ಬುಧವಾರ, ಮೇ 18, 2022
27 °C

ಜಿಲ್ಲೆಗಳ ವೈಶಿಷ್ಟ್ಯ ಸಾರಲಿವೆ ಸ್ತಬ್ಧಚಿತ್ರಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನದ ಆರಂಭ ದಿನದಂದು (ಮಾರ್ಚ್ 11) ಬೆಳಗಾವಿ ನಗರದಲ್ಲಿ ನವದೆಹಲಿಯ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ಭವ್ಯ ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸಿದ್ಧತೆಗಳು ಆರಂಭಗೊಂಡಿವೆ.ನಗರದ ಟಿಳಕವಾಡಿಯ ವೀರಸೌಧದಿಂದ ಸಮ್ಮೇಳನ ಮುಖ್ಯ ವೇದಿಕೆಯ ತನಕ ಒಟ್ಟು 6ಕಿ.ಮೀ ಉದ್ದಕ್ಕೆ ಮೆರವಣಿಗೆ ಸಾಗಿ ಬರಲಿದ್ದು, ಒಂದೇ ಅಳತೆಯ ಸ್ತಬ್ಧಚಿತ್ರ ನಿರ್ಮಾಣ ಉದ್ದೇಶದಿಂದ ಅಶೋಕ ಲೆಲ್ಯಾಂಡ್ ಕಂಪೆನಿಯ ಒಟ್ಟು 35 ಹೊಸ ಚಸ್ಸಿಗಳನ್ನು ತರಿಸಿಕೊಳ್ಳಲಾಗಿದೆ. ಆ ಎಲ್ಲ ವಾಹನಗಳು ಪ್ರಸ್ತುತ ಆರೋಗ್ಯ ಇಲಾಖೆಗೆ ಸೇರಿದ ಟಿಳಕವಾಡಿ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ನೂರಾರು ಕಲಾವಿದರು, ಕುಶಲಕರ್ಮಿಗಳು ಅವುಗಳನ್ನು ಸಿಂಗರಿಸಲಿದ್ದಾರೆ.ರಾಜ್ಯದ ಎಲ್ಲ ಜಿಲ್ಲೆಗಳ ವೈಶಿಷ್ಟ್ಯ ಸಾರುವ ಸ್ತಬ್ಧಚಿತ್ರಗಳನ್ನು ನಿರ್ಮಿಸುವಂತೆ ಕಲಾವಿದರಿಗೆ  ಸೂಚಿಸಲಾಗಿದೆ. ಅಂತಹ 35 ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶವಿದ್ದು, ಒಂದೇ ಅಳತೆಯ ವೇದಿಕೆಯಲ್ಲಿ ಸ್ತಬ್ಧಚಿತ್ರಗಳನ್ನು ಗರಿಷ್ಠ 12 ಅಡಿ ಎತ್ತರಕ್ಕೆ ನಿರ್ಮಿಸಲು ಆದೇಶಿಸಲಾಗಿದೆ. ಅಂದರೆ ಎಲ್ಲ ಸ್ತಬ್ಧಚಿತ್ರಗಳು ನವದೆಹಲಿಯ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ಇರಲಿವೆ.ಇವೆಂಟ್ ಮ್ಯಾನೇಜ್‌ಮೆಂಟ್:  ಮೆರವಣಿಗೆ ಕ್ರಮಬದ್ಧವಾಗಿ ಸಾಗಬೇಕು ಎಂಬ ಉದ್ದೇಶದಿಂದ ಕ್ರಮಬದ್ಧ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ. ಇದಕ್ಕೆ ಪ್ರತಿಷ್ಠಿತ ಕಾಲೇಜುಗಳ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ.