ಭಾನುವಾರ, ಮಾರ್ಚ್ 7, 2021
31 °C

ಜಿಲ್ಲೆಯ 246 ರೈತರಿಂದ 6,560 ಕ್ವಿಂಟಲ್‌ ಕಾಯಿ ಖರೀದಿ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಜಿಲ್ಲೆಯ 246 ರೈತರಿಂದ 6,560 ಕ್ವಿಂಟಲ್‌ ಕಾಯಿ ಖರೀದಿ

ಚಾಮರಾಜನಗರ: ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆದ ಪರಿಣಾಮ ಮುಕ್ತ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಧಾರಣೆ ಚೇತರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.2 ತಿಂಗಳ ಹಿಂದೆ ತೆಂಗಿನಕಾಯಿ ಬೆಲೆ ತೀವ್ರವಾಗಿ ಕುಸಿದಿತ್ತು. ಹಾಗಾಗಿ, ಬೆಳೆಗಾರರು ಕಂಗಾಲಾಗಿದ್ದರು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯುವಂತೆ ರೈತರು ಆಗ್ರಹಿಸಿದ್ದರು. ಪ್ರಸ್ತುತ ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖರೀದಿ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ.ಇಲ್ಲಿಯವರೆಗೆ ಒಟ್ಟು 246 ರೈತರಿಂದ 6,560 ಕ್ವಿಂಟಲ್‌ ಸುಲಿದ ತೆಂಗಿನಕಾಯಿ ಖರೀದಿಸಲಾಗಿದೆ. ಈ ಖರೀದಿ ಕೇಂದ್ರಗಳ ಮೂಲಕ 1,100ಕ್ಕೂ ಹೆಚ್ಚು ರೈತರು ಅರ್ಜಿ ಸ್ವೀಕರಿಸಿದ್ದರು. ಈ ಪೈಕಿ 600 ರೈತರು ಪಹಣಿ, ಆಧಾರ್ ಕಾರ್ಡ್‌ ಸೇರಿದಂತೆ ಸರ್ಕಾರ ಸೂಚಿಸಿದ್ದ ದಾಖಲೆ ಹಾಜರುಪಡಿಸಿ ಹೆಸರು ನೋಂದಾಯಿಸಿದ್ದರು.ಚಾಮರಾಜನಗರದ ಖರೀದಿ ಕೇಂದ್ರದಲ್ಲಿ 149 ರೈತರಿಂದ 3,916 ಕ್ವಿಂಟಲ್‌, ಗುಂಡ್ಲುಪೇಟೆಯಲ್ಲಿ 60 ರೈತರಿಂದ 1,441 ಕ್ವಿಂಟಲ್ ಮತ್ತು ಕೊಳ್ಳೇಗಾಲದಲ್ಲಿ 37 ರೈತರಿಂದ 1,203 ಕ್ವಿಂಟಲ್ ತೆಂಗಿನಕಾಯಿ ಖರೀದಿಸಲಾಗಿದೆ.ಜಿಲ್ಲೆಯಲ್ಲಿ ತೆಂಗು ಬೆಳೆಯುವ ವಿಸ್ತೀರ್ಣ 25 ಸಾವಿರ ಎಕರೆಯಷ್ಟಿದೆ. ವಾರ್ಷಿಕವಾಗಿ 7.50 ಕೋಟಿ ತೆಂಗಿನ ಕಾಯಿಗಳ ಉತ್ಪಾದನೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ವ್ಯಾಪ್ತಿ ಮಳೆ ಕೊರತೆ ಎದುರಾಗಿದೆ. ಇದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಜತೆಗೆ, ಕಪ್ಪುತಲೆ ಹುಳು ಬಾಧೆಯಿಂದ ರೈತರು ನಷ್ಟ ಅನುಭವಿಸಿ ದ್ದರು. ಈ ನಡುವೆ ಬೆಲೆ ಕುಸಿತದಿಂದ ದಿಕ್ಕೆಟ್ಟಿದ್ದರು.ಕನಿಷ್ಠ ಬೆಂಬಲ ಯೋಜನೆಯಡಿ ಸುಲಿದ ತೆಂಗಿನಕಾಯಿ ಖರೀದಿಗೆ ಜಿಲ್ಲೆಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರತಿ 1 ಕ್ವಿಂಟಲ್‌ ತೆಂಗಿನಕಾಯಿಗೆ ₹ 1,600 ದರ ನಿಗದಿಪಡಿಸಿ ರೈತರಿಂದ ಖರೀದಿಸಲಾಗುತ್ತಿದೆ. ರೈತರೇ ನೇರವಾಗಿ ಖರೀದಿ ಕೇಂದ್ರಗಳಿಗೆ ತೆಂಗಿನಕಾಯಿ ತರಬೇಕಿದೆ.ಖರೀದಿ ಕೇಂದ್ರದ ಆರಂಭಕ್ಕೂ ಮೊದಲು ಪ್ರತಿ 1 ಕ್ವಿಂಟಲ್‌ ತೆಂಗಿನಕಾಯಿಗೆ ಮುಕ್ತ ಮಾರುಕಟ್ಟೆ ಯಲ್ಲಿ ₹ 700ರಿಂದ ₹ 800 ಬೆಲೆಯಿತ್ತು. ಇದರಿಂದ ರೈತರು ಅರ್ಧದಷ್ಟು ನಷ್ಟ ಅನುಭವಿಸುತ್ತಿದ್ದರು. ಖರೀದಿ ಕೇಂದ್ರ ಆರಂಭಗೊಂಡ ಪರಿಣಾಮ ಬೆಲೆ ಸಾಕಷ್ಟು ಚೇತರಿಕೆ ಕಂಡಿದೆ.ಪ್ರಸ್ತುತ ಖರೀದಿದಾರರು ರೈತರ ತೋಟಗಳಿಗೆ ನೇರವಾಗಿ ತೆರಳಿ 1 ಕ್ವಿಂಟಲ್‌ಗೆ ₹ 1,300ರಿಂದ ₹ 1,500 ದರ ನೀಡಿ ತೆಂಗಿನಕಾಯಿ ಖರೀದಿಸುತ್ತಿ ದ್ದಾರೆ. ಹಾಗಾಗಿ, ರೈತರಿಗೆ ಸಾಗಾಣಿಕೆ ವೆಚ್ಚವೂ ಕಡಿಮೆಯಾಗಿದೆ. ಹಿಂದಿನ ವರ್ಷ 1 ಕ್ವಿಂಟಲ್‌ ತೆಂಗಿನಕಾಯಿ ಧಾರಣೆಯು ₹ 2,400 ಮುಟ್ಟಿ ದಾಖಲೆ ಬರೆದಿತ್ತು.ತಮಿಳುನಾಡಿಗೆ ಪೂರೈಕೆ: ಜಿಲ್ಲೆಯಲ್ಲಿ ಉತ್ಪಾದನೆಯಾಗುವ ತೆಂಗಿನಕಾಯಿಗಳು ಗುಣಮಟ್ಟದಿಂದ ಕೂಡಿವೆ. ಹಾಗಾಗಿ, ಉತ್ಪಾದನೆಯಾಗುವ ಶೇ 50 ಕಾಯಿಗಳು ತಮಿಳುನಾಡಿಗೆ ಪೂರೈಕೆಯಾಗುತ್ತವೆ. ಅಲ್ಲಿ ತೆಂಗಿನಕಾಯಿಯ ಪೌಡರ್‌ ಉತ್ಪಾದಿಸುವ ಕಾರ್ಖಾನೆಗಳು ಹೆಚ್ಚಿವೆ.ತೆಂಗಿನಕಾಯಿ ಪೌಡರ್ ಉತ್ಪಾದಿಸಿ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ತೆಂಗಿನಕಾಯಿ ಪೌಡರ್‌ ಉತ್ಪಾದಿಸುವ 2 ಕಾರ್ಖಾನೆಗಳಿವೆ.ಆಷಾಢ ಮಾಸದ ಶುಭ ಕಾರ್ಯಗಳು ನಡೆಯುತ್ತಿರಲಿಲ್ಲ. ಈಗ ಶ್ರಾವಣ ಮಾಸ ಆರಂಭವಾಗಿದೆ. ಶುಭ ಕಾರ್ಯ ಆರಂಭವಾಗುತ್ತಿದ್ದು, ತೆಂಗಿನಕಾಯಿ ಬೆಲೆ ಏರಿಕೆಯಾಗಲಿದೆ ಎನ್ನುವುದು ಬೆಳೆಗಾರರ ನಿರೀಕ್ಷೆ.‘ಜಿಲ್ಲೆಯಲ್ಲಿ ಮೂರು ಖರೀದಿ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ಹೆಸರು ನೋಂದಾಯಿಸಿದ ರೈತರಿಂದ ನೇರವಾಗಿ ಖರೀದಿಸಲಾಗುತ್ತಿದೆ. ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣಜಮೆ ಮಾಡಲಾಗುತ್ತಿದೆ’ ಎಂದು ಖರೀದಿ ಕೇಂದ್ರದ ಶಾಖಾ ವ್ಯವಸ್ಥಾಪಕ ಹನುಮಂತ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.