಗೆ ಮುಲುಗುತ್ತಿದೆ. ಜಿಲ್ಲಾಧಿಕಾರಿ ಎಂಬ ನಿಜದ ಸೂಜಿ ಮೊನೆ ತಾಕಿದರೆ ಮಾತ್ರ ತೆವಳುವ, ನಡೆಯುವ, ಚುರುಕಾಗಿ ಕೆಲಸಕ್ಕೆ ಇಳಿಯುವ ಸ್ಥಳೀಯ, ಕೆಳ ಹಂತದ ಬಹುತೇಕ ಅಧಿಕಾರಿಗಳು ಸಾರ್ವಜನಿಕ ಆಡಳಿತಕ್ಕೂ ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ನಿರ್ಲಿಪ್ತರಾಗಿಯೇ ಇರುವ ಸನ್ನಿವೇಶಗಳೇ ಹೆಚ್ಚಿವೆ.ಜಿಲ್ಲೆಯಲ್ಲಿ ಯಾವುದೇ ಗುರುತರ ಜವಾಬ್ದಾರಿ ನಿರ್ವಹಣೆ, ಶಾಸನಾತ್ಮಕವಾದ ಅಧಿಕಾರವನ್ನು ಚಲಾಯಿಸುವ ವಿಚಾರಕ್ಕೆ ಬಂದಾಗ, ಪ್ರಮುಖ ಸ್ಥಾನ­ಗಳಲ್ಲಿರುವ ಸ್ಥಳೀಯ ಆಡಳಿತ ಸಂಸ್ಥೆ ಗಳ ಹಾಗೂ  ಸಂಬಂಧಿಸಿದ ಇಲಾಖೆಗಳ ಮುಖ್ಯ ಅಧಿಕಾರಿಗಳು ನಿರ್ಲಿಪ್ತ­ರಾಗಿ ದಿನಗಳನ್ನು ದೂಡುವುದು, ಜಿಲ್ಲಾಧಿಕಾರಿಗಳು ಬರಲಿ ಬಿಡು ಎಂದು ಸುಮ್ಮನಿರುವುದು ಸಹಜ ಎಂಬಂತಾಗಿದೆ. ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಪರಿಮಿತಿಯೊಳಗೆ ಕಾನೂನಿನ ಸಹಜ ಹೊರದಾರಿಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡುವ ಕಡೆಗೊಂದು ನಿರ್ಲಕ್ಷ್ಯ ಏರ್ಪಟ್ಟಿದೆ.ಸೂಕ್ಷ್ಮ ಸನ್ನಿವೇಶಗಳ ಆಡಳಿತಾತ್ಮಕ ನಿರ್ವಹಣೆ ಎಂಬುದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಅಥವಾ ಮಧ್ಯ­ಪ್ರವೇಶಿಸುವವರೆಗೂ ಸ್ಥಗಿತಗೊಂಡಿರುತ್ತದೆ.ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳಲ್ಲಿ ಬಹುತೇಕರು ಕೋಲಾರ- ಬೆಂಗಳೂರು ನಡುವಿನ ನಿತ್ಯ ಪ್ರಯಾಣಿಕರ ಸಂಘದ ಶಾಶ್ವತ ಸದಸ್ಯರು. ಅವರೊಂದಿಗೆ, ಕೋಲಾರದಲ್ಲೇ ಹುಟ್ಟಿ ಬೆಳೆದ ಸ್ಥಳೀಯ ಅಧಿಕಾರಿಗಳೂ ಇದ್ದಾರೆ. ಮಧ್ಯಾಹ್ನ­ವಾಗುತ್ತಲೇ ಬಸ್ಸು, ರೈಲು ಹಿಡಿಯುವ, ಮನೆ, ಹೆಂಡತಿ, ಮಕ್ಕಳನ್ನು ನೋಡುವ ತವಕ ಬಹಳಮಂದಿಗೆ. ಅವರು ‘ಜಂಗಮಕ್ಕಳಿವಿಲ್ಲ’ ಎಂದು ಬಲವಾಗಿ ನಂಬಿದವರು.ಜನರೊಂದಿಗೆ ನಿಷ್ಠುರ ಕಟ್ಟಿಕೊಳ್ಳುವುದು ಬೇಡ ಎಂಬುದು ಸ್ಥಳೀಯರಾದ ಅಧಿಕಾರಿಗಳು ರೂಢಿಸಿಕೊಂಡಿರುವ ಜಾಣತನ ಮತ್ತು ಘೋಷಿತ ಒಳ್ಳೆಯತನ. ‘ಅಂದರಿಕಿ ಮಂಚಿವಾಡು’ ಗುಣದ ಇವರಲ್ಲಿ ಬಹುತೇಕರಿಗೆ ಸ್ವಸ್ಥಾನದಲ್ಲಿ ನೆಲೆ ಕಚ್ಚಿ ನಿಲ್ಲುವುದಷ್ಟೇ ಮುಖ್ಯ. ಜನಸೇವೆ ಎಂಬುದು ಲೋಕಾ­ಭಿ­ರಾಮದ ಮಾತಿಗಷ್ಟೇ ಸೀಮಿತ. ನಿಷ್ಠುರವಾಗಿ ಕೆಲಸ ಮಾಡುವುದೆಂದರೆ ಕಸಿವಿಸಿ.ಈ ಎರಡೂ ಗುಂಪಿನ ಬಹುಸಂಖ್ಯಾತ ಅಧಿಕಾರಿಗಳ ಸಂಕಲ್ಪಬಲವಿಲ್ಲದ ಅಂಗವಿಕಲ ಮನಃಸ್ಥಿತಿ, ನಕಾರಾತ್ಮಕ ಧೋರಣೆ, ನಿಲುವುಗಳ ಪರಿಣಾಮವಾಗಿ ಸಾರ್ವಜನಿಕ ಆಡಳಿತ, ಕಾನೂನು ಕಾಯ್ದೆಗಳು ಕಾಲು ಮುರಿದುಕೊಂಡು­ಬೀಳುವಂಥ ಸನ್ನಿವೇಶಗಳು ಜಿಲ್ಲೆಯಲ್ಲಿ ನಿರ್ಮಾಣವಾಗು­ತ್ತಲೇ ಇರುತ್ತವೆ. ಜಿಲ್ಲಾಧಿಕಾರಿಗಳ ಸವಾರಿ ಕುದುರೆಗಳಾಗು­ವುದೇ ಕೆಳ ಹಂತದ ಅಧಿಕಾರಿಗಳಿಗೆ ಇಷ್ಟವಾಗಿಬಿಟ್ಟಿದೆ.ಹೀಗಾಗಿಯೇ ಕೋಲಾರದ ಜನ ಒಳ್ಳೆಯ ಜಿಲ್ಲಾಧಿಕಾರಿ ಬರಲಿ, ಸ್ಥಳೀಯ ಅಧಿಕಾರಿಗಳ ಉಡಾಫೆ ಕಾರ್ಯವೈಖರಿಯ ದೊಡ್ಡ ಬಲೂನು ಹಿಗ್ಗುವಾಗೆಲ್ಲ ತಾಗಿಸಲಿ ನಿಜದ ಸೂಜಿ ಮೊನೆ ಎಂದೇ ಸದಾ ಆಶಿಸುತ್ತಾರೆ. ಇಂಥ ಸನ್ನಿವೇಶ ಬದಲಾಗುವುದು ಯಾವಾಗ ಎಂಬುದು, ಜಿಲ್ಲೆಯನ್ನು ದಶಕಗಳಿಂದಲೂ  ಕಾಡು ತ್ತಿರುವ ಶಾಶ್ವತ ನೀರಾವರಿಯಷ್ಟೇ ಶಾಶ್ವತವಾಗಿರುವ ಪ್ರಶ್ನೆ.

ಪ್ರತಿಕ್ರಿಯಿಸಿ (+)