ಪ್ರತಿಯೊಂದು ಸ್ತಬ್ಧಚಿತ್ರ, ಕಲಾತಂಡಗಳು ನಿಗದಿತ ಸಮಯಕ್ಕೆ ಬಿಡಬೇಕು. ನಂತರ ಗುರುತು ಮಾಡುವ ಸ್ಥಳಕ್ಕೂ ನಿಗದಿತ ವೇಳಗೆ ತಲುಪಬೇಕು. ಅಲ್ಲಿಂದ ನಿಗದಿತ ಸಮಯಕ್ಕೆ ಬಿಡಬೇಕು. ಅಂತಹ ಕ್ರಮದಿಂದ ಸ್ತಬ್ಧಚಿತ್ರ, ಕಲಾತಂಡಗಳ ನಡುವೆ ಸಾಕಷ್ಟು ಅಂತರ ಸಾಧ್ಯವಾಗಿ ಮೆರವಣಿಗೆಯ ಮೆರುಗು ಹೆಚ್ಚಲಿದೆ ಎಂಬುದು ಸಮ್ಮೇಳನ ಸಮಿತಿಯ ಆಶಯವಾಗಿದೆ.ವೈವಿಧ್ಯ: ಪ್ರತಿಯೊಂದು ಸ್ತಬ್ಧಚಿತ್ರಗಳು ಆಯಾ ಜಿಲ್ಲೆಯ ವಿಶೇಷತೆ  ಸಾರಲಿವೆ. ಬಳ್ಳಾರಿ ಜಿಲ್ಲೆಯಿಂದ ವಿಜಯ ನಗರ ಸಾಮ್ರಾಜ್ಯ ವೈಭವ, ರಾಯಚೂರು ಜಿಲ್ಲೆಯ ಕೋಟೆ ಮಾದರಿ, ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಗಳ ಪರಿಚಯ, ಹಾಸನ ಜಿಲ್ಲೆಯಿಂದ ಬೇಲೂರು- ಹಳೇಬೀಡು ವೈಭವ, ಹಾವೇರಿಯಿಂದ ತಾರಕೇಶ್ವರ ದೇವಸ್ಥಾನ... ಹೀಗೆ ಹತ್ತು ಹಲವು ವೈವಿಧ್ಯಮಯ ಸ್ತಬ್ಧಚಿತ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.ಕಲಾವಿದರ ಪರದಾಟ: ಸ್ತಬ್ಧಚಿತ್ರಗಳ ನಿರ್ಮಾಣ ಉದ್ದೇಶದಿಂದ ಬೆಂಗಳೂರು, ಮೈಸೂರು, ಹೊಸಪೇಟೆ, ಹಾಸನ, ಮಡಿಕೇರಿ ಮೊದಲಾದ ಪ್ರದೇಶಗಳ ನೂರಾರು ಕಲಾವಿದರು, ಕುಶಲಕರ್ಮಿಗಳು ನಗರಕ್ಕೆ ಆಗಮಿಸಿದ್ದಾರೆ. ವ್ಯಾಕ್ಸಿನ್ ಡಿಪೋ ಪ್ರದೇಶದ ಉದ್ಯಾನವನದಲ್ಲಿ (ಅಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಕಾಡು ಬೆಳೆಸಲಾಗಿದೆ) ಸ್ತಬ್ಧಚಿತ್ರ ನಿರ್ಮಿಸುವಂತೆ ಸೂಚಿಸಲಾಗಿದೆ.ಆದರೆ ಸ್ತಬ್ಧಚಿತ್ರಗಳನ್ನು ಯಾವಾಗ ಪೂರ್ಣಗೊಳಿಸಬೇಕು? ಮೆರವಣಿಗೆ ಯಾವಾಗ ನಡೆಯಲಿದೆ? ಎಂಬ ಬಗ್ಗೆಲ್ಲ ಅವರಿಗೆ ಮಾಹಿತಿ ಇಲ್ಲ. ಅಷ್ಟಕ್ಕೂ ಅವರನ್ನು ಕೇಳುವರೇ ಇಲ್ಲ ಎಂಬ ಪರಿಸ್ಥಿತಿ ಇದೆ.  ಜೊತೆಗೆ ಅಶೋಕ ಲೆಲ್ಯಾಂಡ್ ಚಾಸಿ ಚಾಲಕರ ಗೋಳು ಹೇಳತೀರದು. ಅವರಂತೂ ಸಂಪೂರ್ಣವಾಗಿ ನಿರ್ಗತಿಕರಾಗಿದ್ದಾರೆ.