ಬುಧವಾರ, ಜೂನ್ 23, 2021
21 °C

ಜಿಲ್ಲೆಯಲ್ಲಿ ಶೇ 64 ಮತದಾನ :ಉತ್ಸಾಹ ತೋರದ ಮತದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಜ್ಯ ರಾಜಕಾರಣ ಮತ್ತು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಉಪ ಚುನಾವಣೆಗೆ ಭಾನುವಾರ ನಡೆದ ಮತದಾನಕ್ಕೆ ಜಿಲ್ಲೆಯ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಅಷ್ಟೇನು ಉತ್ಸಾಹ ತೋರಿಸಿದ್ದು ಕಂಡುಬರಲಿಲ್ಲ.

 

ಕೆಲವು ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಿ ಸರ್ಕಾರ, ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ತೀರಿಸಿಕೊಂಡ ಪ್ರಸಂಗಕ್ಕೂ ಉಪ ಚುನಾವಣೆ ಸಾಕ್ಷಿಯಾಯಿತು.ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಮಧ್ಯಾಹ್ನ ಕಳೆದರೂ ಶೇ. 30ರಷ್ಟು ಮತದಾನ ನಡೆದಿರಲಿಲ್ಲ.ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಆಲದಗುಡ್ಡೆ, ವಸ್ತಾರೆ, ವಳಗೇರಹಳ್ಳಿ, ನೆರಡಿ, ಅಚ್ಚಡಮನೆ, ಮಾಕೋನಹಳ್ಳಿ ಯಲ್ಲಿ ಮತದಾರರು ನಿರೀಕ್ಷಿತ ಸಂಖ್ಯೆ ಯಲ್ಲಿ ಮಧ್ಯಾಹ್ನ ಕಳೆದರೂ ಮುಖ ಹಾಕಿರಲಿಲ್ಲ. ಈ ಗ್ರಾಮಗಳಲ್ಲಿ ಸಂಜೆ ವೇಳೆಗೆ ಚುರುಕಿನ ಮತದಾನ ನಡೆಯಿತು.ಮತದಾರರು ಮನೆ ಬಿಟ್ಟು ಹೊರ ಬರಲು ಬಿಸಿಲಿನ ಝಳ ಹಿಂಜರಿಸಿದರೆ, ಬಹಳಷ್ಟು ಯುವಕರನ್ನು ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಟಿ.ವಿ ಮುಂದೆ ಕಟ್ಟಿಹಾಕಿತ್ತು.

ಮಧ್ಯಾಹ್ನ 12ಗಂಟೆವರೆಗೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಶೇ.21.35ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನದವರೆಗೆ ಅಷ್ಟೇನೂ ಬಿರುಸಿನ ಮತದಾನ ನಡೆದಿದ್ದು ಕಂಡುಬರಲಿಲ್ಲ.ಹುಕ್ಕುಂದದಲ್ಲಿ ನಿಧಾನಗತಿಯಲ್ಲಿ ಮತದಾನ ನಡೆದರೆ, ಜೋಳದಾಳ್‌ಗ್ರಾಮದಲ್ಲಿ ನಾಲ್ಕೈದು ಮಂದಿ ಮಾತ್ರ ಸರದಿ ಸಾಲಿನಲ್ಲಿ ನಿಂತಿದ್ದರು. ಆಣೂ ರಿನಲ್ಲಿ  ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ.36ರಷ್ಟು ಮತದಾನ ನಡೆದರೆ, ಆಲ್ದೂರಿನಲ್ಲಿ 1219 ಮತಗಳಿಗೆ 291ಮಂದಿ ಮಾತ್ರ ಮತ ಚಲಾಯಿಸಿದ್ದರು.ಚಿತ್ತುವಳ್ಳಿಯಲ್ಲಿ 503ಮತಗಳಿಗೆ 234 ಮತಗಳು 12 ಗಂಟೆ ಹೊತ್ತಿಗೆ ಚಲಾವಣೆಯಾಗಿದ್ದವು. ಚುನಾವಣೆ ಬಹಿಷ್ಕರಿಸಿ ಮತ್ತೆ ಹಿಂದಕ್ಕೆ ಪಡೆದಿದ್ದ ಕೂದುವಳ್ಳಿ ಗ್ರಾಮದಲ್ಲಿ ಶೇ.25ರಷ್ಟು ಮತದಾನವಾಗಿತ್ತು.

ಮಧ್ಯಾಹ್ನದ ಹೊತ್ತಿಗೆ ಮಳಲೂರು ಗ್ರಾಮದಲ್ಲಿ ಶೇ.40ರಷ್ಟು ಮತದಾನ ವಾಗಿದ್ದರೆ, ಅಂಬಳೆ ಗ್ರಾಮದಲ್ಲಿ ಮತ ದಾರರು ಸರದಿಯಲ್ಲಿ ನಿಂತು ಮತಚಲಾಯಿಸುತ್ತಿದ್ದುದು ಕಂಡು ಬಂತು. 80 ವರ್ಷದ ರಂಗಮ್ಮ ಭಾವಚಿತ್ರ ಇರುವ ಮತದಾನ ಗುರುತಿನ ಚೀಟಿ ಹಿಡಿದು ಮತ ಚಲಾಯಿಸಲು ಉತ್ಸಾ ಹದಲ್ಲಿ ನಿಂತಿದ್ದರು.ಚಿಕ್ಕಮಗಳೂರು ನಗರದಲ್ಲಿ ಬೆಳಿಗ್ಗೆ ಬಸವನಹಳ್ಳಿ ಮತ್ತು ಮಾರ್ಕೆಟ್ ರಸ್ತೆಗಳಲ್ಲಿ ಸ್ವಲ್ಪ ಬಿರುಸಿನ ಮತದಾನ ನಡೆಯಿತು. ನಗರದ ಹೃದಯ ಭಾಗ ದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ಗಂಟೆವರೆಗೂ ಶೇ.30 ರಷ್ಟು ಮತದಾನ ಮಾತ್ರ ನಡೆದಿತ್ತು. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾರಲ್ಲಿ ಅಷ್ಟಾಗಿ ಉತ್ಸಾಹ ಕಂಡುಬರಲಿಲ್ಲ.ಗೋ ಪೂಜೆ ನಂತರ ಮತದಾನ: ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ತಮ್ಮ ಪತ್ನಿ ಅಚಲ ಅವರೊಂದಿಗೆ ಮತದಾನಕ್ಕೂ ಮೊದಲು ಗೋ ಪೂಜೆ ಮಾಡಿದರು.

ನಂತರ ದಂಪತಿ ಸಮೇತ ನಗರದ ಹೊಸಮನೆ ಬಡಾವಣೆಯ ವಿಶ್ವವಿದ್ಯಾಲಯ ಶಾಲೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.ಶಾಸಕ ಸಿ.ಟಿ.ರವಿ ತಮ್ಮ ಪತ್ನಿ ಪಲ್ಲವಿ ಅವರೊಂದಿಗೆ ನಗರದ ವಿಜಯಪುರ ಬಡಾವಣೆಯ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.