ಗುರುವಾರ , ಮೇ 28, 2020
27 °C

ಜಿಲ್ಲಾ ಕೇಂದ್ರದಲ್ಲಿ ನೈರ್ಮಲ್ಯವೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಮೊದಲಿಗೇನೋ ತಾಲ್ಲೂಕು ಕೇಂದ್ರವಾಗಿತ್ತು. ಈಗ ಇದು ಜಿಲ್ಲಾ ಕೇಂದ್ರ. ಒಂದು ವರ್ಷ ಕಳೆದರೂ ನಗರದ ನೈರ್ಮಲ್ಯ ವ್ಯವಸ್ಥೆ ಮಾತ್ರ ಸುಧಾರಣೆ ಕಾಣದಿರುವುದು ನಗರದ ಜನರಲ್ಲಿ ಬೇಸರ ಮೂಡಿಸಿದೆ.ನಗರದ ತುಂಬೆಲ್ಲ ತೆಗ್ಗು ಬಿದ್ದ ರಸ್ತೆಗಳೇ ಕಾಣುತ್ತಿವೆ. ಬಡಾವಣೆಗಳಿಗೆ ಹೋಗಿ ನೋಡಿದರಂತೂ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ರಸ್ತೆಗಳ ಪಕ್ಕದಲ್ಲಿಯೇ ಕಸದ ರಾಶಿ ಬೀಳುತ್ತಿದೆ. ಅಷ್ಟೇ ಏಕೆ ಕಸ ತುಂಬಿರುವುದರಿಂದ ಕೆಲವೆಡೆ ಚರಂಡಿಯ ನೀರು ರಸ್ತೆ ಮೇಲೆ ಹರಿಯತ್ತದೆ. ಇಷ್ಟೆಲ್ಲ ಆಗುತ್ತಿದ್ದರೂ, ಇದು ಯಾರ ಕಣ್ಣಿಗೂ ಕಾಣದಿರುವುದು ಸೋಜಿಗದ ಸಂಗತಿ ಎನ್ನುತ್ತಿದ್ದಾರೆ ನಾಗರಿಕರು.ನಗರದ 23 ನೇ ವಾರ್ಡ್ ವ್ಯಾಪ್ತಿಯಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗುತ್ತಿದೆ. ರಸ್ತೆ ಬದಿಯಲ್ಲಿ ಕಸ ರಾಶಿಯಾಗಿ ಬೀಳುತ್ತಿದ್ದು, ಇದರಿಂದಾಗಿ ಹಂದಿಗಳು ಓಡಾಟವೂ ವಿಪರೀತವಾಗಿದೆ. ಹೀಗಾಗಿ ಚಿಕ್ಕಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಪಾಲಕರು ಹೆದರುವಂತಾಗಿದೆ.