ಕನಿಷ್ಠ ಬೇಡಿಕೆ: ‘ಸಮ್ಮೇಳನಕ್ಕೆ ಐದು ದಿನ ಮಾತ್ರ ಬಾಕಿ ಇದ್ದು, ನಿಗದಿತ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿದ್ದರೆ ಹಗಲು- ರಾತ್ರಿ ಕೆಲಸ ನಡೆಯಬೇಕಿದೆ. ಆದರೆ ಅಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಊಟೋಪಚಾರವಂತೂ ಇಲ್ಲ. ಅವೆಲ್ಲ ಇಲ್ಲದಿದ್ದರೂ ಪರವಾಗಿಲ್ಲ; ಕನಿಷ್ಠ ದೀಪದ ವ್ಯವಸ್ಥೆ ಮಾಡಿಕೊಟ್ಟರೆ ಉದ್ಯಾನವನದಲ್ಲೇ ಉಳಿದುಕೆಲಸ ಪೂರ್ಣಗೊಳಿಸುತ್ತೇವೆ’ ಎಂದು ಕಲಾವಿದ ಹೊಸಪೇಟೆಯ ಗುಬ್ಬಿ ಗಾಲಯ್ಯ ಹೇಳುತ್ತಾರೆ.ಒಟ್ಟು 9 ಜಿಲ್ಲೆಗಳ ಸ್ತಬ್ಧಚಿತ್ರ ನಿರ್ಮಾಣ ಗುತ್ತಿಗೆ ಪಡೆದಿರುವ ಯೋಗೇಶ ಅವರ ಹೇಳಿಕೆಯೂ ಅದೇ ಆಗಿದೆ. ‘ಲಾರಿಗಳ ಬದಲಿಗೆ ಚಾಸಿಗಳನ್ನು ನೀಡಿರುವ ಕಾರಣಕ್ಕೆ ಪ್ಲಾಟ್‌ಫಾರ್ಮ್ ನಿರ್ಮಾಣ ಮೊದಲಾದ ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ. ಅದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕು. ಕನಿಷ್ಠ ಸೌಲಭ್ಯಗಳನ್ನು ಸಮ್ಮೇಳನ ಸಮಿತಿ ಒದಗಿಸಬೇಕು’ ಎಂಬುದು ಅವರ ಆಗ್ರಹವಾಗಿದೆ.ಕಲಾವಿದರ ಯೋಗಕ್ಷೇಮ-ಭರವಸೆ: ಈ ಸಂಬಂಧ ಮೆರವಣಿಗೆ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಅಭಯ ಪಾಟೀಲ ಅವರನ್ನು ಸಂಪರ್ಕಿಸಿದಾಗ, ‘ಕಲಾವಿದರ ಯೋಗಕ್ಷೇಮ ಕುರಿತಂತೆ ಅಧಿಕಾರಿಗಳಿಂದ ಲೋಪವಾಗಿದೆ. ತಕ್ಷಣ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಮೈಸೂರು ದಸರಾಗಿಂತ ಹೆಚ್ಚು ವೈಭವಪೂರ್ಣ, ವೈವಿಧ್ಯಮಯ ಮೆರವಣಿಗೆ ನಡೆಸಲಾಗುತ್ತದೆ. ವಿವಿಧ ಕಲಾತಂಡಗಳು, ಆನೆ, ಅಂಬಾರಿ, ಕುದುರೆ, ಒಂಟೆಗಳೆಲ್ಲ ಪಾಲ್ಗೊಳ್ಳಲಿವೆ; ಜೊತೆಗೆ ಮೆರವಣಿಗೆಯ ದಿನದಂದು ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಂದು ನಗರದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ಜಮಾಯಿಸಲಿದ್ದಾರೆ ಎಂದು ಪಾಟೀಲ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.