ಮಂಗಳವಾರ, ಮಾರ್ಚ್ 2, 2021
28 °C
ನಗರ ಸಂಚಾರ - ಯಾದಗಿರಿ: ಜನಸಾಮಾನ್ಯರ ಮನೆ ಕನಸು ನನಸಾಗುವುದೇ ?

ಜಿಲ್ಲಾ ಕೇಂದ್ರದಲ್ಲಿ ಗಗನಕ್ಕೇರಿದ ಭೂಮಿ ಬೆಲೆ

ನರಸಿಂಹ ಮೂರ್ತಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಜಿಲ್ಲಾ ಕೇಂದ್ರದಲ್ಲಿ ಗಗನಕ್ಕೇರಿದ ಭೂಮಿ ಬೆಲೆ

ಯಾದಗಿರಿ: ಗಗನಕ್ಕೇರಿರುವ ಭೂಮಿಯ ಬೆಲೆಯಿಂದಾಗಿ ಜನಸಾಮಾನ್ಯರ ಮನೆಯ ಕನಸು ಕನಸಾಗಿಯೇ ಉಳಿಯುವಂತಾಗಿದೆ.ಜಿಲ್ಲೆಯಾದ ಬಳಿಕ  ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ, ಖಾಸಗಿ ಕಂಪನಿ ಮತ್ತು ಬ್ಯಾಂಕುಗಳು ಸೇರಿದಂತೆ ವಿವಿಧ ಸಣ್ಣಪುಟ್ಟ ಕೈಗಾರಿಕೆಗಳು ಜಿಲ್ಲೆಯಲ್ಲಿ ಪ್ರಾರಂಭಗೊಂಡಿವೆ. ಇದರಿಂದ ಜನ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಾದ ಪರಿಣಾಮ  ಇಲ್ಲಿಯ ನಿವೇಶನಗಳ ಬೆಲೆ ಗಗನಕ್ಕೇರಿವೆ.ಆರು ವರ್ಷಗಳ ಹಿಂದೆ 30x40 ಅಳತೆಯ ನಿವೇಶನದ ಬೆಲೆ ₹3ರಿಂದ ₹4 ಲಕ್ಷದವರೆಗೂ ಇತ್ತು. ಆದರೆ, ಜಿಲ್ಲಾ ಕೇಂದ್ರವಾದ ಬಳಿಕ  ಇದೇ ನಿವೇಶನದ ಬೆಲೆ ₹15 ಲಕ್ಷ ದಾಟಿದೆ. ಸ್ಟೇಷನ್‌ ಏರಿಯಾ, ಎಪಿಎಂಸಿ ಬಳಿ ಮತ್ತು ನೂತನ ಜಿಲ್ಲಾಧಿಕಾರಿ ಕಚೇರಿಯ ಬಳಿ ಇರುವ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು  ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ.‘ಹಳೇ ಊರಿನಲ್ಲಿ ರಸ್ತೆ ವಿಸ್ತರಣೆ ಹೆಸರಲ್ಲಿ ಎರಡು ವರ್ಷವಾದರೂ ರಸ್ತೆ ಮತ್ತು ಚರಂಡಿ ಕಾಮಾಗಾರಿ ಪೂರ್ಣಗೊಳಿಸದ ಕಾರಣ ಹಲವುರು ಇತರೆ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ. ಕಲುಷಿತ ವಾತಾವರಣದಲ್ಲಿ ಇರಲಾಗದೇ ಅಲ್ಲಿದ್ದ ಜನರು ಪ್ರಮುಖ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ಸಿದ್ದರಾಜ ರೆಡ್ಡಿ ಹೇಳುತ್ತಾರೆ.ಕೇವಲ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಬರಬಾರದೆನ್ನುವವರು ಮಾತ್ರ ಅಲ್ಲಿ ಉಳಿದುಕೊಳ್ಳುತ್ತಿದ್ದಾರೆ.  ಹೊರಗಡೆಯಿಂದ ಬರುವ ಜನರು ಮತ್ತು ಹಳೇ ಊರಿನಲ್ಲಿರದೇ ಕೆಲವರು ಸ್ಥಾನಪಲ್ಲಟ ಮಾಡುತ್ತಿರುವುದರಿಂದ ಭೂಮಿಯ ಬೆಲೆ ಹೆಚ್ಚಾಗಲು ಕಾರಣ  ಎನ್ನುತ್ತಾರೆ ಅವರು.ಬಸವೇಶ್ವರ ನಗರ, ಲಕ್ಷ್ಮಿ ನಗರ, ಯಾಜ್ಞವಲ್ಕ್ಯ ಕಾಲೊನಿ, ಮಾಣಿಕೇಶ್ವರಿ ನಗರ ಚಿರಂಜೀವಿ ನಗರಗಳಲ್ಲಿ ನಿವೇಶನದ ಬೆಲೆಯನ್ನೇ ಕೇಳುವಂತಿಲ್ಲ. ಈ ಪ್ರದೇಶಗಳಲ್ಲಿ ಸ್ವಂತ ಮನೆಯಿರಲಿ ಬಾಡಿಗೆ ಯನ್ನೂ ಪಡೆಯುವಂತಿಲ್ಲ. ಅಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿದೆ.ಹೊಲಗಳು ನಿವೇಶನಗಳಾಗುತ್ತಿವೆ : ನಗರದ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ನೂತನ ಜಿಲ್ಲಾ ಭವನ ಕಟ್ಟಡ ಪೂರ್ಣಗೊಂಡಿದ್ದು,ಕೆಲ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಹೀಗಾಗಿ ಭವನದ ಸುತ್ತಮುತ್ತಲಿನ ಹೊಲದ ಮಾಲೀಕರು ತಮ್ಮ ಹೊಲಗಳನ್ನು  ಈಗ ನಿವೇಶನಗಳಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ.ಚಿತ್ತಾಪುರ ರಸ್ತೆಯ ಹಲವು ಭೂಮಿ ಎನ್‌ಎ ಮಾಡಲು ಅರ್ಜಿಗಳನ್ನು ಸಲ್ಲಿಸಲಾಗಿದೆ. ಕೆಲವು ಕಡೆ ಗುಂಟೆ ಆಧಾರದಲ್ಲಿ ನಿವೇಶನ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವೆಡೆ ಭೂಮಿಯನ್ನು ಎನ್‌ಎ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿರುವ ಭೂಮಿಯ ಬೆಲೆ ಇತರೆ ಮಹಾನಗರಗಳಿಂತೆ ಹೆಚ್ಚಾಗುತ್ತಲೇ  ಇದೆ. ಇದರಿಂದ ಜನಸಾಮಾನ್ಯರ ಮನೆ ಕನಸು ಕನಸಾಗಿಯೇ ಉಳಿದಿದೆ.

*

ಜಿಲ್ಲಾ ಕೇಂದ್ರವಾದ ಬಳಿಕವೇ ಭೂಮಿಯ ಬೆಲೆ ಏರಿಕೆಯಾಗಿದೆ. ಪ್ರಾಧಿಕಾರದಿಂದ 50–50 ಯೋಜನೆಯಲ್ಲಿ ಹೊಲದ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು ಲೇ ಔಟ್‌ ಮಾಡಲು ಪ್ರಯತ್ನಿಸಿದ್ದೇವೆ

-ರವೀಂದ್ರ ಗೌಡ ಮಾಲಿಪಾಟೀಲ್,

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.