ಸಮಸ್ಯೆ ಮೂಲ ಏನು?:ಕಸದ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡದಿರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಮನೆಯಲ್ಲಿನ ಕಸವನ್ನು ಹಾಕಲು ನಗರದ ಯಾವೊಂದು ಪ್ರದೇಶದಲ್ಲೂ ಕಸದ ತೊಟ್ಟಿಗಳಿಲ್ಲ. ಹಾಗಾಗಿ ಎಲ್ಲ ಜನರೂ ಮನೆಯ ಕಸವನ್ನು ರಸ್ತೆಯ ಒಂದು ಬದಿಗೆ ಹಾಕುತ್ತಿದ್ದಾರೆ. ರಸ್ತೆ ಪಕ್ಕ ಹಾಕಿರುವ ಕಸವನ್ನು ನಿತ್ಯ ಎತ್ತಿಕೊಂಡು ಹೋಗುವ ವ್ಯವಸ್ಥೆಯೂ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.“ನಾವು ಕಸಾ ಎಲ್ಲಿ ಹಾಕೋಣ್ರಿ. ಕಸದ ತೊಟ್ಟಿ ಇಟ್ಟಿಲ್ಲ. ಎಲ್ಲಾ ರಸ್ತೆದ ಮ್ಯಾಲ ಹಾಕಬೇಕ್ರಿ. ಮಕ್ಳು ಮರಿ ಎಲ್ಲಾ ಇಲ್ಲೆ ಓಡ್ಯಾಡತೇವ್ರಿ. ಗಟಾರ್ ನೋಡ್ರಿ ತುಂಬಿ ಹೋಗಿರ್ತಾವ. ಕಸಾ ತಗ್ಯಾವ್ರ ಇಲ್ಲದಂಗ ಆಗೇದ್ರಿ” ಎನ್ನುವ ನೋವು ನಗರದ ನಿವಾಸಿ ಶರಣಮ್ಮ ಅವರದ್ದು.ನಿತ್ಯ ಮನೆಯಿಂದ ಸಂಗ್ರಹವಾಗುವ ಕಸವನ್ನು ಹಾಕಲು ನಗರಸಭೆಯಿಂದ ದೊಡ್ಡ ಕಂಟೇನರ್‌ಗಳನ್ನು ಖರೀದಿಸಲಾಗಿದೆ. ಆದರೆ ಅವುಗಳನ್ನು ಎತ್ತಿ ಇಡುವ ವಾಹನದ ಕೊರತೆಯಿಂದಾಗಿ ಕಂಟೇನರ್‌ಗಳು ನಗರಸಭೆ ಆವರಣದಲ್ಲಿಯೇ ತುಕ್ಕು ಹಿಡಿಯುತ್ತಿವೆ.ಇನ್ನೊಂದೆಡೆ ಮನೆಗಳಿಂದ ಕಸ ಸಂಗ್ರಹಿಸಲು ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳಿಗೆ ಗುತ್ತಿಗೆ ನೀಡುವ ವಿಚಾರವೂ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಂಡನೆಯಾಗಿದ್ದು, ಅದೂ ಕೂಡ ಕಾರ್ಯಗತವಾಗುತ್ತಿಲ್ಲ. ಹೀಗಾಗಿ ನಗರದ ಬಡಾವಣೆಗಳಲ್ಲಿ ಕಸದ ಸಮಸ್ಯೆ ಮುಕ್ತಾಯವಾಗುತ್ತಿಲ್ಲ ಎಂದು ನಗರಸಭೆ ಸದಸ್ಯರೇ ಹೇಳುತ್ತಿದ್ದಾರೆ.ಯಾದಗಿರಿಯ ಮುಕುಟದಂತಿರುವ ಕೋಟೆಯ ಸುತ್ತಲೂ ನೈರ್ಮಲ್ಯದ ಸಮಸ್ಯೆ ಕಾಡುತ್ತಿದೆ. ಐತಿಹಾಸಿಕ ತಾಣವಾಗಿರುವ ಈ ಕೋಟೆಯ ಸುತ್ತಲೂ ಕೊಳಚೆ ನೀರು ನಿಲ್ಲುತ್ತಿದ್ದರೆ, ಕೋಟೆಗೆ ಹೋಗುವ ಮೆಟ್ಟಿಲುಗಳು ಶೌಚಾಲಯಗಳಾಗಿ ಪರಿವರ್ತನೆ ಆಗಿವೆ.ಕಳೆದ ಕೆಲ ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳು ಈ ಕೋಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಈ ಕೋಟೆಯ ಆವರಣದಲ್ಲಿ ಮಲಮೂತ್ರ ವಿಸರ್ಜನೆ ಮಾಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆದರೂ ಹಳೆಯ ಸಮಸ್ಯೆ ಮಾತ್ರ ಮುಗಿಯುತ್ತಲೇ ಇಲ್ಲ. ಕೋಟೆಯ ಸುತ್ತಲೂ ಕೊಳಚೆ ನೀರು, ಕಸದ ರಾಶಿ ಹಾಗೆಯೇ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.